

ಕೇವಲ ಒಂದು ನಿಮಿಷದ ಅಂತರದಲ್ಲಿ ಸಂಭವಿಸಿದ 7.2 ಮತ್ತು 7.5 ತೀವ್ರತೆಯ ಎರಡು ಪ್ರಬಲ ಭೂಕಂಪಗಳು ವೆನೆಜುವೆಲಾದಲ್ಲಿ ಭಾರೀ ವಿನಾಶ ಸೃಷ್ಟಿಸಿವೆ. ನೂರಾರು ಕಟ್ಟಡಗಳು ನೆಲಸಮವಾಗಿದ್ದು, ಈ ವರಗೂ 235 ಮಂದಿ ಮೃತಪಟ್ಟಿದ್ದಾರೆ. ಸಾವಿರಾರು ಮಂದಿ ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಭೀತಿ ಎದುರಾಗಿದೆ.
ಆರೋಗ್ಯ ಸಚಿವ ಕಾರ್ಲೋಸ್ ಅಲ್ವಾರಾಡೊ ಅವರು ಸರ್ಕಾರಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, "ನಮ್ಮ ಆಸ್ಪತ್ರೆಗಳಿಗೆ ಜೀವಂತವಾಗಿ ತಲುಪುವ ಮುನ್ನವೇ ಅಥವಾ ತಲುಪಿದ ತಕ್ಷಣ ಮೃತಪಟ್ಟ ಸುಮಾರು 235 ಮಂದಿಯನ್ನು ದಾಖಲಿಸಲಾಗಿದೆ" ಎಂದು ತಿಳಿಸಿದ್ದಾರೆ.
ಕಳೆದ ಶತಮಾನದಲ್ಲೇ ವೆನೆಜುವೆಲಾವನ್ನು ತಟ್ಟಿದ ಅತ್ಯಂತ ಪ್ರಬಲ ಭೂಕಂಪಗಳಲ್ಲಿ ಇದೂ ಒಂದಾಗಿದ್ದು, ಇದರ ಕಂಪನಗಳು ನೆರೆಯ ದೇಶಗಳ ಮೇಲೂ ಪರಿಣಾಮ ಬೀರಿದ. ಬ್ರೆಜಿಲ್‌ನ ಅಮೆಜಾನ್ ಪ್ರದೇಶದವರೆಗೂ ಕಟ್ಟಡಗಳನ್ನು ಮುನ್ನೆಚ್ಚರಿಕಾ ಕ್ರಮವಾಗಿ ಖಾಲಿ ಮಾಡಲಾಗಿದೆ. ಸಾವಿರಾರು ಜನರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗದಿರುವುದರಿಂದ ರಕ್ಷಣಾ ಕಾರ್ಯಾಚರಣೆ ತೀವ್ರಗೊಂಡಿದೆ.
ಭೂಕಂಪದಿಂದ ಉಂಟಾದ ಹಾನಿಯನ್ನು ಗಮನದಲ್ಲಿಟ್ಟುಕೊಂಡು ಅಮೆರಿಕ ಸರ್ಕಾರ ವೆನೆಜುವೆಲಾಗೆ ಪರಿಹಾರ ಸಾಮಗ್ರಿ ಮತ್ತು ಮಾನವೀಯ ನೆರವು ತಲುಪಿಸಲು ಕೆಲವು ಆರ್ಥಿಕ ನಿರ್ಬಂಧಗಳಿಗೆ ತಾತ್ಕಾಲಿಕ ವಿನಾಯಿತಿ ನೀಡಿದೆ. ಅಕ್ಟೋಬರ್ 23ರವರೆಗೆ ಭೂಕಂಪ ಪರಿಹಾರ ಕಾರ್ಯಗಳಿಗೆ ಸಂಬಂಧಿಸಿದ ವಹಿವಾಟುಗಳಿಗೆ ಅನುಮತಿ ನೀಡಲಾಗಿದೆ.
ರಾಜಧಾನಿ ಕರಾಕಾಸ್ ಸೇರಿದಂತೆ ಉತ್ತರ ವೆನೆಜುವೆಲಾದ ಹಲವು ನಗರಗಳಲ್ಲಿ ಭೂಕಂಪದ ಬಳಿಕ ಜನರು ಆತಂಕದಿಂದ ರಸ್ತೆಗಿಳಿದಿದ್ದಾರೆ. ಕುಸಿದ ಕಟ್ಟಡಗಳ ಅವಶೇಷಗಳಡಿ ಸಿಲುಕಿರುವವರನ್ನು ಸ್ಥಳೀಯರು ಮತ್ತು ರಕ್ಷಣಾ ಸಿಬ್ಬಂದಿ ಹುಡುಕುತ್ತಿದ್ದಾರೆ. ಧೂಳು ಮತ್ತು ರಕ್ತದಿಂದ ಆವೃತರಾಗಿದ್ದ ಮಕ್ಕಳು, ಮಹಿಳೆಯರು ಹಾಗೂ ಸಾಕುಪ್ರಾಣಿಗಳನ್ನು ಅವಶೇಷಗಳಿಂದ ಹೊರತೆಗೆದ ದೃಶ್ಯಗಳು ಮನಕಲಕುವಂತಿವೆ.
