US-Iran war: ಶಾಂತಿ ಕರಡು ಪ್ರತಿಗೆ ತಿದ್ದುಪಡಿ: ಪರಮಾಣು ಮುಕ್ತ ಇರಾನ್‌ಗೆ ಟ್ರಂಪ್ ಪಟ್ಟು, ಕೊನೆ ಕ್ಷಣದಲ್ಲಿ ಬಿಗ್ ಶಾಕ್ ಕೊಟ್ಟ ಅಮೆರಿಕಾ..!

“ಪರಮಾಣು ಶಸ್ತ್ರರಹಿತ ಇರಾನ್” ಎಂಬ ಗುರಿಯ ಮೇಲೆ ಟ್ರಂಪ್ ಆಡಳಿತ ಗಟ್ಟಿಯಾಗಿ ನಿಂತಿದ್ದು, ಈಗಾಗಲೇ ಅಂತಿಮ ಹಂತ ತಲುಪಿದ್ದ ಮಾತುಕತೆಗೆ ಮತ್ತೆ ಇದೀಗ ಮತ್ತೆ ಅನಿಶ್ಚಿತತೆಯ ಹಂತ ತಲುಪಿದೆ.
President Donald Trump
ಅಮೆರಿಕಾ ಡೊನಾಲ್ಡ್ ಟ್ರಂಪ್
Updated on

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಯುದ್ಧ ಅಂತ್ಯಗೊಳಿಸಲು ಸಿದ್ಧವಾಗಿದ್ದ ಶಾಂತಿ ಒಪ್ಪಂದದ ಕರಡು ಪ್ರತಿಗೆ ಕೊನೆಯ ಕ್ಷಣದಲ್ಲಿ ತಿದ್ದುಪಡಿ ಸೂಚಿಸಿರುವುದು ಜಾಗತಿಕ ರಾಜಕೀಯದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದೆ.

“ಪರಮಾಣು ಶಸ್ತ್ರರಹಿತ ಇರಾನ್” ಎಂಬ ಗುರಿಯ ಮೇಲೆ ಟ್ರಂಪ್ ಆಡಳಿತ ಗಟ್ಟಿಯಾಗಿ ನಿಂತಿದ್ದು, ಈಗಾಗಲೇ ಅಂತಿಮ ಹಂತ ತಲುಪಿದ್ದ ಮಾತುಕತೆಗೆ ಮತ್ತೆ ಇದೀಗ ಮತ್ತೆ ಅನಿಶ್ಚಿತತೆಯ ಹಂತ ತಲುಪಿದೆ.

ಅಮೆರಿಕ ಮಾಧ್ಯಮಗಳ ವರದಿ ಪ್ರಕಾರ, ಅಂತಿಮ ಹಂತದಲ್ಲಿದ್ದ ಒಪ್ಪಂದದ ಕೆಲವು ಅಂಶಗಳನ್ನು ಟ್ರಂಪ್ ಬದಲಾಯಿಸಲು ಸೂಚಿಸಿದ್ದು, ಪರಿಷ್ಕೃತ ಕರಡನ್ನು ಮತ್ತೆ ಇರಾನ್ ಪರಿಶೀಲನೆಗೆ ಕಳುಹಿಸಲಾಗಿದೆ.

ವಿಶೇಷವಾಗಿ ಇರಾನ್‌ನ ಅಣು ಕಾರ್ಯಕ್ರಮ, ಅಣು ವಸ್ತುಗಳ ನಿರ್ವಹಣೆ ಹಾಗೂ ಭವಿಷ್ಯದಲ್ಲಿ ಅಣ್ವಸ್ತ್ರ ಅಭಿವೃದ್ಧಿಯನ್ನು ಸಂಪೂರ್ಣ ತಡೆಯುವ ವಿಚಾರಗಳಲ್ಲಿ ಟ್ರಂಪ್ ಇನ್ನಷ್ಟು ಗಟ್ಟಿಯಾದ ನಿಲುವನ್ನು ತೋರಿದ್ದಾರೆಂದು ಹೇಳಲಾಗುತ್ತಿದೆ.

ಟ್ರಂಪ್ ಆಡಳಿತದ ನಿಲುವಿನ ಪ್ರಕಾರ, ಕೇವಲ ಯುದ್ಧ ವಿರಾಮ ಘೋಷಣೆ ಸಾಕಾಗುವುದಿಲ್ಲ. ಇರಾನ್ ಭವಿಷ್ಯದಲ್ಲಿಯೂ ಅಣ್ವಸ್ತ್ರ ನಿರ್ಮಾಣದತ್ತ ಸಾಗದಂತೆ ಶಾಶ್ವತ ನಿಯಂತ್ರಣ ಇರಬೇಕು ಎಂಬುದು ಅಮೆರಿಕದ ಪ್ರಮುಖ ಬೇಡಿಕೆಯಾಗಿದೆ.

ಇದೇ ಕಾರಣಕ್ಕೆ ಒಪ್ಪಂದದ ಷರತ್ತುಗಳನ್ನು ಮತ್ತಷ್ಟು ಬಲಪಡಿಸಲು ಟ್ರಂಪ್ ವೈಯಕ್ತಿಕವಾಗಿ ಸೂಚನೆ ನೀಡಿದ್ದಾರೆ ಎಂದು ವರದಿಗಳು ತಿಳಿಸಿವೆ.

