

ವಾಷಿಂಗ್ಟನ್: ಇರಾನ್‌ನ ಜನರು ತನ್ನನ್ನು ತಮ್ಮ ಸರ್ವೋಚ್ಚ ನಾಯಕನನ್ನಾಗಿ ಮಾಡಲು ಬಯಸುತ್ತಾರೆ. ಆದರೆ, ನಾನು ಆ ಸ್ಥಾನವನ್ನು ವಹಿಸಿಕೊಳ್ಳಲು ಆಸಕ್ತಿ ಹೊಂದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೊಂಡಿದ್ದಾರೆ.
ವಾಷಿಂಗ್ಟನ್‌ನಲ್ಲಿ ನಡೆದ ರಿಪಬ್ಲಿಕನ್ ನಿಧಿಸಂಗ್ರಹಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಟ್ರಂಪ್, ಇರಾನ್ ಸುಮಾರು ಒಂದು ತಿಂಗಳ ಕಾಲ ನಡೆದ ಯುದ್ಧವನ್ನು ಕೊನೆಗೊಳಿಸಲು ಬಯಸುತ್ತದೆ ಎಂಬ ತಮ್ಮ ಹಿಂದಿನ ಹೇಳಿಕೆಯನ್ನು ಪುನರುಚ್ಚರಿಸಿದರು. ಟೆಹ್ರಾನ್‌ನಲ್ಲಿರುವ ಅಧಿಕಾರಿಗಳು ವಾಷಿಂಗ್ಟನ್‌ನೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಆದರೆ, ಮನೆಯಲ್ಲಿ ದಂಗೆಯ ಭಯದಿಂದಾಗಿ ಅದನ್ನು ಒಪ್ಪಿಕೊಳ್ಳಲು ಹೆದರುತ್ತಾರೆ ಎಂದರು.
ಅಮೆರಿಕ-ಇಸ್ರೇಲಿ ಮಿಲಿಟರಿ ಕಾರ್ಯಾಚರಣೆಯಲ್ಲಿ ಅಯತೊಲ್ಲಾ ಅಲಿ ಖಮೇನಿ ಹತ್ಯೆಯಾದ ನಂತರ, ಇರಾನ್‌ನ ಮುಂದಿನ ಸರ್ವೋಚ್ಚ ನಾಯಕನಾಗುವ ಕಲ್ಪನೆಯನ್ನು ಟೆಹ್ರಾನ್‌ನ ನಾಯಕತ್ವವು ಅನೌಪಚಾರಿಕವಾಗಿ ನನ್ನ ಮುಂದಿಟ್ಟಿತು. ಆದರೆ, ನಾನು ಅದನ್ನು ತಿರಸ್ಕರಿಸಿದೆ ಎಂದು ಟ್ರಂಪ್ ಹೇಳಿಕೊಂಡರು.
'ಇರಾನ್‌ನ ನಾಯಕರಾಗುವುದು ತುಂಬಾ ಕಷ್ಟಕರ ಮತ್ತು ಒತ್ತಡದ ಪಾತ್ರವಾದ್ದರಿಂದ ಯಾರೂ ಅದರ ನಾಯಕರಾಗಲು ಬಯಸುವುದಿಲ್ಲ. ನಾವು ಅವರ ಮಾತುಗಳನ್ನು ಸ್ಪಷ್ಟವಾಗಿ ಕೇಳುತ್ತೇವೆ. 'ನಿಮ್ಮನ್ನು ಇರಾನ್‌ನ ಮುಂದಿನ ಸರ್ವೋಚ್ಚ ನಾಯಕನನ್ನಾಗಿ ಮಾಡಲು ನಾವು ಬಯಸುತ್ತೇವೆ' ಎಂದು ಅವರು ಹೇಳುತ್ತಾರೆ. ಆದರೆ, ನಾನು ಇಲ್ಲ, ಧನ್ಯವಾದಗಳು. ನನಗೆ ಅದು ಬೇಡ ಎಂದೆ' ಎಂದು ಟ್ರಂಪ್ ವಾರ್ಷಿಕ ರಾಷ್ಟ್ರೀಯ ರಿಪಬ್ಲಿಕನ್ ಕಾಂಗ್ರೆಷನಲ್ ಕಮಿಟಿ (NRCC) ನಿಧಿಸಂಗ್ರಹಣೆ ಭೋಜನಕೂಟದಲ್ಲಿ ಹೇಳಿದರು.
ಅಯತೊಲ್ಲಾ ಅಲಿ ಖಮೇನಿ ಹತ್ಯೆಯಾದ ನಂತರ ಇರಾನ್ ಅವರ ಪುತ್ರ ಮೊಜ್ತಾಬಾ ಖಮೇನಿ ಅವರನ್ನು ತನ್ನ ಮುಂದಿನ ಸರ್ವೋಚ್ಚ ನಾಯಕರನ್ನಾಗಿ ಮಾಡಿದೆ.
