ಜನ್ಮಸಿದ್ಧ ಪೌರತ್ವ ರದ್ದತಿ ಆದೇಶಕ್ಕೆ ಸುಪ್ರೀಂ ಕೋರ್ಟ್ ಬ್ರೇಕ್; ಟ್ರಂಪ್‌ಗೆ ಭಾರೀ ಶಾಕ್, 'ದೇಶಕ್ಕೆ ಮಾರಕ' ಎಂದ ಅಮೆರಿಕ ಅಧ್ಯಕ್ಷ..!

ಇದು ನಮ್ಮ ದೇಶಕ್ಕೆ ಅತ್ಯಂತ ಕೆಟ್ಟ ನಿರ್ಧಾರ" ಎಂದು ಕರೆದಿದ್ದಾರೆ. ಅಷ್ಟೇ ಅಲ್ಲದೆ, ಈ ಸಮಸ್ಯೆಯನ್ನು ಬಗೆಹರಿಸಲು ಯಾವುದೇ ದೀರ್ಘ ಮತ್ತು ಸಂಕೀರ್ಣವಾದ ಸಂವಿಧಾನ ತಿದ್ದುಪಡಿಯ ಅಗತ್ಯವಿಲ್ಲ.
file photo
ಸಂಗ್ರಹ ಚಿತ್ರ
Updated on

ವಾಷಿಂಗ್ಟನ್: ಅಮೆರಿಕಾದಲ್ಲಿ ಜನಿಸುವ ವಿದೇಶಿ ಮೂಲದ ಮಕ್ಕಳಿಗೆ ಸಿಗುವ ಜನ್ಮಸಿದ್ಧ ಪೌರತ್ವವನ್ನು (Birthright Citizenship) ರದ್ದುಗೊಳಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಹತ್ವಾಕಾಂಕ್ಷೆಯ ಕಾರ್ಯಕಾರಿ ಆದೇಶಕ್ಕೆ ಅಮೆರಿಕಾ ಸುಪ್ರೀಂ ಕೋರ್ಟ್ ಭಾರಿ ಶಾಕ್ ನೀಡಿದೆ.

ಟ್ರಂಪ್ ಅವರ ಆದೇಶವನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ್ದು, ಈ ಐತಿಹಾಸಿಕ ತೀರ್ಪು "ನಮ್ಮ ದೇಶಕ್ಕೆ ತುಂಬಾ ಕೆಟ್ಟದ್ದು ಮತ್ತು ಮಾರಕ" ಎಂದು ಡೊನಾಲ್ಡ್ ಟ್ರಂಪ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್ ನೇತೃತ್ವದ 5-4 ನ್ಯಾಯಾಧೀಶರ ಪೀಠವು ಈ ಮಹತ್ವದ ತೀರ್ಪು ನೀಡಿದೆ. ಅಮೆರಿಕಾದ ಸಂವಿಧಾನದ 14ನೇ ತಿದ್ದುಪಡಿಯ ಪ್ರಕಾರ, ಯುಎಸ್ ಮಣ್ಣಿನಲ್ಲಿ ಜನಿಸುವ ಪ್ರತಿಯೊಂದು ಮಗುವಿಗೂ (ಅಕ್ರಮ ವಲಸಿಗರು ಅಥವಾ ತಾತ್ಕಾಲಿಕ ವೀಸಾದಲ್ಲಿರುವವರ ಮಕ್ಕಳೂ ಸೇರಿ) ಪೌರತ್ವದ ಹಕ್ಕಿದೆ ಎಂದು ಕೋರ್ಟ್ ಎತ್ತಿಹಿಡಿದಿದೆ.

