

ವಿಶ್ವಸಂಸ್ಥೆ ಮತ್ತು ಇಸ್ಲಾಮಿಕ್ ಸಹಕಾರ ಸಂಘಟನೆಯ (OIC) ನಡುವಿನ ಸಹಕಾರಕ್ಕೆ ಸಂಬಂಧಿಸಿದ ಕರಡು ನಿರ್ಣಯದ ಕುರಿತು ನಡೆದ ಸಮಾಲೋಚನೆಯಿಂದ ಭಾರತ ಸೇರಿದಂತೆ ಹಲವು ಸದಸ್ಯ ರಾಷ್ಟ್ರಗಳನ್ನು ಹೊರಗಿಟ್ಟ ಟರ್ಕಿಯ ಕ್ರಮವನ್ನು ಭಾರತ ತೀವ್ರವಾಗಿ ಖಂಡಿಸಿದೆ.
ಟರ್ಕಿಯ ಈ ನಡೆ ‘ಬಹಿರಂಗ ಮತ್ತು ಉದ್ದೇಶಪೂರ್ವಕ’ ಎಂದು ಆಕ್ಷೇಪಿಸಿರುವ ಭಾರತ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕರಡು ನಿರ್ಣಯದ ವಿರುದ್ಧ ಮತ ಚಲಾಯಿಸಿದೆ.
‘ವಿಶ್ವಸಂಸ್ಥೆ ಮತ್ತು ಇಸ್ಲಾಮಿಕ್ ಸಹಕಾರ ಸಂಘಟನೆಯ ನಡುವಿನ ಸಹಕಾರ’ ಎಂಬ ಶೀರ್ಷಿಕೆಯ ಕರಡು ನಿರ್ಣಯವನ್ನು ಇರಾಕ್ ಮಂಡಿಸಿತ್ತು.
ಸೋಮವಾರ ಸಾಮಾನ್ಯ ಸಭೆಯಲ್ಲಿ ನಡೆದ ಮತದಾನದಲ್ಲಿ 112 ರಾಷ್ಟ್ರಗಳು ನಿರ್ಣಯದ ಪರವಾಗಿ, ಆರು ರಾಷ್ಟ್ರಗಳು ವಿರುದ್ಧವಾಗಿ ಮತ ಚಲಾಯಿಸಿದರೆ, 39 ರಾಷ್ಟ್ರಗಳು ಮತದಾನದಿಂದ ದೂರ ಉಳಿದವು. ಅಂತಿಮವಾಗಿ ನಿರ್ಣಯ ಅಂಗೀಕಾರಗೊಂಡಿತು.
ಭಾರತದ ಜೊತೆಗೆ ಅರ್ಮೇನಿಯಾ, ಸೈಪ್ರಸ್, ಗ್ರೀಸ್, ಇಸ್ರೇಲ್ ಮತ್ತು ಅಮೆರಿಕ ನಿರ್ಣಯದ ವಿರುದ್ಧ ಮತ ಚಲಾಯಿಸಿದವು. ಈ ಕರಡು ನಿರ್ಣಯದ ಚರ್ಚೆ ಮತ್ತು ಮಾತುಕತೆಗಳಿಗೆ ಟರ್ಕಿ ಸಂಯೋಜಕ ರಾಷ್ಟ್ರವಾಗಿ ಕಾರ್ಯನಿರ್ವಹಿಸಿತ್ತು.
ಭಾರತ ಮಾತ್ರವಲ್ಲದೆ ಸೈಪ್ರಸ್ ಮತ್ತು ಗ್ರೀಸ್ ಸೇರಿದಂತೆ ಇತರ ರಾಷ್ಟ್ರಗಳೂ ಕರಡು ನಿರ್ಣಯದ ಮಾತುಕತೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಎಲ್ಲರನ್ನೂ ಒಳಗೊಳ್ಳುವ ಮನೋಭಾವದ ಕೊರತೆಯಿದೆ ಎಂದು ಟರ್ಕಿಯನ್ನು ಟೀಕಿಸಿವೆ.
