US-Iran war: 'ಒಪ್ಪಂದಕ್ಕೆ ಒಪ್ಪಿಗೆ ಸಿಕ್ಕಿದೆ’ ಎಂದ ಟ್ರಂಪ್‌; ‘ಇನ್ನೂ ನಿರ್ಧಾರವೇ ಆಗಿಲ್ಲ’ ಎಂದ ಇರಾನ್‌ - ಶಾಂತಿ ಒಪ್ಪಂದದ ಸುತ್ತ ಹೆಚ್ಚಿದ ಅನಿಶ್ಚಿತತೆ..!

ಇರಾನ್‌ನ ಉನ್ನತ ನಾಯಕತ್ವದ ಮಟ್ಟದಲ್ಲಿ ಚರ್ಚೆಗಳು ನಡೆದಿದ್ದು, ಅವುಗಳಿಗೆ ಅನುಮೋದನೆ ದೊರೆತ ಹಿನ್ನೆಲೆಯಲ್ಲಿ ಇಂದು ರಾತ್ರಿ ಇರಾನ್‌ ವಿರುದ್ಧ ಯೋಜಿಸಲಾಗಿದ್ದ ವೈಮಾನಿಕ ದಾಳಿ ಹಾಗೂ ಬಾಂಬ್‌ ದಾಳಿಗಳನ್ನು ನಾನು ರದ್ದುಗೊಳಿಸಿದ್ದೇನೆ.
Trump mulls peace proposal
ಟ್ರಂಪ್ ಮತ್ತು ಇರಾನ್ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ
Updated on

ಟೆಹ್ರಾನ್/ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ ಜೊತೆಗಿನ ಕದನ ವಿರಾಮ ಮತ್ತು ಅಣು ಯೋಜನೆ ಕುರಿತ ಒಪ್ಪಂದಕ್ಕೆ ಇರಾನ್‌ನ ಉನ್ನತ ನಾಯಕತ್ವ ಒಪ್ಪಿಗೆ ನೀಡಿದೆ ಎಂದು ಘೋಷಣೆ ಮಾಡಿದ ಬೆನ್ನಲ್ಲೇ, ಇರಾನ್‌ ಆ ಹೇಳಿಕೆಯನ್ನು ನಿರಾಕರಿಸಿದೆ. ಒಪ್ಪಂದಕ್ಕೆ ಇನ್ನೂ ಅಂತಿಮ ಅನುಮೋದನೆ ದೊರೆತಿಲ್ಲ ಎಂದು ಸ್ಪಷ್ಟಪಡಿಸಿದೆ.

ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್‌, ಇರಾನ್‌ನ ಸುಪ್ರೀಂ ಲೀಡರ್‌ ಮೊಜ್ತಾಬಾ ಖಮೇನಿ ಅವರು ಪ್ರಸ್ತಾವಿತ ಒಪ್ಪಂದಕ್ಕೆ ಅನುಮೋದನೆ ನೀಡಿದ್ದಾರೆ ಎಂಬ ಮಾಹಿತಿ ತಮ್ಮಲ್ಲಿದೆ ಎಂದು ಹೇಳಿದರು. ಅಲ್ಲದೆ, ಒಪ್ಪಂದಕ್ಕೆ ಸಹಿ ಆದ ಕೂಡಲೇ ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾದ ಹಾರ್ಮುಜ್ ಜಲಸಂಧಿ ಅನ್ನು ಅಧಿಕೃತವಾಗಿ ತೆರೆಯಲಾಗುವುದು ಎಂದು ತಿಳಿಸಿದರು.

ನಂತರ ತಮ್ಮ ಸಾಮಾಜಿಕ ಜಾಲತಾಣವಾದ ಟ್ರೂತ್ ನಲ್ಲಿ ಪೋಸ್ಟ್‌ ಮಾಡಿದ ಟ್ರಂಪ್‌, “ಇರಾನ್‌ನ ಉನ್ನತ ನಾಯಕತ್ವದ ಮಟ್ಟದಲ್ಲಿ ಚರ್ಚೆಗಳು ನಡೆದಿದ್ದು, ಅವುಗಳಿಗೆ ಅನುಮೋದನೆ ದೊರೆತ ಹಿನ್ನೆಲೆಯಲ್ಲಿ ಇಂದು ರಾತ್ರಿ ಇರಾನ್‌ ವಿರುದ್ಧ ಯೋಜಿಸಲಾಗಿದ್ದ ವೈಮಾನಿಕ ದಾಳಿ ಹಾಗೂ ಬಾಂಬ್‌ ದಾಳಿಗಳನ್ನು ನಾನು ರದ್ದುಗೊಳಿಸಿದ್ದೇನೆ” ಎಂದು ಬರೆದುಕೊಂಡಿದ್ದಾರೆ.

