ಔಟ್‌ಲುಕ್ ಸಮಸ್ಯೆ ಬಗೆಹರಿಸಿದ Microsoft, ಜಾಗತಿಕ ವ್ಯತ್ಯಯಕ್ಕೆ ಕೊನೆ; ಗ್ರಾಹಕರಲ್ಲಿ ಕ್ಷಮೆಯಾಚನೆ

ಶನಿವಾರ ಬೆಳಗ್ಗೆ ಮೈಕ್ರೋಸಾಫ್ಟ್‌ನ ಸೇವಾ ಸ್ಥಿತಿಯ ವೆಬ್‌ಪುಟದಲ್ಲಿ 'ಎಲ್ಲ ಉತ್ಪನ್ನಗಳು ಕಾರ್ಯನಿರ್ವಹಿಸುತ್ತಿವೆ' (All products are operational) ಎಂಬ ಮಾಹಿತಿ ಪ್ರಕಟವಾಗಿದೆ.
Microsoft restores all services after global outage
ಮೈಕ್ರೋಸಾಫ್ಟ್ ಔಟ್ ಲುಕ್ ಸೇವೆಗಳಲ್ಲಿ ವ್ಯತ್ಯಯ
Updated on: 

ನವದೆಹಲಿ: ಜಾಗತಿಕ ಮಟ್ಟದಲ್ಲಿ ಭಾರಿ ವ್ಯತ್ಯಯಕ್ಕೆ ಕಾರಣವಾಗಿದ್ದ ಮೈಕ್ರೋಸಾಫ್ಟ್‌ನ ಸೇವೆಗಳು ಇದೀಗ ಸಂಪೂರ್ಣವಾಗಿ ಸಹಜ ಸ್ಥಿತಿಗೆ ಮರಳಿದ್ದು, ಗ್ರಾಹಕರಿಗೆ ಉಂಟಾದ ತೊಂದರೆಗಾಗಿ ಸಂಸ್ಥೆ ಕ್ಷಮೆ ಯಾಚಿಸಿದೆ.

ಔಟ್‌ಲುಕ್ ಇ-ಮೇಲ್ ಸೇರಿದಂತೆ ಮೈಕ್ರೋಸಾಫ್ಟ್ 365ರ ಹಲವು ಸೇವೆಗಳು ಸ್ಥಗಿತಗೊಂಡಿದ್ದಕ್ಕೆ ಕಂಪನಿ ಗ್ರಾಹಕರಲ್ಲಿ ಕ್ಷಮೆಯಾಚಿಸಿದೆ. ನೆಟ್‌ವರ್ಕ್ ಸಾಮರ್ಥ್ಯ ಹೆಚ್ಚಿಸುವ ಪ್ರಕ್ರಿಯೆಯಲ್ಲಿ ಉಂಟಾದ ತಾಂತ್ರಿಕ ದೋಷವೇ ಈ ಸಮಸ್ಯೆಗೆ ಕಾರಣ ಎಂದು ಸ್ಪಷ್ಟಪಡಿಸಿದೆ.

ಶನಿವಾರ ಬೆಳಗ್ಗೆ ಮೈಕ್ರೋಸಾಫ್ಟ್‌ನ ಸೇವಾ ಸ್ಥಿತಿಯ ವೆಬ್‌ಪುಟದಲ್ಲಿ 'ಎಲ್ಲ ಉತ್ಪನ್ನಗಳು ಕಾರ್ಯನಿರ್ವಹಿಸುತ್ತಿವೆ' (All products are operational) ಎಂಬ ಮಾಹಿತಿ ಪ್ರಕಟವಾಗಿದೆ. ಮೈಕ್ರೋಸಾಫ್ಟ್ 365ರ ಉದ್ಯಮ ಮತ್ತು ವಾಣಿಜ್ಯ ಸೇವೆಗಳ ಜತೆಗೆ ಸಾಮಾನ್ಯ ಗ್ರಾಹಕರು ಬಳಸುವ ಸೇವೆಗಳೂ ಸಹಜ ಸ್ಥಿತಿಗೆ ಮರಳಿವೆ.