ವಿಶ್ವಸಂಸ್ಥೆಯಲ್ಲಿನ ಭಾರತದ ಉಪ ಖಾಯಂ ಪ್ರತಿನಿಧಿ, ರಾಯಭಾರಿ ಯೋಜನಾ ಪಟೇಲ್ ಮಾತನಾಡಿ, ಕರಡು ನಿರ್ಣಯದ ವಿವಿಧ ಹಂತದ ಪ್ರತಿಗಳನ್ನು ಹಂಚಿಕೊಳ್ಳುವಾಗ ಇಸ್ಲಾಮಿಕ್ ಸಹಕಾರ ಸಂಘಟನೆಯ ಖಾಯಂ ವೀಕ್ಷಕ ನಿಯೋಗವು ಭಾರತದ ನಿಯೋಗ ಸೇರಿದಂತೆ ಹಲವು ರಾಷ್ಟ್ರಗಳನ್ನು ಉದ್ದೇಶಪೂರ್ವಕವಾಗಿ ಹೊರಗಿಟ್ಟಿದೆ ಎಂದು ಆರೋಪಿಸಿದರು.
ಮತದಾನದ ವಿವರಣೆ ನೀಡುವ ಸಂದರ್ಭದಲ್ಲಿ ನಿರ್ಣಯದ ಸಂಯೋಜಕ ರಾಷ್ಟ್ರ ಅನುಸರಿಸಿದ ಕಾರ್ಯವಿಧಾನಗಳನ್ನು ತೀವ್ರವಾಗಿ ಪ್ರಶ್ನಿಸಿದ ಅವರು, ಈ ಬೆಳವಣಿಗೆ ಆತಂಕಕಾರಿ ವಿಚಾರವಾಗಿದ್ದು, ಇಡೀ ಪ್ರಕ್ರಿಯೆಯ ಕುರಿತು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ನಮ್ಮ ನಿಯೋಗವು ಈ ನಿರ್ಣಯದ ವಿಷಯಾಧಾರಿತ ಅಂಶಗಳ ಕಾರಣಕ್ಕೆ ಮಾತ್ರವಲ್ಲ, ಅದರ ಕುರಿತು ಮಾತುಕತೆಗಳನ್ನು ನಡೆಸಿದ ಸಂಯೋಜಕ ರಾಷ್ಟ್ರ ಅನುಸರಿಸಿದ ಕಾರ್ಯವಿಧಾನಗಳೂ ಹೆಚ್ಚು ಆತಂಕಕಾರಿ ಆಗಿರುವುದರಿಂದ ವಿರುದ್ಧವಾಗಿ ಮತ ಚಲಾಯಿಸಿದೆ ಎಂದು ಹೇಳಿದರು.
ನಿರ್ಣಯದ ಕುರಿತು ಎಲ್ಲ ಸದಸ್ಯ ರಾಷ್ಟ್ರಗಳನ್ನು ಒಳಗೊಂಡ ಮಾತುಕತೆ ನಡೆಸದಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, “ಒಐಸಿಯ ಖಾಯಂ ವೀಕ್ಷಕ ನಿಯೋಗವು ನಿರ್ಣಯದ ವಿವಿಧ ಕರಡು ಪ್ರತಿಗಳನ್ನು ಹಂಚಿಕೊಳ್ಳುವಾಗ ನನ್ನ ನಿಯೋಗವನ್ನಷ್ಟೇ ಅಲ್ಲದೆ ಇತರ ಹಲವು ರಾಷ್ಟ್ರಗಳನ್ನೂ ಹೊರಗಿಡಲು ನಿರ್ಧರಿಸಿರುವುದು ತೀವ್ರ ಆಘಾತಕಾರಿ. ನಿರ್ದಿಷ್ಟ ರಾಷ್ಟ್ರಗಳ ನಿಯೋಗಗಳನ್ನು ಹೊರಗಿಟ್ಟು ತಮ್ಮದೇ ಕಾರ್ಯಸೂಚಿಯನ್ನು ಮುಂದುವರಿಸಲು ಅವಕಾಶ ಮಾಡಿಕೊಡುವ ಇಂತಹ ನಡೆ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡುತ್ತದೆ” ಎಂದು ಎಚ್ಚರಿಸಿದರು.