ರಾಜ್ಯ ಮಾಧ್ಯಮಗಳು ಪ್ರಸಾರ ಮಾಡಿದ ದೃಶ್ಯಗಳಲ್ಲಿ ಕಾಂಕ್ರೀಟ್ ಚಪ್ಪಡಿಯಡಿ ಸಿಲುಕಿದ್ದ ಮಹಿಳೆಯೊಬ್ಬಳನ್ನು ಜೀವಂತವಾಗಿ ರಕ್ಷಿಸಿರುವುದು ಕಂಡು ಬಂದಿದೆ. ಈ ನಡುವೆ ರಾಜಧಾನಿಯ ಹೊರವಲಯಗಳಲ್ಲಿ ಸರ್ಕಾರಿ ರಕ್ಷಣಾ ತಂಡಗಳ ಸಂಖ್ಯೆ ಕಡಿಮೆಯಿರುವ ಬಗ್ಗೆ ಸ್ಥಳೀಯರು ಅಸಮಾಧಾನ ವ್ಯಕ್ತವಾಗುತ್ತಿವೆ.
ಕರಾಕಾಸ್ ನಿವಾಸಿ ಡಯಾನಾ ಡೆಲ್ಗಾಡೊ ಎಂಬ ಮಹಿಳೆ ಮಾತನಾಡಿ, ತನ್ನ ಎಂಟು ವರ್ಷದ ಮಗ ನಾಪತ್ತೆಯಾಗಿದ್ದು, ಸರ್ಕಾರ ಭರವಸೆ ನೀಡಿದ್ದ ಭಾರೀ ಯಂತ್ರೋಪಕರಣಗಳು ಎಲ್ಲಿವೆ ಎಂದು ಪ್ರಶ್ನಿಸಿದ್ದಾರೆ.
"ನನ್ನ ಮಗ ಅವಶೇಷಗಳಡಿ ಸಿಲುಕಿದ್ದಾನೆಯೋ ಅಥವಾ ಪರಿಹಾರ ಶಿಬಿರದಲ್ಲಿದ್ದಾನೆಯೋ ಎಂಬುದೇ ಗೊತ್ತಿಲ್ಲ. ನಮ್ಮ ನೆರೆಯವರೇ ಕೈಯಾರೆ ಅವಶೇಷಗಳನ್ನು ತೆರವುಗೊಳಿಸುತ್ತಿದ್ದಾರೆ" ಎಂದು ಕಣ್ಣೀರಿಟ್ಟಿದ್ದಾರೆ.
ಇನ್ನೊಬ್ಬ ತಾಯಿ ತನ್ನ 3 ಮತ್ತು 10 ವರ್ಷದ ಮಕ್ಕಳ ಮೃತದೇಹಗಳನ್ನು ಕೊಂಡೊಯ್ಯುತ್ತಿರುವ ದೃಶ್ಯ ಕಂಡು ಕುಸಿದು ಬಿದ್ದರೆ, ಹಲವರು ತಮ್ಮ ಕುಟುಂಬ ಸದಸ್ಯರ ಹೆಸರನ್ನು ಕೂಗುತ್ತಾ ಅವಶೇಷಗಳ ನಡುವೆ ಹುಡುಕಾಟ ನಡೆಸುತ್ತಿರುವ ದೃಶ್ಯಗಳು ಕಣ್ಣೀರು ತರಿಸುತ್ತಿವೆ.
ರಾಜಧಾನಿಯ ಉತ್ತರದಲ್ಲಿರುವ ಕರಾವಳಿ ಪ್ರದೇಶ ಲಾ ಗ್ವೈರಾ ಅತ್ಯಂತ ಹೆಚ್ಚು ಹಾನಿಗೊಳಗಾಗಿದೆ. ದೇಶದ ಪ್ರಮುಖ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವೂ ಇದೇ ಪ್ರದೇಶದಲ್ಲಿದ್ದು, ಭೂಕಂಪದಿಂದ ಹಾನಿಗೊಳಗಾದ ಕಾರಣ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದೆ. ಇದರಿಂದ ವಿದೇಶಿ ನೆರವು ಮತ್ತು ರಕ್ಷಣಾ ತಂಡಗಳ ಆಗಮನಕ್ಕೂ ತೊಂದರೆ ಉಂಟಾಗಿದೆ.
