

ನವದೆಹಲಿ: ಇಡೀ ಜಗತ್ತಿನಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವ ಮಧ್ಯಪ್ರಾಚ್ಯ ಸಂಘರ್ಷ ಹಾಗೂ ಹಾರ್ಮುಜ್ ಜಲಸಂಧಿ ಕುರಿತು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಪ್ರತಿಕ್ರಿಯೆ ನೀಡಿದ್ದಾರೆ.
ದೆಹಲಿಯಲ್ಲಿ ನಡೆದ ಮಹತ್ವದ ಬ್ರಿಕ್ಸ್ ರಾಷ್ಟ್ರಗಳ ರಾಷ್ಟ್ರೀಯ ಭದ್ರತಾ ಸಲಹೆಗಾರರ ಸಮಾವೇಶದಲ್ಲಿ ತಮ್ಮ ಸಹವರ್ತಿಗಳನ್ನು ಸ್ವಾಗತಿಸಿದ ಅಜಿತ್ ಧೋವಲ್ 'ಹಾರ್ಮುಜ್ ಜಲಸಂಧಿ ತೆರೆಯುವುದು ಸ್ವಾಗತಾರ್ಹ ಕ್ರಮ' ಎಂದು ಹೇಳಿದ್ದಾರೆ.
ಹಾರ್ಮುಜ್ ಜಲಸಂಧಿಯನ್ನು ತೆರೆಯುವ ನಿರ್ಧಾರವು ಇಂಧನ ಭದ್ರತೆಗೆ ನೆರವಾಗಲಿರುವುದರಿಂದ ಅತ್ಯಂತ ಸ್ವಾಗತಾರ್ಹ ಕ್ರಮವಾಗಿದೆ. ಪ್ರಮುಖ ಸಮುದ್ರ ವ್ಯಾಪಾರ ಮಾರ್ಗವಾಗಿರುವ ಹೋರ್ಮುಜ್ ಜಲಸಂಧಿಯಲ್ಲಿ ಮುಕ್ತ ನೌಕಾಯಾನಕ್ಕೆ ಅವಕಾಶ ಕಲ್ಪಿಸುವುದು ಈ ಪ್ರದೇಶದ ರಾಷ್ಟ್ರಗಳಿಗೆ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲಿಯೂ ಪ್ರಯೋಜನಕಾರಿಯಾಗಲಿದೆ ಎಂದು ಧೋವಲ್ ತಿಳಿಸಿದರು.
“ಅಮೆರಿಕ ಮತ್ತು ಇರಾನ್ ನಡುವಿನ ತಿಳುವಳಿಕೆ ಒಪ್ಪಂದವನ್ನು (ಎಂಒಯು) ಭಾರತ ಸ್ವಾಗತಿಸುತ್ತದೆ ಎಂದ ಅವರು, 'ಈ ಒಪ್ಪಂದದ ಬಗ್ಗೆ ನಾವು ಎಚ್ಚರಿಕೆಯ ಆಶಾವಾದ ಹೊಂದಿದ್ದೇವೆ ಮತ್ತು ಇದು ಯಶಸ್ವಿಯಾಗಲಿದೆ ಎಂದು ನಿರೀಕ್ಷಿಸುತ್ತೇವೆ. ಇದು ಇಂಧನ ಭದ್ರತೆಯನ್ನು ಬಲಪಡಿಸಲಿದೆ” ಎಂದರು.
“ಹಾರ್ಮುಜ್ ಜಲಸಂಧಿಯನ್ನು ತೆರೆಯುವುದು ಅತ್ಯಂತ ಸ್ವಾಗತಾರ್ಹ ಬೆಳವಣಿಗೆಯಾಗಿದೆ. ಇದರಿಂದ ಪೂರೈಕೆ ಸರಪಳಿಯಲ್ಲಿರುವ ಅಡಚಣೆಗಳು ನಿವಾರಣೆಯಾಗಲಿದ್ದು, ರಸಗೊಬ್ಬರ ಮತ್ತು ರಾಸಾಯನಿಕಗಳಂತಹ ಕ್ಷೇತ್ರಗಳಲ್ಲಿ ಉಂಟಾಗಿರುವ ಕೊರತೆಯನ್ನು ತಗ್ಗಿಸಲು ಸಹಕಾರಿಯಾಗಲಿದೆ” ಎಂದು ಧೋವಲ್ ಅವರು ಹೇಳಿದರು.
ಧೋವಲ್ ಅವರು ವಿವಿಧ ಭೌಗೋಳಿಕ ಪ್ರದೇಶಗಳಲ್ಲಿ ಕಂಡುಬರುತ್ತಿರುವ ಭೌರಾಜಕೀಯ ಉದ್ವಿಗ್ನತೆಗಳು ಮತ್ತು ಅವು ವಿವಿಧ ದೇಶಗಳ ಮೇಲೆ ಬೀರುತ್ತಿರುವ ಪರಿಣಾಮಗಳ ಬಗ್ಗೆಯೂ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು.
Advertisement