

ಟೆಹ್ರಾನ್: ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧವನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಪಾಕಿಸ್ತಾನ ನಡೆಸುತ್ತಿರುವ ಸಂಧಾನ ಪ್ರಯತ್ನಕ್ಕೆ ಮತ್ತೊಂದು ಹಿನ್ನಡೆಯಾಗಿದ್ದು, ಯಾವುದೇ ಕಾರಣಕ್ಕೂ ಒಂಚೂರು ಯುರೇನಿಯಂ ಹೊರಗೋಗಲ್ಲ ಎಂದು ಇರಾನ್ ಖಡಕ್ ಮಾತು ಹೇಳಿದೆ.
ಇರಾನ್ ತನ್ನ ದೇಶದಲ್ಲಿ ಸಂಗ್ರಹಿಸಿರುವ ಸಂವರ್ಧಿತ ಯುರೇನಿಯಂ ಅನ್ನು ಮೂರನೇ ದೇಶಕ್ಕೆ ವರ್ಗಾಯಿಸುವ ಪ್ರಸ್ತಾಪವನ್ನು ತಿರಸ್ಕರಿಸಿದ್ದು, ಪರಮಾಣು ವಸ್ತುಗಳ ಒಂದೇ ಒಂದು ಕಣವನ್ನೂ ದೇಶದಿಂದ ಹೊರಗೆ ಕಳುಹಿಸಲು ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಇರಾನ್‌ಗೆ ಭೇಟಿ ನೀಡಿರುವ ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರೊಂದಿಗೆ ನಡೆದ ಮಾತುಕತೆ ವೇಳೆ, ಇರಾನ್‌ನ ಸುಪ್ರೀಂ ನ್ಯಾಷನಲ್ ಸೆಕ್ಯುರಿಟಿ ಕೌನ್ಸಿಲ್ ಕಾರ್ಯದರ್ಶಿ ಮೊಹ್ಸೆನ್ ರೆಜಾಯಿ ಈ ಸಂದೇಶ ನೀಡಿದ್ದಾರೆ.
ಅಮೆರಿಕ–ಇರಾನ್ ಸಂಘರ್ಷಕ್ಕೆ ಅಂತ್ಯ ಹಾಡುವ ಪ್ರಯತ್ನದ ಭಾಗವಾಗಿ, ಇರಾನ್ ತನ್ನ ಸಂವರ್ಧಿತ ಯುರೇನಿಯಂನ ಒಂದು ಭಾಗವನ್ನು ಮತ್ತೊಂದು ದೇಶಕ್ಕೆ ವರ್ಗಾಯಿಸಬೇಕು ಎಂದು ಪಾಕಿಸ್ತಾನ ಪ್ರಸ್ತಾಪಿಸಿತ್ತು.
“ಸಂವರ್ಧಿತ ಪರಮಾಣು ವಸ್ತುಗಳ ಒಂದು ಸಣ್ಣ ಪ್ರಮಾಣವೂ ಇರಾನ್‌ನಿಂದ ಹೊರಹೋಗುವುದಿಲ್ಲ” ಎಂದು ರೆಜಾಯಿ ಖಡಕ್ ಆಗಿ ಹೇಳಿದ್ದಾರೆ. ಈ ವಸ್ತುಗಳು ಇರಾನ್ ಜನರ ಪ್ರಮುಖ ಆಸ್ತಿ ಮತ್ತು ರಾಷ್ಟ್ರೀಯ ಸಂಪತ್ತು. ಅವುಗಳನ್ನು ದೇಶದೊಳಗೇ ಬಳಕೆ ಮಾಡಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಅಮೆರಿಕದೊಂದಿಗೆ ಮಾತುಕತೆಗೆ ಇರಾನ್ ಷರತ್ತು
ಅಮೆರಿಕ ವಿಶ್ವಾಸ ಮೂಡಿಸುವಂತಹ ಮಹತ್ವದ ಕ್ರಮಗಳನ್ನು ಕೈಗೊಳ್ಳುವವರೆಗೆ ಅದರೊಂದಿಗೆ ಯಾವುದೇ ಮಾತುಕತೆ ನಡೆಸುವುದಿಲ್ಲ ಎಂದು ರೆಜಾಯಿ ಹೇಳಿದ್ದಾರೆ. ಇರಾನ್ ವಿಧಿಸಿರುವ ಷರತ್ತುಗಳನ್ನು ಈಡೇರಿಸುವ ಮೂಲಕವೇ ಈ ಪ್ರಕ್ರಿಯೆ ಆರಂಭವಾಗಬೇಕು ಎಂದು ಅವರು ಒತ್ತಿಹೇಳಿದ್ದಾರೆ.
