

ಇಸ್ಲಮಾಬಾದ್: ಭಾರತವು ಪ್ರಾದೇಶಿಕ ಸ್ಥಿರತೆಯನ್ನು ದುರ್ಬಲಗೊಳಿಸಲು ನಿರಂತರ ಪ್ರಯತ್ನವನ್ನು ಮಾಡುತ್ತಿದೆ ಎಂದು ಪಾಕಿಸ್ತಾನದ ಹಿರಿಯ ಪರಮಾಣು ಶಸ್ತ್ರಾಸ್ತ್ರ ಸಲಹೆಗಾರರೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.
ಟಿಟಿಪಿ (TTP) ಮತ್ತು ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (BLA) ಯಂತಹ ಭಯೋತ್ಪಾದಕ ಸಂಘಟನೆಗಳಿಗೆ ಬೆಂಬಲ ನೀಡುವ ಮೂಲಕ ಭಾರತವು ಭಯೋತ್ಪಾದನೆಯನ್ನು ಪ್ರಚೋದಿಸುತ್ತಿದೆ ಎಂದು ಪಾಕಿಸ್ತಾನದ ನ್ಯಾಷನಲ್ ಕಮಾಂಡ್ ಅಥಾರಿಟಿ (NCA) ಸಲಹೆಗಾರ ನಿವೃತ್ತ ಲೆ. ಜನರಲ್ ಮಝರ್ ಜಮೀಲ್ ಆರೋಪಿಸಿದ್ದಾರೆ.
ಲಂಡನ್ನ ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಸ್ಟ್ರಾಟೆಜಿಕ್ ಸ್ಟಡೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತವು ತನ್ನ ನೀತಿಯ ಒಂದು ಸಾಧನವಾಗಿ ಭಯೋತ್ಪಾದನೆಯನ್ನು ರಫ್ತು ಮಾಡುತ್ತಿದೆ ಮತ್ತು ಪಾಕಿಸ್ತಾನದಲ್ಲಿ ಅಸ್ಥಿರತೆಯನ್ನು ಸೃಷ್ಟಿಸಲು 'ದೋವಲ್ ಸಿದ್ಧಾಂತ'ವನ್ನು (Doval doctrine) ಬಹಿರಂಗವಾಗಿ ಅನುಷ್ಠಾನಗೊಳಿಸುತ್ತಿದೆ" ಎಂದು ಆರೋಪಿಸಿದ್ದಾರೆ.
ಅಕ್ಟೋಬರ್ 13 ರಂದು ಲಂಡನ್‌ನ 'ಇಂಟರ್ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಸ್ಟ್ರಾಟೆಜಿಕ್ ಸ್ಟಡೀಸ್' ನಲ್ಲಿ ಮಾತನಾಡಿದ ಜಮೀಲ್, 1971 ರಲ್ಲಿ 'ಮುಕ್ತಿ ಬಾಹಿನಿ'ಗೆ ಮತ್ತು 1980 ರ ದಶಕದಲ್ಲಿ 'ಎಲ್‌ಟಿಟಿಇ' ಗೆ ಭಾರತ ನೀಡಿದ ಬೆಂಬಲವನ್ನು ಹಾಗೂ ಅಫ್ಘಾನಿಸ್ತಾನದಲ್ಲಿ ಅಂತರರಾಷ್ಟ್ರೀಯ ಭದ್ರತಾ ನೆರವು ಕಾರ್ಯಾಚರಣೆಯ (2001-14) ಸಂದರ್ಭದಲ್ಲಿ ಅಫ್ಘಾನಿಸ್ತಾನ-ಪಾಕಿಸ್ತಾನ ಗಡಿಯಲ್ಲಿ ಭಾರತವು ಆರು ದೂತಾವಾಸ ಕಚೇರಿಗಳನ್ನು ತೆರೆದಿದ್ದು, ಭಯೋತ್ಪಾದನೆಗೆ ಭಾರತ ನೀಡಿದ ಹಿಂದಿನ ಬೆಂಬಲಕ್ಕೆ ಸಾಕ್ಷ್ಯಗಳೆಂದು ಉಲ್ಲೇಖಿಸಿದ್ದಾರೆ.
ದಕ್ಷಿಣ ಏಷ್ಯಾದ 'ಟ್ರ್ಯಾಕ್ 1.5' ಕಾರ್ಯಾಗಾರದಲ್ಲಿ ಜಮೀಲ್ ಪ್ರಮುಖ ಭಾಷಣ ಮಾಡಿದರು. ಪರೋಕ್ಷ ಟೀಕೆಗಳು, ಆಧಾರರಹಿತ ಆರೋಪಗಳು ಮತ್ತು ಅರ್ಧಸತ್ಯಗಳಿಂದ ಕೂಡಿದ ತಮ್ಮ ಭಾಷಣದಲ್ಲಿ, 'ಆಪರೇಷನ್ ಸಿಂದೂರ್' ಸಂದರ್ಭದಲ್ಲಿ ಭಾರತವು 'ದ್ವಿ-ಸಾಮರ್ಥ್ಯದ' ಬ್ರಹ್ಮೋಸ್ ಕ್ಷಿಪಣಿಗಳನ್ನು ಬಳಸಿದೆ ಎಂದು ಜಮೀಲ್ ಆರೋಪಿಸಿದರು.
ಅಂದರೆ, ಈ ಕ್ಷಿಪಣಿಗಳು ಪರಮಾಣು ಮತ್ತು ಸಾಂಪ್ರದಾಯಿಕ ಸಿಡಿತಲೆಗಳೆರಡನ್ನೂ ಹೊತ್ತೊಯ್ಯಬಲ್ಲವು ಎಂದು ಅವರು ಹೇಳಿದ್ದಾರೆ. ಆದರೆ, ಇದು ಸಂಪೂರ್ಣ ಸುಳ್ಳು ಆರೋಪವಾಗಿದೆ, ಬ್ರಹ್ಮೋಸ್ ಕ್ಷಿಪಣಿಗಳು ಕೇವಲ ಸಾಂಪ್ರದಾಯಿಕ ಸಿಡಿತಲೆಗಳನ್ನು ಮಾತ್ರ ಹೊತ್ತೊಯ್ಯಬಲ್ಲವು ಮತ್ತು ಇವು ಭಾರತದ 'ಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್'ನ ಭಾಗವಾಗಿಲ್ಲ.