ಸಿಂಧೂ ನದಿ ನೀರು ತಡೆದರೆ ಸುಮ್ಮನಿರಲ್ಲ, ಯುದ್ಧ ಖಚಿತ: ಭಾರತದ ವಿರುದ್ಧ ಮತ್ತೆ ಪಾಕಿಸ್ತಾನ ಉದ್ಧಟತನ..!

ನಮ್ಮ ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಎದುರಾದರೆ, ಅದರಲ್ಲೂ ನೀರು ನಮ್ಮ ಭದ್ರತೆಯ ಭಾಗವಾಗಿರುವುದರಿಂದ, ಭಾರತ ವಿರುದ್ಧ ಯುದ್ಧಕ್ಕೂ ಹೋಗುತ್ತೇವೆ.
Indus Waters Treaty
ಸಿಂಧೂ ನದಿ
Updated on

ಇಸ್ಲಾಮಾಬಾದ್: ಸಿಂಧೂ ಜಲ ಒಪ್ಪಂದದ ವಿವಾದದ ನಡುವೆ ಭಾರತಕ್ಕೆ ಪಾಕಿಸ್ತಾನ ಮತ್ತೊಮ್ಮೆ ಯುದ್ಧದ ಬೆದರಿಕೆ ಹಾಕಿದೆ. ನೀರು ನಮ್ಮ ರಾಷ್ಟ್ರೀಯ ಭದ್ರತೆಯ ಭಾಗವಾಗಿದ್ದು, ಅದರ ಮೇಲೆ ಯಾವುದೇ ರೀತಿಯ ಅಪಾಯ ಎದುರಾದರೆ ಭಾರತ ವಿರುದ್ಧ ಯುದ್ಧಕ್ಕೂ ಹಿಂಜರಿಯುವುದಿಲ್ಲ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಉದ್ಧಟತನ ಪ್ರದರ್ಶಿಸಿದ್ದಾರೆ.

ಪಾಕಿಸ್ತಾನದ ಎಆರ್‌ವೈ ನ್ಯೂಸ್‌ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಆಸಿಫ್, ನೀರು ಪಾಕಿಸ್ತಾನದ ರಾಷ್ಟ್ರೀಯ ಭದ್ರತೆಯ ಪ್ರಮುಖ ಭಾಗವಾಗಿದ್ದು, ಅದರ ಮೇಲೆ ಯಾವುದೇ ರೀತಿಯ ಅಪಾಯ ಎದುರಾದರೆ ದೇಶ ಮೌನವಾಗಿ ಕುಳಿತುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

"ನಮ್ಮ ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಎದುರಾದರೆ, ಅದರಲ್ಲೂ ನೀರು ನಮ್ಮ ಭದ್ರತೆಯ ಭಾಗವಾಗಿರುವುದರಿಂದ, ಭಾರತ ವಿರುದ್ಧ ಯುದ್ಧಕ್ಕೂ ಹೋಗುತ್ತೇವೆ" ಎಂದು ಎಚ್ಚರಿಕೆ ನೀಡಿದ್ದಾರೆ..

ಇತ್ತೀಚೆಗೆ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರ ಹೇಳಿಕೆ ಪಾಕಿಸ್ತಾನದಲ್ಲಿ ಹೊಸ ಆತಂಕಕ್ಕೆ ಕಾರಣವಾಗಿದೆ. 2028ರ ಜೂನ್ ವೇಳೆಗೆ ಸಿಂಧೂ ನದಿ ವ್ಯವಸ್ಥೆಯ ನೀರಿನ ಹರಿವನ್ನು ಪಾಕಿಸ್ತಾನಕ್ಕೆ ಸಂಪೂರ್ಣವಾಗಿ ತಡೆಯುವ ಸಾಮರ್ಥ್ಯ ಭಾರತಕ್ಕೆ ದೊರೆಯಬಹುದು ಎಂಬ ಅರ್ಥದ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಈ ಬೆಳವಣಿಗೆಯ ಬೆನ್ನಲ್ಲೇ ಪಾಕಿಸ್ತಾನದ ರಾಜಕೀಯ ಮತ್ತು ಆಡಳಿತ ವಲಯದಿಂದ ತೀವ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

2025ರ ಏಪ್ರಿಲ್‌ನಲ್ಲಿ ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದರು. ಈ ದಾಳಿಗೆ ಪಾಕಿಸ್ತಾನ ಬೆಂಬಲಿತ ಉಗ್ರ ಸಂಘಟನೆಗಳೇ ಕಾರಣ ಎಂದು ಆರೋಪಿಸಿದ ಭಾರತ, ವಿಶ್ವ ಬ್ಯಾಂಕ್ ಮಧ್ಯಸ್ಥಿಕೆಯಲ್ಲಿ 1960ರಲ್ಲಿ ಜಾರಿಗೆ ಬಂದಿದ್ದ ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸಿತ್ತು.

ಗಡಿ ದಾಟಿ ನಡೆಯುತ್ತಿರುವ ಭಯೋತ್ಪಾದನೆ ವಿರುದ್ಧ ಪಾಕಿಸ್ತಾನ ವಿಶ್ವಾಸಾರ್ಹ ಮತ್ತು ಶಾಶ್ವತ ಕ್ರಮ ಕೈಗೊಳ್ಳುವವರೆಗೆ ಒಪ್ಪಂದವನ್ನು ಮರುಜಾರಿಗೊಳಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿತ್ತು.

