ಇರಾನ್‌ ಜೊತೆ ಯುದ್ಧ ಅಂತ್ಯಗೊಂಡಿದೆ; ವಾರಾಂತ್ಯದಲ್ಲಿ ಯುರೋಪಿನಲ್ಲಿ ಶಾಂತಿ ಒಪ್ಪಂದ: ಡೊನಾಲ್ಡ್ ಟ್ರಂಪ್ ಘೋಷಣೆ

ಶ್ವೇತಭವನದ ಓವಲ್ ಕಚೇರಿಯಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಡೊನಾಲ್ಡ್ ಟ್ರಂಪ್, ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರು ಒಪ್ಪಂದದ ಸಹಿ ಸಮಾರಂಭದಲ್ಲಿ ಭಾಗವಹಿಸುವ ನಿರೀಕ್ಷೆಯಿದ್ದು, ಅದು ವಾರಾಂತ್ಯದಲ್ಲಿ ಯುರೋಪಿನಲ್ಲಿ ನಡೆಯಬಹುದು ಎಂದು ಹೇಳಿದರು.
Donald Trump
ಡೊನಾಲ್ಡ್ ಟ್ರಂಪ್
Updated on

ಇರಾನ್‌ನೊಂದಿಗೆ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸುವ ಒಪ್ಪಂದವು ಬಹುತೇಕ ಅಂತಿಮ ಹಂತ ತಲುಪಿದ್ದು, ಈ ವಾರಾಂತ್ಯದಲ್ಲೇ ಯುರೋಪಿನಲ್ಲಿ ಅದಕ್ಕೆ ಸಹಿ ಹಾಕುವ ಸಾಧ್ಯತೆ ಇದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಇದೇ ದಿನ ಇರಾನ್‌ನ ತೈಲ ಉದ್ಯಮವನ್ನು ಗುರಿಯಾಗಿಸಿ ಕ್ರಮ ಕೈಗೊಳ್ಳುವ ಬೆದರಿಕೆ ನೀಡಿದ್ದ ಟ್ರಂಪ್, ಬಳಿಕ ಯೋಜಿತ ಸೇನಾ ದಾಳಿಗಳನ್ನು ರದ್ದುಗೊಳಿಸಿದ್ದರು.

ಶ್ವೇತಭವನದ ಓವಲ್ ಕಚೇರಿಯಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಡೊನಾಲ್ಡ್ ಟ್ರಂಪ್, ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರು ಒಪ್ಪಂದದ ಸಹಿ ಸಮಾರಂಭದಲ್ಲಿ ಭಾಗವಹಿಸುವ ನಿರೀಕ್ಷೆಯಿದ್ದು, ಅದು ವಾರಾಂತ್ಯದಲ್ಲಿ ಯುರೋಪಿನಲ್ಲಿ ನಡೆಯಬಹುದು ಎಂದು ಹೇಳಿದರು.

ಇತ್ತೀಚಿನ ಮಾತುಕತೆಗಳ ಕುರಿತು ಕತಾರ್, ಯುಎಇ, ಸೌದಿ ಅರೇಬಿಯಾ, ಬಹರೈನ್, ಕುವೈತ್ ಹಾಗೂ ಪಾಕಿಸ್ತಾನ ಸೇರಿದಂತೆ ಹಲವು ಮಧ್ಯಪ್ರಾಚ್ಯ ರಾಷ್ಟ್ರಗಳ ನಾಯಕರೊಂದಿಗೆ ತಾವು ಮಾತುಕತೆ ನಡೆಸಿರುವುದಾಗಿ ಟ್ರಂಪ್ ತಿಳಿಸಿದರು.