ಯುದ್ಧವನ್ನು ಕೊನೆಗೊಳಿಸಲು ಇರಾನ್ ನಿರಾಕರಿಸಿದ್ದರೂ, ಯುದ್ಧವನ್ನು ಕೊನೆಗೊಳಿಸಲು ಟೆಹ್ರಾನ್ ವಾಷಿಂಗ್ಟನ್ ಜೊತೆ ಮಾತುಕತೆ ನಡೆಸುತ್ತಿದೆ ಎಂದು ಟ್ರಂಪ್ ಹೇಳಿದರು.
'ಇರಾನ್ ನಾಯಕರು ವಾಸ್ತವವಾಗಿ ಅಮೆರಿಕದೊಂದಿಗೆ ಒಪ್ಪಂದ ಮಾಡಿಕೊಳ್ಳಲು (ಮಾತುಕತೆ) ಬಯಸುತ್ತಾರೆ. ಆದರೆ, ಅವರು ಅದನ್ನು ಸಾರ್ವಜನಿಕವಾಗಿ ಒಪ್ಪಿಕೊಳ್ಳಲು ತುಂಬಾ ಹೆದರುತ್ತಾರೆ. ಏಕೆಂದರೆ, ತಾವು ದುರ್ಬಲರೆಂದು ಕಂಡುಬಂದರೆ ತಮ್ಮದೇ ಜನರು ತಮ್ಮ ವಿರುದ್ಧ ತಿರುಗಿ ಬೀಳಬಹುದು ಅಥವಾ ಕೊಲ್ಲಬಹುದು ಎಂದು ಅವರು ಭಯಪಡುತ್ತಾರೆ. ಅಲ್ಲದೆ, ಏನಾದರೂ ತಪ್ಪಾದರೆ ಅಮೆರಿಕದಿಂದ ದಾಳಿಗೊಳಗಾಗಬಹುದು ಅಥವಾ ಕೊಲ್ಲಲ್ಪಡಬಹುದು ಎಂಬ ಭಯವೂ ಅವರಲ್ಲಿದೆ' ಎಂದು ಟ್ರಂಪ್ ಹೇಳಿದರು.
ಅಮೆರಿಕಕ್ಕೆ ಇರಾನ್ ತಿರುಗೇಟು
ಮಧ್ಯಪ್ರಾಚ್ಯ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ವಿನಾಶವನ್ನುಂಟುಮಾಡಿರುವ ಸಂಘರ್ಷವನ್ನು ಕೊನೆಗೊಳಿಸಲು ಟೆಹ್ರಾನ್ ಅಮೆರಿಕದ ಪ್ರಸ್ತಾವನೆಗಳನ್ನು ಸಾರ್ವಜನಿಕವಾಗಿ ತಿರಸ್ಕರಿಸಿ, ತನ್ನದೇ ಆದ ಹೊಸ ಷರತ್ತುಗಳನ್ನು ಹೊರಡಿಸಿದ್ದರೂ ಸಹ, ಇರಾನ್ ಜೊತೆ ಶಾಂತಿ ಮಾತುಕತೆಗಳು ಮುಂದುವರೆದಿವೆ ಎಂದು ಶ್ವೇತಭವನ ಹೇಳಿದೆ.
ಅಮೆರಿಕ ಮತ್ತು ಇಸ್ರೇಲ್ ಮತ್ತೆ ದಾಳಿ ಮಾಡುವುದಿಲ್ಲ ಎಂಬ ದೃಢ ಭರವಸೆ, ಸಂಘರ್ಷದಿಂದ ಉಂಟಾದ ನಾಶ ಮತ್ತು ನಷ್ಟಗಳಿಗೆ ಅವರು ಪರಿಹಾರ ನೀಡಬೇಕು ಮತ್ತು ಪ್ರಮುಖ ತೈಲ ಹಡಗು ಸಾಗಣೆ ಮಾರ್ಗವಾದ ಹಾರ್ಮುಜ್ ಜಲಂಸಂಧಿಯ ಮೇಲಿನ ತನ್ನ ಅಧಿಕಾರವನ್ನು ಇತರರು ಗುರುತಿಸಬೇಕೆಂದು ಇರಾನ್ ಬಯಸುತ್ತದೆ ಎಂದು ಸರ್ಕಾರಿ ಸ್ವಾಮ್ಯದ ಪ್ರೆಸ್ ಟಿವಿ ವರದಿ ಮಾಡಿದೆ.
ಇಸ್ರೇಲ್ ಮತ್ತು ಅಮೆರಿಕದ ನಿರಂತರ ಬಾಂಬ್ ದಾಳಿಯ ಹೊರತಾಗಿಯೂ, ಇರಾನ್ ಕೂಡ ಹಿಂದೆ ಸರಿಯುವ ಯಾವುದೇ ಲಕ್ಷಣವನ್ನು ತೋರಿಸಿಲ್ಲ. ಬದಲಿಗೆ ಇಸ್ರೇಲ್ ಮತ್ತು ಅರಬ್ ರಾಷ್ಟ್ರಗಳ ಮೇಲೆ ದಾಳಿಯನ್ನು ಮುಂದುವರಿಸಿದೆ.
Advertisement