ನಂತರದ ಹಂತಗಳಲ್ಲಿ ಕೆಲವು ರಾಷ್ಟ್ರಗಳು ತಮ್ಮ ಆಕ್ಷೇಪಗಳನ್ನು ದಾಖಲಿಸಿದರೂ, ಆಯ್ದ ರಾಷ್ಟ್ರಗಳನ್ನು ಪ್ರಕ್ರಿಯೆಯಿಂದ ಹೊರಗಿಡುವ ನಿರ್ಧಾರವನ್ನು ಸಂಯೋಜಕರು ಮುಂದುವರಿಸಿದರು ಎಂದು ಅವರು ತಿಳಿಸಿದರು.
ಕರಡು ನಿರ್ಣಯಕ್ಕೆ ಸಲ್ಲಿಸಿದ ಸಲಹೆಗಳನ್ನು ಸ್ವೀಕರಿಸಿದ ಬಗ್ಗೆ ಕನಿಷ್ಠ ಮಾಹಿತಿ ನೀಡುವಂತಹ ಮೂಲಭೂತ ಕಾರ್ಯವಿಧಾನಗಳನ್ನೂ ಸ್ಪಷ್ಟವಾಗಿ ಕಡೆಗಣಿಸಲಾಗಿದೆ. ಇದು ಆಕಸ್ಮಿಕವಾಗಿ ನಡೆದ ತಪ್ಪಲ್ಲ, ಉದ್ದೇಶಪೂರ್ವಕವಾಗಿ ಮಾಡಿರುವ ಕ್ರಮ ಎಂಬುದನ್ನು ಸೂಚಿಸುತ್ತದೆ ಎಂದು ಹೇಳಿದರು.
ಬಹುಪಕ್ಷೀಯ ವ್ಯವಸ್ಥೆಗೆ ಬದ್ಧರಾಗಿದ್ದೇವೆ ಎಂದು ಸಾರ್ವಜನಿಕವಾಗಿ ಹೇಳಿಕೊಳ್ಳುವ ಕೆಲವು ಸದಸ್ಯ ರಾಷ್ಟ್ರಗಳು, ಅದರ ಮೂಲಭೂತ ತತ್ವಗಳನ್ನೇ ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿರುವುದು ದುರದೃಷ್ಟಕರ ಎಂದು ಟೀಕಿಸಿದರು.
ವಿಶ್ವಸಂಸ್ಥೆಯು ಸಾರ್ವಭೌಮ ಸಮಾನತೆ, ಎಲ್ಲರನ್ನೂ ಒಳಗೊಳ್ಳುವಿಕೆ ಮತ್ತು ಬಹುಪಕ್ಷೀಯ ಸಹಕಾರದ ತತ್ವಗಳ ಆಧಾರದ ಮೇಲೆ ಸ್ಥಾಪನೆಯಾಗಿದೆ ಎಂದು ಸ್ಮರಿಸಿದ ಪಟೇಲ್, ಸದಸ್ಯ ರಾಷ್ಟ್ರಗಳ ನಡುವೆ ಭಿನ್ನಾಭಿಪ್ರಾಯಗಳು ಇರುವುದು ಸಹಜ. ಆದರೆ, ಸಾಮಾನ್ಯ ಸಭೆಯ ಮುಂದಿರುವ ವಿಷಯಗಳ ಕುರಿತು ನಡೆಯುವ ಸಮಾಲೋಚನೆಯಿಂದ ನಿರ್ದಿಷ್ಟ ರಾಷ್ಟ್ರಗಳನ್ನು ಬಹಿರಂಗವಾಗಿ ಮತ್ತು ಉದ್ದೇಶಪೂರ್ವಕವಾಗಿ ಹೊರಗಿಡಲು ಅವು ಕಾರಣವಾಗಬಾರದು ಎಂದು ಹೇಳಿದರು.