ನಂತರ ಜಾರ್ಜಿಯಾದ ಲೆಫ್ಟಿನೆಂಟ್ ಗವರ್ನರ್ ಬರ್‌ಟ್ ಜೋನ್ಸ್ ಅವರ ಪರವಾಗಿ ನಡೆದ ದೂರವಾಣಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಟ್ರಂಪ್, ಅಮೆರಿಕವು ಇರಾನ್‌ನೊಂದಿಗಿನ ಯುದ್ಧವನ್ನು ಪರಿಣಾಮಕಾರಿಯಾಗಿ ಕೊನೆಗೊಳಿಸಿದೆ ಎಂದು ಘೋಷಿಸಿದರು.

ನಾವು ಇರಾನ್‌ನೊಂದಿಗಿನ ಯುದ್ಧವನ್ನು ಕೊನೆಗೊಳಿಸಿದ್ದೇವೆ. ಅವರು ಎಂದಿಗೂ ಅಣ್ವಸ್ತ್ರವನ್ನು ಹೊಂದುವುದಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ನಾವು ಇದೇ ವಿಷಯ ಒತ್ತಾಯಿಸಿದ್ದೆವು. ಅದೇ ಈ ಪ್ರಯತ್ನದ ಮುಖ್ಯ ಉದ್ದೇಶವಾಗಿತ್ತು ಎಂದು ಟ್ರಂಪ್ ಹೇಳಿದರು.

ಇದಕ್ಕೂ ಮೊದಲು ಓವಲ್ ಕಚೇರಿಯಲ್ಲಿ ಮಾತನಾಡಿದ ಅವರು, ಈ ಬೆಳವಣಿಗೆಗೆ ಹಣಕಾಸು ಮಾರುಕಟ್ಟೆಗಳು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿವೆ ಎಂದು ಹೇಳಿ, ಶೀಘ್ರದಲ್ಲೇ ಅಧಿಕೃತ ಒಪ್ಪಂದಕ್ಕೆ ಸಹಿ ಹಾಕಲಾಗುವುದು ಎಂದು ಸೂಚಿಸಿದರು. ಒಪ್ಪಂದ ಅಂತಿಮಗೊಂಡ ಬಳಿಕ ಹಾರ್ಮುಜ್ ಜಲಸಂಧಿಯನ್ನು ಪುನಃ ತೆರೆಯಲಾಗುವುದು ಎಂದೂ ಹೇಳಿದರು.

Donald Trump
US-Iran war: 'ಒಪ್ಪಂದಕ್ಕೆ ಒಪ್ಪಿಗೆ ಸಿಕ್ಕಿದೆ' ಎಂದ ಟ್ರಂಪ್‌; 'ಇನ್ನೂ ನಿರ್ಧಾರವೇ ಆಗಿಲ್ಲ' ಎಂದ ಇರಾನ್‌; ಹೆಚ್ಚಿದ ಅನಿಶ್ಚಿತತೆ..!

ಇದು ಅತ್ಯಂತ ಬಲಿಷ್ಠ ತಿಳುವಳಿಕೆ ಒಪ್ಪಂದ (Memorandum of Understanding) ಆಗಿದೆ. ಇದು ತಾತ್ವಿಕ ಸ್ವರೂಪದ್ದಾಗಿದ್ದರೂ, ಶೀಘ್ರದಲ್ಲೇ ಕಾರ್ಯರೂಪಕ್ಕೆ ಬರಲಿದೆ ಎಂದು ಟ್ರಂಪ್ ಹೇಳಿದರು. ಇದು ಅತ್ಯಂತ ವಿವರವಾದ ತಿಳುವಳಿಕೆ ಒಪ್ಪಂದವಾಗಿದೆ ಎಂದೂ ಅವರು ಹೇಳಿದರು.

ಇರಾನ್ ಅಣ್ವಸ್ತ್ರಗಳನ್ನು ಪಡೆಯುವ ಯಾವುದೇ ಪ್ರಯತ್ನವನ್ನು ಶಾಶ್ವತವಾಗಿ ಕೈಬಿಡಲು ಒಪ್ಪಿಕೊಂಡಿದೆ ಎಂದು ಟ್ರಂಪ್ ಮತ್ತೊಮ್ಮೆ ಪ್ರತಿಪಾದಿಸಿದರು.

