West Asia war: 'ಯುದ್ಧ ನಿಲ್ಲಿಸಿ ಸಂಧಾನಕ್ಕೆ ಬನ್ನಿ, ಇಲ್ಲದಿದ್ದರೆ ನರಕ ಸೃಷ್ಟಿಸುತ್ತೇವೆ': ಅಮೆರಿಕ ಅಧ್ಯಕ್ಷ ಟ್ರಂಪ್‌ಗೆ ಇರಾನ್ ಖಡಕ್ ಎಚ್ಚರಿಕೆ..!

ಅಮೆರಿಕದ ಮಧ್ಯಂತರ ಚುನಾವಣೆಗಳ ಫಲಿತಾಂಶದ ಬೆನ್ನಲ್ಲೇ ಅರಾಘ್ಚಿ ಅವರ ಈ ರಾಜತಾಂತ್ರಿಕ ಎಚ್ಚರಿಕೆ ಹೊರಬಿದ್ದಿದೆ. ಚುನಾವಣಾ ಫಲಿತಾಂಶಗಳು ಪ್ರಾದೇಶಿಕ ಮಾತುಕತೆಗಳ ವೇಗದ ಮೇಲೆ ಪರಿಣಾಮ ಬೀರಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
US President Donald Trump-Iranian Foreign Minister Abbas Araghchi
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್- ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಗ್ಚಿonline desk
Updated on: 

ಟೆಹ್ರಾನ್: ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಮತ್ತೆ ತೀವ್ರ ಸ್ವರೂಪ ಪಡೆದುಕೊಳ್ಳುವ ಆತಂಕ ಎದುರಾಗಿದೆ. ಯುದ್ಧವನ್ನು ಅಂತ್ಯಗೊಳಿಸಿ ಸಂಧಾನಕ್ಕೆ ಮುಂದಾಗುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ಇರಾನ್ ಖಡಕ್ ಎಚ್ಚರಿಕೆ ನೀಡಿದೆ.

ಇರಾನ್ ಮುಂದಿಟ್ಟಿರುವ ಎರಡು ದಿನಗಳ ಪ್ರಸ್ತಾವನೆಯನ್ನು ಒಪ್ಪಿಕೊಂಡು ಎಲ್ಲ ರಂಗಗಳಲ್ಲೂ ಯುದ್ಧ ನಿಲ್ಲಿಸಬೇಕು. ಇಲ್ಲದಿದ್ದರೆ ಇರಾನ್‌ನ ಯುದ್ಧಸನ್ನದ್ಧ ಯೋಧರು ಅಮೆರಿಕಕ್ಕೆ ನರಕವನ್ನೇ ತೋರಿಸಲಿದ್ದಾರೆ ಎಂದು ಇರಾನ್ ವಿದೇಶಾಂಗ ಸಚಿವ ಸೆಯ್ಯದ್ ಅಬ್ಬಾಸ್ ಅರಾಘ್ಚಿ ಹೇಳಿದ್ದಾರೆ.

ಅಮೆರಿಕದ ಮಧ್ಯಂತರ ಚುನಾವಣೆಗಳ ಫಲಿತಾಂಶದ ಬೆನ್ನಲ್ಲೇ ಅರಾಘ್ಚಿ ಅವರ ಈ ರಾಜತಾಂತ್ರಿಕ ಎಚ್ಚರಿಕೆ ಹೊರಬಿದ್ದಿದೆ. ಚುನಾವಣಾ ಫಲಿತಾಂಶಗಳು ಪ್ರಾದೇಶಿಕ ಮಾತುಕತೆಗಳ ವೇಗದ ಮೇಲೆ ಪರಿಣಾಮ ಬೀರಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಭಾನುವಾರ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಇರಾನ್ ವಿದೇಶಾಂಗ ಸಚಿವರು, ಮಾತುಕತೆಯ ಮೂಲಕ ಸಂಘರ್ಷ ತಗ್ಗಿಸಬೇಕೇ ಅಥವಾ ಭೀಕರ ಪ್ರಾದೇಶಿಕ ಯುದ್ಧಕ್ಕೆ ಅವಕಾಶ ಮಾಡಿಕೊಡಬೇಕೇ ಎಂಬ ನಿರ್ಧಾರ ಈಗ ವಾಷಿಂಗ್ಟನ್ ಕೈಯಲ್ಲಿದೆ ಎಂದು ಹೇಳಿದ್ದಾರೆ.

