

ವಾಷಿಂಗ್ಟನ್: ಮಿನ್ನೇಸೋಟದಲ್ಲಿ ಪ್ರೀ-ಸ್ಕೂಲ್‌ನಿಂದ ಮನೆಗೆ ಮರಳುತ್ತಿದ್ದ 5 ವರ್ಷದ ಬಾಲಕನನ್ನು ಫೆಡರಲ್ ವಲಸೆ ಅಧಿಕಾರಿಗಳು ಬಂಧನಕ್ಕೊಳಪಡಿಸಿದ್ದಾರೆ. ಈ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಆಕ್ರೋಶಗಳು ವ್ಯಕ್ತವಾಗುತ್ತಿವೆ.
5 ವರ್ಷದ ಲಿಯಾಮ್ ಕೊನೆಜೊ ರಾಮೋಸ್ ಎಂಬ ಬಾಲಕನನ್ನು ಮಿನ್ನೇಸೋಟದ ಆತನ ಮನೆಯ ಸಮೀಪದಲ್ಲೇ ಇಮಿಗ್ರೇಷನ್ ಅ್ಯಂಡ್ ಕಸ್ಟಮ್ಸ್ ಎನ್‌ಫೋರ್ಸ್‌ಮೆಂಟ್ (ICE) ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಶಾಲೆಯಿಂದ ಮನೆಗೆ ಮರಳುತ್ತಿದ್ದಾಗ ಬಾಲಕನನ್ನು ವಶಕ್ಕೆ ಪಡೆಯಲಾಗಿದ್ದು, ಆತನ ತಂದೆಯನ್ನು ಬಂಧಿಸಲು ಬಾಲಕನನ್ನು ಒತ್ತೆಯಾಳುವಾಗಿ ಬಳಸಲಾಗಿದೆ ಎಂದು ಶಾಲಾ ಅಧಿಕಾರಿಗಳು ಆರೋಪಿಸಿದ್ದಾರೆ.
ಇದೀಗ ಬಾಲಕ ಮತ್ತು ಆತನ ತಂದೆಯನ್ನು ಟೆಕ್ಸಾಸ್‌ನ ಅಕ್ರಮ ವಲಸಿಗರ ಕೇಂದ್ರದಲ್ಲಿ ಇರಿಸಲಾಗಿದೆ ಎಂದು ತಿಳಿದುಬಂದಿದೆ.
ಈ ಘಟನೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರಿ ಆಕ್ರೋಶಕ್ಕೆ ಕಾರಣವಾಗಿವೆ. ಇದು ಮಾನವ ಹಕ್ಕುಗಳ ಉಲ್ಲಂಘನೆ ಎಂದು ಹಲವರು ಟೀಕಿಸಿದ್ದಾರೆ.
ಏತನ್ಮಧ್ಯೆ ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರು ಐಸಿಇ (ICE) ಅಧಿಕಾರಿಗಳ ಕ್ರಮವನ್ನು ಸಮರ್ಥಿಸಿಕೊಂಡಿದ್ದು, ಪೋಷಕರಾಗಿದ್ದ ಮಾತ್ರಕ್ಕೆ ಕಾನೂನು ಜಾರಿಯಿಂದ ವಿನಾಯಿತಿ ಸಿಗುವುದಿಲ್ಲ ಎಂದು ಹೇಳಿದ್ದಾರೆ.
5 ವರ್ಷದ ಮಗುವನ್ನು ಬಂಧಿಸುವ ಅಗತ್ಯವೇನಿದೆ? ಈ ಮಗು ಅಪರಾಧಿ ಎಂದು ಹೇಗೆ ಹೇಳುತ್ತಾರೆಂದು ಕೊಲಂಬಿಯಾ ಹೈಟ್ಸ್ ಸಾರ್ವಜನಿಕ ಶಾಲೆಗಳ ಸೂಪರಿಂಟೆಂಡೆಂಟ್ ಝೀನಾ ಸ್ಟೆನ್‌ವಿಕ್ ಅವರು ಪ್ರಶ್ನಿಸಿದ್ದಾರೆ.