ಇರಾನ್ ಭಾರೀ ಹೊಡೆತ ಅನುಭವಿಸಿದೆ. ಇಂತಹ ಹೊಡೆತವನ್ನು ಕೆಲವೇ ಜನರು ಸಹಿಸಬಲ್ಲರು. ಆದ್ದರಿಂದ ಈ ಒಪ್ಪಂದವನ್ನು ಅವರು ನನ್ನಿಗಿಂತಲೂ ಹೆಚ್ಚು ಬಯಸುತ್ತಿದ್ದಾರೆ ಎಂದು ಇರಾನ್ ಒಪ್ಪಂದಕ್ಕೆ ಹೇಗೆ ಸಮ್ಮತಿಸಿತು ಎಂಬ ಪ್ರಶ್ನೆಗೆ ಟ್ರಂಪ್ ಉತ್ತರಿಸಿದರು.

Donald Trump
ಇಂದು ರಾತ್ರಿ ಇರಾನ್ ಗೆ ಕಾದಿದೆ ದೊಡ್ಡ ಗಂಡಾಂತರ: ಡೊನಾಲ್ಡ್ ಟ್ರಂಪ್ ಕೊಟ್ಟ ವಾರ್ನಿಂಗ್ ಏನು?

ಈ ಹೇಳಿಕೆಗಳು ದಿನದ ಆರಂಭದಲ್ಲಿ ಟ್ರಂಪ್ ತೆಗೆದುಕೊಂಡಿದ್ದ ಕಠಿಣ ನಿಲುವಿಗೆ ಸಂಪೂರ್ಣ ವಿರುದ್ಧವಾಗಿದ್ದವು. ಆಗ ಅವರು ಇರಾನ್ ಮೇಲೆ ಅತ್ಯಂತ ಕಠಿಣ ದಾಳಿ ನಡೆಸುವುದಾಗಿ ಹಾಗೂ ದೇಶದ ಪ್ರಮುಖ ತೈಲ ರಫ್ತು ಕೇಂದ್ರವಾದ ಖಾರ್ಗ್ ದ್ವೀಪವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು.

ಆದರೆ ಕೆಲವೇ ಗಂಟೆಗಳ ಬಳಿಕ ಶಾಂತಿ ಮಾತುಕತೆಯಲ್ಲಿ ಪ್ರಗತಿ ಕಂಡುಬಂದಿರುವುದನ್ನು ಉಲ್ಲೇಖಿಸಿ, ಯೋಜಿತ ದಾಳಿಗಳನ್ನು ರದ್ದುಗೊಳಿಸಿರುವುದಾಗಿ ಘೋಷಿಸಿದರು.

ಪೆಸಿಫಿಕ್ ಮಹಾಸಾಗರದ ಸಂರಕ್ಷಿತ ಪ್ರದೇಶಗಳಲ್ಲಿ ವಾಣಿಜ್ಯ ಮೀನುಗಾರಿಕೆಯನ್ನು ಪುನಃ ಆರಂಭಿಸುವ ಸಂಬಂಧ ನಡೆದ ಕಾರ್ಯಕ್ರಮದಲ್ಲಿ ಡೊನಾಲ್ಡ್ ಟ್ರಂಪ್ ಈ ಇರಾನ್ ಒಪ್ಪಂದದ ಕುರಿತು ಪ್ರತಿಕ್ರಿಯಿಸಿದರು.

ಕಳೆದ ಕೆಲವು ವಾರಗಳಿಂದ ವಾಷಿಂಗ್ಟನ್ ಮತ್ತು ಟೆಹ್ರಾನ್ ಒಪ್ಪಂದದ ಹತ್ತಿರದಲ್ಲಿವೆ ಎಂದು ಟ್ರಂಪ್ ಪದೇ ಪದೇ ಹೇಳುತ್ತಿದ್ದರೂ, ಅಧಿಕೃತ ಒಪ್ಪಂದ ಮಾತ್ರ ಇದುವರೆಗೆ ಅಂತಿಮಗೊಂಡಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com