

ನ್ಯೂಯಾರ್ಕ್: ಅಮೆರಿಕದ ಶ್ವೇತಭವನದ ಬಳಿ ವ್ಯಕ್ತಿಯೊಬ್ಬನ ಕಾರಿನಲ್ಲಿ ಮೂರು ಬಂದೂಕುಗಳು ಮತ್ತು ಡಜನ್‌ಗಟ್ಟಲೆ ಗುಂಡುಗಳು ಪತ್ತೆಯಾದ ನಂತರ ಆತನನ್ನು ಬಂಧಿಸಲಾಗಿದೆ. 'ನನ್ನ ತಲೆಯೊಳಗಿನ ಧ್ವನಿಗಳು ವಾಷಿಂಗ್ಟನ್‌ಗೆ ತೆರಳಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ಕೊಲ್ಲುವಂತೆ ಹೇಳಿದವು ಎಂದು ಆತ ಅಧಿಕಾರಿಗಳಿಗೆ ತಿಳಿಸಿದ್ದಾನೆ ಎಂದು 'ಅಸೋಸಿಯೇಟೆಡ್ ಪ್ರೆಸ್' ವರದಿ ಮಾಡಿದೆ.
'ಡಿಪಾರ್ಟ್‌ಮೆಂಟ್ ಆಫ್ ಹೋಮ್‌ಲ್ಯಾಂಡ್ ಸೆಕ್ಯುರಿಟಿ' (DHS) ನೀಡಿರುವ ಹೇಳಿಕೆಯ ಪ್ರಕಾರ, ಗುರುವಾರ ರಾತ್ರಿ ವೈಟ್ ಹೌಸ್ ಬಳಿ ನಿಲ್ಲಿಸಿದ್ದ ಕಾರೊಂದರಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬ 'ಸಂಶಯಾಸ್ಪದವಾಗಿ ವರ್ತಿಸುತ್ತಿದ್ದ' ಹಿನ್ನೆಲೆಯಲ್ಲಿ, 'ಯುಎಸ್ ಸೀಕ್ರೆಟ್ ಸರ್ವಿಸ್' ಅಧಿಕಾರಿಗಳು ಆತನ ಹತ್ತಿರಕ್ಕೆ ತೆರಳಿ ಬಂಧಿಸಿದ್ದಾರೆ.
ಬಂಧಿತ ವ್ಯಕ್ತಿಯನ್ನು ರಾನಿ ಯೋರ್ಡ್ರಿಕ್ಸ್ ಗ್ವಾನಿಪಾ ಕ್ರಿನೋಸ್ ಎಂದು ಗುರುತಿಸಲಾಗಿದೆ. ವಿಚಾರಣೆಯ ವೇಳೆ ಅಮೆರಿಕದ ರಾಜಧಾನಿಗೆ ಬಂದು ರಿಪಬ್ಲಿಕನ್ ಪಕ್ಷದ ಅಧ್ಯಕ್ಷರನ್ನು ಕೊಲ್ಲುವಂತೆ ನನ್ನ ತಲೆಯೊಳಗಿನ ಧ್ವನಿಗಳು ಹೇಳಿದವು ಎಂದು ಆತ ಹೇಳಿಕೊಂಡಿದ್ದಾನೆ.
ತನಿಖೆಯ ವೇಳೆ, ಆ ಕಾರು ಕಳುವಾದದ್ದು ಎಂದು ತಿಳಿದುಬಂದಿದೆ. ಅಲ್ಲದೆ, ಕಾರನ್ನು ಪರಿಶೀಲಿಸಿದಾಗ ಮೂರು ಬಂದೂಕುಗಳು ಮತ್ತು ಡಜನ್‌ಗಟ್ಟಲೆ ಗುಂಡುಗಳು ಪತ್ತೆಯಾಗಿವೆ ಎಂದು DHS ತಿಳಿಸಿದೆ.
ಕ್ರಿನೋಸ್ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಆತ ಸದ್ಯ 'ಯುಎಸ್ ಮಾರ್ಷಲ್ಸ್ ಸರ್ವಿಸ್' ವಶದಲ್ಲಿದ್ದಾನೆ ಎಂದು ಇಲಾಖೆ ತಿಳಿಸಿದೆ. ಆತ ವೆನೆಜುವೆಲಾದ ವಲಸಿಗನಾಗಿದ್ದು, ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿದ್ದಾನೆ ಎಂದು DHS ಹೇಳಿದೆ. ಇಲಾಖೆಯ ಪ್ರಕಾರ, ಆತ 2024ರ ಮಾರ್ಚ್‌ನಲ್ಲಿ ಟೆಕ್ಸಾಸ್ ಮೂಲಕ ದೇಶವನ್ನು ಪ್ರವೇಶಿಸಿದ್ದನು.
ಅಧ್ಯಕ್ಷರಿಗೆ ಎದುರಾಗಬಹುದಾಗಿದ್ದ ಸಂಭಾವ್ಯ ಅಪಾಯವನ್ನು ತಡೆಗಟ್ಟಿದ್ದಕ್ಕಾಗಿ 'ಹೋಮ್‌ಲ್ಯಾಂಡ್ ಸೆಕ್ಯುರಿಟಿ' ಕಾರ್ಯದರ್ಶಿ ಮಾರ್ಕ್‌ವೇನ್ ಮುಲ್ಲಿನ್ ಅವರು ಸೀಕ್ರೆಟ್ ಸರ್ವಿಸ್ ಅಧಿಕಾರಿಗಳನ್ನು ಶ್ಲಾಘಿಸಿದ್ದಾರೆ.
"ನಮ್ಮ ಧೈರ್ಯಶಾಲಿ ಸೀಕ್ರೆಟ್ ಸರ್ವಿಸ್ ಅಧಿಕಾರಿಗಳಿಗೆ ಧನ್ಯವಾದಗಳು. ಯಾರಿಗೂ ಅಪಾಯ ಉಂಟು ಮಾಡುವ ಮೊದಲೇ, ತನ್ನ ಕಾರಿನಲ್ಲಿ ಮೂರು ಬಂದೂಕುಗಳನ್ನು ಹೊಂದಿದ್ದ ಈ ಅಕ್ರಮ ವಲಸಿಗನನ್ನು ವೈಟ್ ಹೌಸ್ ಬಳಿ ಬಂಧಿಸಲಾಗಿದೆ" ಎಂದು ಮುಲ್ಲಿನ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಳೆದ ವರ್ಷ ಡೊನಾಲ್ಡ್ ಟ್ರಂಪ್ ಮತ್ತೆ ಅಧಿಕಾರಕ್ಕೆ ಬಂದ ನಂತರ, ಅವರು ಅಥವಾ ಅವರ ಕುಟುಂಬದ ಸದಸ್ಯರಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಸೀಕ್ರೆಟ್ ಸರ್ವಿಸ್ ಮತ್ತು ಇತರ ಕಾನೂನು ಜಾರಿ ಸಂಸ್ಥೆಗಳು ಹಲವು ವ್ಯಕ್ತಿಗಳನ್ನು ಬಂಧಿಸಿರುವ ಘಟನೆಗಳು ನಡೆದಿದೆ. ಈ ನಡುವೆ ಅಂತಹುದ್ದೇ ಮತ್ತೊಂದು ಘಟನೆಯಾಗಿದೆ.