ಹೊರಗಿಡಲಾದ ನಿಯೋಗಗಳು ಇದೊಂದು ಕೇವಲ ತಾಂತ್ರಿಕ ನವೀಕರಣ ಎಂದು ನಂಬುವಂತೆ ಮಾಡುವ ಪ್ರಯತ್ನಗಳನ್ನು ನಮ್ಮ ನಿಯೋಗ ಬಲವಾಗಿ ವಿರೋಧಿಸುತ್ತದೆ. ಆದರೆ, ಇದು ಕೇವಲ ತಾಂತ್ರಿಕ ಬದಲಾವಣೆಯಾಗಿರಲಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ಬೆಳವಣಿಗೆಯ ಕುರಿತು ತನಿಖೆ ನಡೆಸಿ, ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳುವಂತೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷರನ್ನು ಭಾರತ ಒತ್ತಾಯಿಸಿದೆ.
ಕರಡು ನಿರ್ಣಯದ ವಿಷಯವನ್ನೂ ಪ್ರಶ್ನಿಸಿದ ಭಾರತ, ಇತರ ಸಂಘರ್ಷಗಳಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶ ಹೊಂದಿರುವುದಾಗಿ ನಿರ್ಣಯದಲ್ಲಿ ಹೇಳಲಾಗಿದೆ. ಆದರೆ, ಈ ರೀತಿಯಲ್ಲಿ ಒಐಸಿಯ ಪಾತ್ರವನ್ನು ವಿಸ್ತರಿಸುವ ಅಗತ್ಯವೇನು ಎಂಬುದು ಸ್ಪಷ್ಟವಾಗಿಲ್ಲ. ಒಐಸಿ ಪ್ರಾದೇಶಿಕ ಸಂಘಟನೆಯೂ ಅಲ್ಲ ಎಂದು ಯೋಜನಾ ಪಟೇಲ್ ಹೇಳಿದರು.
ಈ ವರ್ಷದ ಜುಲೈನಲ್ಲಿ ಇಸ್ಲಾಮಾಬಾದ್ನಲ್ಲಿ ನಡೆದ ಒಐಸಿ ಮಹಿಳಾ ವ್ಯವಹಾರಗಳ ಸಚಿವರ ಸಮ್ಮೇಳನದ ಒಂಬತ್ತನೇ ಅಧಿವೇಶನದ ಉಲ್ಲೇಖ ನಿರ್ಣಯದಲ್ಲಿರುವುದಕ್ಕೂ ಭಾರತ ಆಕ್ಷೇಪ ವ್ಯಕ್ತಪಡಿಸಿತು.
ಆ ಸಮ್ಮೇಳನದಲ್ಲಿ ಅಂಗೀಕರಿಸಲಾದ ಘೋಷಣೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಕುರಿತು ಉಲ್ಲೇಖಗಳಿದ್ದವು. ಆ ಘೋಷಣೆ ಮತ್ತು ಸಮ್ಮೇಳನದಲ್ಲಿ ಅಂಗೀಕರಿಸಲಾದ ಸಮಗ್ರ ನಿರ್ಣಯವನ್ನು ಭಾರತ ತಿರಸ್ಕರಿಸುತ್ತದೆ ಎಂದು ಪಟೇಲ್ ಹೇಳಿದರು.
ನನ್ನ ದೇಶದ ಕುರಿತು ಅನಗತ್ಯ ಮತ್ತು ವಾಸ್ತವಾಂಶಗಳಿಗೆ ವಿರುದ್ಧವಾದ ಉಲ್ಲೇಖಗಳನ್ನು ಒಳಗೊಂಡ ದಾಖಲೆಗಳು ಮತ್ತು ಹೇಳಿಕೆಗಳನ್ನು ಈ ನಿರ್ಣಯದಲ್ಲಿ ಸೇರಿಸಲಾಗಿದೆ. ಒಐಸಿ ವೇದಿಕೆಯನ್ನು ಸಂಕುಚಿತ ರಾಜಕೀಯ ಉದ್ದೇಶಗಳಿಗಾಗಿ ನಿರಂತರವಾಗಿ ದುರುಪಯೋಗಪಡಿಸಿಕೊಳ್ಳುತ್ತಿರುವುದನ್ನು ಇಂತಹ ದಾಖಲೆಗಳು ತೋರಿಸುತ್ತವೆ. ಭಾರತದ ಆಂತರಿಕ ವ್ಯವಹಾರಗಳ ಕುರಿತು ಪ್ರತಿಕ್ರಿಯಿಸಲು ಒಐಸಿಗೆ ಯಾವುದೇ ಅಧಿಕಾರ ಅಥವಾ ಹಕ್ಕು ಇಲ್ಲ” ಎಂದು ಹೇಳಿದರು.
