

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ವಿರುದ್ಧದ ಯುದ್ಧದಲ್ಲಿ ಅಮೆರಿಕದ ಸೇನೆಯ ಕಾರ್ಯಕ್ಷಮತೆಯನ್ನು “10ರಲ್ಲಿ 15” ಎಂದು ಮೌಲ್ಯಮಾಪನ ಮಾಡಿ, ಟೆಹ್ರಾನ್ ನಾಯಕತ್ವ ವೇಗವಾಗಿ ಕುಸಿಯುತ್ತಿದೆ, ಇಸ್ರೇಲ್ ಜೊತೆಯಾಗಿ ಕಾರ್ಯಾಚರಣೆ ಮುಂದುವರಿಸುವುದಾಗಿ ಪ್ರತಿಜ್ಞೆ ಮಾಡಿದರು.
ಸಂಘರ್ಷ ಇಂದು ಆರನೇ ದಿನಕ್ಕೆ ವಿಸ್ತರಿಸುತ್ತಿರುವ ಸಂದರ್ಭದಲ್ಲಿ ಟ್ರಂಪ್ ಈ ಹೇಳಿಕೆ ನೀಡಿದರು. ಶ್ರೀಲಂಕಾ ಕರಾವಳಿಯ ಬಳಿ ಅಮೆರಿಕದ ಜಲಾಂತರ್ಗಾಮಿ ನೌಕೆ ಇರಾನ್ ಯುದ್ಧನೌಕೆಯನ್ನು ಮುಳುಗಿಸಿದ್ದು, ಮಧ್ಯಪ್ರಾಚ್ಯದಲ್ಲಿ ಹೊಸ ಸ್ಫೋಟಗಳು ಸಂಭವಿಸಿವೆ.
ಯುದ್ಧಭೂಮಿಯಲ್ಲಿ ನಾವು ಉತ್ತಮ ಸಾಧನೆ ಮಾಡುತ್ತಿದ್ದೇವೆ. 10 ಅಂಕಗಳ ಮಾಪಕದಲ್ಲಿ ನೀವು ಎಷ್ಟು ಕೊಡುತ್ತೀರಿ ಎಂದು ಒಬ್ಬರು ಕೇಳಿದಾಗ ನಾನು 15 ಎಂದೆ ಎಂದು ಟ್ರಂಪ್ ವೈಟ್ ಹೌಸ್‌ನಲ್ಲಿ ತಂತ್ರಜ್ಞಾನ ಉದ್ಯಮಿಗಳ ಸಭೆಯಲ್ಲಿ ಹೇಳಿದರು.
ಈಗ ನಾವು ಬಹಳ ಬಲಿಷ್ಠ ಸ್ಥಿತಿಯಲ್ಲಿ ಇದ್ದೇವೆ. ಅವರ ನಾಯಕತ್ವ ವೇಗವಾಗಿ ಕುಸಿಯುತ್ತಿದೆ. ನಾಯಕನಾಗಲು ಯತ್ನಿಸುವ ಪ್ರತಿಯೊಬ್ಬರೂ ಕೊನೆಗೆ ಸಾಯುತ್ತಾರೆ ಎಂದರು.
ಜಾಗತಿಕ ತೈಲ ಬೆಲ ಏರಿಕೆ ಆತಂಕ
ಇರಾನ್‌ನ ಬ್ಯಾಲಿಸ್ಟಿಕ್ ಕ್ಷಿಪಣಿ ಸಂಗ್ರಹವನ್ನು ವೇಗವಾಗಿ ನಾಶಪಡಿಸಲಾಗುತ್ತಿದೆ ಎಂದೂ ಅವರು ಹೇಳಿದರು. ಈ ಯುದ್ಧದಲ್ಲಿ ಇರಾನ್‌ನಲ್ಲಿ 1,000ಕ್ಕೂ ಹೆಚ್ಚು ಮಂದಿ, ಲೆಬನಾನ್‌ನಲ್ಲಿ 50ಕ್ಕೂ ಹೆಚ್ಚು ಮಂದಿ ಮತ್ತು ಇಸ್ರೇಲ್‌ನಲ್ಲಿ ಸುಮಾರು ಒಂದು ಡಜನ್ ಮಂದಿ ಮೃತಪಟ್ಟಿದ್ದಾರೆ. ವಿಶ್ವಸಂಸ್ಥೆ ಪ್ರಕಾರ, ಯುದ್ಧದ ಮೊದಲ ಎರಡು ದಿನಗಳಲ್ಲಿ ಮಾತ್ರ ಇರಾನ್ ರಾಜಧಾನಿಯಿಂದ 1 ಲಕ್ಷ ಮಂದಿ ಪಲಾಯನ ಮಾಡಿದ್ದಾರೆ.
