

ಟೆಹ್ರಾನ್: ಇರಾನ್ ದೇಶದ ಬಂದರುಗಳ ಮೇಲೆ ಅಮೆರಿಕಾ ಮತ್ತೆ ಕಠಿಣ ನೌಕಾ ದಿಗ್ಬಂಧನ ಹೇರಿದ್ದು, ಇದರ ಬೆನ್ನಲ್ಲೇ ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಕವಿದಿದೆ.
ಅಮೆರಿಕದ ಈ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಇರಾನ್, ಇಡೀ ಮಧ್ಯಪ್ರಾಚ್ಯದ ತೈಲ ಮತ್ತು ಅನಿಲ ರಫ್ತನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವುದಾಗಿ ಜಗತ್ತಿಗೆ ನೇರ ಎಚ್ಚರಿಕೆ ನೀಡಿದೆ.
ಇದೇ ವೇಳೆ ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳ ಹಿತಾಸಕ್ತಿಗೆ ಸಂಬಂಧಿಸಿದ ಇತರ ತೈಲ ಹಾಗೂ ಅನಿಲ ರಫ್ತು ಮಾರ್ಗಗಳೂ ಗುರಿಯಾಗಬಹುದು ಎಂದೂ ಎಚ್ಚರಿಕೆ ನೀಡಿದೆ.
ಇರಾನ್‌ನ ಶಕ್ತಿಶಾಲಿ ಮಿಲಿಟರಿ ಪಡೆಯಾದ ‘ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್’ (IRGC) ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, "ಈ ಪ್ರದೇಶದಿಂದ ತೈಲ ರಫ್ತು ಪ್ರಕ್ರಿಯೆಯು ಎಲ್ಲರಿಗೂ ಇರಬೇಕು, ಇಲ್ಲದಿದ್ದರೆ ಯಾರಿಗೂ ಇರುವುದಿಲ್ಲ" ಎಂದು ಗುಡುಗಿದೆ.
ಅಮೆರಿಕವು ಇರಾನ್‌ನ ಇಂಧನ ಮಾರಾಟವನ್ನು ತಡೆದರೆ, ಜಗತ್ತಿನ ಅತ್ಯಂತ ಪ್ರಮುಖ ನೌಕಾ ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು (Strait of Hormuz) ಬಂದ್ ಮಾಡುವುದಾಗಿ ಬೆದರಿಕೆ ಹಾಕಿದೆ.
ಇದರಿಂದ ಕಳೆದ ಫೆಬ್ರವರಿ ಅಂತ್ಯದಿಂದ ಆರಂಭವಾದ ಅಮೆರಿಕ–ಇರಾನ್ ಸಂಘರ್ಷದ ಪರಿಣಾಮ ಹಾರ್ಮುಜ್ ಜಲಸಂಧಿಯ ಮೂಲಕ ನಡೆಯುತ್ತಿದ್ದ ತೈಲ ಮತ್ತು ಅನಿಲ ಸಾಗಣೆಗೆ ಭಾರೀ ಅಡ್ಡಿಯಾಗಿದೆ.
ಜಗತ್ತಿನ ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲದ ದೊಡ್ಡ ಪ್ರಮಾಣದ ಸಾಗಣೆ ಇದೇ ಜಲಸಂಧಿಯ ಮೂಲಕ ನಡೆಯುವುದರಿಂದ, ಅಲ್ಲಿನ ಬೆಳವಣಿಗೆಗಳು ಜಾಗತಿಕ ಇಂಧನ ಮಾರುಕಟ್ಟೆಯ ಮೇಲೆ ನೇರ ಪರಿಣಾಮ ಬೀರುತ್ತಿವೆ.
ಇರಾನ್ ಸರ್ಕಾರಿ ದೂರದರ್ಶನ IRIB ವರದಿ ಪ್ರಕಾರ, ಅಮೆರಿಕ ಇರಾನ್ ಮೇಲೆ ನಡೆಸಿದ ವೈಮಾನಿಕ ದಾಳಿಗಳಿಗೆ ಪ್ರತಿಯಾಗಿ ಬಹ್ರೈನ್ ಮತ್ತು ಕುವೈತ್ನಲ್ಲಿರುವ ಅಮೆರಿಕ ಸೇನಾ ನೆಲೆಗಳ ಮೇಲೆ ಐಆರ್‌ಜಿಸಿ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ.