ಅಲ್ಲದೆ, ಅಮೆರಿಕ, ಇಸ್ರೇಲ್‌, ಸೌದಿ ಅರೇಬಿಯಾ, ಯುಎಇ, ಕತಾರ್‌, ಟರ್ಕಿ, ಪಾಕಿಸ್ತಾನ, ಬಹ್ರೇನ್‌, ಕುವೈತ್‌, ಜೋರ್ಡನ್‌ ಹಾಗೂ ಈಜಿಪ್ಟ್‌ ಸೇರಿದಂತೆ ಸಂಬಂಧಿತ ಎಲ್ಲ ರಾಷ್ಟ್ರಗಳು ತಿಳುವಳಿಕೆ ಒಪ್ಪಂದದ ಪ್ರಮುಖ ಅಂಶಗಳಿಗೆ ಒಪ್ಪಿಗೆ ಸೂಚಿಸಿವೆ ಎಂದು ಹೇಳಿದ್ದಾರೆ.

Trump mulls peace proposal
ಇರಾನ್ ವಿರುದ್ಧದ ಯುದ್ಧ ತಂತ್ರ; ಇಸ್ರೇಲ್-ಅಮೆರಿಕಾ ನಡುವೆ ಭಿನ್ನಮತ ಸ್ಫೋಟ; ಟ್ರಂಪ್ ರಾಜತಾಂತ್ರಿಕ ನಡೆಗೆ ನೆತನ್ಯಾಹು ಕೆಂಡಾಮಂಡಲ..! Video

‘ಯಾವುದೇ ಅಂತಿಮ ಒಪ್ಪಂದ ಆಗಿಲ್ಲ’: ಇರಾನ್‌

ಇದಕ್ಕೆ ಪ್ರತಿಕ್ರಿಯಿಸಿರುವ ಇರಾನ್‌ನ ಸುದ್ದಿ ಸಂಸ್ಥೆ ಫಾರ್ಸ್, ಮಾತುಕತೆ ತಂಡದ ಸಮೀಪದ ಮೂಲವನ್ನು ಉಲ್ಲೇಖಿಸಿ, “ಅಮೆರಿಕದೊಂದಿಗೆ ಯಾವುದೇ ಪ್ರಾಥಮಿಕ ತಿಳುವಳಿಕೆ ಒಪ್ಪಂದಕ್ಕೆ ಇನ್ನೂ ಅನುಮೋದನೆ ದೊರೆತಿಲ್ಲ” ಎಂದು ವರದಿ ಮಾಡಿದೆ.

ಇರಾನ್‌ನ ಮತ್ತೊಂದು ಪ್ರಮುಖ ಸುದ್ದಿ ಸಂಸ್ಥೆ ತಸ್ನಿಮ್ ಕೂಡ ಟ್ರಂಪ್‌ ಹೇಳಿಕೆಯನ್ನು ತಳ್ಳಿಹಾಕಿದ್ದು, “ಈ ಹಿಂದೆ ಕೂಡ ಟ್ರಂಪ್‌ ಇಂತಹ ಘೋಷಣೆಗಳನ್ನು ಮಾಡಿದ್ದರು. ಇರಾನ್‌ ಅಧಿಕೃತವಾಗಿ ಘೋಷಿಸುವವರೆಗೂ ಇಂತಹ ಸುದ್ದಿಗಳನ್ನು ಎಚ್ಚರಿಕೆಯಿಂದಲೇ ಪರಿಗಣಿಸಬೇಕು” ಎಂದು ಹೇಳಿದೆ.

ಆದರೆ, ಇರಾನ್‌ ಸರ್ಕಾರಿ ಮಾಧ್ಯಮಗಳು, ವಾಷಿಂಗ್ಟನ್‌ ಇರಾನ್‌ ಪ್ರಸ್ತಾಪಿಸಿದ ಕರಡು ಪಠ್ಯವನ್ನು ಒಪ್ಪಿಕೊಂಡಿದ್ದು, ಅದರ ಆಧಾರದ ಮೇಲೆ ಒಪ್ಪಂದವನ್ನು ಮತ್ತೊಮ್ಮೆ ಪರಿಶೀಲಿಸುವ ಸಾಧ್ಯತೆ ಇದೆ ಎಂದು ವರದಿ ಮಾಡಿವೆ.

