

ಜಕಾರ್ತ: ಜಲಪಾತದಲ್ಲಿ ಸ್ನಾನ ಮಾಡುತ್ತಿದ್ದಾಗ ಕಾಲು ಜಾರಿ ಎತ್ತರದಿಂದ ಕೆಳಕ್ಕೆ ಬಿದ್ದ 25 ವರ್ಷದ ಯುವತಿಯೊಬ್ಬರು ಮೃತಪಟ್ಟಿರುವ ಘಟನೆ ಇಂಡೋನೇಷ್ಯಾದ ಪಶ್ಚಿಮ ಸುಮಾತ್ರ ಪ್ರಾಂತ್ಯದ ರೋಬೊ ಹರೌ ಜಲಪಾತದಲ್ಲಿ ಸಂಭವಿಸಿದೆ.
ಜಲಪಾತದ ಮೇಲೆ ಯುವತಿ ಮಲಗಿಕೊಂಡು ಸ್ನಾನ ಮಾಡುತ್ತಿದ್ದಾಗ ನೀರಿನ ವೇಗ ಹೆಚ್ಚಾಗಿ ಆಕೆ ಜಾರಿಕೊಂಡು ಹೋಗಿ ಬಿದ್ದಿದ್ದಾಳೆ. ಈ ವೇಳೆ ಅಲ್ಲಿಯೇ ಇದ್ದ ಆಕೆಯ ಸ್ನೇಹಿತರು ನಡೆಸಿದ ಪ್ರಯತ್ನಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮೃತ ಯುವತಿಯನ್ನು 25 ವರ್ಷದ ವಿಂಡಿ ರಹ್ಮಾ ಪುತ್ರಿ ಎಂದು ಗುರುತಿಸಲಾಗಿದ್ದು, ಆಕೆ ಪಡಾಂಗ್ ಪರಿಯಾಮನ್ ಪ್ರದೇಶದ ನಿವಾಸಿಯಾಗಿದ್ದರು ಎಂದು ತಿಳಿದುಬಂದಿದೆ.
ಅಧಿಕಾರಿಗಳು ನೀಡಿರುವ ಮಾಹಿತಿಯಂತೆ ಅಕ್ಟೋಬರ್ 15ರ ಗುರುವಾರ ಮಧ್ಯಾಹ್ನ ಲಿಮಾಪುಲುಹ್ ಕೊಟಾ ರೀಜೆನ್ಸಿಯಲ್ಲಿರುವ ರೋಬೊ ಜಲಪಾತಕ್ಕೆ ಸ್ನೇಹಿತರೊಂದಿಗೆ ಬಂದಿದ್ದ ವಿಂಡಿ ಸ್ನಾನ ಮಾಡುವಾಗ ಜಾರಿಕೊಂಡು ಹೋಗಿದ್ದಾಳೆ. ಜಲಪಾತದಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ವಿಂಡಿ ಆಯತಪ್ಪಿ ಎತ್ತರದಿಂದ ಕೆಳಕ್ಕೆ ಬಿದ್ದಿದ್ದಾರೆ.
ತೀವ್ರ ಶೋಧದ ಬಳಿಕ ಮರುದಿನ ಮೃತದೇಹ ಪತ್ತೆ
ಬಳಿಕ ನೀರಿನ ಸೆಳೆತಕ್ಕೆ ಸಿಲುಕಿದ ಅವರನ್ನು ಪತ್ತೆಹಚ್ಚಲು ರಕ್ಷಣಾ ತಂಡಗಳು ಶೋಧ ಕಾರ್ಯಾಚರಣೆ ಆರಂಭಿಸಿದ್ದವು. ಪಡಾಂಗ್ ಎ ವರ್ಗದ ಶೋಧ ಮತ್ತು ರಕ್ಷಣಾ ಕಚೇರಿಯ ಮುಖ್ಯಸ್ಥ ಅಬ್ದುಲ್ ಮಲಿಕ್ ಅವರು ಯುವತಿ ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ ಎಂದು ವರದಿಯಾಗಿದೆ.
ರೋಚಕ ಕಾರ್ಯಾಚರಣೆ
ಗುರುವಾರ ಸಂಜೆ ಸುಮಾರು 5.27ಕ್ಕೆ ಘಟನೆಯ ಕುರಿತು ರಕ್ಷಣಾ ಇಲಾಖೆಗೆ ಮಾಹಿತಿ ಲಭಿಸಿತ್ತು. ಮಧ್ಯಾಹ್ನ ಸುಮಾರು 3.45ಕ್ಕೆ ಯುವತಿ ಜಲಪಾತದಲ್ಲಿ ಬಿದ್ದಿರುವುದಾಗಿ ವರದಿಯಾಗಿತ್ತು. ಮಾಹಿತಿ ದೊರೆತ ಬಳಿಕ ರಕ್ಷಣಾ ತಂಡಗಳು ಸ್ಥಳದಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಿದವು.
ಸುಮಾರು 570 ಮೀಟರ್ ವ್ಯಾಪ್ತಿಯಲ್ಲಿ ಶೋಧ ನಡೆಸಿದ ತಂಡಕ್ಕೆ ಅಕ್ಟೋಬರ್ 16ರ ಶುಕ್ರವಾರ ಬೆಳಗ್ಗೆ 10.45ಕ್ಕೆ ಯುವತಿಯ ಮೃತದೇಹ ಪತ್ತೆಯಾಗಿದೆ. ಬಳಿಕ ಮೃತದೇಹವನ್ನು ಸ್ಥಳದಿಂದ ಹೊರತರಲಾಯಿತು ಎಂದು ಅಬ್ದುಲ್ ಮಲಿಕ್ ತಿಳಿಸಿದ್ದಾರೆ.
ವೈರಲ್ ಆದ ವಿಡಿಯೋ
ಯುವತಿ ಜಲಪಾತದಲ್ಲಿ ಆಯತಪ್ಪಿ ಬೀಳುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಘಟನೆಯ ವಿಡಿಯೋ ಕಂಡ ಅನೇಕರು ಆಘಾತ ವ್ಯಕ್ತಪಡಿಸಿದ್ದು, ಮೃತ ಯುವತಿಯ ಕುಟುಂಬದವರಿಗೆ ಹಾಗೂ ಸ್ನೇಹಿತರಿಗೆ ಸಂತಾಪ ಸೂಚಿಸಿದ್ದಾರೆ.
ವಿಡಿಯೋದಲ್ಲಿರುವ ಜಲಪಾತದ ಕಡಿದಾದ ಭೂಪ್ರದೇಶ ಮತ್ತು ಅಪಾಯಕಾರಿ ಪರಿಸ್ಥಿತಿಯ ಬಗ್ಗೆ ಕೆಲವರು ಕಳವಳ ವ್ಯಕ್ತಪಡಿಸಿದ್ದಾರೆ. ಯುವತಿ ಬಿದ್ದ ಘಟನೆಯನ್ನು ಕಣ್ಣಾರೆ ಕಂಡ ಸ್ನೇಹಿತರ ಮಾನಸಿಕ ಸ್ಥಿತಿಯನ್ನು ನೆನೆದು ಹಲವರು ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ, ಯುವತಿ ನಿಖರವಾಗಿ ಯಾವ ಕಾರಣಕ್ಕೆ ಕಾಲು ಜಾರಿ ಬಿದ್ದಿದ್ದಾರೆ ಎಂಬುದು ಲಭ್ಯವಿರುವ ಮಾಹಿತಿಯಿಂದ ಸ್ಪಷ್ಟವಾಗಿಲ್ಲ.