'ಅಮೆರಿಕದ ಮತದಾರರು ತಮ್ಮ ಆಯ್ಕೆಯನ್ನು ಮಾಡಿದ್ದಾರೆ. ಈಗ ಶ್ವೇತಭವನ ತನ್ನ ನಿರ್ಧಾರ ತೆಗೆದುಕೊಳ್ಳುವ ಸಮಯ' ಎಂದು ಅವರು ಬರೆದುಕೊಂಡಿದ್ದಾರೆ.

ಟ್ರಂಪ್ ಆಡಳಿತಕ್ಕೆ ನೇರ ಎಚ್ಚರಿಕೆ ನೀಡಿರುವ ಅರಾಘ್ಚಿ, 'ನಮ್ಮ ಎರಡು ದಿನಗಳ ಪ್ರಸ್ತಾವನೆ ಇನ್ನೂ ಮುಕ್ತವಾಗಿದೆ. ಎಲ್ಲ ರಂಗಗಳಲ್ಲೂ ಯುದ್ಧ ಅಂತ್ಯಗೊಳಿಸುವುದು ಸೇರಿದಂತೆ ಅಗತ್ಯ ಷರತ್ತುಗಳನ್ನು ಒಪ್ಪಿಕೊಳ್ಳಿ. ಆಗ ಫಲಿತಾಂಶವನ್ನು ನೋಡುತ್ತೀರಿ. ಇಲ್ಲವೇ ಯುದ್ಧವನ್ನೇ ಆಯ್ಕೆ ಮಾಡಿಕೊಳ್ಳಿ. ಆಗ ನಮ್ಮ ಎಚ್ಚರಿಕೆಯಲ್ಲಿರುವ, ಯುದ್ಧಕ್ಕೆ ಸನ್ನದ್ಧವಾಗಿರುವ ಯೋಧರು ನರಕವನ್ನೇ ಸೃಷ್ಟಿಸುವುದನ್ನು ನೋಡಬೇಕಾಗುತ್ತದೆ' ಎಂದು ಹೇಳಿದ್ದಾರೆ.

ಇದಾದ ಬಳಿಕ ಇರಾನ್ ರಾಜಧಾನಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅರಾಘ್ಚಿ, ಕದನ ವಿರಾಮಕ್ಕೆ ಸಂಬಂಧಿಸಿದ ರಾಜತಾಂತ್ರಿಕ ಪ್ರಯತ್ನಗಳು ಸದ್ಯಕ್ಕೆ ಸ್ಥಗಿತಗೊಂಡಿವೆ ಎಂದು ತಿಳಿಸಿದ್ದಾರೆ.

ಅಮೆರಿಕದ ರಾಜಕೀಯ ಬೆಳವಣಿಗೆಗಳೇ ಈ ಬಿಕ್ಕಟ್ಟಿಗೆ ಪ್ರಮುಖ ಕಾರಣ ಎಂದು ಅವರು ಹೇಳಿದ್ದಾರೆ ಎಂದು ಅಲ್ ಜಜೀರಾ ವರದಿ ಮಾಡಿದೆ.