ಇದರ ಜೊತೆಗೆ ಜಗತ್ತಿನ ತೈಲ ಸರಬರಾಜಿಗೆ ಅತ್ಯಂತ ಮಹತ್ವದ ಹಾರ್ಮುಜ್ ಜಲಸಂಧಿಯನ್ನು ಮರುತೆರೆಯುವಂತೆ ಕೂಡ ಅಮೆರಿಕ ಒತ್ತಾಯಿಸುತ್ತಿದೆ. ವಿಶ್ವದ ಸುಮಾರು 20 ಶೇಕಡಾ ತೈಲ ಸರಬರಾಜು ಇದೇ ಜಲಮಾರ್ಗದ ಮೂಲಕ ಸಾಗುವುದರಿಂದ, ಈ ಪ್ರದೇಶದಲ್ಲಿ ಉದ್ವಿಗ್ನತೆ ಮುಂದುವರಿದರೆ ಜಾಗತಿಕ ಆರ್ಥಿಕತೆಗೆ ದೊಡ್ಡ ಹೊಡೆತ ಬೀಳುವ ಸಾಧ್ಯತೆ ಇದೆ. ತೈಲ ಬೆಲೆ ಏರಿಕೆ, ಸಾಗಣೆ ವ್ಯತ್ಯಯ ಮತ್ತು ಮಾರುಕಟ್ಟೆ ಅಸ್ಥಿರತೆ ಕುರಿತು ಈಗಾಗಲೇ ಆತಂಕ ವ್ಯಕ್ತವಾಗಿದೆ.

President Donald Trump
'ನ್ಯೂಕ್ಲಿಯರ್ ಬಾಂಬ್' ಹೊಂದುವಂತಿಲ್ಲ, ಕೂಡಲೇ ಹಾರ್ಮುಜ್ ಜಲಸಂಧಿ ಓಪನ್ ಮಾಡ್ಬೇಕು: ಇರಾನ್ ಗೆ ಟ್ರಂಪ್ ಷರತ್ತು!

ಶುಕ್ರವಾರ ಶ್ವೇತಭವನದ ಸಿಟ್ಯುಯೇಷನ್ ರೂಮ್‌ನಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲೂ ಟ್ರಂಪ್ ಅಂತಿಮ ಒಪ್ಪಿಗೆ ನೀಡಿಲ್ಲ ಎಂದು ಅಮೆರಿಕ ಮೂಲಗಳು ತಿಳಿಸಿವೆ.

ಈ ಬೆಳವಣಿಗೆಗಳಿಂದ ಅಮೆರಿಕ ಇನ್ನಷ್ಟು ಕಠಿಣ ನಿಲುವು ತಾಳುತ್ತಿದೆಯೇ ಎಂಬ ಪ್ರಶ್ನೆಗಳು ಎದುರಾಗಿವೆ. ಈಗಾಗಲೇ ಸಂಕೀರ್ಣವಾಗಿರುವ ಮಾತುಕತೆಗಳು ಹೊಸ ಬದಲಾವಣೆಗಳಿಂದ ಇನ್ನಷ್ಟು ಸಂಕೀರ್ಣಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಇರಾನ್ ಕೂಡ ಅಮೆರಿಕದ ಒತ್ತಡಕ್ಕೆ ಮಣಿಯುವುದಿಲ್ಲ ಎಂಬ ನಿಲುವು ತಾಳಿರುವುದರಿಂದ, ಟ್ರಂಪ್ ಸೂಚಿಸಿರುವ ಹೊಸ ಷರತ್ತುಗಳನ್ನು ಟೆಹ್ರಾನ್ ಒಪ್ಪಿಕೊಳ್ಳುತ್ತದೆಯೇ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಇರಾನ್ ತನ್ನ ಅಣು ಕಾರ್ಯಕ್ರಮ ಶಾಂತಿಯುತ ಉದ್ದೇಶಗಳಿಗಾಗಿ ಮಾತ್ರ ಎಂದು ಹೇಳಿಕೊಂಡಿದ್ದರೂ, ಅಮೆರಿಕಾ ಮತ್ತು ಇಸ್ರೇಲ್ ಭದ್ರತಾ ಆತಂಕ ವ್ಯಕ್ತಪಡಿಸುತ್ತಿವೆ.

ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಸಂಯುಕ್ತ ದಾಳಿಗಳ ಬಳಿಕ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ತೀವ್ರಗೊಂಡಿತ್ತು. ಅದರ ನಂತರ ಪ್ರಾದೇಶಿಕ ಭದ್ರತೆ, ತೈಲ ಮಾರುಕಟ್ಟೆ ಮತ್ತು ಜಾಗತಿಕ ರಾಜತಾಂತ್ರಿಕ ಸಂಬಂಧಗಳ ಮೇಲೆ ಪರಿಣಾಮ ಬಿದ್ದಿದೆ. ಇದೇ ಹಿನ್ನೆಲೆ ಯುದ್ಧ ಅಂತ್ಯ ಒಪ್ಪಂದವನ್ನು ವಿಶ್ವದ ಹಲವು ರಾಷ್ಟ್ರಗಳು ಸೂಕ್ಷ್ಮವಾಗಿ ಗಮನಿಸುತ್ತಿವೆ.

ಈಗ ಟ್ರಂಪ್ ಮುಂದಿಟ್ಟಿರುವ ಹೊಸ ಕಠಿಣ ಷರತ್ತುಗಳಿಗೆ ಇರಾನ್ ಯಾವ ರೀತಿಯ ಪ್ರತಿಕ್ರಿಯೆ ನೀಡುತ್ತದೆ ಮತ್ತು ಮಾತುಕತೆ ಯಶಸ್ವಿಯಾಗುತ್ತದೆಯೇ ಎಂಬುದರ ಮೇಲೆ ಮಧ್ಯಪ್ರಾಚ್ಯದ ಮುಂದಿನ ಪರಿಸ್ಥಿತಿ ನಿರ್ಧಾರವಾಗಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com