ನಿವೃತ್ತ ಶಿಕ್ಷಕ ಜುವಾನ್ ಅಲ್ಬರ್ಟೊ ಮೆಂಡಾನೊ ಅವಶೇಷಗಳ ನಡುವೆ ಸಿಲುಕಿದ್ದ ಮಹಿಳೆಯೊಬ್ಬರು ಕೈ ಬೀಸಿ ಸಹಾಯ ಕೇಳುತ್ತಿರುವುದನ್ನು ಕಂಡಿರುವುದಾಗಿ ಹೇಳಿದ್ದು, "ಅವರನ್ನು ಶೀಘ್ರದಲ್ಲೇ ಜೀವಂತವಾಗಿ ರಕ್ಷಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದೇವೆ. ಆ ಕ್ಷಣದಲ್ಲಿ ನಮ್ಮಿಂದ ಏನೂ ಮಾಡಲು ಸಾಧ್ಯವಾಗಲಿಲ್ಲ" ಎಂದು ಹೇಳಿದ್ದಾರೆ.
ಈ ದುರಂತದ ಬಳಿಕ ಅಮೆರಿಕ ಸೇರಿದಂತೆ ಹಲವು ದೇಶಗಳು ವೆನೆಜುವೆಲಾಗೆ ನೆರವು ನೀಡಲು ಮುಂದಾಗಿವೆ. ಈ ವರ್ಷದ ಆರಂಭದಲ್ಲಿ ಮಾಜಿ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ ಬಳಿಕ ಹಂಗಾಮಿ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿರುವ ಡೆಲ್ಸಿ ರೋಡ್ರಿಗಸ್ ಅವರಿಗೆ ಇದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಈಗಾಗಲೇ ಒಂದು ದಶಕಕ್ಕೂ ಹೆಚ್ಚು ಕಾಲ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ವೆನೆಜುವೆಲಾಗೆ ಈ ಭೂಕಂಪ ಮತ್ತೊಂದು ದೊಡ್ಡ ಹೊಡೆತ ನೀಡಿದೆ.
ಲಾ ಗ್ವೈರಾ ಪ್ರದೇಶಕ್ಕೆ ದೇಶದ ವಿವಿಧ ಭಾಗಗಳಿಂದ ಹೆಚ್ಚುವರಿ ರಕ್ಷಣಾ ತಂಡಗಳನ್ನು ಕಳುಹಿಸಲಾಗುತ್ತಿದೆ. 1999ರಲ್ಲಿ ಇದೇ ಪ್ರದೇಶದಲ್ಲಿ ಸಂಭವಿಸಿದ್ದ ಭೂಕುಸಿತದಲ್ಲಿ ಸಾವಿರಾರು ಜನರು ಮೃತಪಟ್ಟಿದ್ದರು. ಈಗಲೂ ಪರಿಸ್ಥಿತಿ ಗಂಭೀರವಾಗಿರುವುದರಿಂದ ನಿರ್ಮಾಣ ಕಂಪನಿಗಳು ತಮ್ಮ ಭಾರೀ ಯಂತ್ರೋಪಕರಣಗಳನ್ನು ರಕ್ಷಣಾ ಕಾರ್ಯಕ್ಕೆ ಒದಗಿಸಬೇಕು ಎಂದು ಡೆಲ್ಸಿ ರೋಡ್ರಿಗ್ಸ್ ಮನವಿ ಮಾಡಿದ್ದಾರೆ.
ಅವರು ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿ, ಆಸ್ಪತ್ರೆಗಳು ಹಾಗೂ ಮನೆಗಳ ಪುನರ್‌ನಿರ್ಮಾಣಕ್ಕಾಗಿ 200 ಮಿಲಿಯನ್ ಡಾಲರ್ ವಿಶೇಷ ನಿಧಿ ರಚಿಸಲಾಗುವುದು ಎಂದು ಘೋಷಿಸಿದ್ದಾರೆ.
ಡೊಮಿನಿಕನ್ ರಿಪಬ್ಲಿಕ್‌ನಿಂದ ಮೊದಲ ರಕ್ಷಣಾ ತಂಡ ಆಗಮಿಸುತ್ತಿದ್ದು, ಇತರ ದೇಶಗಳ ತಂಡಗಳೂ ಶೀಘ್ರದಲ್ಲೇ ಸೇರುವ ನಿರೀಕ್ಷೆಯಿದೆ.