US President Donald Trump-Iranian Foreign Minister Abbas Araghchi
ಅಮೆರಿಕ ಚುನಾವಣೆಯಲ್ಲಿ ಹಿನ್ನಡೆ ಬೆನ್ನಲ್ಲೇ ಇರಾನ್ ಮೇಲೆ ಟ್ರಂಪ್ ಕೆಂಗಣ್ಣು; ಇಡೀ ದೇಶವನ್ನೇ ನಾಶಪಡಿಸುವ ಎಚ್ಚರಿಕೆ..!

ಅಮೆರಿಕದ ಚುನಾವಣಾ ಫಲಿತಾಂಶಗಳು ಎಲ್ಲರಿಗೂ ಆಘಾತ ತಂದಿರುವುದು ಮಾತುಕತೆ ಸ್ಥಗಿತಗೊಳ್ಳಲು ಪ್ರಮುಖ ಕಾರಣ. ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಲು ಮತ್ತು ಮಧ್ಯಸ್ಥಿಕೆ ವಹಿಸುತ್ತಿರುವ ರಾಷ್ಟ್ರಗಳ ಪ್ರತಿನಿಧಿಗಳು ಮತ್ತೆ ಭೇಟಿ ನೀಡಲು ಅನುಕೂಲಕರ ವಾತಾವರಣ ನಿರ್ಮಾಣವಾಗಲು ಸ್ವಲ್ಪ ಸಮಯ ಬೇಕಾಗುತ್ತದೆ. ನಾವು ಕಾಯಬೇಕಿದೆ' ಎಂದು ತಿಳಿಸಿದ್ದಾರೆ.

ಮತ್ತೊಂದೆಡೆ, ಇರಾನ್‌ನ 38 ಪ್ರಮುಖ ಸೇತುವೆಗಳನ್ನು ಕೇವಲ ಒಂದು ಗಂಟೆಯಲ್ಲಿ ಧ್ವಂಸಗೊಳಿಸುವ ಸಾಮರ್ಥ್ಯ ಅಮೆರಿಕಕ್ಕಿದೆ ಎಂದು ಟ್ರಂಪ್ ಹೇಳಿದ್ದು, ಈ ಹೇಳಿಕೆ ಉಭಯ ದೇಶಗಳ ನಡುವಿನ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.

ಇರಾನ್‌ನ ಪರಮಾಣು ಕಾರ್ಯಕ್ರಮ ಹಾಗೂ ಆಯಕಟ್ಟಿನ ಹಾರ್ಮುಜ್ ಜಲಸಂಧಿ ಪುನಃ ತೆರೆಯುವ ವಿಚಾರದಲ್ಲಿ ಮಾತುಕತೆಗಳ ಮೂಲಕ ಸ್ಪಷ್ಟ ಪ್ರಗತಿ ಕಂಡುಬಂದರೆ ಅಮೆರಿಕ ಸೇನೆಯನ್ನು ಮತ್ತೆ ಯುದ್ಧಕ್ಕೆ ಕಳುಹಿಸುವ ಸಾಧ್ಯತೆ ತೀರಾ ಕಡಿಮೆ ಎಂದು ಹೇಳಿದ್ದಾರೆ. ಆದರೆ, ಇರಾನ್‌ನ 38 ಸೇತುವೆಗಳು ಹಾಗೂ ಪ್ರಮುಖ ಮೂಲಸೌಕರ್ಯಗಳನ್ನು ಧ್ವಂಸಗೊಳಿಸುವ ಸಾಮರ್ಥ್ಯವನ್ನು ಅಮೆರಿಕ ಹೊಂದಿದೆ ಎಂದೂ ಎಚ್ಚರಿಸಿದ್ದಾರೆ ಎಂದು ಸಿಎನ್‌ಎನ್ ವರದಿ ಮಾಡಿದೆ.