ಇರಾನ್‌ನ ಮುಖ್ಯ ಸಂಧಾನಕಾರ ಹಾಗೂ ಸಂಸತ್ ಸ್ಪೀಕರ್ ಮೊಹಮ್ಮದ್ ಬಾಘರ್ ಗಾಲಿಬಾಫ್ ಮತ್ತು ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಕೂಡ ಅಸಿಮ್ ಮುನೀರ್ ಅವರೊಂದಿಗೆ ನಡೆದ ಸಭೆಗಳಲ್ಲಿ ಇದೇ ರೀತಿಯ ನಿಲುವು ವ್ಯಕ್ತಪಡಿಸಿದ್ದಾರೆ. ಅಮೆರಿಕದ ಬೆದರಿಕೆಗಳ ನಡುವೆಯೇ ಮಾತುಕತೆ ನಡೆಸುವ ಪ್ರಸ್ತಾಪವನ್ನು ಪೆಜೆಶ್ಕಿಯಾನ್ ತಿರಸ್ಕರಿಸಿದ್ದಾರೆ.
“ಅಮೆರಿಕ ಮೊದಲು ಬೆದರಿಕೆಗಳನ್ನು ಹಿಂಪಡೆಯಬೇಕು ಮತ್ತು ನಿರ್ಬಂಧಗಳನ್ನು ತೆಗೆದುಹಾಕಬೇಕು. ಆ ಬಳಿಕವಷ್ಟೇ ನಾವು ಮಾತುಕತೆ ನಡೆಸಬಹುದು” ಎಂದು ಅವರು ಹೇಳಿದ್ದಾರೆ. “ಇಂದು ನಮ್ಮ ದೇಶದ ಜನರಿಗೆ ಅಮೆರಿಕದ ಮೇಲೆ ನಂಬಿಕೆ ಇಲ್ಲ. ನಾವು ಮಾತುಕತೆಗೆ ಮುಂದಾದರೆ, ಅಮೆರಿಕ ಮತ್ತೆ ನಮ್ಮ ಮೇಲೆ ದಾಳಿ ನಡೆಸಬಹುದು ಎಂಬ ಆತಂಕ ಅವರಲ್ಲಿದೆ” ಎಂದು ಇರಾನ್ ಅಧ್ಯಕ್ಷರು ತಿಳಿಸಿದ್ದಾರೆ.
'ಏಳು ಷರತ್ತುಗಳನ್ನು ಈಡೇರಿಸದಿದ್ದರೆ ನಂಬಿಕೆ ಸಾಧ್ಯವಿಲ್ಲ'
ಅಮೆರಿಕದೊಂದಿಗೆ ಮಾತುಕತೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಗಾಲಿಬಾಫ್, “ನಮ್ಮ ಬಳಿ ಹೊಸದಾಗಿ ಹೇಳಲು ಏನೂ ಇಲ್ಲ. ಏಳು ಷರತ್ತುಗಳನ್ನು ಈಡೇರಿಸುವವರೆಗೆ ಅಮೆರಿಕ ಇರಾನ್‌ನ ವಿಶ್ವಾಸ ಗಳಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ. ಅಮೆರಿಕದ ಬೆದರಿಕೆಗಳು ಮತ್ತು ಸೇನಾ ಚಟುವಟಿಕೆಗಳಿಂದ ಇರಾನ್‌ನ ಕಾರ್ಯತಂತ್ರದ ನಿರ್ಧಾರಗಳ ಮೇಲೆ ಯಾವುದೇ ಪರಿಣಾಮ ಬೀರಲು ಸಾಧ್ಯವಿಲ್ಲ ಎಂದೂ ಅವರು ಹೇಳಿದ್ದಾರೆ.
ಪಾಕಿಸ್ತಾನದ ಸಂಧಾನ ಪ್ರಯತ್ನಕ್ಕೆ ಹಿನ್ನಡೆ
ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷದಲ್ಲಿ ಪಾಕಿಸ್ತಾನ ಪ್ರಮುಖ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಿದೆ. ಆದರೆ, ಜೂನ್‌ನಲ್ಲಿ ಪಾಕಿಸ್ತಾನದ ಬೆಂಬಲದೊಂದಿಗೆ ಏರ್ಪಟ್ಟಿದ್ದ ಕದನ ವಿರಾಮವು ಸಂಘರ್ಷಕ್ಕೆ ಶಾಶ್ವತ ಪರಿಹಾರದ ಚೌಕಟ್ಟನ್ನು ರೂಪಿಸಲು ವಿಫಲವಾಗಿತ್ತು.
ಬಳಿಕ ಆ ಕದನ ವಿರಾಮವೂ ಮುರಿದುಬಿದ್ದಿದ್ದರಿಂದ ಸಂಧಾನ ಪ್ರಯತ್ನಗಳು ಬಹುತೇಕ ಸ್ಥಗಿತಗೊಂಡಿವೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಸಂದರ್ಭದಲ್ಲಿ ವಾಷಿಂಗ್ಟನ್ ಮತ್ತು ತೆಹ್ರಾನ್ ನಡುವೆ ನಡೆದ ಇತ್ತೀಚಿನ ಪರೋಕ್ಷ ಮಾತುಕತೆಗಳೂ ಯಾವುದೇ ಮಹತ್ವದ ಪ್ರಗತಿಯನ್ನು ಸಾಧಿಸಲಿಲ್ಲ.
