West Asia war: ‘ಸೋಲನ್ನು ಒಪ್ಪಂದವೆಂದು ತೋರಿಸದಿರಿ’; ಅಮೆರಿಕಾ ಕುರಿತು ಇರಾನ್ ವ್ಯಂಗ್ಯ, ಶಾಂತಿ ಪ್ರಸ್ತಾವ ತಿರಸ್ಕೃತ..?

ನೀವು ಹೇಳುತ್ತಿದ್ದ ತಂತ್ರಾತ್ಮಕ ಶಕ್ತಿ ಈಗ ತಂತ್ರಾತ್ಮಕ ವೈಫಲ್ಯವಾಗಿ ಪರಿಣಮಿಸಿದೆ. ಜಾಗತಿಕ ಮಹಾಶಕ್ತಿ ಎಂದು ಹೇಳಿಕೊಳ್ಳುವ ದೇಶಕ್ಕೆ ಈ ಸಂಕಷ್ಟದಿಂದ ಹೊರಬರಲು ಸಾಧ್ಯವಾಗದಿದ್ದರೆ, ಅದನ್ನು ಒಪ್ಪಿಕೊಳ್ಳಬೇಕು.
West Asia war
ಮಧ್ಯಪ್ರಾಚ್ಯ ಸಂಘರ್ಷ
Updated on

ಪಶ್ಚಿಮ ಏಷ್ಯಾದಲ್ಲಿ ಯುದ್ಧ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಅಮೆರಿಕ ಮತ್ತು ಇರಾನ್ ನಡುವಿನ ರಾಜತಾಂತ್ರಿಕ ಘರ್ಷಣೆ ಮತ್ತಷ್ಟು ಗಾಢವಾಗತೊಡಗಿದೆ.

ಒಂದೆಡೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಜೊತೆಗೆ ಶಾಂತಿ ಮಾತುಕತೆಗಳು ನಡೆಯುತ್ತಿವೆ ಎಂಬ ಹೇಳಿಕೆ ನೀಡುತ್ತಿದ್ದರೆ, ಅದಕ್ಕೆ ವಿರುದ್ಧವಾಗಿ ಇರಾನ್, ಅಮೆರಿಕಾ ತನ್ನೊಂದಿಗೆ ತಾನೇ ಮಾತುಕತೆ ನಡೆಸುತ್ತಿದೆ ಎಂದು ವ್ಯಂಗ್ಯವಾಡಿದೆ.

ಇರಾನ್ ಸೇನೆಯ ಖತಮ್ ಅಲ್-ಅನ್ಬಿಯಾ ಕೇಂದ್ರ ಪ್ರಧಾನ ಕಚೇರಿಯ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಇಬ್ರಾಹಿಂ ಜೊಲ್ಫಾಘರಿ ಅವರು, ದೂರದರ್ಶನದಲ್ಲಿ ಪ್ರಸಾರವಾದ (ಪೂರ್ವ-ರೆಕಾರ್ಡ್ ಮಾಡಿದ) ವೀಡಿಯೊದಲ್ಲಿ ಅಮೆರಿಕಾ ಶಾಂತಿ ಮಾತುಕತೆಯನ್ನು ಕಟುವಾಗಿ ಟೀಕಿಸಿದ್ದಾರೆ.

ನೀವು ಹೇಳುತ್ತಿದ್ದ ತಂತ್ರಾತ್ಮಕ ಶಕ್ತಿ ಈಗ ತಂತ್ರಾತ್ಮಕ ವೈಫಲ್ಯವಾಗಿ ಪರಿಣಮಿಸಿದೆ. ಜಾಗತಿಕ ಮಹಾಶಕ್ತಿ ಎಂದು ಹೇಳಿಕೊಳ್ಳುವ ದೇಶಕ್ಕೆ ಈ ಸಂಕಷ್ಟದಿಂದ ಹೊರಬರಲು ಸಾಧ್ಯವಾಗದಿದ್ದರೆ, ಅದನ್ನು ಒಪ್ಪಿಕೊಳ್ಳಬೇಕು. ಸೋಲನ್ನು ಒಪ್ಪಂದವೆಂದು ತೋರಿಸಲು ಪ್ರಯತ್ನಿಸಬಾರದು ಎಂದು ಟೀಕಿಸಿದ್ದಾರೆ.

“ನಾವು ಆರಂಭದಿಂದಲೇ ಸ್ಪಷ್ಟವಾಗಿ ಹೇಳಿದ್ದೇವೆ. ನಿಮ್ಮಂತವರೊಂದಿಗೆ ನಾವು ಎಂದಿಗೂ ಒಪ್ಪಂದಕ್ಕೆ ಬರಲ್ಲ. ಈಗಲೂ ಇಲ್ಲ, ಮುಂದೆಯೂ ಇಲ್ಲ” ಎಂದು ಹೇಳಿದ್ದಾರೆ. ಈ ಹೇಳಿಕೆ, ಇರಾನ್ ತನ್ನ ಕಠಿಣ ನಿಲುವನ್ನು ಬದಲಿಸಲು ಸಿದ್ಧವಿಲ್ಲ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತಿದೆ.

