

ಲಾಹೋರ್: ಪುಲ್ವಾಮಾ ಭಯೋತ್ಪಾದಕ ದಾಳಿ ಮತ್ತು ನಂತರದ ಘರ್ಷಣೆಗಳ ನಂತರ 2019 ರಲ್ಲಿ ಭಾರತದೊಂದಿಗಿನ ವ್ಯಾಪಾರವನ್ನು ಸ್ಥಗಿತಗೊಳಿಸಿದಾಗಿನಿಂದ ಪಾಕಿಸ್ತಾನಕ್ಕೆ ಭಾರಿ ಹೊಡೆತ ಬಿದ್ದಿದೆ. ಅಂದಾಜು 40 ಬಿಲಿಯನ್ ಡಾಲರ್ ನಷ್ಟು ಆರ್ಥಿಕ ನಷ್ಟವನ್ನು ಅನುಭವಿಸಿದೆ ಎಂದು ವ್ಯಾಪಾರ ವಕಾಲತ್ತು ಗುಂಪಿನ (Business advocacy group) ಮುಖ್ಯಸ್ಥರು ತಿಳಿಸಿದ್ದಾರೆ.
ಉಭಯ ರಾಷ್ಟ್ರಗಳು ವಾಣಿಜ್ಯ ಸಂಬಂಧಗಳನ್ನು ಪುನರ್ ಆರಂಭಿಸಬೇಕು ಎಂದು ಪಾಕ್-ಭಾರತ ವ್ಯವಹಾರ ಮಂಡಳಿಯ ಅಧ್ಯಕ್ಷ ನೂರ್ ಮುಹಮ್ಮದ್ ಕಸೂರಿ ಒತ್ತಾಯಿಸಿದ್ದಾರೆ. ಇದರಿಂದ ಎರಡು ರಾಷ್ಟ್ರಗಳ ವ್ಯವಹಾರಕ್ಕೆ ಅನುಕೂಲವಾಗಲಿದೆ. ಹೂಡಿಕೆ, ಪ್ರವಾಸೋದ್ಯಮ ಮತ್ತು ಪ್ರಾದೇಶಿಕ ಸಹಕಾರಕ್ಕೆ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಅವರು ಹೇಳಿದ್ದಾರೆ.
ಭಾರತದೊಂದಿಗಿನ ವ್ಯಾಪಾರ ಸ್ಥಗಿತ ಪಾಕಿಸ್ತಾನದ ವ್ಯವಹಾರಗಳನ್ನು ದೂರದ ಮಾರುಕಟ್ಟೆಗಳಿಂದ ಅಗತ್ಯ ಕಚ್ಚಾ ವಸ್ತುಗಳು ಮತ್ತಿತರ ಇತರ ವಸ್ತುಗಳನ್ನು ಆಮದು ಮಾಡಿಕೊಳ್ಳುವಂತೆ ಒತ್ತಾಯಿಸಿತು. ಇದರಿಂದ ಸಾರಿಗೆ ಮತ್ತು ಸರಕು ಸಾಗಣೆ ವೆಚ್ಚಗಳು ಮತ್ತು ವಿತರಣಾ ಸಮಯ ಹೆಚ್ಚಾಗಿದೆ ಎಂದು ಕಸೂರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪಾಕಿಸ್ತಾನದ ಔಷಧ ಉದ್ಯಮವು ಭಾರತದಲ್ಲಿ ಲಭ್ಯವಿರುವ ಕಚ್ಚಾ ವಸ್ತುಗಳ ಮೇಲೆ ಅವಲಂಬಿತವಾಗಿದೆ. ಭಾರತದಿಂದ ಆಮದು ಮಾಡಿಕೊಳ್ಳುವುದರಿಂದ ವಾರ್ಷಿಕವಾಗಿ 2 ಬಿಲಿಯನ್ ನಿಂದ 3 ಬಿಲಿಯನ್ ಯುಎಸ್ ಡಾಲರ್ ನಷ್ಟು ಉಳಿತಾಯ ಮಾಡಬಹುದು ಎಂದು ಅವರು ಹೇಳಿದ್ದಾರೆ.