ಇರಾನ್‌ನ ಬೇಡಿಕೆಗಳೇನು?
ಫೆಬ್ರವರಿ ಅಂತ್ಯದಲ್ಲಿ ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ಸರಣಿ ಮಾರಕ ದಾಳಿಗಳನ್ನು ನಡೆಸಿದ ಬಳಿಕ ಮಧ್ಯಪ್ರಾಚ್ಯದಲ್ಲಿ ಯುದ್ಧ ತೀವ್ರಗೊಂಡಿತು. ಇರಾನ್‌ನ ಪರಮಾಣು ಕಾರ್ಯಕ್ರಮದ ಕುರಿತು ಅಮೆರಿಕ ಮತ್ತು ತೆಹ್ರಾನ್ ನಡುವೆ ಮಾತುಕತೆ ನಡೆಯುತ್ತಿದ್ದ ಸಂದರ್ಭದಲ್ಲೇ ಈ ದಾಳಿಗಳು ನಡೆದಿದ್ದವು. ಸಂಘರ್ಷ ನಿಲ್ಲಿಸುವ ನಿಟ್ಟಿನಲ್ಲಿ ಇರಾನ್ ಹಲವು ಬೇಡಿಕೆಗಳನ್ನು ಮುಂದಿಟ್ಟಿದೆ. ಅವುಗಳಲ್ಲಿ ಮಧ್ಯಪ್ರಾಚ್ಯದಾದ್ಯಂತ ಕದನ ವಿರಾಮ ಜಾರಿಗೊಳಿಸುವುದು, ವಿದೇಶಗಳಲ್ಲಿ ಸ್ಥಗಿತಗೊಳಿಸಲಾಗಿರುವ ಇರಾನ್‌ನ ಆಸ್ತಿಗಳನ್ನು ಮುಕ್ತಗೊಳಿಸುವುದು ಮತ್ತು ತನ್ನ ತೈಲ ವಲಯದ ಮೇಲಿನ ನಿರ್ಬಂಧಗಳನ್ನು ತೆರವುಗೊಳಿಸುವುದು ಪ್ರಮುಖವಾಗಿವೆ.
ಶೇ.60ರಷ್ಟು ಸಂವರ್ಧಿತವಾಗಿರುವ ಯುರೇನಿಯಂ ಅನ್ನು ಯಾವುದೇ ದೇಶಕ್ಕೆ ಹಸ್ತಾಂತರಿಸುವುದಿಲ್ಲ ಎಂಬ ನಿಲುವನ್ನು ಇರಾನ್ ಈ ಹಿಂದೆಯೇ ಸ್ಪಷ್ಟಪಡಿಸಿತ್ತು. ಪರಮಾಣು ಬಾಂಬ್ ತಯಾರಿಕೆಗೆ ಬಳಸಬಹುದಾದ ಶೇ.90ರಷ್ಟು ಸಂವರ್ಧನೆಯ ಮಟ್ಟಕ್ಕೆ ಇದು ಹತ್ತಿರವಾಗಿದೆ. ಆದರೆ, ಈ ಯುರೇನಿಯಂ ಅನ್ನು ಇರಾನ್‌ನ ಗಡಿಯೊಳಗೇ ಅದರ ಸಂವರ್ಧನೆಯ ಮಟ್ಟವನ್ನು ಕಡಿಮೆ ಮಾಡುವ ಸಾಧ್ಯತೆಯನ್ನು ತೆಹ್ರಾನ್ ಈ ಹಿಂದೆ ಸೂಚಿಸಿತ್ತು.
ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ತಯಾರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿರುವ ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳು ಹಲವು ಸುತ್ತಿನ ನಿರ್ಬಂಧಗಳನ್ನು ವಿಧಿಸಿವೆ. ಆದರೆ, ಪರಮಾಣು ಅಸ್ತ್ರಗಳನ್ನು ಅಭಿವೃದ್ಧಿಪಡಿಸುವ ಉದ್ದೇಶವಿದೆ ಎಂಬ ಆರೋಪವನ್ನು ಇರಾನ್ ಬಹುಕಾಲದಿಂದ ನಿರಾಕರಿಸುತ್ತಿದೆ. ಅಮೆರಿಕ–ಇರಾನ್ ಸಂಘರ್ಷಕ್ಕೆ ಅಂತ್ಯ ಹಾಡಲು ಪಾಕಿಸ್ತಾನ ಮಧ್ಯಸ್ಥಿಕೆ ಮುಂದುವರಿಸಿರುವ ನಡುವೆಯೇ, ಯುರೇನಿಯಂ ವರ್ಗಾವಣೆಗೆ ಇರಾನ್ ನಿರಾಕರಿಸಿರುವುದು ಸಂಧಾನ ಪ್ರಕ್ರಿಯೆಯ ಮುಂದಿನ ಹಾದಿಯ ಬಗ್ಗೆ ಅನಿಶ್ಚಿತತೆಯನ್ನು ಹೆಚ್ಚಿಸಿದೆ.