West Asia war
West Asia war: ಮಿತ್ರರಾಷ್ಟ್ರಗಳಿಗಷ್ಟೇ ಹಾರ್ಮುಜ್‌ ಜಲಸಂಧಿ ತೆರೆದ ಇರಾನ್‌; 15 ಅಂಶಗಳ ಶಾಂತಿ ಸೂತ್ರ ಮುಂದಿಟ್ಟ ಅಮೆರಿಕಾ, ಒಪ್ಪುತ್ತದೆಯೇ ಟೆಹ್ರಾನ್..?

ಈ ಹೇಳಿಕೆ, ಅಮೆರಿಕದಿಂದ ಇರಾನ್‌ಗೆ ಕಳುಹಿಸಲಾದ 15 ಅಂಶಗಳ ಶಾಂತಿ ಪ್ರಸ್ತಾವನೆಯ ನಂತರ ಬಂದಿರುವುದು ಗಮನಾರ್ಹ ವಿಚಾರವಾಗಿದೆ.

ಈ ಪ್ರಸ್ತಾವನೆಯಲ್ಲಿ ಅಣು ಯೋಜನೆ ನಿಯಂತ್ರಣ, ಕ್ಷಿಪಣಿ ಕಾರ್ಯಕ್ರಮ ಸ್ಥಗಿತ ಹಾಗೂ ಪ್ರಾದೇಶಿಕ ಸಂಘರ್ಷಗಳಲ್ಲಿ ಹಸ್ತಕ್ಷೇಪ ಕಡಿಮೆ ಮಾಡುವಂತೆ ಒತ್ತಾಯಿಸಲಾಗಿದೆ ಎಂದು ವರದಿಗಳು ಸೂಚಿಸುತ್ತಿವೆ. ಆದರೆ, ಇರಾನ್ ಈ ಪ್ರಸ್ತಾವನೆಗೆ ಅಧಿಕೃತವಾಗಿ ಒಪ್ಪಿಗೆ ಸೂಚಿಸಿಲ್ಲ.

ಇಸ್ರೇಲ್-ಅಮೆರಿಕಾ ಹಾಗೂ ಇರಾನ್ ನಡುವಿನ ಸಂಘರ್ಷವನ್ನು ಕೊನೆಗೊಳಿಸಲು ಪಾಕಿಸ್ತಾನ ಸೇರಿದಂತೆ ಕೆಲವು ರಾಷ್ಟ್ರಗಳು ಮಧ್ಯವರ್ತಿಗಳಾಗಿ ಕೆಲಸ ಮಾಡುತ್ತಿವೆ. ಆದರೆ, ಈ ಪ್ರಯತ್ನಗಳ ನಡುವಲ್ಲೂ ಎರಡೂ ದೇಶಗಳು ಪರಸ್ಪರ ವಿರೋಧಾಭಾಸದ ಹೇಳಿಕೆಗಳನ್ನು ನೀಡುತ್ತಿರುವುದು ಗೊಂದಲಗಳನ್ನು ಹೆಚ್ಚಿಸಿದೆ.

ಒಂದು ಕಡೆ ಅಮೆರಿಕ ಶಾಂತಿ ಪ್ರಕ್ರಿಯೆ ಆರಂಭವಾಗಿದೆ ಎಂದು ಹೇಳುತ್ತಿದ್ದರೆ, ಇನ್ನೊಂದು ಕಡೆ ಇರಾನ್ ಅದನ್ನು ಸಂಪೂರ್ಣವಾಗಿ ತಳ್ಳಿಹಾಕುತ್ತಿದೆ.

ಇದರ ನಡುವೆ, ನೆಲಮಟ್ಟದಲ್ಲಿ ಯುದ್ಧ ಪರಿಸ್ಥಿತಿ ಇನ್ನೂ ಶಮನವಾಗಿಲ್ಲ. ಇರಾನ್ ಬೆಂಬಲಿತ ಗುಂಪುಗಳು ಮತ್ತು ಅಮೆರಿಕದ ಮಿತ್ರ ರಾಷ್ಟ್ರಗಳ ನಡುವೆ ಘರ್ಷಣೆಗಳು ಮುಂದುವರಿದಿವೆ. ಹೀಗಾಗಿ, ಶಾಂತಿ ಮಾತುಕತೆಗಳ ಬಗ್ಗೆ ನಡೆಯುತ್ತಿರುವ ಚರ್ಚೆಗಳು ತಾತ್ಕಾಲಿಕವಾಗಿಯೇ ಉಳಿಯುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಒಟ್ಟಾರೆ, ಈ ಪರಿಸ್ಥಿತಿ “ಮಾತುಕತೆ ಮಾತಿನಲ್ಲಿ, ಯುದ್ಧ ನೆಲದಲ್ಲಿ” ಎಂಬಂತಾಗಿದೆ. ಡೊನಾಲ್ಡ್ ಹೇಳಿಕೆಗಳು ಮತ್ತು ಇರಾನ್ ಪ್ರತಿಕ್ರಿಯೆಗಳು ಪರಸ್ಪರ ವಿರುದ್ಧವಾಗಿರುವುದರಿಂದ, ಶಾಂತಿ ಒಪ್ಪಂದ ಸಾಧ್ಯತೆಗಳು ಕಡಿಮೆಯಿದೆ ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com