ಹೋರ್ಮುಝ್ ಕಣಿವೆಯ ಮೂಲಕ ಸಾಗುವ ನೌಕಾಯಾನ ಮೇಲೆ ಇರಾನ್ ದಾಳಿ ನಡೆಸಿದ ಬಳಿಕ ತೈಲ ಬೆಲೆಗಳು ಏರಿಕೆಯಾಗಿದೆ. ತೈಲದ ಬೆಲೆ ಏರಿಕೆಯಿಂದ ಜಾಗತಿಕ ಆರ್ಥಿಕತೆಗೆ ಹಾನಿಯಾಗಬಹುದು ಎಂಬ ಆತಂಕದಿಂದ ಷೇರು ಮಾರುಕಟ್ಟೆಗಳು ಕುಸಿದಿವೆ. ನಿನ್ನೆ ಬುಧವಾರ ಅಮೆರಿಕದ ಷೇರು ಮಾರುಕಟ್ಟೆ ಸ್ಥಿರತೆಯ ಲಕ್ಷಣ ತೋರಿತು.
ಇರಾನ್ ಅಣ್ವಸ್ತ್ರಗಳನ್ನು ಪಡೆಯುವ ದಾರಿಗೆ ಸಾಗುತ್ತಿತ್ತು ಎಂಬ ಕಾರಣ ನೀಡಿ ದಾಳಿಯನ್ನು ಸಮರ್ಥಿಸಿಕೊಂಡ ಟ್ರಂಪ್, ಹುಚ್ಚರು ಅಣ್ವಸ್ತ್ರಗಳನ್ನು ಹೊಂದಿದರೆ ಕೆಟ್ಟ ಘಟನೆಗಳು ಸಂಭವಿಸುತ್ತವೆ ಎಂದರು.
ಇಸ್ರೇಲ್ ಜೊತೆಯಾಗಿ ನಡೆಸುತ್ತಿರುವ ವಾಯು ದಾಳಿಯನ್ನು ಮುಂದುವರಿಸುತ್ತೇನೆ ಎಂದು ಅವರು ಘೋಷಿಸಿದರು. ಈ ದಾಳಿ ಶನಿವಾರ ಆರಂಭವಾದ ಮೊದಲ ದಿನವೇ ಇರಾನ್ ಪರಮೋನ್ನತ ನಾಯಕ ಅಲಿ ಖಮೇನಿ ಹತ್ಯೆಯಾದರು ಎಂದು ಅವರು ಹೇಳಿದ್ದಾರೆ.
ಹೊಸ ಯುದ್ಧಗಳನ್ನು ಪ್ರಾರಂಭಿಸಿಲ್ಲ ಎಂಬ ಪ್ರಚಾರದ ನಡುವೆ, ಈ ಯುದ್ಧದ ಕಾರಣ ಕುರಿತು ಆಡಳಿತವು ಮಿಶ್ರ ಸಂದೇಶಗಳನ್ನು ನೀಡುತ್ತಿರುವುದಕ್ಕೆ ಟ್ರಂಪ್ ಸರ್ಕಾರ ಟೀಕೆಗೆ ಗುರಿಯಾಗಿದೆ.
Advertisement