Indus Waters Treaty
1971ರಲ್ಲಿ ಪಾಕಿಸ್ತಾನ ತುಂಡು ತುಂಡಾಗಿದ್ದು ಮರೆತಂತಿದೆ: ಪಾಕ್ ಸಚಿವ ಖವಾಜಾ ಆಸಿಫ್‌ಗೆ ರಾಜನಾಥ್ ಸಿಂಗ್ ತಿರುಗೇಟು

ಸಿಂಧೂ ಜಲ ಒಪ್ಪಂದವು ಭಾರತ ಮತ್ತು ಪಾಕಿಸ್ತಾನ ನಡುವಿನ ಅತ್ಯಂತ ಮಹತ್ವದ ಜಲ ಹಂಚಿಕೆ ಒಪ್ಪಂದಗಳಲ್ಲಿ ಒಂದಾಗಿದೆ. ಈ ಒಪ್ಪಂದದ ಪ್ರಕಾರ ಸಿಂಧೂ ನದಿ ವ್ಯವಸ್ಥೆಯ ಬಹುಪಾಲು ನೀರಿನ ಬಳಕೆಯ ಹಕ್ಕು ಪಾಕಿಸ್ತಾನಕ್ಕೆ ನೀಡಲಾಗಿದೆ.

ಪಾಕಿಸ್ತಾನದ ಕೃಷಿ, ನೀರಾವರಿ ವ್ಯವಸ್ಥೆ, ಕುಡಿಯುವ ನೀರಿನ ಪೂರೈಕೆ ಹಾಗೂ ಆರ್ಥಿಕತೆಯ ದೊಡ್ಡ ಭಾಗ ಈ ನದಿಗಳ ಮೇಲೆ ಅವಲಂಬಿತವಾಗಿದೆ. ಹೀಗಾಗಿ ನೀರಿನ ಹರಿವಿನಲ್ಲಿ ವ್ಯತ್ಯಯ ಉಂಟಾದರೆ ಅದು ದೇಶದ ಆಹಾರ ಭದ್ರತೆ ಮತ್ತು ಆರ್ಥಿಕ ವ್ಯವಸ್ಥೆಯ ಮೇಲೆಯೇ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ.

ಭಾರತದ ಕ್ರಮಗಳ ವಿರುದ್ಧ ಪಾಕಿಸ್ತಾನ ಈಗಾಗಲೇ ಅಂತರರಾಷ್ಟ್ರೀಯ ವೇದಿಕೆಗಳ ಗಮನ ಸೆಳೆಯಲು ಪ್ರಯತ್ನಿಸುತ್ತಿದೆ. ಪಾಕಿಸ್ತಾನದ ಉಪಪ್ರಧಾನಿ ಹಾಗೂ ವಿದೇಶಾಂಗ ಸಚಿವ ಇಶಾಕ್ ದಾರ್ ಇತ್ತೀಚೆಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮಧ್ಯಸ್ಥಿಕೆ ಕೋರಿದ್ದು, ಭಾರತವು ಸಿಂಧೂ ಜಲ ಒಪ್ಪಂದದ ನಿಯಮಗಳನ್ನು ಉಲ್ಲಂಘಿಸುತ್ತಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ಚಿನಾಬ್ ನದಿಯ ನೀರನ್ನು ಬೇರೆ ಪ್ರದೇಶಗಳಿಗೆ ವರ್ಗಾಯಿಸುವ ಯೋಜನೆ ರೂಪಿಸುತ್ತಿದೆ ಎಂಬ ಆರೋಪವನ್ನೂ ಮಾಡಿದ್ದಾರೆ.

ಇದರ ನಡುವೆ ಹವಾಮಾನ ಬದಲಾವಣೆ, ನೀರಿನ ಕೊರತೆ ಹಾಗೂ ಹೆಚ್ಚುತ್ತಿರುವ ಜಲ ಬಿಕ್ಕಟ್ಟಿನಿಂದ ಪಾಕಿಸ್ತಾನ ಈಗಾಗಲೇ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಸಿಂಧೂ ನದಿ ನೀರಿನ ವಿಷಯವು ಕೇವಲ ರಾಜತಾಂತ್ರಿಕ ಅಥವಾ ತಾಂತ್ರಿಕ ವಿಚಾರವಾಗಿರದೆ ರಾಷ್ಟ್ರೀಯ ಭದ್ರತೆಯ ಪ್ರಶ್ನೆಯಾಗಿ ಪರಿವರ್ತನೆಯಾಗಿದೆ.

ಖವಾಜಾ ಆಸಿಫ್ ಅವರ ಯುದ್ಧದ ಎಚ್ಚರಿಕೆ ರಾಜಕೀಯ ಒತ್ತಡದ ತಂತ್ರವೇ ಅಥವಾ ಮುಂದಿನ ದಿನಗಳಲ್ಲಿ ಉಭಯ ರಾಷ್ಟ್ರಗಳ ನಡುವಿನ ಸಂಬಂಧಗಳನ್ನು ಮತ್ತಷ್ಟು ಹದಗೆಡಿಸುವ ಸೂಚನೆಗಳನ್ನು ನೀಡುತ್ತಿವೆ.

ಭಾರತ ಮತ್ತು ಪಾಕಿಸ್ತಾನ ಎರಡೂ ಅಣ್ವಸ್ತ್ರ ಹೊಂದಿರುವ ರಾಷ್ಟ್ರಗಳಾಗಿರುವುದರಿಂದ, ಜಲ ವಿವಾದದಂತಹ ಸೂಕ್ಷ್ಮ ವಿಷಯಗಳಲ್ಲಿ ಇಂತಹ ಹೇಳಿಕೆಗಳು ಪ್ರಾದೇಶಿಕ ಸ್ಥಿರತೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com