

ಬೀಜಿಂಗ್: ಇನ್ ಸ್ಟಾಗ್ರಾಮ್ ಲೈವ್ ಸ್ಟ್ರೀಮಿಂಗ್ ವೇಳೆ ಫಿಲ್ಟರ್ ಕೈಕೊಟ್ಟ ಪರಿಣಾಮ ಸುಂದರಿಯ ಸೌಂದರ್ಯ ಬಟಾ ಬಯಲಾಗಿದ್ದು, ಇದನ್ನು ಕಂಡ ಆಕೆಯ ಸುಮಾರು 1.4 ಲಕ್ಷ ಫಾಲೋವರ್ ಗಳು ಅನ್ ಫಾಲೋ ಮಾಡಿದ್ದಾರೆ.
ಹೌದು.. ಇತ್ತೀಚಿನ ದಿನಗಳಲ್ಲಿ ಯುವಜನತೆಯಲ್ಲಿ ಇನ್ ಸ್ಟಾಗ್ರಾಮ್ ರೀಲ್ಸ್ ಗೀಳು ವ್ಯಾಪಕವಾಗಿದ್ದು, ಫಾಲೋವರ್ಸ್ ಗಳಿಸಲು ಹರಸಾಹಸ ಮಾಡುತ್ತಾರೆ. ಅಂತೆಯೇ ಫಾಲೋವರ್ ಗಳು ಕಡಿಮೆಯಾದರೆ ಆಗಸವೇ ತಲೆ ಮೇಲೆ ಬಿದ್ದಂತೆ ಆಡುತ್ತಾರೆ.
ಅಂತಹುದೇ ಒಂದು ಘಟನೆ ಚೀನಾದಲ್ಲಿ ನಡೆದಿದ್ದು, ಇನ್ಸ್ಟಾ ಇನ್ಫ್ಲುಯೆನ್ಸರ್ ಲೈವ್ ಸ್ಟ್ರೀಮಿಂಗ್ ವೇಳೆ ಬ್ಯೂಟಿ ಫಿಲ್ಟರ್ ಅಸಮರ್ಪಕವಾಗಿ ಕಾರ್ಯನಿರ್ವಹಿಸಿದ್ದು, ಈ ವೇಳೆ ಆಕೆಯ ನೈಜ ಸೌಂದರ್ಯ ಬಯಲಾಗಿದೆ. ಈ ಬೆಳವಣಿಗೆ ಬೆನ್ನಲ್ಲೇ ಆಕೆಯ ಖಾತೆ ಬರೊಬ್ಬರಿ 1.4 ಲಕ್ಷ ಫಾಲೋವರ್ಸ್ ಗಳನ್ನು ಕಳೆದುಕೊಂಡಿದೆ ಎನ್ನಲಾಗಿದೆ.
ವೈರಲ್ ಪೋಸ್ಟ್
ಸಾಮಾಜಿಕ ಮಾಧ್ಯಮಗಳಲ್ಲಿ ಈ ಪೋಸ್ಟ್ ವ್ಯಾಪಕ ವೈರಲ್ ಆಗುತ್ತಿದ್ದು, ಈ ಪೋಸ್ಟ್ ನ ಅಧಿಕೃತತೆ ಅಥವಾ ನೈಜತೆ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲವಾದರೂ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗಳು ನಡೆಯುತ್ತಿವೆ.