ಇರಾನ್‌ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಘೈ ಮಾತನಾಡಿ, “ಒಪ್ಪಂದದ ಬಹುತೇಕ ಅಂಶಗಳು ಈಗಾಗಲೇ ಅಂತಿಮ ಹಂತದಲ್ಲಿದ್ದವು. ಆದರೆ, ಅಮೆರಿಕ ತನ್ನ ನಿಲುವನ್ನು ಪದೇ ಪದೇ ಬದಲಾಯಿಸುತ್ತಿತ್ತು” ಎಂದು ಆರೋಪಿಸಿದ್ದಾರೆ.

“ಇರಾನ್‌ ತನ್ನ ಕೆಂಪು ಗೆರೆಗಳ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಒಪ್ಪಂದದ ಕುರಿತು ಇನ್ನೂ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

Trump mulls peace proposal
ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: ಇರಾನ್ ಅಣ್ವಸ್ತ್ರ ಹೊಂದಲು ಅವಕಾಶವೇ ಇಲ್ಲ, ಶಾಂತಿ ಮಾತುಕತೆ ವಿಫಲವಾದರೆ ದಾಳಿ ಖಚಿತ- ಅಮೆರಿಕಾ ಎಚ್ಚರಿಕೆ

ತೆರೆಮರೆಯಲ್ಲಿ ಮುಂದುವರೆದ ಮಾತುಕತೆ

ಫೆಬ್ರವರಿ 28ರಿಂದ ಆರಂಭವಾಗಿ ಮಧ್ಯಪ್ರಾಚ್ಯವನ್ನು ಕಂಗೆಡಿಸಿರುವ ಸಂಘರ್ಷವನ್ನು ಅಂತ್ಯಗೊಳಿಸಲು ಟೆಹ್ರಾನ್‌ ಮತ್ತು ವಾಷಿಂಗ್ಟನ್‌ ನಡುವೆ ಹಲವು ಸುತ್ತಿನ ಮಾತುಕತೆಗಳು ನಡೆಯುತ್ತಿವೆ. ಏಪ್ರಿಲ್‌ 8ರಿಂದ ಜಾರಿಯಲ್ಲಿರುವ ಕದನ ವಿರಾಮದ ನಡುವೆಯೂ ಎರಡೂ ರಾಷ್ಟ್ರಗಳು ಪರಸ್ಪರ ದಾಳಿಗಳನ್ನು ಮುಂದುವರಿಸಿವೆ.

ಮಾಧ್ಯಮ ವರದಿಗಳ ಪ್ರಕಾರ, ಕತಾರ್‌ನ ವಿಶೇಷ ಪ್ರತಿನಿಧಿ ಅಲಿ ಅಲ್‌-ಥವಾಡಿ ಮತ್ತು ಇರಾನ್‌ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ನೇತೃತ್ವದಲ್ಲಿ ಬುಧವಾರ ತಡರಾತ್ರಿವರೆಗೂ ಮಾತುಕತೆ ನಡೆದಿದ್ದು, ಹಲವು ಪ್ರಮುಖ ವಿಷಯಗಳಲ್ಲಿ ಪ್ರಗತಿ ಸಾಧಿಸಲಾಗಿದೆ ಎಂದು ತಿಳಿದುಬಂದಿದೆ.

ಇರಾನ್‌ನ ಸ್ಥಗಿತಗೊಂಡಿರುವ ಆಸ್ತಿಗಳ ಬಿಡುಗಡೆ, ಹಾರ್ಮುಜ್ ಜಲಸಂಧಿಯನ್ನು ಪುನಃ ತೆರೆಯುವ ವ್ಯವಸ್ಥೆ ಹಾಗೂ 60 ದಿನಗಳ ಕದನ ವಿರಾಮದ ಅವಧಿಯಲ್ಲಿ ಅಣು ಕಾರ್ಯಕ್ರಮ ಕುರಿತ ಮಾತುಕತೆಗಳ ರೂಪುರೇಷೆಗಳ ಬಗ್ಗೆ ಉಭಯ ದೇಶಗಳ ನಡುವೆ ತಾತ್ವಿಕ ಒಪ್ಪಂದ ಮೂಡಿದೆ ಎನ್ನಲಾಗಿದೆ.

ಆದರೆ, ಅಂತಿಮ ಒಪ್ಪಂದಕ್ಕೆ ಇನ್ನೂ ಇರಾನ್‌ನ ಉನ್ನತ ನಾಯಕತ್ವದ ಅಧಿಕೃತ ಅನುಮೋದನೆ ಬಾಕಿಯಿರುವುದರಿಂದ, ಟ್ರಂಪ್‌ ಘೋಷಿಸಿದ ಶಾಂತಿ ಒಪ್ಪಂದ ಸದ್ಯಕ್ಕೆ ಅನಿಶ್ಚಿತತೆಯಲ್ಲೇ ಉಳಿದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com