ಅಮೆರಿಕದಲ್ಲಿ ಜನಿಸುವ ಪ್ರತಿಯೊಬ್ಬ ವ್ಯಕ್ತಿಯೂ, ಕೆಲವೇ ಕೆಲವು ಅಪರೂಪದ ವಿನಾಯಿತಿಗಳನ್ನು ಹೊರತುಪಡಿಸಿ, ಅಮೆರಿಕದ ನಾಗರಿಕನಾಗುತ್ತಾನೆ ಎಂಬ ನಿಯಮ ಹಲವು ದಶಕಗಳಿಂದ ಜಾರಿಯಲ್ಲಿದ್ದು, ಅದನ್ನು ಕಾರ್ಯನಿರ್ವಾಹಕ ಆದೇಶದ ಮೂಲಕ ಬದಲಾಯಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

ಜನ್ಮಸಿದ್ಧ ಪೌರತ್ವವು ಅಮೆರಿಕ ಸಂವಿಧಾನದ 14ನೇ ತಿದ್ದುಪಡಿಯಿಂದ ನೀಡಲ್ಪಟ್ಟಿರುವ ಮೂಲಭೂತ ಹಕ್ಕಾಗಿದ್ದು, ಅದನ್ನು ಕೇವಲ ಕಾಂಗ್ರೆಸ್ ಕಾನೂನು ತರುವ ಮೂಲಕ ರದ್ದುಪಡಿಸಲು ಸಾಧ್ಯವಿಲ್ಲ. ಇದಕ್ಕಾಗಿ ಸಂವಿಧಾನ ತಿದ್ದುಪಡಿ ಮಾಡಲೇಬೇಕಾಗುತ್ತದೆ ಎಂದು ಹೇಳಿದೆ.

ಆದಾಗ್ಯೂ, ಸುಪ್ರೀಂ ಕೋರ್ಟ್‌ನ ಮೂವರು ಸಂಪ್ರದಾಯವಾದಿ (Conservative) ನ್ಯಾಯಮೂರ್ತಿಗಳು ಟ್ರಂಪ್ ಅವರ ಕಾರ್ಯನಿರ್ವಾಹಕ ಆದೇಶ ಜಾರಿಗೆ ಅವಕಾಶ ನೀಡಬೇಕಿತ್ತು ಎಂಬ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದರು. ಆದರೆ ಬಹುಮತ ನ್ಯಾಯಮೂರ್ತಿಗಳ ತೀರ್ಪಿನ ಮುಂದೆ ಅವರ ಅಭಿಪ್ರಾಯಕ್ಕೆ ಮಾನ್ಯತೆ ದೊರೆಯಲಿಲ್ಲ.

ನ್ಯಾಯಾಲಯದ ತೀರ್ಪು ಹೊರಬೀಳುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಡೊನಾಲ್ಡ್ ಟ್ರಂಪ್, "ಇದು ನಮ್ಮ ದೇಶಕ್ಕೆ ಅತ್ಯಂತ ಕೆಟ್ಟ ನಿರ್ಧಾರ" ಎಂದು ಕರೆದಿದ್ದಾರೆ. ಅಷ್ಟೇ ಅಲ್ಲದೆ, ಈ ಸಮಸ್ಯೆಯನ್ನು ಬಗೆಹರಿಸಲು ಯಾವುದೇ ದೀರ್ಘ ಮತ್ತು ಸಂಕೀರ್ಣವಾದ ಸಂವಿಧಾನ ತಿದ್ದುಪಡಿಯ ಅಗತ್ಯವಿಲ್ಲ. ಅಮೆರಿಕಾದ ಸಂಸತ್ತು (ಕಾಂಗ್ರೆಸ್) ಒಂದು ಸಾಮಾನ್ಯ ಕಾನೂನು ತರುವ ಮೂಲಕ ಇದನ್ನು ಬಹಳ ಸುಲಭವಾಗಿ ನಿರ್ವಹಿಸಬಹುದು ಎಂದು ವಾದಿಸಿದ್ದಾರೆ.

file photo
ಟ್ರಂಪ್ ಗೆ ಮತ್ತೆ ಹಿನ್ನಡೆ: ಜನ್ಮಸಿದ್ಧ ಪೌರತ್ವ ಎತ್ತಿಹಿಡಿದ US ಸುಪ್ರೀಂ ಕೋರ್ಟ್

ಕೇವಲ ಸಾಮಾನ್ಯ ಕಾನೂನಿನ ಮೂಲಕ ಜನ್ಮಸಿದ್ಧ ಪೌರತ್ವವನ್ನು ರದ್ದುಗೊಳಿಸಬಹುದು ಎಂಬ ಟ್ರಂಪ್ ಅವರ ವಾದವನ್ನು ಸುಪ್ರೀಂ ಕೋರ್ಟ್ ಮತ್ತು ಕಾನೂನು ತಜ್ಞರು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ.