ಐಆರ್‌ಜಿಸಿ ತನ್ನ ಹೇಳಿಕೆಯಲ್ಲಿ, "ಅಮೆರಿಕ ತನ್ನ ನೌಕಾಪಡೆಯ ಮೂಲಕ ಹಿಂದೂ ಮಹಾಸಾಗರ ತೈಲ ಮತ್ತು ಅನಿಲ ಸಾಗಣೆ ಮಾರ್ಗಕ್ಕೆ ಅಡ್ಡಿ ಉಂಟುಮಾಡಿದೆ. ಹೀಗಾಗಿ ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳಿಗೆ ಅನುಕೂಲವಾಗಿರುವ ಇತರ ತೈಲ ರಫ್ತು ಮಾರ್ಗಗಳೂ ಮುಚ್ಚಲ್ಪಡುವ ಸಾಧ್ಯತೆಯಿದೆ" ಎಂದು ಎಚ್ಚರಿಸಿದೆ.
"ಈ ಪ್ರದೇಶದಿಂದ ತೈಲ ಮತ್ತು ಅನಿಲ ಎಲ್ಲರಿಗೂ ಲಭ್ಯವಾಗಬೇಕು, ಇಲ್ಲವಾದರೆ ಯಾರಿಗೂ ಲಭ್ಯವಾಗುವುದಿಲ್ಲ" ಎಂದು ಹೇಳಿರುವ ಐಆರ್‌ಜಿಸಿ, ಅಮೆರಿಕ ತನ್ನ ದಾಳಿಯನ್ನು ನಿಲ್ಲಿಸುವವರೆಗೆ ಹಾರ್ಮುಜ್ ಜಲಸಂಧಿ ತೆರೆಯುವುದಿಲ್ಲ ಎಂದು ಪುನರುಚ್ಚರಿಸಿದೆ.
ಈ ಬೆಳವಣಿಗೆ ಅಮೆರಿಕ ಮತ್ತೆ ಇರಾನ್ ಬಂದರುಗಳ ಮೇಲೆ ನೌಕಾ ನಿರ್ಬಂಧ (ಬ್ಲಾಕೇಡ್) ಹೇರಿದ ಕೆಲವೇ ಗಂಟೆಗಳ ಬಳಿಕ ನಡೆದಿದೆ. ಹಾರ್ಮುಜ್ ಜಲಸಂಧಿಯಲ್ಲಿ ಸಂಚರಿಸುತ್ತಿದ್ದ ಹಡಗುಗಳ ಮೇಲೆ ಇರಾನ್ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಅಮೆರಿಕ ಈ ಕ್ರಮ ಕೈಗೊಂಡಿದೆ.
ಅಮೆರಿಕ ಈ ಹಿಂದೆ ಏಪ್ರಿಲ್ ಮಧ್ಯಭಾಗದಲ್ಲಿ ಇರಾನ್ ವಿರುದ್ಧ ನೌಕಾ ನಿರ್ಬಂಧ ಹೇರಿತ್ತು. ಬಳಿಕ ಜೂನ್ ಮಧ್ಯದಲ್ಲಿ ಅಣು ಕಾರ್ಯಕ್ರಮ ಸೇರಿದಂತೆ ಹಲವು ವಿಷಯಗಳ ಕುರಿತು 60 ದಿನಗಳ ಮಾತುಕತೆಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ನಿರ್ಬಂಧವನ್ನು ಹಿಂಪಡೆಯಲಾಗಿತ್ತು. ಆದರೆ, ಮಾತುಕತೆ ವಿಫಲವಾಗಿದ್ದು, ಹಾರ್ಮುಜ್ ಜಲಸಂಧಿಯ ಸಂಘರ್ಷ ಮತ್ತೆ ಉಲ್ಬಣಗೊಂಡಿದೆ.