ಪಾಕಿಸ್ತಾನದ ಹೆಸರನ್ನು ನೇರವಾಗಿ ಪ್ರಸ್ತಾಪಿಸದೆ ಪರೋಕ್ಷವಾಗಿ ಟೀಕಿಸಿದ ಭಾರತ, ಒಐಸಿಯು ಮತ್ತೊಮ್ಮೆ ತನ್ನ 57 ಸದಸ್ಯ ರಾಷ್ಟ್ರಗಳ ಪೈಕಿ ಒಂದಕ್ಕೆ ವ್ಯವಸ್ಥಿತವಾಗಿ ದುರುಪಯೋಗವಾಗಲು ಅವಕಾಶ ಮಾಡಿಕೊಟ್ಟಿದೆ. ಸುಳ್ಳು ಮತ್ತು ಆಧಾರರಹಿತ ಆರೋಪಗಳ ಮೂಲಕ ಭಾರತದ ವಿರುದ್ಧ ಒಐಸಿ ನಿರ್ಣಯಗಳು ಹಾಗೂ ಘೋಷಣೆಗಳನ್ನು ಅಸ್ತ್ರವಾಗಿ ಬಳಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿತು. ಪಾಕಿಸ್ತಾನವು 57 ಸದಸ್ಯ ರಾಷ್ಟ್ರಗಳ ಒಐಸಿಯ ಸ್ಥಾಪಕ ಹಾಗೂ ಪ್ರಮುಖ ಸದಸ್ಯ ರಾಷ್ಟ್ರವಾಗಿದೆ.
ವಸ್ತುನಿಷ್ಠತೆ, ರಚನಾತ್ಮಕ ಸಂವಾದ ಮತ್ತು ಪರಸ್ಪರ ಗೌರವದ ತತ್ವಗಳನ್ನು ಒಐಸಿ ಎತ್ತಿಹಿಡಿಯಬೇಕು. ಅದರ ನಿರ್ಣಯಗಳು ಸಂಕುಚಿತ ರಾಜಕೀಯ ಕಾರ್ಯಸೂಚಿಗಳನ್ನು ಮುಂದುವರಿಸುವ ಸಾಧನಗಳಾಗದಂತೆ ನೋಡಿಕೊಳ್ಳಬೇಕು ಎಂದು ಪಟೇಲ್ ಒತ್ತಾಯಿಸಿದರು.
ತಮ್ಮ ಧರ್ಮ ಯಾವುದೇ ಆಗಿರಲಿ, ಸಾರ್ವಭೌಮ ರಾಷ್ಟ್ರಗಳು ತಮ್ಮ ನಾಗರಿಕರ ಹಿತಾಸಕ್ತಿಗಳನ್ನು ತಾವೇ ಕಾಪಾಡಿಕೊಳ್ಳುತ್ತವೆ ಎಂಬುದು ಭಾರತದ ನಂಬಿಕೆ. ಒಂದು ಧರ್ಮದ ಅನುಯಾಯಿಗಳ ಹಿತಾಸಕ್ತಿಗಳನ್ನು ಅದೇ ಧರ್ಮದವರು ಮಾತ್ರ ರಕ್ಷಿಸಬಲ್ಲರು ಎಂಬ ಅಭಿಪ್ರಾಯವನ್ನು ನಾವು ಒಪ್ಪುವುದಿಲ್ಲ. ಇಂತಹ ಹಿಂದುಳಿದ ದೃಷ್ಟಿಕೋನಗಳಿಗೆ ಇಂದಿನ ಜಗತ್ತಿನಲ್ಲಿ, ಅದರಲ್ಲೂ ಈ ವೇದಿಕೆಯಲ್ಲಿ, ಯಾವುದೇ ಸ್ಥಾನವಿಲ್ಲ ಎಂದು ಹೇಳಿದರು.