"ಈ ತಾಂತ್ರಿಕ ವ್ಯತ್ಯಯದಿಂದ ನಮ್ಮ ಗ್ರಾಹಕರು ಮತ್ತು ಪಾಲುದಾರರಿಗೆ ಉಂಟಾದ ತೊಂದರೆಗೆ ನಾವು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ. ನಮ್ಮ ಸೇವೆಗಳ ಮೇಲೆ ಗ್ರಾಹಕರು ಇಟ್ಟಿರುವ ನಂಬಿಕೆಯನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ" ಎಂದು ಕಂಪನಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.

Microsoft restores all services after global outage
ಜಾಗತಿಕ ಮಟ್ಟದಲ್ಲಿ ಮೈಕ್ರೋಸಾಫ್ಟ್ ಸೇವೆಗಳು ದಿಢೀರ್ ಸ್ಥಗಿತ: ಲಕ್ಷಾಂತರ ಬಳಕೆದಾರರ ಪರದಾಟ! ತಾಂತ್ರಿಕ ದೋಷಕ್ಕೆ ಅಸಲಿ ಕಾರಣವೇನು?

ನೆಟ್‌ವರ್ಕ್ ಅಪ್‌ಗ್ರೇಡ್ ವೇಳೆ ತಾಂತ್ರಿಕ ದೋಷ

ನೆಟ್‌ವರ್ಕ್ ಸಾಮರ್ಥ್ಯ ಹೆಚ್ಚಿಸುವ ನವೀಕರಣದ ವೇಳೆ ಉಂಟಾದ ಸಮಸ್ಯೆಯೇ ಜಾಗತಿಕ ವ್ಯತ್ಯಯಕ್ಕೆ ಕಾರಣವಾಗಿದೆ ಎಂದು ಮೈಕ್ರೋಸಾಫ್ಟ್ ತಿಳಿಸಿದೆ. ಈ ಹಿಂದೆ ನಡೆದ ನೆಟ್‌ವರ್ಕ್ ಅಪ್‌ಗ್ರೇಡ್‌ನಲ್ಲಿನ ದೋಷವು ಇತ್ತೀಚಿನ ನೆಟ್‌ವರ್ಕ್ ಬದಲಾವಣೆಯ ಬಳಿಕ ಪರಿಣಾಮ ಬೀರಿದೆ.

ಇದು ಸೈಬರ್ ದಾಳಿ, ಕೃತಕ ಬುದ್ಧಿಮತ್ತೆ (AI) ಅಥವಾ ಎಐ ಏಜೆಂಟ್‌ಗಳಿಗೆ ಸಂಬಂಧಿಸಿದ ಸಮಸ್ಯೆಯಲ್ಲ. ಸಂಪೂರ್ಣ ತಾಂತ್ರಿಕ ದೋಷದಿಂದ ಈ ವ್ಯತ್ಯಯ ಉಂಟಾಗಿದೆ ಎಂದು ಕಂಪನಿ ಸ್ಪಷ್ಟಪಡಿಸಿದೆ.

ಮೂಲ ಸಮಸ್ಯೆಯನ್ನು ಸರಿಪಡಿಸಿದ ಬಳಿಕವೂ ಎಲ್ಲ ಸೇವೆಗಳನ್ನು ಒಂದೇ ಬಾರಿಗೆ ಆರಂಭಿಸದೆ ಹಂತ ಹಂತವಾಗಿ ಮರುಸ್ಥಾಪಿಸಲಾಗಿದೆ. ಪ್ರತಿಯೊಂದು ಹಂತದಲ್ಲೂ ಸೇವೆಗಳ ಸ್ಥಿರತೆಯನ್ನು ಪರಿಶೀಲಿಸಿದ ಬಳಿಕವೇ ಮುಂದಿನ ಸೇವೆಗಳನ್ನು ಆರಂಭಿಸಲಾಗಿದೆ. ಇದರಿಂದ ಚೇತರಿಕೆ ಪ್ರಕ್ರಿಯೆ ಸ್ವಲ್ಪ ವಿಳಂಬವಾದರೂ ಸೇವೆಗಳ ವಿಶ್ವಾಸಾರ್ಹತೆ ಕಾಪಾಡಲು ಸಾಧ್ಯವಾಯಿತು ಎಂದು ಕಂಪನಿ ಹೇಳಿದೆ.