ಈ ಮಧ್ಯೆ ದೇಶೀಯ ಹತ್ತಿ ಉತ್ಪಾದನೆ ಕಡಿಮೆಯಾಗುತ್ತಿರುವುದರಿಂದ ಜವಳಿ ವಲಯದಲ್ಲಿ ಹೆಚ್ಚುವರಿ ವೆಚ್ಚವಾಗುತ್ತಿದೆ. ಜವಳಿ ಗಿರಣಿಗಳು ಬ್ರೆಜಿಲ್, ಈಜಿಪ್ಟ್, ಚೀನಾ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳಿಂದ ಹತ್ತಿಯನ್ನು ಆಮದು ಮಾಡಿಕೊಳ್ಳಬೇಕಾಗಿದೆ. ಇದರ ಪರಿಣಾಮವಾಗಿ ಅಂದಾಜು 5 ಶತಕೋಟಿ ಯುಎಸ್ ಡಾಲರ್ ಹೆಚ್ಚುವರಿ ಖರ್ಚು ಉಂಟಾಗಿದೆ. ಪಾಕಿಸ್ತಾನವು ಸಕ್ಕರೆ, ರಸಗೊಬ್ಬರ, ಸಿಮೆಂಟ್, ಪೆಟ್ರೋಲಿಯಂ ಉತ್ಪನ್ನಗಳು, ಕಬ್ಬಿಣ ಮತ್ತು ಉಕ್ಕು, ತರಕಾರಿಗಳು ಮತ್ತು ಭಾರೀ ಯಂತ್ರೋಪಕರಣಗಳನ್ನು ದೂರದ ಮಾರುಕಟ್ಟೆಗಳಿಂದ ಆಮದು ಮಾಡಿಕೊಳ್ಳುತ್ತಿದೆ ಎಂದು ಕಸೂರಿ ತಿಳಿಸಿದ್ದಾರೆ.
ದ್ವಿಪಕ್ಷೀಯ ವ್ಯಾಪಾರದ ಪುನರಾರಂಭವು ಸಾರಿಗೆ ವೆಚ್ಚವನ್ನು ಕಡಿಮೆ ಮಾಡುತ್ತದೆ ಮತ್ತು ಸಕಾಲಿಕ ಪೂರೈಕೆಯನ್ನು ಖಚಿತಪಡಿಸುತ್ತದೆ. ಭಾರತೀಯ ತೈಲ ಸಂಸ್ಕರಣಾಗಾರಗಳು ಭೌಗೋಳಿಕವಾಗಿ ಪಾಕಿಸ್ತಾನಕ್ಕೆ ಹತ್ತಿರದಲ್ಲಿವೆ, ಇದರಿಂದಾಗಿ ಪೆಟ್ರೋಲಿಯಂ ಆಮದುಗಳು ಅಗ್ಗ ಮತ್ತು ವೇಗವಾಗಿರುತ್ತವೆ. ಭಾರತೀಯ ಕೃಷಿ ಮತ್ತು ಕೈಗಾರಿಕಾ ಉತ್ಪನ್ನಗಳಿಗೆ ಪ್ರವೇಶವು ಪಾಕಿಸ್ತಾನದ ವ್ಯವಹಾರಗಳಿಗೆ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.
