

ಟೆಹ್ರಾನ್: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ನಡುವೆಯೇ ಅಮೆರಿಕ, ಇಸ್ರೇಲ್ ಶರಣಾಗದ ಹೊರತು ಮಾತುಕತೆಯ ಪ್ರಶ್ನೆಯೇ ಇಲ್ಲ ಎಂದು ಇರಾನ್ ಸರ್ವೋಚ್ಛ ನಾಯಕ ಮೊಜ್ತಾಬಾ ಖಮೇನಿ ಕಡ್ಡಿ ಮುರಿದಂತೆ ಹೇಳಿದ್ದಾರೆ.
ಇರಾನ್ ಸರ್ವೋಚ್ಛ ನಾಯಕರಾಗಿ ಆಯ್ಕೆಯಾದ ಬಳಿಕ ತಮ್ಮ ಮೊದಲ ವಿದೇಶಾಂಗ ನೀತಿ ಅಧಿವೇಶನದಲ್ಲಿ ಶಪಥ ಮಾಡಿರುವ ಮೊಜ್ತಾಬಾ ಖಮೇನಿ, ಅಮೆರಿಕದೊಂದಿಗಿನ ಶಾಂತಿ ಮಾತುಕತೆಯನ್ನು ಕಡಿಮೆ ಮಾಡುವ ಪ್ರಸ್ತಾಪಗಳನ್ನು ತಿರಸ್ಕರಿಸಿದ್ದಾರೆ. ಅಲ್ಲದೆ ಇದೀಗ ನಡೆಯುತ್ತಿರುವ ಯುದ್ಧದಲ್ಲಿ ಅಮೆರಿಕ ಮತ್ತು ಇಸ್ರೇಲ್ ನಮ್ಮೆದುರು ಮಂಡಿಯೂರಬೇಕು ಎಂದು ಪ್ರತಿಪಾದಿಸಿದ್ದಾರೆ.
'ಆ ಎರಡೂ ದೇಶಗಳು ಸೋಲನ್ನು ಒಪ್ಪಿಕೊಳ್ಳಬೇಕು. ಶಾಂತಿ ಮಾತುಕತೆಯ ಸಮಯ ಮುಗಿದುಹೋಗಿದೆ. ಇರಾನ್ ಅನುಭವಿಸಿದ ಹಾನಿಗಳಿಗೆ ಪ್ರತಿಯಾಗಿ ಇಸ್ರೇಲ್ ಮತ್ತು ಅಮೆರಿಕ ಬೆಲೆ ತೆರಬೇಕಾಗುತ್ತದೆ ಎಂದು ಅವರು ಘೋಷಿಸಿದ್ದಾರೆ.
ಇರಾನಿನ ಅಧಿಕಾರಿಯೊಬ್ಬರ ಪ್ರಕಾರ, ಸುಪ್ರೀಂ ನಾಯಕ ಮೊಜ್ತಬಾ ಖಮೇನಿ ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಟೆಹ್ರಾನ್‌ನ ಸೇಡು ಬಹಳ ಗಂಭೀರವಾದುದು ಎಂದು ಕಠಿಣ ಎಚ್ಚರಿಕೆ ನೀಡಿದ್ದಾರೆ. ಹಾಗೇ, ಮೊಜ್ತಬಾ ಅವರು “ಶಾಂತಿಗೆ ಇದು ಸರಿಯಾದ ಸಮಯವಲ್ಲ” ಎಂದೂ ಹೇಳಿದ್ದಾರೆ.
ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ಮೊಜ್ತಬಾ ಖಮೇನಿ ಗಂಭೀರವಾಗಿ ಗಾಯಗೊಂಡಿದ್ದಾರೆ ಮತ್ತು ವಿರೂಪಗೊಂಡಿದ್ದಾರೆ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಹೇಳಿದ ಬೆನ್ನಲ್ಲೇ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.
Advertisement