

ಅಮೆರಿಕಾ ಮತ್ತು ಇರಾನ್ ನಡುವಿನ ಉದ್ವಿಗ್ನತೆ ನಡುವೆ ಮಹತ್ವದ ಬೆಳವಣಿಗೆಯೊಂದರಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶನಿವಾರ, “ಇರಾನ್ ಜೊತೆಗಿನ ಒಪ್ಪಂದ ಬಹುತೇಕ ಅಂತಿಮ ಹಂತ ತಲುಪಿದೆ” ಎಂದು ಘೋಷಿಸಿದ್ದಾರೆ.
ಟ್ರೂತ್ ಸೋಷಿಯಲ್‌ನಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ಅಮೆರಿಕ, ಇರಾನ್ ಹಾಗೂ ಮಧ್ಯಪ್ರಾಚ್ಯದ ಹಲವು ರಾಷ್ಟ್ರಗಳ ನಡುವೆ ನಡೆಯುತ್ತಿರುವ ಮಾತುಕತೆಗಳು ಅಂತಿಮ ಹಂತದಲ್ಲಿದ್ದು, ಕೆಲ ಒಪ್ಪಂದಗಳು ಮಾತ್ರ ಬಾಕಿಯಿದೆ ಎಂದು ತಿಳಿಸಿದ್ದಾರೆ.
ಈ ಒಪ್ಪಂದದ ಅತ್ಯಂತ ಮಹತ್ವದ ಅಂಶವೆಂದರೆ ಜಾಗತಿಕ ತೈಲ ಸಾಗಣೆಗೆ ಜೀವನಾಡಿಯಾಗಿರುವ ಹಾರ್ಮುಜ್ ಜಲಸಂಧಿಯನ್ನು ಮತ್ತೆ ಸಂಪೂರ್ಣವಾಗಿ ತೆರೆಯುವ ಪ್ರಸ್ತಾವನೆ. “ಒಪ್ಪಂದದ ಹಲವು ಅಂಶಗಳ ಜೊತೆಗೆ ಹಾರ್ಮುಜ್ ಜಲಸಂಧಿಯೂ ತೆರೆಯಲ್ಪಡಲಿದೆ” ಎಂದು ಟ್ರಂಪ್ ಹೇಳಿದ್ದಾರೆ.
ಹಾರ್ಮುಜ್ ಜಲಸಂಧಿಯ ಮೂಲಕವೇ ವಿಶ್ವದ ಬಹುಪಾಲು ತೈಲ ಸರಬರಾಜು ಸಾಗುವುದರಿಂದ, ಇದರ ಪುನರಾರಂಭ ಜಾಗತಿಕ ಆರ್ಥಿಕತೆಗೆ ಮಹತ್ವದ ಬೆಳವಣಿಗೆಯಾಗಿ ಪರಿಗಣಿಸಲಾಗಿದೆ.
ಟ್ರಂಪ್ ಹೇಳಿಕೆಯಂತೆ, ಈ ಒಪ್ಪಂದದ ಕುರಿತು ನಡೆದ ದೂರವಾಣಿ ಮಾತುಕತೆಯಲ್ಲಿ ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್, ಕತಾರ್, ಈಜಿಪ್ಟ್, ಜೋರ್ಡಾನ್ ಮತ್ತು ಬಹ್ರೇನ್ ನಾಯಕರೂ ಭಾಗವಹಿಸಿದ್ದು, ಮಧ್ಯಸ್ಥಿಕೆಯ ಪಾತ್ರವಹಿಸುತ್ತಿರುವ ಪಾಕಿಸ್ತಾನ ಮತ್ತು ಟರ್ಕಿ ಕೂಡ ಈ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ ಎನ್ನಲಾಗಿದೆ.
ಇದೇ ವೇಳೆ ಟ್ರಂಪ್, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದು, ಅದು ಸಹ “ಬಹಳ ಉತ್ತಮವಾಗಿ ನಡೆದಿದೆ” ಎಂದು ಹೇಳಿದ್ದಾರೆ.
ಈ ಬೆಳವಣಿಗೆ ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಸಂಬಂಧಗಳಲ್ಲಿ ಹೊಸ ರಾಜತಾಂತ್ರಿಕ ಬದಲಾವಣೆಯ ಸೂಚನೆ ಎಂದು ವಿಶ್ಲೇಷಿಸಲಾಗುತ್ತಿದೆ.
ಆದರೆ, ಇರಾನ್ ಅಧಿಕಾರಿಗಳು ಮಾತ್ರ ಎಚ್ಚರಿಕೆಯಿಂದ ಪ್ರತಿಕ್ರಿಯಿಸಿದ್ದಾರೆ. ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಘೈ ಅವರು, “ಎರಡು ದೇಶಗಳ ನಡುವೆ ಸಮೀಪತೆ ಹೆಚ್ಚುತ್ತಿರುವುದು ನಿಜ. ಆದರೆ, ಅದರಿಂದಲೇ ಪ್ರಮುಖ ವಿಚಾರಗಳಲ್ಲಿ ಒಪ್ಪಂದ ಆಗುತ್ತದೆ ಎಂದು ಅರ್ಥವಲ್ಲ” ಎಂದು ಹೇಳಿದ್ದಾರೆ.
