

ವಾಷಿಂಗ್ಟನ್: ಭಾರತ ಮತ್ತು ಅಮೆರಿಕಾ ನಡುವಿನ ಮಹತ್ವದ ವ್ಯಾಪಾರ ಒಪ್ಪಂದ ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲೇ ಒಪ್ಪಂದಕ್ಕೆ ಬರಲಿದ್ದೇವೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದಾರೆ. ಇದೇ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ತಮ್ಮ "ಉತ್ತಮ ಸ್ನೇಹಿತ" ಎಂದು ಬಣ್ಣಿಸಿದ್ದಾರೆ.
ಶ್ವೇತಭವನದ ಓವಲ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಮೋದಿ ಅವರೊಂದಿಗೆ ತಮ್ಮ ವೈಯಕ್ತಿಕ ಸ್ನೇಹ ಹಾಗೂ ಉತ್ತಮ ಬಾಂಧವ್ಯವೇ ವ್ಯಾಪಾರ ಮಾತುಕತೆಯಲ್ಲಿನ ಉಳಿದಿರುವ ಭಿನ್ನಾಭಿಪ್ರಾಯಗಳನ್ನು ನಿವಾರಿಸಲು ನೆರವಾಗಲಿದೆ ಎಂದು ಹೇಳಿದರು.
"ನಾವು ಒಪ್ಪಂದಕ್ಕೆ ಬರುತ್ತೇವೆ. ನಿಮ್ಮ ಪ್ರಧಾನಮಂತ್ರಿಯನ್ನು ನಾನು ತುಂಬಾ ಇಷ್ಟಪಡುತ್ತೇನೆ. ಅವರು ನನ್ನ ಉತ್ತಮ ಸ್ನೇಹಿತರು. ನಮ್ಮಿಬ್ಬರ ನಡುವೆ ಉತ್ತಮ ಸಂಬಂಧವಿದೆ," ಎಂದು ತಿಳಿಸಿದರು.
ಇದೇ ವೇಳೆ ಭಾರತ-ಅಮೆರಿಕ ನಡುವಿನ ಹಿಂದಿನ ವ್ಯಾಪಾರ ಸಂಬಂಧಗಳ ಬಗ್ಗೆ ತಮ್ಮ ಹಳೆಯ ಟೀಕೆಯನ್ನು ಪುನರಾವರ್ತಿಸಿದ ಟ್ರಂಪ್, ಹಲವು ವರ್ಷಗಳ ಕಾಲ ಭಾರತ ಅಮೆರಿಕದ ಮೇಲೆ ಹೆಚ್ಚಿನ ಸುಂಕ ವಿಧಿಸುತ್ತಿತ್ತು ಎಂದು ಆರೋಪಿಸಿದರು.
"ಹಲವು ವರ್ಷಗಳ ಕಾಲ ಭಾರತ ಅಮೆರಿಕಾದ ಲಾಭ ಪಡೆದಿತ್ತು. ಅವರು ನಮ್ಮ ಮೇಲೆ ಭಾರೀ ಸುಂಕ ವಿಧಿಸುತ್ತಿದ್ದರು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಈಗ ನಾವು ಭಾರತದಿಂದ ಸಾಕಷ್ಟು ಆದಾಯ ಗಳಿಸುತ್ತಿದ್ದೇವೆ," ಎಂದು ಹೇಳಿದರು.
ಜೂನ್ 1ರಿಂದ 4ರವರೆಗೆ ನವದೆಹಲಿಯಲ್ಲಿ ನಾಲ್ಕು ದಿನಗಳ ಮಹತ್ವದ ವ್ಯಾಪಾರ ಮಾತುಕತೆಯ ಬೆನ್ನಲ್ಲೇ ಟ್ರಂಪ್ ಅವರು ಈ ಹೇಳಿಕೆಯನ್ನು ನೀಡಿದ್ದು, ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಅಮೆರಿಕಾದ ವ್ಯಾಪಾರ ಪ್ರತಿನಿಧಿಗಳ ಕಚೇರಿ (USTR) ಮತ್ತು ಭಾರತದ ವಾಣಿಜ್ಯ ಸಚಿವಾಲಯದ ಅಧಿಕಾರಿಗಳು ಮಧ್ಯಂತರ ವ್ಯಾಪಾರ ಒಪ್ಪಂದದ ಕುರಿತು ಸುದೀರ್ಘ ಚರ್ಚೆ ನಡೆಸಿದ್ದರು.