ಆದರೆ, ಹೋಂಲ್ಯಾಂಡ್ ಸಿಕ್ಯುರಿಟಿ ಇಲಾಖೆ (DHS) ವಕ್ತಾರೆ ಟ್ರಿಶಿಯಾ ಮ್ಯಾಕ್ಲಾಘ್ಲಿನ್ ಅವರು (ICE) ಅಧಿಕಾರಿಗಳು ಮಗುವನ್ನು ಒತ್ತೆಯಾಗಿರಿಸಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬಾಲಕನ ತಂದೆ ಅಡ್ರಿಯನ್ ಅಲೆಕ್ಸಾಂಡರ್ ಕೊನೇಹೋ ಆರಿಯಾಸ್ ಈಕ್ವೆಡಾರ್ ಮೂಲದವರಾಗಿದ್ದು, 2024ರಿಂದಲು ಅಮೆರಿಕಾದಲ್ಲಿ ಅಕ್ರಮವಾಗಿ ವಾಸವಿದ್ದಾರೆ. ಈ ಹಿನ್ನೆಲೆಯಲ್ಲಿ ಬಂಧಿಸಲು ಪ್ರಯತ್ನಿಸಲಾಗಿತ್ತು. ಆದರೆ, ಆತ ಕಾಲ್ನಡಿಗೆಯಲ್ಲಿ ಓಡಿ ಹೋಗಿ ಮಗುವನ್ನು ತ್ಯಜಿಸಿದ್ದ. ಮಗುವಿನ ಸುರಕ್ಷತೆಗಾಗಿ ಒಬ್ಬ ಅಧಿಕಾರಿ ಮಗುವಿನ ಜೊತೆ ಉಳಿದರು. ಪೋಷಕರಿಗೆ ಮಕ್ಕಳೊಂದಿಗೆ ದೇಶ ತೊರೆಯುವ ಅಥವಾ ತಮ್ಮ ಆಯ್ಕೆಯ ವ್ಯಕ್ತಿಯ ಬಳಿ ಮಕ್ಕಳನ್ನು ಬಿಡುವ ಅವಕಾಶ ನೀಡಲಾಗುತ್ತದೆ ಎಂದು ಹೇಳಿದ್ದಾರೆ.
ಆದರೆ ಶಾಲಾ ಅಧಿಕಾರಿಗಳು ಮತ್ತು ಸ್ಥಳೀಯರು ಈ ಹೇಳಿಕೆಯನ್ನು ಪ್ರಶ್ನಿಸಿದ್ದಾರೆ. ಮನೆ ಬಳಿ ಇದ್ದ ಇನ್ನೊಬ್ಬ ವಯಸ್ಕನ ಬಳಿ ಬಾಲಕನನ್ನು ಬಿಡಲು ಅಧಿಕಾರಿಗಳು ನಿರಾಕರಿಸಿದ್ದಾರೆ ಎಂದು ಶಾಲಾ ಮಂಡಳಿ ಅಧ್ಯಕ್ಷೆ ಮೇರಿ ಗ್ರಾನ್ಲಂಡ್ ಹೇಳಿದ್ದಾರೆ.
ನಗರಸಭೆ ಸದಸ್ಯೆ ರೇಚಲ್ ಜೇಮ್ಸ್ ಕೂಡ ನೆರೆಹೊರೆಯವರು ಬಾಲಕನ ಜವಾಬ್ದಾರಿ ವಹಿಸಲು ಸಿದ್ಧರಾಗಿದ್ದರೂ ಅಧಿಕಾರಿಗಳು ನಿರ್ಲಕ್ಷಿಸಿದ್ದಾರೆ ಎಂದು ತಿಳಿಸಿದ್ದಾರೆ.
ಬಾಲಕ ಮತ್ತು ತಂದೆಯನ್ನು ಟೆಕ್ಸಾಸ್‌ನ ವಲಸೆ ಬಂಧನ ಕೇಂದ್ರದಲ್ಲಿ ಇರಿಸಲಾಗಿದೆ. ಅವರೊಂದಿಗೆ ನೇರ ಸಂಪರ್ಕ ಸಾಧಿಸಲು ಇನ್ನೂ ಸಾಧ್ಯವಾಗಿಲ್ಲ. “ಕಾನೂನು ಮಾರ್ಗಗಳ ಮೂಲಕ ಅವರನ್ನು ಬಿಡುಗಡೆ ಮಾಡಿಸಲು ಪ್ರಯತ್ನಿಸುತ್ತಿದ್ದೇವೆಂದು ಕುಟುಂಬದ ವಕೀಲ ಮಾರ್ಕ್ ಪ್ರೊಕೋಶ್ ಅವರು ಹೇಳಿದ್ದಾರೆ.
Advertisement