ಇರಾನ್ ಈಗಾಗಲೇ 14 ಅಂಶಗಳ ಚೌಕಟ್ಟು ಒಪ್ಪಂದ ಸಿದ್ಧಪಡಿಸುತ್ತಿದ್ದು, ಅಂತಿಮ ಒಪ್ಪಂದದ ವಿವರಗಳನ್ನು ಮುಂದಿನ 30 ರಿಂದ 60 ದಿನಗಳೊಳಗೆ ಚರ್ಚಿಸುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ.
ಇದರ ನಡುವೆಯೇ ಇರಾನ್ ಸಂಸತ್ ಸ್ಪೀಕರ್ ಮೊಹಮ್ಮದ್ ಬಘರ್ ಗಾಲಿಬಾಫ್ ಅಮೆರಿಕಕ್ಕೆ ಕಠಿಣ ಎಚ್ಚರಿಕೆ ನೀಡಿದ್ದಾರೆ.
ಟ್ರಂಪ್ ಮತ್ತೆ ಯುದ್ಧ ಆರಂಭಿಸುವ ಮೂರ್ಖತನ ಮಾಡಿದರೆ, ಅಮೆರಿಕಾ ಮೊದಲಿನದಕ್ಕಿಂತಲೂ ಹೆಚ್ಚು ಭಾರೀ ಹೊಡೆತ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಕದನ ವಿರಾಮದ ಅವಧಿಯಲ್ಲಿ ಇರಾನ್ ತನ್ನ ಸೈನಿಕ ಸಾಮರ್ಥ್ಯವನ್ನು ಮರುಸಂಘಟಿಸಿಕೊಂಡಿದೆ ಎಂದು ಕೂಡ ತಿಳಿಸಿದ್ದಾರೆ.
ಈ ಹೇಳಿಕೆಗಳು ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಗಳ ಬಳಿಕ ಉಂಟಾದ ಸಂಘರ್ಷದ ಹಿನ್ನೆಲೆಯಲ್ಲಿಯೇ ಮಹತ್ವ ಪಡೆದಿವೆ.
ನಂತರ ಹಲವು ವಾರಗಳಿಂದ ನಡೆದ ಮಾತುಕತೆಗಳಲ್ಲೂ ಶಾಶ್ವತ ಪರಿಹಾರ ಇನ್ನೂ ಸಿಕ್ಕಿಲ್ಲ. ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಮುಖಾಮುಖಿ ಮಾತುಕತೆಗಳೂ ನಡೆದಿದ್ದರೂ, ಹಾರ್ಮುಜ್ ಜಲಸಂಧಿಯಲ್ಲಿ ಸಂಪೂರ್ಣ ಸಂಚಾರ ಪುನರಾರಂಭವಾಗಿಲ್ಲ.
ಯುದ್ಧ ಮತ್ತು ಶಾಂತಿಯ ನಡುವಿನ ಈ ಅನಿಶ್ಚಿತ ಪರಿಸ್ಥಿತಿ ಸಾಮಾನ್ಯ ನಾಗರಿಕರ ಜೀವನದ ಮೇಲೂ ಪರಿಣಾಮ ಬೀರಿದೆ.
ಟೆಹ್ರಾನ್ ನಿವಾಸಿ ಶಹರ್ಜಾದ್ ಎಂಬ ಮಹಿಳೆ, “ಯುದ್ಧವೂ ಅಲ್ಲ, ಶಾಂತಿಯೂ ಅಲ್ಲದ ಪರಿಸ್ಥಿತಿ ಯುದ್ಧಕ್ಕಿಂತಲೂ ಭಯಾನಕವಾಗಿದೆ. ಮತ್ತೆ ಯುದ್ಧ ಶುರುವಾದರೆ ಹೊಸ ಉದ್ಯೋಗವನ್ನೂ ಬಿಟ್ಟು ಓಡಿಹೋಗಬೇಕಾಗಬಹುದು ಎಂಬ ಭಯ ಇದೆ” ಎಂದು ಹೇಳಿದ್ದಾರೆ.
ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಕೂಡ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರೊಂದಿಗೆ ಮಾತುಕತೆ ನಡೆಸಿದ್ದು, ಅಮೆರಿಕದ “ಅತಿಯಾದ ಬೇಡಿಕೆಗಳು” ಮತ್ತು “ರಾಜತಾಂತ್ರಿಕ ದ್ರೋಹ” ನಡುವೆಯೂ ಇರಾನ್ ಸಂವಾದಕ್ಕೆ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಯುದ್ಧದ ಮತ್ತೊಂದು ಮುಖವಾಗಿರುವ ಲೆಬನಾನ್ ಗಡಿಭಾಗದಲ್ಲೂ ಉದ್ವಿಗ್ನತೆ ಮುಂದುವರಿದಿದೆ. ಲೆಬನಾನ್ ಸೇನಾ ನೆಲೆ ಮೇಲೆ ಇಸ್ರೇಲ್ ದಾಳಿ ನಡೆಸಿದ್ದು, ಒಬ್ಬ ಸೈನಿಕ ಗಾಯಗೊಂಡಿದ್ದಾನೆ ಎಂದು ವರದಿಯಾಗಿದೆ. ಮತ್ತೊಂದೆಡೆ, ಇರಾನ್ ಬೆಂಬಲಿತ ಹಿಜ್ಬುಲ್ಲಾ ಸಂಘಟನೆಗೆ ಇರಾನ್ ತನ್ನ ಬೆಂಬಲ ಮುಂದುವರಿಸಲಿದೆ ಎಂದು ತಿಳಿಸಿದೆ.
Advertisement