ಸಿಎನ್‌ಎನ್ ನಿರೂಪಕರೊಂದಿಗೆ 20 ನಿಮಿಷಗಳ ದೂರವಾಣಿ ಸಂದರ್ಶನದಲ್ಲಿ ಮಾತನಾಡಿದ ಟ್ರಂಪ್, ಇರಾನ್ ಪ್ರಬಲ ಒಪ್ಪಂದಕ್ಕೆ ಸಹಿ ಹಾಕಿದರೆ ಮತ್ತಷ್ಟು ಸೇನಾ ಕಾರ್ಯಾಚರಣೆಯ ಅಗತ್ಯ ಬೀಳುವ ಸಾಧ್ಯತೆ ಕಡಿಮೆ ಎಂದು ಐದು ಬಾರಿ ಪುನರುಚ್ಚರಿಸಿದ್ದಾರೆ.

'ಅವರು ಬಲವಾದ ಒಪ್ಪಂದಕ್ಕೆ ಸಹಿ ಹಾಕುತ್ತಾರೆಯೇ ಎಂಬುದರ ಮೇಲೆ ಎಲ್ಲವೂ ಅವಲಂಬಿತವಾಗಿದೆ. ಅಂತಹ ಪರಿಸ್ಥಿತಿಯಲ್ಲಿ ಮತ್ತೆ ಯುದ್ಧಕ್ಕೆ ಇಳಿಯುವ ಅಗತ್ಯ ಬೀಳುವ ಸಾಧ್ಯತೆ ತೀರಾ ಕಡಿಮೆ. ಇರಾನ್ ಆರ್ಥಿಕವಾಗಿ ಕುಸಿಯುತ್ತಿರುವ ದೇಶ. ಈ ವರ್ಷ ಹಣದುಬ್ಬರ ಶೇ.301ಕ್ಕೆ ತಲುಪಿದೆ. ನಾವು ಈಗಾಗಲೇ ಅವರಿಗೆ ಭಾರೀ ಹೊಡೆತ ನೀಡಿದ್ದೇವೆ. ಅಗತ್ಯ ಬಿದ್ದರೆ ಅವರನ್ನು ಸಂಪೂರ್ಣವಾಗಿ ಮುಗಿಸಬಹುದು' ಎಂದು ಹೇಳಿದ್ದಾರೆ.

ಇದೇ ವೇಳೆ, ಇರಾನ್‌ನ 38 ಸೇತುವೆಗಳನ್ನು ಕೇವಲ ಒಂದು ಗಂಟೆಯೊಳಗೆ ಧ್ವಂಸಗೊಳಿಸುವ ಸಾಮರ್ಥ್ಯ ಅಮೆರಿಕಕ್ಕಿದೆ ಎಂದು ಟ್ರಂಪ್ ಬಹಿರಂಗಪಡಿಸಿದ್ದಾರೆ.

'ನಮ್ಮ ಗುರಿಯಲ್ಲಿರುವ 38 ಸೇತುವೆಗಳನ್ನು ಅಕ್ಷರಶಃ ಒಂದು ಗಂಟೆಯೊಳಗೆ ಉರುಳಿಸಬಹುದು. ಆದರೆ, ನಾನು ಅದನ್ನು ಬಯಸುವುದಿಲ್ಲ. ಏಕೆಂದರೆ ಅವುಗಳನ್ನು ಮತ್ತೆ ನಿರ್ಮಿಸಲು ಕನಿಷ್ಠ 10 ವರ್ಷಗಳೇ ಬೇಕಾಗಬಹುದು. ಸೇತುವೆಗಳನ್ನು ಧ್ವಂಸಗೊಳಿಸುವುದು ನನಗೆ ಇಷ್ಟವಿಲ್ಲ. ಸೇತುವೆ ನಿರ್ಮಾಣ ಅತ್ಯಂತ ಕಷ್ಟದ ಕೆಲಸ. ಅದಕ್ಕೆ ವರ್ಷಗಳೇ ಬೇಕಾಗುತ್ತವೆ. ನಾನೊಬ್ಬ ಉತ್ತಮ ನಿರ್ಮಾಣ ತಜ್ಞ' ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X