"ಭಾರತಕ್ಕೆ ಎಷ್ಟು ಬೇಕೋ ಅಷ್ಟು ತೈಲ ಮಾರಾಟಕ್ಕೆ ನಾವು ಸಿದ್ಧ": ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಮಾರ್ಕೋ ರೂಬಿಯೋ

ಭಾರತವು ಅಗಾಧವಾದ ಆರ್ಥಿಕ ಸಾಮರ್ಥ್ಯವನ್ನು ಹೊಂದಿದ್ದು, ಮುಂಬರುವ ದಿನಗಳಲ್ಲಿ ಕೋಟ್ಯಂತರ ಜನರನ್ನು ಬಡತನದಿಂದ ಮುಕ್ತಗೊಳಿಸಿ ಬೃಹತ್ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲು ಸಜ್ಜಾಗಿದೆ. ಈ ಬೆಳವಣಿಗೆಯಲ್ಲಿ ಅಮೆರಿಕಾ ಭಾಗಿಯಾಗಲು ಹೆಚ್ಚು ಆಸಕ್ತಿ ಹೊಂದಿದೆ.
Jaishankar meets Rubio in bid to stabilise India-US ties
ಜೈಶಂಕರ್ ಮತ್ತು ರೂಬಿಯೋ ಮಾತುಕತೆ
Updated on

ವಾಷಿಂಗ್ಟನ್: ಭಾರತಕ್ಕೆ ಎಷ್ಟು ಪ್ರಮಾಣದ ಇಂಧನ ಬೇಕಿದ್ದರೂ ಅಷ್ಟನ್ನೂ ಮಾರಾಟ ಮಾಡಲು ಅಮೆರಿಕಾ ಸಿದ್ಧವಿದೆ ಎಂದು ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಮಾರ್ಕೋ ರೂಬಿಯೋ ಅವರು ತಿಳಿಸಿದ್ದಾರೆ.

ನಾಳೆಯಿಂದ (ಮೇ 23) ಆರಂಭವಾಗಲಿರುವ ತಮ್ಮ ಚೊಚ್ಚಲ ನಾಲ್ಕು ದಿನಗಳ ಭಾರತ ಪ್ರವಾಸಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಭಾರತ ಎಷ್ಟು ಇಂಧನ ಖರೀದಿಸಲು ಸಿದ್ಧವಿದೆಯೋ, ಅಷ್ಟನ್ನೂ ಮಾರಾಟ ಮಾಡಲು ನಾವು ಬಯಸುತ್ತೇವೆ. ಭಾರತದ ಇಂಧನ ಅಗತ್ಯತೆಯಲ್ಲಿ ಅಮೆರಿಕಾ ದೊಡ್ಡ ಪಾಲನ್ನು ಹೊಂದಬೇಕೆಂಬುದು ನಮ್ಮ ಆಶಯ" ಎಂದು ತಿಳಿಸಿದ್ದಾರೆ.

ಇದೇ ವೇಳೆ ಭಾರತವನ್ನು ಅತ್ಯಂತ ಮಹತ್ವದ "ಮಿತ್ರ ಮತ್ತು ಬಲಿಷ್ಠ ಪಾಲುದಾರ" (Great Ally, Great Partner) ಎಂದು ಬಣ್ಣಿಸಿರುವ ರೂಬಿಯೋ, ಅಮೆರಿಕಾ ಮತ್ತು ಭಾರತ ಈಗಾಗಲೇ ಇಂಧನ ಸಹಕಾರವನ್ನು ವಿಸ್ತರಿಸುವ ಕುರಿತು ಉನ್ನತ ಮಟ್ಟದ ಮಾತುಕತೆಗಳಲ್ಲಿ ತೊಡಗಿವೆ ಎಂದಿದ್ದಾರೆ.

ಭಾರತವು ಅಗಾಧವಾದ ಆರ್ಥಿಕ ಸಾಮರ್ಥ್ಯವನ್ನು ಹೊಂದಿದ್ದು, ಮುಂಬರುವ ದಿನಗಳಲ್ಲಿ ಕೋಟ್ಯಂತರ ಜನರನ್ನು ಬಡತನದಿಂದ ಮುಕ್ತಗೊಳಿಸಿ ಬೃಹತ್ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲು ಸಜ್ಜಾಗಿದೆ. ಈ ಬೆಳವಣಿಗೆಯಲ್ಲಿ ಅಮೆರಿಕಾ ಭಾಗಿಯಾಗಲು ಹೆಚ್ಚು ಆಸಕ್ತಿ ಹೊಂದಿದೆ ಎಂದು ಹೇಳಿದ್ದಾರೆ.