ಮತದಾನದ ವಿವರಣೆ ನೀಡಿದ ಸೈಪ್ರಸ್, ನಿರ್ಣಯದ ಸಂಯೋಜಕ ರಾಷ್ಟ್ರವಾಗಿ ಟರ್ಕಿ ಮಾತುಕತೆ ಪ್ರಕ್ರಿಯೆಯುದ್ದಕ್ಕೂ ಪಾರದರ್ಶಕತೆ ಮತ್ತು ಎಲ್ಲರನ್ನೂ ಒಳಗೊಳ್ಳುವ ಮನೋಭಾವವನ್ನು ಕಾಯ್ದುಕೊಳ್ಳದಿರುವುದಕ್ಕೆ ತೀವ್ರ ವಿಷಾದ ವ್ಯಕ್ತಪಡಿಸಿತು.
ಈ ಪ್ರಕ್ರಿಯೆಗೆ ಸಂಬಂಧಿಸಿದ ಸಂವಹನಗಳಿಂದ ಸೈಪ್ರಸ್ ಅನ್ನು ಪದೇಪದೇ ಹೊರಗಿಡಲಾಗಿದೆ. ಇದರಿಂದ ನಿರ್ಣಯದ ಮಾತುಕತೆಗಳಲ್ಲಿಯೂ ಭಾಗವಹಿಸಲು ಸಾಧ್ಯವಾಗಲಿಲ್ಲ. ನಮ್ಮ ಅತ್ಯುತ್ತಮ ಪ್ರಯತ್ನಗಳು ಮತ್ತು ಮನವಿಗಳ ಹೊರತಾಗಿಯೂ ಹೀಗಾಗಿದೆ. ವಿಶ್ವಸಂಸ್ಥೆಯ ಎಲ್ಲ ಸದಸ್ಯ ರಾಷ್ಟ್ರಗಳನ್ನೂ ಮಾತುಕತೆಯಲ್ಲಿ ಒಳಗೊಳ್ಳುವುದು ಸಂಯೋಜಕ ರಾಷ್ಟ್ರದ ರಾಜಕೀಯ ವಿವೇಚನೆಗೆ ಬಿಟ್ಟ ವಿಚಾರವಲ್ಲ. ಅದು ವಿಶ್ವಸಂಸ್ಥೆಯ ಚಾರ್ಟರ್ನಲ್ಲಿ ಪ್ರತಿಪಾದಿಸಿರುವ ತತ್ವವಾಗಿದೆ ಎಂದು ಸೈಪ್ರಸ್ ಪ್ರತಿನಿಧಿ ಹೇಳಿದರು.
ಗ್ರೀಸ್ ಕೂಡ ಟರ್ಕಿಯ ನೇತೃತ್ವದಲ್ಲಿ ನಡೆದ ಮಾತುಕತೆಗಳ ಕಾರ್ಯವಿಧಾನದ ಕುರಿತು ಗಂಭೀರ ಆತಂಕ ವ್ಯಕ್ತಪಡಿಸಿತು. ಯುರೋಪಿಯನ್ ಒಕ್ಕೂಟವು ಪ್ರಾಮಾಣಿಕವಾಗಿ ಹಲವು ಸಲಹೆ ಮತ್ತು ತಿದ್ದುಪಡಿಗಳನ್ನು ಸಲ್ಲಿಸಿದ್ದರೂ, ಅವುಗಳನ್ನು ಅರ್ಥಪೂರ್ಣವಾಗಿ ಪರಿಗಣಿಸಿಲ್ಲ. ತಿರಸ್ಕರಿಸಲು ಸೂಕ್ತ ವಿವರಣೆಯನ್ನೂ ನೀಡಿಲ್ಲ. ಅಲ್ಲದೆ, ಪರಿಷ್ಕೃತ ಕರಡು ಪ್ರತಿಗಳನ್ನು ಸಮರ್ಪಕ ಸಮಾಲೋಚನೆ ನಡೆಸದೆ ಹಂಚಿಕೊಳ್ಳಲಾಗಿದೆ ಎಂದು ಗ್ರೀಸ್ ಪ್ರತಿನಿಧಿ ದೂರಿದರು.