ಅಮೆರಿಕ ಸಂವಿಧಾನದ 14ನೇ ತಿದ್ದುಪಡಿಯ ಪ್ರಕಾರ, ದೇಶದಲ್ಲಿ ಜನಿಸುವ ಮಕ್ಕಳು ಸ್ವಯಂಚಾಲಿತವಾಗಿ ನಾಗರಿಕರಾಗುತ್ತಾರೆ. ಇದನ್ನು ಬದಲಾಯಿಸಬೇಕಾದರೆ ಕಡ್ಡಾಯವಾಗಿ ಸಂವಿಧಾನಕ್ಕೆ ತಿದ್ದುಪಡಿ ತರಬೇಕಾಗುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್ ಸ್ಪಷ್ಟಪಡಿಸಿದ್ದಾರೆ.

ಅಮೆರಿಕಾದಲ್ಲಿ ಸಂವಿಧಾನ ತಿದ್ದುಪಡಿ ಮಾಡುವುದು ಅತ್ಯಂತ ಕಠಿಣ ಪ್ರಕ್ರಿಯೆಯಾಗಿದ್ದು, ಇದಕ್ಕೆ ಸಂಸತ್ತಿನ ಉಭಯ ಸದನಗಳಲ್ಲಿ ಮೂರನೇ ಎರಡರಷ್ಟು ಬಹುಮತದ ಅಗತ್ಯವಿದೆ ಎಂದು ತಿಳಿಸಿದ್ದಾರೆ.

2025 ರಲ್ಲಿ ಟ್ರಂಪ್ ಸಹಿ ಮಾಡಿದ್ದ ಈ ಕಾರ್ಯಕಾರಿ ಆದೇಶವು ಜಾರಿಯಾಗಿದ್ದರೆ, ಅಮೆರಿಕಾದಲ್ಲಿರುವ ಲಕ್ಷಾಂತರ ಭಾರತೀಯ ಐಟಿ ಉದ್ಯೋಗಿಗಳು, ವಿದ್ಯಾರ್ಥಿಗಳು ಮತ್ತು ಗ್ರೀನ್ ಕಾರ್ಡ್ ಆಕಾಂಕ್ಷಿಗಳಿಗೆ ಭಾರಿ ಹೊಡೆತ ಬೀಳುತ್ತಿತ್ತು.

ಪ್ರತಿ ವರ್ಷ ಅಮೆರಿಕಾದಲ್ಲಿ ಜನಿಸುವ ಸುಮಾರು 2.5 ಲಕ್ಷ ಮಕ್ಕಳ ಕಾನೂನುಬದ್ಧ ಭವಿಷ್ಯ ಅನಿಶ್ಚಿತವಾಗುತ್ತಿತ್ತು. ಸದ್ಯ ಸುಪ್ರೀಂ ಕೋರ್ಟ್‌ನ ಈ ತೀರ್ಪಿನಿಂದಾಗಿ ವಲಸಿಗರು ನಿರಾಳರಾಗಿದ್ದಾರೆ.

ಆದರೆ, ಟ್ರಂಪ್ ನೇತೃತ್ವದ ಅಮೆರಿಕ ಸರ್ಕಾರ ಮಾತ್ರ "ಅಕ್ರಮ ಬರ್ತ್ ಟೂರಿಸಂ" ತಡೆಯಲು ಮತ್ತು ದೇಶದ ಗಡಿ ಭದ್ರತೆಗಾಗಿ ತನ್ನ ಕಾನೂನು ಹೋರಾಟವನ್ನು ಮುಂದುವರಿಸುವುದಾಗಿ ಎಚ್ಚರಿಕೆ ನೀಡಿದೆ.