ಮೇ 26 ರಂದು ನವದೆಹಲಿಯಲ್ಲಿ ನಡೆಯಲಿರುವ ಕ್ವಾಡ್ (Quad) ವಿದೇಶಾಂಗ ಸಚಿವರ ಸಭೆಯು ಅತ್ಯಂತ ಮಹತ್ವದ್ದಾಗಿದೆ. ತಾವು ವಿದೇಶಾಂಗ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡ ತಕ್ಷಣ ನಡೆಸಿದ ಮೊದಲ ಸಭೆಯೇ ಕ್ವಾಡ್ ದೇಶಗಳೊಂದಿಗಾಗಿತ್ತು ಎಂದು ಸ್ಮರಿಸಿದ ಅವರು, ಈ ಪ್ರವಾಸದಲ್ಲಿ ಕ್ವಾಡ್ ಮೈತ್ರಿಕೂಟವನ್ನು ಮತ್ತಷ್ಟು ಬಲಪಡಿಸಲು ಚರ್ಚಿಸಲಾಗುವುದು ಎಂದಿದ್ದಾರೆ.

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರು ಭಾರತಕ್ಕೆ ಭೇಟಿ ನೀಡುತ್ತಿರುವುದು ಉಭಯ ದೇಶಗಳ ಆರ್ಥಿಕ ಮತ್ತು ರಾಜತಾಂತ್ರಿಕ ಬಾಂಧವ್ಯದಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಿದೆ.

Jaishankar meets Rubio in bid to stabilise India-US ties
ಭಾರತ-ಅಮೆರಿಕ ಉನ್ನತ ಮಟ್ಟದ ಮಾತುಕತೆ: ವ್ಯಾಪಾರ-ರಕ್ಷಣಾ ಸಹಕಾರ ಕುರಿತು ಚರ್ಚೆ; ಮೇ ತಿಂಗಳಲ್ಲಿ ಮಾರ್ಕೊ ರೂಬಿಯೊ ಭಾರತಕ್ಕೆ..?

ಮಾರ್ಕೋ ರೂಬಿಯೋ ಅವರು ಮೇ 23 ರಿಂದ 26 ರವರೆಗೆ ಭಾರತದಲ್ಲಿ ಇರಲಿದ್ದು, ಮೇ 26 ರಂದು ನವದೆಹಲಿಯಲ್ಲಿ ನಡೆಯಲಿರುವ ಪ್ರತಿಷ್ಠಿತ 'ಕ್ವಾಡ್' (Quad) ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆಯಲ್ಲಿ ರೂಬಿಯೋ ಪಾಲ್ಗೊಂಡು, ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರೊಂದಿಗೆ ದ್ವಿಪಕ್ಷೀಯ ಬಾಂಧವ್ಯ, ರಕ್ಷಣೆ ಮತ್ತು ಇಂಧನ ಒಪ್ಪಂದಗಳ ಕುರಿತು ಪ್ರಮುಖ ಮಾತುಕತೆ ನಡೆಸಲಿದ್ದಾರೆ.

ಮೇ 23 ರಿಂದ 26 ರವರೆಗೆ ನಡೆಯಲಿರುವ ಈ ನಾಲ್ಕು ದಿನಗಳ ಪ್ರವಾಸದಲ್ಲಿ ಮಾರ್ಕೊ ರುಬಿಯೊ ಅವರು ನವದೆಹಲಿ, ಕೋಲ್ಕತಾ, ಆಗ್ರಾ ಮತ್ತು ಜೈಪುರ ನಗರಗಳಿಗೆ ಭೇಟಿ ನೀಡಲಿದ್ದಾರೆ. ಇದು ವಿದೇಶಾಂಗ ಕಾರ್ಯದರ್ಶಿಯಾಗಿ ಅವರ ಮೊದಲ ಭಾರತ ಭೇಟಿಯಾಗಿದ್ದು, ದ್ವಿಪಕ್ಷೀಯ ಮಾತುಕತೆಗಳಲ್ಲಿ ಇಂಧನ ಭದ್ರತೆಯ ಜೊತೆಗೆ ರಕ್ಷಣೆ, ಜಾಗತಿಕ ವ್ಯಾಪಾರ ಮತ್ತು ಪ್ರಾದೇಶಿಕ ಭದ್ರತೆಯೂ ಪ್ರಮುಖ ಆದ್ಯತೆ ಪಡೆಯಲಿವೆ.

ಪಶ್ಚಿಮ ಏಷ್ಯಾದಲ್ಲಿ ಸದ್ಯ ನಡೆಯುತ್ತಿರುವ ಸಂಘರ್ಷಗಳು ಮತ್ತು ಹಾರ್ಮುಜ್ ಜಲಸಂಧಿಯಲ್ಲಿ ಉಂಟಾಗಿರುವ ಅನಿಶ್ಚಿತತೆಯು ಜಾಗತಿಕ ಇಂಧನ ಮಾರುಕಟ್ಟೆಯನ್ನು ತಲ್ಲಣಗೊಳಿಸಿದೆ.