ಕೆಲವು ನಿಯೋಗಗಳ ಜೊತೆಗೆ ಗ್ರೀಸ್ನ್ನೂ ಕರಡು ಪ್ರತಿಗಳ ಹಂಚಿಕೆಯಿಂದ ಹೊರಗಿಟ್ಟಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅವರು, ಇಂತಹ ಕ್ರಮಗಳು ಸಾಮಾನ್ಯ ಸಭೆಯ ಮಾತುಕತೆಗಳಲ್ಲಿ ನಿರೀಕ್ಷಿಸಲಾಗುವ ಪಾರದರ್ಶಕತೆ, ಒಳಗೊಳ್ಳುವಿಕೆ ಮತ್ತು ಪ್ರಾಮಾಣಿಕತೆಯ ಮಾನದಂಡಗಳಿಗೆ ವಿರುದ್ಧವಾಗಿವೆ. ಇವು ಸದಸ್ಯ ರಾಷ್ಟ್ರಗಳ ಅಭಿಪ್ರಾಯಗಳನ್ನು ಪ್ರತಿನಿಧಿಸುವುದಿಲ್ಲ ಎಂದು ಹೇಳಿದರು.
ಭವಿಷ್ಯದಲ್ಲಿ ಒಐಸಿ ನಿರ್ಣಯದ ಪರಿಷ್ಕೃತ ಕರಡುಗಳಲ್ಲಿ ಅತಿಯಾದ ಮತ್ತು ಪುನರಾವರ್ತಿತ ಭಾಷೆ ಹಾಗೂ ವಿವಾದಾತ್ಮಕ ವಿಚಾರಗಳನ್ನು ಕೈಬಿಟ್ಟು, ಒಮ್ಮತ ಸಾಧಿಸಲು ನೆರವಾಗುವ ನೇರ ಮತ್ತು ಸ್ಪಷ್ಟ ಸಹಕಾರದ ಕ್ಷೇತ್ರಗಳತ್ತ ಗಮನಹರಿಸಬೇಕು ಎಂದು ಅಮೆರಿಕ ಆಶಯ ವ್ಯಕ್ತಪಡಿಸಿತು.
ಯುರೋಪಿಯನ್ ಒಕ್ಕೂಟದ ಪರವಾಗಿ ಮತದಾನದ ವಿವರಣೆ ನೀಡಿದ ಐರ್ಲೆಂಡ್, ಮಾತುಕತೆಗಳಲ್ಲಿ ಭಾಗವಹಿಸಲು ಮನವಿ ಮಾಡಿದರೂ ಪ್ರಕ್ರಿಯೆಯುದ್ದಕ್ಕೂ ಪಾರದರ್ಶಕತೆ ಮತ್ತು ಒಳಗೊಳ್ಳುವಿಕೆಯ ಕೊರತೆ ಕಂಡುಬಂದಿದೆ ಎಂದು ವಿಷಾದಿಸಿತು. ಯುರೋಪಿಯನ್ ಒಕ್ಕೂಟ ಮತ್ತು ಅದರ ಹಲವು ಸದಸ್ಯ ರಾಷ್ಟ್ರಗಳನ್ನು ಸಂಬಂಧಿತ ಸಂವಹನಗಳಿಂದ ಹೊರಗಿಡಲಾಗಿತ್ತು. ಇದರಿಂದ ಮಾತುಕತೆಗಳಲ್ಲಿ ಅರ್ಥಪೂರ್ಣವಾಗಿ ಭಾಗವಹಿಸುವ ಅವಕಾಶವೂ ಅವರಿಗೆ ದೊರೆಯಲಿಲ್ಲ ಎಂದು ತಿಳಿಸಿತು.