ಮೈಕ್ರೋಸಾಫ್ಟ್‌ನ ಕಾಪಿಲಟ್, ಏಜೆಂಟ್ಸ್ ಮತ್ತು ಪ್ಲಾಟ್‌ಫಾರ್ಮ್ ವಿಭಾಗದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಚಾರ್ಲ್ಸ್ ಲಮಾನ್ನಾ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ನೆಟ್‌ವರ್ಕ್‌ನ ಒಂದು ಭಾಗದಲ್ಲಿ ಉಂಟಾದ ದೋಷ ಇತರ ವ್ಯವಸ್ಥೆಗಳಿಗೂ ಹರಡಿತ್ತು. ಇದರಿಂದ ಸೇವೆಗಳನ್ನು ಮರುಸ್ಥಾಪಿಸುವ ಪ್ರಕ್ರಿಯೆ ಮತ್ತಷ್ಟು ಸಂಕೀರ್ಣವಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಈ ಘಟನೆಯ ಸಂಪೂರ್ಣ ತನಿಖೆ ನಡೆಸಿ, ಸಮಸ್ಯೆ ಹೇಗೆ ಆರಂಭವಾಯಿತು, ಯಾವ ಹಂತದಲ್ಲಿ ಯಾವ ಕ್ರಮ ಕೈಗೊಳ್ಳಲಾಯಿತು ಮತ್ತು ಮುಂದೆ ಇಂತಹ ಸಮಸ್ಯೆಗಳು ಮರುಕಳಿಸದಂತೆ ಯಾವ ಬದಲಾವಣೆ ಮಾಡಲಾಗುತ್ತದೆ ಎಂಬ ವಿವರಗಳನ್ನೊಳಗೊಂಡ ವರದಿಯನ್ನು ಶೀಘ್ರದಲ್ಲೇ ಪ್ರಕಟಿಸುವುದಾಗಿ ಹೇಳಿದ್ದಾರೆ.

ಭಾರತದ ವಿಮಾನಯಾನ, ಹಣಕಾಸು ಸಂಸ್ಥೆಗಳಿಗೂ ಹೊಡೆತ

ಗುರುವಾರ ತಡರಾತ್ರಿ ಆರಂಭವಾದ ಈ ಜಾಗತಿಕ ವ್ಯತ್ಯಯದಿಂದ ಭಾರತ ಸೇರಿದಂತೆ ಹಲವು ದೇಶಗಳ ಉದ್ಯಮಗಳು ತೊಂದರೆ ಅನುಭವಿಸಿದ್ದವು. ಭಾರತದ ಇಂಡಿಗೋ, ಏರ್ ಇಂಡಿಯಾ ಮತ್ತು ಆಕಾಶ ಏರ್ ವಿಮಾನಯಾನ ಸಂಸ್ಥೆಗಳ ಇ-ಮೇಲ್ ಆಧಾರಿತ ಗ್ರಾಹಕ ಸೇವೆಗಳು ವ್ಯತ್ಯಯಗೊಂಡಿದ್ದವು. ಪ್ರಯಾಣಿಕರು ಕಳುಹಿಸಿದ ಕೆಲವು ಇ-ಮೇಲ್‌ಗಳನ್ನು ಸ್ವೀಕರಿಸಲು ಅಥವಾ ಅವುಗಳಿಗೆ ಪ್ರತಿಕ್ರಿಯಿಸಲು ಸಂಸ್ಥೆಗಳಿಗೆ ತೊಂದರೆಯಾಗಿತ್ತು.