ಟ್ರಂಪ್ ಅವರು ತಮ್ಮ ಎರಡನೇ ಅವಧಿಯ ಮೊದಲ ದಿನವೇ ಜನ್ಮಸಿದ್ಧ ಪೌರತ್ವಕ್ಕೆ ಸಂಬಂಧಿಸಿದ ಕಾರ್ಯನಿರ್ವಾಹಕ ಆದೇಶಕ್ಕೆ ಸಹಿ ಹಾಕಿದ್ದರು. ಅದರ ಪ್ರಕಾರ, ಅಕ್ರಮವಾಗಿ ಅಮೆರಿಕದಲ್ಲಿ ವಾಸಿಸುತ್ತಿರುವ ವಿದೇಶಿಗರ ಮಕ್ಕಳಿಗೆ ಮಾತ್ರವಲ್ಲದೆ, ವಿದ್ಯಾರ್ಥಿ ವೀಸಾ, ತಾತ್ಕಾಲಿಕ ಉದ್ಯೋಗ ವೀಸಾ ಅಥವಾ ಗ್ರೀನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿರುವವರ ಮಕ್ಕಳಿಗೂ ಅಮೆರಿಕದಲ್ಲಿ ಜನಿಸಿದರೂ ಸ್ವಯಂಚಾಲಿತ ಪೌರತ್ವ ಸಿಗಬಾರದು ಎಂದು ಘೋಷಿಸಲಾಗಿತ್ತು. ಈ ಆದೇಶವು ಟ್ರಂಪ್ ಸರ್ಕಾರದ ಕಠಿಣ ವಲಸೆ ನೀತಿಯ ಪ್ರಮುಖ ಭಾಗವಾಗಿತ್ತು.

file photo
ಅಧ್ಯಕ್ಷೀಯ ಅಧಿಕಾರ: ಟ್ರಂಪ್ ಪರ ಅಮೆರಿಕ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು!

ಆದರೆ ಈ ಆದೇಶ ಹೊರಬಿದ್ದ ತಕ್ಷಣವೇ ಅಮೆರಿಕದ ಹಲವು ರಾಜ್ಯಗಳು ಹಾಗೂ ನಾಗರಿಕ ಹಕ್ಕುಗಳ ಸಂಘಟನೆಗಳು ನ್ಯಾಯಾಲಯದ ಮೆಟ್ಟಿಲೇರಿದ್ದವು. ವಿವಿಧ ಫೆಡರಲ್ ಜಿಲ್ಲಾ ನ್ಯಾಯಾಲಯಗಳು ಟ್ರಂಪ್ ಅವರ ಆದೇಶವು ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಹೇಳಿ ಅದರ ಜಾರಿಗೆ ತಡೆ ನೀಡಿದ್ದವು. ಹೀಗಾಗಿ ಈ ಆದೇಶ ಅಮೆರಿಕದ ಯಾವುದೇ ಭಾಗದಲ್ಲೂ ಜಾರಿಗೆ ಬಂದಿರಲಿಲ್ಲ.

ಈ ಪ್ರಕರಣದ ವಿಚಾರಣೆ ಏಪ್ರಿಲ್‌ನಲ್ಲಿ ನಡೆದಾಗಲೇ, ಸುಪ್ರೀಂ ಕೋರ್ಟ್‌ನ ಸಂಪ್ರದಾಯವಾದಿ ಹಾಗೂ ಉದಾರವಾದಿ ನ್ಯಾಯಮೂರ್ತಿಗಳಿಬ್ಬರೂ ಟ್ರಂಪ್ ಆದೇಶದ ಕಾನೂನುಬದ್ಧತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದರು. ಈ ಪ್ರಕರಣದ ವಿಚಾರಣೆ ವೇಳೆ ಸ್ವತಃ ಟ್ರಂಪ್ ನ್ಯಾಯಾಲಯಕ್ಕೆ ಹಾಜರಾಗಿದ್ದುದೂ ವಿಶೇಷ ಗಮನ ಸೆಳೆದಿತ್ತು.