4 ಸೆಕೆಂಡ್ ವಿಡಿಯೋ ವೈರಲ್
ಅಂತರ್ಜಾಲದಲ್ಲಿ ಪ್ರಸಾರವಾಗುತ್ತಿರುವ 4 ಸೆಕೆಂಡ್ ವಿಡಿಯೋ ಪೋಸ್ಟ್ ನಲ್ಲಿ ಇನ್ಸ್ಟಾ ಇನ್ಫ್ಲುಯೆನ್ಸರ್ ಲೈವ್ ಸ್ಟ್ರೀಮಿಂಗ್ ಮಾಡುತ್ತಿದ್ದು, ಈ ವೇಳೆ ಆಕೆಯ ಮೊಬೈಲ್ ಬ್ಯೂಟಿ ಫಿಲ್ಟರ್ ಕೈಕೊಟ್ಟಿದೆ. ಈ ವೇಳೆ ಆಕೆಯ ಬಿಳಿ ಮೈಕಟ್ಟು ಗೋದಿ ಬಣ್ಣಕ್ಕೆ ತಿರುಗಿದೆ. ಈ ಬೆಳವಣಿಗೆ ಬೆನ್ನಲ್ಲೇ ಆಕೆಯ ಖಾತೆಯಿಂದ 1.4ಲಕ್ಷ ಫಾಲೋವರ್ ಗಳು ಅನ್ ಫಾಲೋ ಮಾಡಿದ್ದಾರೆ ಎಂದು ಪೋಸ್ಟ್ ಉಲ್ಲೇಖಿಸಿದೆ.
ವ್ಯಾಪಕ ಚರ್ಚೆ
ಇನ್ನು ಈ ಪೋಸ್ಟ್ ಅಧಿಕೃತವೋ ಅಥವಾ ಇಲ್ಲವೋ ಆದರೆ ಈ ಬಗ್ಗೆ ವ್ಯಾಪಕ ಚರ್ಚೆಗಳು ನಡೆಯುತ್ತಿವೆ. ವೈರಲ್ ಕ್ಲಿಪ್‌ನಲ್ಲಿರುವ ಮಹಿಳೆಯ ಗುರುತು ತಿಳಿದಿಲ್ಲ.. ಆದರೂ ಆಕೆಯ ಸೌಂದರ್ಯವನ್ನು ಚರ್ಚಾ ವಿಷಯವಾಗಿಸಿಕೊಳ್ಳುವುದು ಸೂಕ್ತವಲ್ಲ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ಮತ್ತೆ ಕೆಲವರು ಸೌಂದರ್ಯ ಫಿಲ್ಟರ್ ಗಳ ಮೂಲಕ ಕೆಲ ಯುವತಿಯರು ವಂಚಿಸುತ್ತಿದ್ದಾರೆ ಎಂದು ಕಿಡಿಕಾರಿದರೆ, ಅನೇಕ ಬಳಕೆದಾರರು ಆಕೆಯ ಫಿಲ್ಟರ್ ಮಾಡದ ನೋಟವನ್ನು ಇಷ್ಟಪಟ್ಟು ಪೋಸ್ಟ್ ಮಾಡುತ್ತಿದ್ದಾರೆ.
ತಂತ್ರಜ್ಞಾನದ ವಿರುದ್ಧ ವ್ಯಾಪಕ ಟೀಕೆ
ಇದೇ ವೇಳೆ "ಫಿಲ್ಟರ್‌ಗಳು ಮತ್ತು ಕ್ಯುರೇಟೆಡ್ ಚಿತ್ರಗಳಿಂದ ಸಾಮಾಜಿಕ ಮಾಧ್ಯಮ ಸಂಸ್ಕೃತಿ ಎಷ್ಟು ರೂಪುಗೊಳ್ಳುತ್ತದೆ ಎಂಬುದನ್ನು ಇದು ನಿಜವಾಗಿಯೂ ತೋರಿಸುತ್ತಿದೆ. ಜನರು ಯಾರನ್ನಾದರೂ ಫಾಲೋ ಮಾಡಲು ಅಥವಾ ಫಾಲೋ ಮಾಡದಿರಲು ಸೌಂದರ್ಯ ಅಥವಾ ನೋಟವು ಮುಖ್ಯ ಕಾರಣವಾದರೆ ಅದು ದುರದೃಷ್ಟಕರ. ದೃಢತೆಯು ಸಾಮಾನ್ಯವಾಗಿ ಪರಿಪೂರ್ಣತೆಗಿಂತ ಬಲವಾದ, ದೀರ್ಘಾವಧಿಯ ಬೆಂಬಲವನ್ನು ನಿರ್ಮಿಸುತ್ತದೆ" ಎಂದು ಮತ್ತೋರ್ವ ಬಳಕೆದಾರರು ಹೇಳಿದ್ದಾರೆ.
Advertisement