ಮಾತುಕತೆಗಳು ಸಹಕಾರ ಮತ್ತು ಪ್ರಾಯೋಗಿಕತೆಯ ಮನೋಭಾವದಲ್ಲಿ ನಡೆದಿದ್ದು, ಸರಕು ಮತ್ತು ಸೇವೆಗಳ ಮಾರುಕಟ್ಟೆ ಪ್ರವೇಶ, ಸುಂಕೇತರ ಅಡೆತಡೆಗಳ ನಿವಾರಣೆ, ಕಸ್ಟಮ್ಸ್ ಪ್ರಕ್ರಿಯೆಗಳ ಸರಳೀಕರಣ ಹಾಗೂ ಆರ್ಥಿಕ ಭದ್ರತಾ ಸಹಕಾರದಂತಹ ಪ್ರಮುಖ ವಿಷಯಗಳ ಮೇಲೆ ಗಮನ ಹರಿಸಲಾಗಿದೆ ಎಂದು ಭಾರತದ ವಾಣಿಜ್ಯ ಸಚಿವಾಲಯದ ಮೂಲಗಳು ತಿಳಿಸಿವೆ,
ಎರಡೂ ದೇಶಗಳ ರಾಜತಾಂತ್ರಿಕ ಅಧಿಕಾರಿಗಳ ಪ್ರಕಾರ, ಒಪ್ಪಂದದ ಮೊದಲ ಹಂತದ ಕರಡು ಬಹುತೇಕ ಪೂರ್ಣಗೊಂಡಿದ್ದು, ಉಳಿದಿರುವ ಕೆಲವೇ ಕೆಲವು ಅಂಶಗಳ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಭಾರತದಲ್ಲಿನ ಅಮೆರಿಕ ರಾಯಭಾರಿ ಸೆರ್ಗಿಯೋ ಗೋರ್ ಅವರು ಮಾತನಾಡಿ, ಮಾತುಕತೆಗಳು ಅಂತಿಮ ಹಂತದಲ್ಲಿದ್ದು, ಉಳಿದಿರುವ ಭಿನ್ನಾಭಿಪ್ರಾಯಗಳನ್ನು ನಿವಾರಿಸಲು ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಈ ಮಧ್ಯಂತರ ಒಪ್ಪಂದವು ಮಹತ್ವದ ಸಮಯದಲ್ಲಿ ನಡೆಯುತ್ತಿದೆ.ಟ್ರಂಪ್ ಆಡಳಿತವು ಭಾರತ ಸೇರಿದಂತೆ 60 ದೇಶಗಳ ಮೇಲೆ 12.5 ಶೇಕಡಾ ಸುಂಕ ವಿಧಿಸುವ ಪ್ರಸ್ತಾವನೆಯನ್ನೂ ಪರಿಶೀಲಿಸುತ್ತಿದೆ. ಇದರ ಜೊತೆಗೆ, ರಷ್ಯಾದಿಂದ ಕಚ್ಚಾ ತೈಲ ಖರೀದಿಸಿದ ಹಿನ್ನೆಲೆಯಲ್ಲಿ ಈ ವರ್ಷದ ಆರಂಭದಲ್ಲಿ ಕೆಲವು ಭಾರತೀಯ ಉತ್ಪನ್ನಗಳ ಮೇಲೆ ಅಮೆರಿಕ ಹೆಚ್ಚುವರಿ ಶೇಕಡಾ 25ರಷ್ಟು ಸುಂಕ ವಿಧಿಸಿತ್ತು. ನಂತರ ಭಾರತ ಆ ಆಮದುಗಳನ್ನು ನಿಲ್ಲಿಸಲು ಬದ್ಧವಾದ ನಂತರ ಸುಂಕವನ್ನು ತೆಗೆದುಹಾಕಲಾಯಿತು.
ಈ ಎಲ್ಲ ಸವಾಲುಗಳ ನಡುವೆಯೂ ಭಾರತ ಮತ್ತು ಅಮೆರಿಕ ನಡುವಿನ ಆರ್ಥಿಕ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಹಾಗೂ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸುವ ಬದ್ಧತೆ ಎರಡೂ ದೇಶಗಳಲ್ಲಿ ಇದೆ ಎಂಬ ಸಂದೇಶವನ್ನು ಟ್ರಂಪ್ ಅವರ ಹೇಳಿಕೆ ನೀಡಿದೆ.
Advertisement