ಗುರುವಾರ ಬೆಳಿಗ್ಗೆ ಅನೇಕ ಕಟ್ಟಡಗಳು ಅವಶೇಷಗಳಾಗಿ ಮಾರ್ಪಟ್ಟಿರುವುದು, ಕಿಟಕಿಗಳಲ್ಲಿ ಪೀಠೋಪಕರಣಗಳು ನೇತಾಡುತ್ತಿರುವುದು ಮತ್ತು ಹೆಲಿಕಾಪ್ಟರ್‌ಗಳು ನಿರಂತರವಾಗಿ ಹಾರಾಡುತ್ತಿರುವ ದೃಶ್ಯಗಳು ಭೀಕರತೆಯನ್ನು ಎತ್ತಿ ತೋರಿಸಿವೆ.
ಭೂಕಂಪದಿಂದ ರಾಜಧಾನಿಯ ಹಲವು ಪ್ರದೇಶಗಳಲ್ಲಿ ವಿದ್ಯುತ್ ಮತ್ತು ಮೊಬೈಲ್ ಸಂಪರ್ಕ ಸ್ಥಗಿತಗೊಂಡಿದೆ. ಮೆಟ್ರೋ ರೈಲು ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಅನಿಲ ಸರಬರಾಜನ್ನೂ ನಿಲ್ಲಿಸಲಾಗಿದೆ. ಶಾಲೆಗಳಿಗೆ ಹಲವು ದಿನಗಳ ಕಾಲ ರಜೆ ಘೋಷಿಸಲಾಗಿದ್ದು, ಕೆಲವು ಶಾಲೆಗಳನ್ನು ಪರಿಹಾರ ಶಿಬಿರಗಳು ಹಾಗೂ ದೇಣಿಗೆ ಸಂಗ್ರಹ ಕೇಂದ್ರಗಳಾಗಿ ಬಳಸಲಾಗುತ್ತಿದೆ.
ನಾಪತ್ತೆಯಾದವರ ಚಿತ್ರಗಳಿರುವ ಪೋಸ್ಟರ್‌ಗಳನ್ನು ಕುಟುಂಬಸ್ಥರು ಅಂಟಿಸುತ್ತಿದ್ದು, ವಿದೇಶದಲ್ಲಿರುವ ವೆನೆಜುವೆಲಾ ನಿವಾಸಿಗಳು ತಮ್ಮ ಕುಟುಂಬ ಸದಸ್ಯರ ಸಂಪರ್ಕಕ್ಕಾಗಿ ಪರದಾಡುತ್ತಿದ್ದಾರೆ. ಈ ನಡುವೆ ಮೆಕ್ಸಿಕೋ, ಬ್ರೆಜಿಲ್, ಕೆನಡಾ, ಸ್ಪೇನ್, ಪೋರ್ಚುಗಲ್, ಕತಾರ್ ಸೇರಿದಂತೆ ಹಲವು ರಾಷ್ಟ್ರಗಳು ವೈದ್ಯಕೀಯ ತಂಡಗಳು, ಶ್ವಾನ ದಳಗಳು, ಔಷಧಿಗಳು, ಕುಡಿಯುವ ನೀರು ಶುದ್ಧೀಕರಣ ಸಾಧನಗಳು, ವಿಮಾನಗಳು ಮತ್ತು ಡ್ರೋನ್‌ಗಳೊಂದಿಗೆ ನೆರವು ಕಳುಹಿಸಲು ಮುಂದಾಗಿವೆ.
ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರು ಕೂಡ ವೆನೆಜುವೆಲಾ ಸರ್ಕಾರದೊಂದಿಗೆ ಮಾತನಾಡಿದ್ದು, ಅಮೆರಿಕವು ತಕ್ಷಣವೇ ಶೋಧ ಮತ್ತು ರಕ್ಷಣಾ ತಂಡಗಳು, ವೈದ್ಯಕೀಯ ನೆರವು ಹಾಗೂ ಅಗತ್ಯ ಸಂಪನ್ಮೂಲಗಳನ್ನು ಕಳುಹಿಸುತ್ತಿದೆ ಎಂದು ತಿಳಿಸಿದ್ದಾರೆ.
ವಿಮಾನ ನಿಲ್ದಾಣ ಮುಚ್ಚಿರುವುದು ಸವಾಲಾಗಿದ್ದರೂ, ನೆರವು ಕಾರ್ಯಾಚರಣೆಯನ್ನು ವೇಗವಾಗಿ ಮತ್ತು ಪರಿಣಾಮಕಾರಿಯಾಗಿ ನಡೆಸಲಾಗುವುದು ಎಂದು ಭರವಸೆ ನೀಡಿದ್ದಾರೆ