ಅಮೆರಿಕ: ಓಹಿಯೋದಲ್ಲಿ ಹಿಂದೂ ದೇವಾಲಯದ ಮೇಲೆ ದುಷ್ಕರ್ಮಿಗಳಿಂದ ದಾಳಿ! ಭಾರಿ ಹಾನಿ, Video

ಅಮೆರಿಕದಲ್ಲಿ ಭಾರತೀಯ ಪ್ರಜೆಗಳು ಸೇರಿದಂತೆ ಅನೇಕರು ಹಿಂಸಾಚಾರವನ್ನು ಎದುರಿಸುತ್ತಿರುವ ಸಂದರ್ಭದಲ್ಲೇ ಈ ಘಟನೆ ನಡೆದಿದೆ.
Hindu temple attacked
ಹಾನಿಗೀಡಾದ ಹಿಂದೂ ದೇವಾಲಯ
Updated on: 

ಓಹಿಯೋ: ಅಮೆರಿಕದಲ್ಲಿ ಹಿಂದೂ ದೇವಾಲಯದ ಮೇಲೆ ದಾಳಿ ನಡೆದಿದೆ. ಓಹಿಯೋದಲ್ಲಿರುವ ಹಿಂದೂ ದೇವಾಲಯವೊಂದರ ಮೇಲೆ ದುಷ್ಕರ್ಮಿಗಳು ಇಟ್ಟಿಗೆಗಳನ್ನು ಎಸೆದಿದ್ದಾರೆ. ಇದರಿಂದಾಗಿ ಕಟ್ಟಡಕ್ಕೆ ಭಾರಿ ಹಾನಿಯಾಗಿದೆ ಎಂದು ಅಮೆರಿಕದ ಲಾಭರಹಿತ ಸಂಸ್ಥೆಯಾದ 'ಹಿಂದೂ ಅಮೆರಿಕನ್ ಫೌಂಡೇಶನ್' (HAF) ಮಾಹಿತಿ ನೀಡಿದೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಘಟನೆ ಕುರಿತು ವಿವರ ನೀಡಿರುವ ಹಿಂದೂ ಅಮೆರಿಕನ್ ಫೌಂಡೇಶನ್, ಓಹಿಯೋದಲ್ಲಿ ಹಿಂದೂ ದೇವಾಲಯದ ಮೇಲೆ ದಾಳಿ ನಡೆದಿದೆ. ಮಧ್ಯಾಹ್ನ 1:30 ರ ಸುಮಾರಿಗೆ, ಓಹಿಯೋದ ರಿಚ್‌ಮಂಡ್ ಹೈಟ್ಸ್‌ನಲ್ಲಿರುವ 'ಶ್ರೀ ಸ್ವಾಮಿನಾರಾಯಣ ವಡ್ತಾಲ್ ಧಾಮ್ ಹಿಂದೂ ದೇವಾಲಯದ ಮೇಲೆ ದುಷ್ಕರ್ಮಿಗಳು ಇಟ್ಟಿಗೆಗಳನ್ನು ಎಸೆದು ದಾಳಿ ನಡೆಸಿದ್ದಾರೆ, ಇದರಿಂದ ದೇವಾಲಯಕ್ಕೆ ಭಾರಿ ಹಾನಿಯಾಗಿದೆ ಎಂದು ತಿಳಿಸಿದೆ.

ಅಮೆರಿಕದಲ್ಲಿ ಭಾರತೀಯ ಪ್ರಜೆಗಳು ಸೇರಿದಂತೆ ಅನೇಕರು ಹಿಂಸಾಚಾರವನ್ನು ಎದುರಿಸುತ್ತಿರುವ ಸಂದರ್ಭದಲ್ಲೇ ಈ ಘಟನೆ ನಡೆದಿದೆ. ಘಟನೆಯ ಸಿಸಿಟಿವಿ (ನಿಗಾ) ದೃಶ್ಯಾವಳಿ ಲಭ್ಯವಿದ್ದು, ಅಧಿಕಾರಿಗಳು ಅದನ್ನು ಪರಿಶೀಲಿಸುತ್ತಿದ್ದಾರೆ.

ಎಫ್‌ಬಿಐ (FBI) ಮತ್ತು ನಾಗರಿಕ ಹಕ್ಕುಗಳ ವಿಭಾಗಕ್ಕೆ (Civil Rights division) ಮಾಹಿತಿ ನೀಡಲಾಗಿದೆ. ದೇವಾಲಯದ ಆಡಳಿತ ಮಂಡಳಿಯೊಂದಿಗೆ ಸಂಪರ್ಕದಲ್ಲಿದ್ದು, ಅಗತ್ಯವಿರುವ ಎಲ್ಲ ರೀತಿಯ ನೆರವನ್ನು ನೀಡಲಾಗುತ್ತಿದೆ ಎಂದು HAF ತಿಳಿಸಿದೆ.

Hindu temple attacked
ಭಯ ಸೃಷ್ಟಿಸಲು ಹಿಂದೂ ದೇಗುಲದ ಮೇಲೆ ದಾಳಿ: ಕೆನಡಾದಲ್ಲಿ ಧ್ವಂಸಗೊಂಡ ದೇವಾಲಯದ ಅರ್ಚಕ

ಹಿಂದೂ ಅಮೆರಿಕನ್ ಸಮುದಾಯದ ವಿರುದ್ಧ ದ್ವೇಷ ಪೂರಿತ ಪ್ರಚಾರ ನಡೆಯುತ್ತಿರುವ ಸಮಯದಲ್ಲಿ ಈ ಘಟನೆ ನಡೆದಿದೆ. ಆದ್ದರಿಂದ, ತಪ್ಪಿತಸ್ಥರನ್ನು ಬಂಧಿಸುವುದಕ್ಕೆ ಕಾನೂನು ಜಾರಿ ಸಂಸ್ಥೆಗಳು ಹೆಚ್ಚಿನ ಆದ್ಯತೆ ನೀಡಬೇಕೆಂದು ಒತ್ತಾಯಿಸುತ್ತೇವೆ. ಅಲ್ಲದೆ, ಭಾರತೀಯ ಮತ್ತು ಹಿಂದೂ ಅಮೆರಿಕನ್ ಸಮುದಾಯಗಳ ವಿರುದ್ಧದ ದ್ವೇಷಪೂರಿತ ಹೇಳಿಕೆಗಳನ್ನು ಸ್ಪಷ್ಟವಾಗಿ ಖಂಡಿಸುವಂತೆ ನಾವು ದೇಶದ ಚುನಾಯಿತ ನಾಯಕರು ಹಾಗೂ ಸರ್ಕಾರಿ ಸಂಸ್ಥೆಗಳಿಗೆ ಕರೆ ನೀಡುತ್ತೇವೆ ಎಂದು HAF ಪೋಸ್ಟ್ ನಲ್ಲಿ ಹೇಳಿದೆ.

X
Kannada Prabha
www.kannadaprabha.com