ನಿರ್ಬಂಧವನ್ನು ಮರುಜಾರಿಗೊಳಿಸಿದ ಬಳಿಕ ಅಮೆರಿಕ ಮತ್ತೊಮ್ಮೆ ಭಾರೀ ವೈಮಾನಿಕ ದಾಳಿ ನಡೆಸಿದೆ. ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ಮಾಹಿತಿ ಪ್ರಕಾರ, ಏಳು ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ಇರಾನ್‌ನ ವಿವಿಧ ಭಾಗಗಳಲ್ಲಿರುವ ಡಜನ್‌ಗಟ್ಟಲೆ ಗುರಿಗಳ ಮೇಲೆ ದಾಳಿ ನಡೆಸಲಾಗಿದೆ.
ಇರಾನ್‌ನ ಕ್ಷಿಪಣಿ ದಾಳಿಯ ಹಿನ್ನೆಲೆಯಲ್ಲಿ ಬಹ್ರೈನ್ ಹಾಗೂ ಕುವೈತ್ನಲ್ಲಿ ಬುಧವಾರ ಮುಂಜಾನೆ ಕ್ಷಿಪಣಿ ದಾಳಿ ಎಚ್ಚರಿಕೆ ಸೈರನ್‌ಗಳು ಮೊಳಗಿದವು. ಇತ್ತೀಚಿನ ದಿನಗಳಲ್ಲಿ ಇಂತಹ ದಾಳಿಗಳು ನಿರಂತರವಾಗಿ ನಡೆಯುತ್ತಿದ್ದು, ಈಗಾಗಲೇ ದುರ್ಬಲವಾಗಿದ್ದ ಕದನ ವಿರಾಮ ಒಪ್ಪಂದ ಮತ್ತಷ್ಟು ಕುಸಿದಿದೆ.
ಸೆಂಟ್ರಲ್ ಕಮಾಂಡ್ ಮುಖ್ಯಸ್ಥ ಅಡ್ಮಿರಲ್ ಬ್ರಾಡ್ ಕೂಪರ್ ಮಾತನಾಡಿ, ಇರಾನ್ ನೆರೆಯ ಅರಬ್ ರಾಷ್ಟ್ರಗಳತ್ತ ಡಜನ್‌ಗಟ್ಟಲೆ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಹಾರಿಸಿದೆ ಎಂದು ತಿಳಿಸಿದ್ದಾರೆ.
"ನಿರಪರಾಧಿಗಳ ಜೀವಕ್ಕೆ ಅಪಾಯ ಉಂಟುಮಾಡುತ್ತಿರುವ ಇರಾನ್‌ನ ಆಕ್ರಮಣಕಾರಿ ಕ್ರಮಗಳಿಗೆ ಅಮೆರಿಕ ಸೂಕ್ತ ಉತ್ತರ ನೀಡುತ್ತಿದೆ" ಎಂದು ಅವರು ಹೇಳಿದ್ದಾರೆ.
ಪ್ರಸ್ತುತ ಅರಬ್ಬೀ ಸಮುದ್ರದಲ್ಲಿ ಅಮೆರಿಕ 19 ಯುದ್ಧನೌಕೆಗಳನ್ನು ನಿಯೋಜಿಸಿದ್ದು, ಅವುಗಳಲ್ಲಿ ಎರಡು ವಿಮಾನವಾಹಕ ನೌಕೆಗಳು ಮತ್ತು 1,000ಕ್ಕೂ ಹೆಚ್ಚು ಯೋಧರನ್ನು ಹೊತ್ತ ನೌಕೆಯೂ ಸೇರಿವೆ. ಮಧ್ಯಪ್ರಾಚ್ಯದಾದ್ಯಂತ ನೂರಾರು ಯುದ್ಧ ವಿಮಾನಗಳು ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ಸೆಂಟ್ರಲ್ ಕಮಾಂಡ್ ತಿಳಿಸಿದೆ.
ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ಇರಾನ್ ವಿರುದ್ಧ ಕಾರ್ಯಾಚರಣೆ ಆರಂಭಿಸಿದ ನಂತರ, ಇರಾನ್ ವಾಣಿಜ್ಯ ಹಡಗುಗಳನ್ನು ಗುರಿಯಾಗಿಸಿ ಹೋರ್ಮುಜ್ ಜಲಸಂಧಿಯ ಸಂಚಾರಕ್ಕೆ ಅಡ್ಡಿಪಡಿಸಿತ್ತು. ಇದರ ಪರಿಣಾಮ ಜಾಗತಿಕ ಮಾರುಕಟ್ಟೆಯಲ್ಲಿ ತೈಲ, ರಸಗೊಬ್ಬರ ಮತ್ತು ಹಲವು ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿತ್ತು.
ಇತ್ತೀಚಿನ ವಾರಗಳಲ್ಲಿ ಒಮನ್ ಸಮೀಪ ಅಮೆರಿಕದ ಮೇಲ್ವಿಚಾರಣೆಯಲ್ಲಿರುವ ಸಾಗಣೆ ಮಾರ್ಗದಲ್ಲೂ ಇರಾನ್ ದಾಳಿ ನಡೆಸಿರುವುದು ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಹಾರ್ಮುಜ್ ಜಲಸಂಧಿಯನ್ನು ಬಲಪ್ರಯೋಗದ ಮೂಲಕ ಪುನಃ ತೆರೆಯುವುದಾಗಿ ಅಮೆರಿಕ ಎಚ್ಚರಿಕೆ ನೀಡಿದ್ದರೂ, ಅದಕ್ಕಾಗಿ ಇನ್ನಷ್ಟು ದೊಡ್ಡ ಪ್ರಮಾಣದ ನೌಕಾಪಡೆ ಹಾಗೂ ಸಾವಿರಾರು ಭೂಸೇನಾ ಯೋಧರ ಅಗತ್ಯವಿರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ, ವಿಶ್ವಸಂಸ್ಥೆಯಲ್ಲಿನ ಇರಾನ್ ರಾಯಭಾರಿ ಅಮೀರ್ ಸಯೀದ್ ಇರಾವಾನಿ, "ಆಕ್ರಮಣಕಾರಿ ರಾಷ್ಟ್ರ ಅಮೆರಿಕವೇ ಹೊರತು, ಅದು ಯಾವುದೇ ರೀತಿಯಲ್ಲೂ ಸಂತ್ರಸ್ತ ರಾಷ್ಟ್ರವಲ್ಲ" ಎಂದು ಅಮೆರಿಕದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇನ್ನೊಂದೆಡೆ, ಇರಾನ್ ಸೇನೆ ಜೋರ್ಡನ್‌ನ ಅಲ್-ಅಜ್ರಾಕ್ ಅಮೆರಿಕ ಸೇನಾ ನೆಲೆಯ ಮೇಲೆ ಡ್ರೋನ್ ದಾಳಿ ನಡೆಸಿರುವುದಾಗಿ ತಿಳಿಸಿದೆ.
ಐಆರ್‌ಜಿಸಿ ಕುವೈತ್‌ನ ಮಿನಾ ಅಬ್ದುಲ್ಲಾ ಪ್ರದೇಶದಲ್ಲಿರುವ ಅಮೆರಿಕದ ಸೇನಾ ಲಾಜಿಸ್ಟಿಕ್ಸ್ ಕೇಂದ್ರದ ಮೇಲೆ ಕ್ರೂಸ್ ಕ್ಷಿಪಣಿಗಳನ್ನು ಹಾರಿಸಲಾಗಿದೆ ಎಂದು ಹೇಳಿದೆ.
ಇದರ ಜೊತೆಗೆ, ಬಹ್ರೈನ್‌ನಲ್ಲಿರುವ ಅಮೆರಿಕದ ಐದನೇ ನೌಕಾಪಡೆಯ ಕಮಾಂಡ್ ಮತ್ತು ಕಂಟ್ರೋಲ್ ಕೇಂದ್ರ, ಪ್ರಮುಖ ಸೇನಾ ಗೋದಾಮುಗಳು ಹಾಗೂ ಇಂಧನ ಸಂಗ್ರಹ ಕೇಂದ್ರಗಳ ಮೇಲೂ ಯಶಸ್ವಿ ದಾಳಿ ನಡೆಸಲಾಗಿದೆ ಎಂದು ಐಆರ್‌ಜಿಸಿ ಹೇಳಿಕೊಂಡಿದೆ.