ಈ ತೀರ್ಪು ಟ್ರಂಪ್ ಅವರ ಅಧ್ಯಕ್ಷೀಯ ಅಧಿಕಾರಗಳ ಮಿತಿಯನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಇತ್ತೀಚಿನ ವರ್ಷಗಳಲ್ಲಿ ಅಧ್ಯಕ್ಷೀಯ ಅಧಿಕಾರಗಳಿಗೆ ಸಂಬಂಧಿಸಿದ ಹಲವು ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ಟ್ರಂಪ್ ಪರವಾಗಿ ತೀರ್ಪು ನೀಡಿದ್ದರೂ, ಕೆಲ ಪ್ರಮುಖ ಪ್ರಕರಣಗಳಲ್ಲಿ ಮಾತ್ರ ಅವರ ವಿರುದ್ಧ ತೀರ್ಪು ನೀಡಿದೆ. ಅಂತಹ ಸಂದರ್ಭಗಳಲ್ಲಿ ಟ್ರಂಪ್ ನ್ಯಾಯಮೂರ್ತಿಗಳ ವಿರುದ್ಧ ವೈಯಕ್ತಿಕ ಟೀಕೆಗಳನ್ನು ಮಾಡುವ ಮೂಲಕ ಸುದ್ದಿಯಾಗಿದ್ದರು.

ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್, ಅಮೆರಿಕದ "Fourteenth Amendment to the United States Constitution"ನ ಉದ್ದೇಶವನ್ನು ಮತ್ತೊಮ್ಮೆ ನೆನಪಿಸಿದೆ. ಅಮೆರಿಕದ ಅಂತರ್ಯುದ್ಧದ ಬಳಿಕ 1868ರಲ್ಲಿ ಜಾರಿಗೆ ಬಂದ ಈ ತಿದ್ದುಪಡಿಯ ಮುಖ್ಯ ಉದ್ದೇಶ, ಗುಲಾಮಗಿರಿಯಿಂದ ಮುಕ್ತರಾದ ಕಪ್ಪು ವರ್ಣೀಯರಿಗೆ ಸಂಪೂರ್ಣ ಅಮೆರಿಕದ ನಾಗರಿಕತ್ವವನ್ನು ಖಾತರಿಪಡಿಸುವುದಾಗಿತ್ತು. ಆದರೆ, ಅದರಲ್ಲಿರುವ "ಅಮೆರಿಕದಲ್ಲಿ ಜನಿಸಿದ ಅಥವಾ ಕಾನೂನುಬದ್ಧವಾಗಿ ನಾಗರಿಕರಾದ ಎಲ್ಲರೂ ಅಮೆರಿಕದ ನಾಗರಿಕರು" ಎಂಬ ವಾಕ್ಯ ಎಲ್ಲರಿಗೂ ಅನ್ವಯಿಸುವಂತೆ ರಚಿಸಲಾಗಿದೆ.

ಈ ವಿಚಾರದಲ್ಲಿ ಕೆಳಹಂತದ ನ್ಯಾಯಾಲಯಗಳು 1898ರ United States v. Wong Kim Ark ತೀರ್ಪನ್ನು ಪ್ರಮುಖ ಆಧಾರವಾಗಿ ಬಳಸಿದ್ದವು. ಆ ಪ್ರಕರಣದಲ್ಲಿ ಚೀನಾದ ವಲಸಿಗ ದಂಪತಿಯ ಮಗ ಅಮೆರಿಕದಲ್ಲಿ ಜನಿಸಿದ್ದರಿಂದ ಆತ ಅಮೆರಿಕದ ನಾಗರಿಕನೇ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿತ್ತು. ಅಂದಿನಿಂದಲೇ ಜನ್ಮಸಿದ್ಧ ಪೌರತ್ವದ ವ್ಯಾಖ್ಯಾನ ಇದೇ ರೀತಿಯಲ್ಲಿ ಜಾರಿಯಲ್ಲಿದೆ.