ಹತ್ತಿ ಕೃಷಿಯ ಪ್ರದೇಶ ಕುಗ್ಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಕಸೂರಿ, ಸಾಂಪ್ರದಾಯಿಕ ಹತ್ತಿ ಬೆಳೆಯುವ ಪ್ರದೇಶಗಳಲ್ಲಿನ ರೈತರು ಹೆಚ್ಚಾಗಿ ಕಬ್ಬಿಗೆ ಬದಲಾಗುತ್ತಿದ್ದಾರೆ. ಇದು ದೇಶದ ಜವಳಿ ಉದ್ಯಮ ಮತ್ತು ವ್ಯಾಪಕ ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಹೀಗಾಗಿ ದೇಶೀಯ ಹತ್ತಿ ಉತ್ಪಾದನೆ ಪುನರುಜ್ಜೀವನಗೊಳಿಸಲು ಸುಧಾರಿತ ಕೃಷಿ ನೀತಿಗಳಿಗೆ ಅವರು ಕರೆ ನೀಡಿದ್ದಾರೆ. ವ್ಯಾಪಾರದ ಪುನರ್ ಆರಂಭ ಎರಡೂ ಕಡೆಯ ವ್ಯವಹಾರಗಳಿಗೆ ಪ್ರಯೋಜನವನ್ನು ನೀಡುತ್ತದೆ ಮತ್ತು ಹೂಡಿಕೆ, ಪ್ರವಾಸೋದ್ಯಮ ಮತ್ತು ಪ್ರಾದೇಶಿಕ ಸಹಕಾರಕ್ಕೆ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಅವರು ಹೇಳಿದ್ದಾರೆ.
ಪಾಕಿಸ್ತಾನವು ಹೆಚ್ಚಿನ ಭಾರತೀಯ ಪ್ರವಾಸಿಗರನ್ನು ಆಕರ್ಷಿಸಬಹುದು, ವಿಶೇಷವಾಗಿ ಧಾರ್ಮಿಕ ಮತ್ತು ಐತಿಹಾಸಿಕ ಸ್ಥಳಗಳು ಹಾಗೂ ಅವರ ಪೂರ್ವಜರ ಮನೆಗಳು ಮತ್ತು ಹಳ್ಳಿಗಳಿಗೆ ಭೇಟಿ ನೀಡಲು ಆಸಕ್ತಿ ಹೊಂದಿರುವವರು ಬರಬಹುದು ಎಂದು ಹೇಳಿರುವ ಕಸೂರಿ,ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಶ್ರೀಲಂಕಾಕ್ಕೆ ಭಾರತ ನೀಡಿದ ಆರ್ಥಿಕ ಸಹಾಯವನ್ನು ನೆರೆಯ ರಾಷ್ಟ್ರಗಳು ಕಷ್ಟದ ಸಮಯದಲ್ಲಿ ಪರಸ್ಪರ ಹೇಗೆ ಬೆಂಬಲಿಸಬಹುದು ಎಂಬುದಕ್ಕೆ ಉದಾಹರಣೆಯಾಗಿದೆ ಎಂದಿದ್ದಾರೆ.
ರಾಜಕೀಯ ಭಿನ್ನಾಭಿಪ್ರಾಯಗಳು ಎರಡೂ ದೇಶಗಳು ಆರ್ಥಿಕ ಅವಕಾಶಗಳನ್ನು ಕಿತ್ತು ಕೊಳ್ಳಬಾರದು. ಬಾಕಿ ಇರುವ ವಿವಾದಗಳನ್ನು ಮಾತುಕತೆ ಮೂಲಕ ಪರಿಹರಿಸಬಹುದು. ಪಾಕಿಸ್ತಾನ ಮತ್ತು ಭಾರತ ಐತಿಹಾಸಿಕ, ಸಾಂಸ್ಕೃತಿಕ ಮತ್ತು ಕೌಟುಂಬಿಕ ಸಂಬಂಧಗಳನ್ನು ಹಂಚಿಕೊಳ್ಳುತ್ತವೆ, ಇದು ಸುಧಾರಿತ ಸಂಬಂಧಗಳಿಗೆ ಅಡಿಪಾಯವನ್ನು ಒದಗಿಸುತ್ತದೆ ಎಂದು ಅವರು ಹೇಳಿದ್ದಾರೆ.