ಜಗತ್ತಿನ ಅತಿ ದೊಡ್ಡ ಕಚ್ಚಾ ತೈಲ ಆಮದುದಾರ ರಾಷ್ಟ್ರಗಳಲ್ಲಿ ಒಂದಾಗಿರುವ ಭಾರತಕ್ಕೆ ಈ ಭೌಗೋಳಿಕ ರಾಜಕೀಯ ಉದ್ವಿಗ್ನತೆಯು ಭದ್ರತೆಯ ದೃಷ್ಟಿಯಿಂದ ದೊಡ್ಡ ಸವಾಲಾಗಿದೆ. ಅಮೆರಿಕವು ಪ್ರಸ್ತುತ ಇತಿಹಾಸದಲ್ಲೇ ಅತ್ಯಧಿಕ ಮಟ್ಟದ ತೈಲ ಮತ್ತು ಅನಿಲವನ್ನು ಉತ್ಪಾದಿಸುತ್ತಿದ್ದು, ಭಾರತದ ಆಮದು ಪಟ್ಟಿಯಲ್ಲಿ ತನ್ನ ಪಾಲನ್ನು ಗಣನೀಯವಾಗಿ ಹೆಚ್ಚಿಸಿಕೊಳ್ಳಲು ಉತ್ಸುಕವಾಗಿದೆ.

ಈ ಭೇಟಿಯ ಮತ್ತೊಂದು ವಿಶೇಷವೆಂದರೆ, ಭಾರತಕ್ಕೆ ತೈಲ ಪೂರೈಸುವ ನಿಟ್ಟಿನಲ್ಲಿ ವೆನೆಜುವೆಲಾ ದೇಶವನ್ನು ಬಳಸಿಕೊಳ್ಳುವ ಹೊಸ ಸಾಧ್ಯತೆಗಳ ಬಗ್ಗೆಯೂ ಚರ್ಚೆಗಳು ನಡೆಯಲಿವೆ. ಇದೇ ಸಮಯದಲ್ಲಿ ವೆನೆಜುವೆಲಾದ ಅಧ್ಯಕ್ಷರು ಕೂಡ ಭಾರತಕ್ಕೆ ಬರಲಿರುವುದು ಈ ಮಾತುಕತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ತಂದುಕೊಟ್ಟಿದೆ.

ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್, ಆಸ್ಟ್ರೇಲಿಯಾದ ಪೆನ್ನಿ ವಾಂಗ್ ಮತ್ತು ಜಪಾನಿನ ಮೊಟೆಗಿ ತೊಶಿಮಿತ್ಸು ಅವರೊಂದಿಗೆ ನಡೆಸುವ ಈ ಸಭೆಯು ಇಂಡೋ-ಪೆಸಿಫಿಕ್ ವಲಯದ ಸುರಕ್ಷತೆ ಹಾಗೂ ಮುಕ್ತ ನೌಕಾಯಾನದ ಕುರಿತು ಗಮನ ಹರಿಸಲಿದೆ.

ಸ್ವೀಡನ್‌ನಲ್ಲಿ ನಡೆದ ನಾಟೋ ವಿದೇಶಾಂಗ ಮಂತ್ರಿಗಳ ಸಭೆಯ ಬೆನ್ನಲ್ಲೇ ರುಬಿಯೊ ಅವರು ಭಾರತಕ್ಕೆ ಆಗಮಿಸುತ್ತಿರುವುದು, ವಾಷಿಂಗ್ಟನ್ ಪಾಲಿಗೆ ನವದೆಹಲಿ ಎಷ್ಟು ಪ್ರಮುಖವಾದ ಪಾಲುದಾರ ದೇಶ ಎಂಬುದನ್ನು ಎತ್ತಿ ತೋರಿಸುತ್ತದೆ. ಭಾರತಕ್ಕೆ ಈ ಪ್ರವಾಸವು ತನ್ನ ಇಂಧನ ಮೂಲಗಳನ್ನು ವೈವಿಧ್ಯಮಯಗೊಳಿಸಲು ಮತ್ತು ಜಾಗತಿಕ ಮಾರುಕಟ್ಟೆಯ ಬಿಕ್ಕಟ್ಟಿನಿಂದ ತನ್ನ ಆರ್ಥಿಕತೆಯನ್ನು ಸುರಕ್ಷಿತವಾಗಿಡಲು ಅತ್ಯಂತ ನೆರವಾಗಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com