ಆದರೆ, ಟ್ರಂಪ್ ಆಡಳಿತವು ಈ ವ್ಯಾಖ್ಯಾನ ತಪ್ಪಾಗಿದೆ ಎಂದು ವಾದಿಸಿತ್ತು. ಅಕ್ರಮವಾಗಿ ಅಥವಾ ತಾತ್ಕಾಲಿಕವಾಗಿ ಅಮೆರಿಕದಲ್ಲಿರುವ ವಿದೇಶಿಗರ ಮಕ್ಕಳು ಅಮೆರಿಕದ ಸಂಪೂರ್ಣ ನ್ಯಾಯವ್ಯಾಪ್ತಿಗೆ ಒಳಪಡುವುದಿಲ್ಲ. ಆದ್ದರಿಂದ ಅವರಿಗೆ ಜನ್ಮಸಿದ್ಧ ಪೌರತ್ವ ಸಿಗಬಾರದು ಎಂದು ಸರ್ಕಾರ ತನ್ನ ವಾದ ಮಂಡಿಸಿತ್ತು. ಆದರೆ ಸುಪ್ರೀಂ ಕೋರ್ಟ್ ಈ ವಾದವನ್ನು ಒಪ್ಪಲಿಲ್ಲ.

ತಜ್ಞರ ಅಂದಾಜಿನ ಪ್ರಕಾರ, ಟ್ರಂಪ್ ಅವರ ಆದೇಶ ಜಾರಿಯಾಗಿದ್ದರೆ ಅಮೆರಿಕದಲ್ಲಿ ಪ್ರತಿ ವರ್ಷ ಜನಿಸುವ ಸುಮಾರು 2.5 ಲಕ್ಷಕ್ಕೂ ಹೆಚ್ಚು ಮಕ್ಕಳ ಪೌರತ್ವದ ಮೇಲೆ ನೇರ ಪರಿಣಾಮ ಬೀಳುತ್ತಿತ್ತು. ಅಕ್ರಮ ವಲಸಿಗರ ಮಕ್ಕಳಷ್ಟೇ ಅಲ್ಲದೆ, ವಿದ್ಯಾರ್ಥಿ ವೀಸಾ, ಉದ್ಯೋಗ ವೀಸಾ ಹಾಗೂ ಗ್ರೀನ್ ಕಾರ್ಡ್ ಪ್ರಕ್ರಿಯೆಯಲ್ಲಿರುವ ಸಾವಿರಾರು ಕುಟುಂಬಗಳ ಮಕ್ಕಳಿಗೂ ಅಮೆರಿಕದ ನಾಗರಿಕತ್ವ ನಿರಾಕರಿಸಲಾಗುತ್ತಿತ್ತು.

ಈ ತೀರ್ಪಿನೊಂದಿಗೆ ಟ್ರಂಪ್ ಅವರ ವಲಸೆ ನೀತಿಗೆ ಮತ್ತೊಂದು ದೊಡ್ಡ ಹಿನ್ನಡೆಯಾಗಿದೆ. ಜನ್ಮಸಿದ್ಧ ಪೌರತ್ವವನ್ನು ರದ್ದುಪಡಿಸುವ ಅವರ ಪ್ರಯತ್ನ ಅಮೆರಿಕದ ಸಂವಿಧಾನ ಹಾಗೂ ಹಲವು ದಶಕಗಳಿಂದ ನಡೆದುಕೊಂಡು ಬಂದಿರುವ ನ್ಯಾಯಾಂಗದ ವ್ಯಾಖ್ಯಾನಕ್ಕೆ ವಿರುದ್ಧವಾಗಿದೆ ಎಂದು ಸುಪ್ರೀಂ ಕೋರ್ಟ್ ಮತ್ತೊಮ್ಮೆ ಸ್ಪಷ್ಟಪಡಿಸಿದೆ.

ಇದರೊಂದಿಗೆ ಅಮೆರಿಕದಲ್ಲಿ ಜನಿಸುವ ಮಕ್ಕಳಿಗೆ ಜನ್ಮದ ಆಧಾರದ ಮೇಲೆ ನಾಗರಿಕತ್ವ ನೀಡುವ ವ್ಯವಸ್ಥೆ ಮುಂದುವರಿಯಲಿದ್ದು, ಸಂವಿಧಾನ ತಿದ್ದುಪಡಿ ಆಗುವವರೆಗೆ ಅದರಲ್ಲಿ ಯಾವುದೇ ಬದಲಾವಣೆ ಸಾಧ್ಯವಿಲ್ಲ ಎಂಬ ಸಂದೇಶವನ್ನು ದೇಶದ ಸುಪ್ರೀಂಕೋರ್ಟ್ ನೀಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com