ಗ್ರಾಹಕರ ಸಂಪರ್ಕಕ್ಕೆ ತೊಂದರೆಯಾಗದಂತೆ ಏರ್ ಇಂಡಿಯಾ ತನ್ನ ಇ-ಮೇಲ್ ಸೇವೆಗಳನ್ನು ತಾತ್ಕಾಲಿಕವಾಗಿ ಬೇರೆ ವ್ಯವಸ್ಥೆಗೆ ವರ್ಗಾಯಿಸಿತ್ತು. ಆದರೆ, ವಿಮಾನಗಳ ಹಾರಾಟದ ಮೇಲೆ ಯಾವುದೇ ಪರಿಣಾಮ ಬೀರಿರುವ ಬಗ್ಗೆ ವರದಿಯಾಗಿಲ್ಲ. ಹಣಕಾಸು ಸೇವಾ ಸಂಸ್ಥೆಗಳೂ ಸಂಶೋಧನಾ ವರದಿಗಳನ್ನು ಪಡೆಯಲು ಮತ್ತು ಗ್ರಾಹಕರೊಂದಿಗೆ ಸಂಪರ್ಕ ಸಾಧಿಸಲು ತೊಂದರೆ ಅನುಭವಿಸಿದ್ದವು.

Microsoft restores all services after global outage
Microsoft: ಭಾರತ ಸೇರಿ 4 ದೇಶಗಳ 60,000 ಟೆಕ್ಕಿಗಳಿಗೆ ಸ್ವಯಂ ನಿವೃತ್ತಿ ಪ್ಯಾಕೇಜ್ ಘೋಷಿಸಿದ ಮೈಕ್ರೋಸಾಫ್ಟ್; ಟೆಕ್ ಲೋಕದಲ್ಲಿ ಸಂಚಲನ..!

1.3 ಲಕ್ಷಕ್ಕೂ ಹೆಚ್ಚು ದೂರುಗಳು

ಈ ವ್ಯತ್ಯಯದಿಂದ ಮುಖ್ಯವಾಗಿ ಮೈಕ್ರೋಸಾಫ್ಟ್‌ನ ಕ್ಲೌಡ್ ಆಧಾರಿತ ಇ-ಮೇಲ್ ವ್ಯವಸ್ಥೆಯಾದ ಎಕ್ಸ್‌ಚೇಂಜ್ ಆನ್‌ಲೈನ್ (Exchange Online) ಸೇವೆಗಳಿಗೆ ತೊಂದರೆಯಾಗಿತ್ತು. ಔಟ್‌ಲುಕ್ ವೆಬ್‌ಸೈಟ್ ಮತ್ತು ಡೆಸ್ಕ್‌ಟಾಪ್ ಆ್ಯಪ್ ಮೂಲಕ ಇ-ಮೇಲ್‌ಗಳನ್ನು ತೆರೆಯಲು ಬಳಕೆದಾರರು ಪರದಾಡಿದ್ದರು. ಇ-ಮೇಲ್‌ಗಳ ತಲುಪುವಿಕೆಯಲ್ಲೂ ವಿಳಂಬವಾಗಿತ್ತು.

ಸಮಸ್ಯೆ ತೀವ್ರಗೊಂಡ ಸಂದರ್ಭದಲ್ಲಿ ಡೌನ್‌ಡಿಟೆಕ್ಟರ್ (Downdetector) ವೆಬ್‌ಸೈಟ್‌ನಲ್ಲಿ ಔಟ್‌ಲುಕ್ ಸೇವೆಗೆ ಸಂಬಂಧಿಸಿದಂತೆ 1.3 ಲಕ್ಷಕ್ಕೂ ಹೆಚ್ಚು ದೂರುಗಳು ದಾಖಲಾಗಿದ್ದವು. ಒಟ್ಟು 72ರಿಂದ 74 ದೇಶಗಳಲ್ಲಿ ಸೇವಾ ವ್ಯತ್ಯಯ ವರದಿಯಾಗಿತ್ತು.

ಸೇವೆಗಳು ಮರುಸ್ಥಾಪನೆಯಾದ ಬಳಿಕವೂ ಸಂಗ್ರಹವಾಗಿದ್ದ ಬಾಕಿ ಇ-ಮೇಲ್‌ಗಳು ಸರಿಯಾಗಿ ತಲುಪುತ್ತಿವೆಯೇ ಎಂಬುದನ್ನು ಮೈಕ್ರೋಸಾಫ್ಟ್ ಪರಿಶೀಲಿಸುತ್ತಿದೆ. ಪರಿಸ್ಥಿತಿ ಸಂಪೂರ್ಣ ಸ್ಥಿರವಾಗುವವರೆಗೆ ನಿಗಾ ಮುಂದುವರಿಸುವುದಾಗಿ ಕಂಪನಿ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X