

ಮುಂಬೈ (ಮಹಾರಾಷ್ಟ್ರ): ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರು ತಮ್ಮ ಮೂರು ದಿನಗಳ ಭಾರತದ ಅಧಿಕೃತ ಭೇಟಿಯನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಿದ್ದಾರೆ. ಅಕ್ಟೋಬರ್ 20 ರಿಂದ 22 ರವರೆಗೆ ಮಹಾರಾಷ್ಟ್ರದ ಮುಂಬೈ ಮತ್ತು ಗುಜರಾತ್‌ನ ಜಾಮ್‌ನಗರಕ್ಕೆ ಭೇಟಿ ನೀಡಿದ ರೂಬಿಯೊ, "ಬಲವಾದ ಆರ್ಥಿಕ ಪಾಲುದಾರಿಕೆ ಮತ್ತು ಇಂಧನ ಭದ್ರತಾ ಸಹಕಾರವನ್ನು ಮುಂದುವರಿಸುವುದು ಭಾರತ ಮತ್ತು ಅಮೆರಿಕ ಎರಡೂ ರಾಷ್ಟ್ರಗಳನ್ನು ಇನ್ನಷ್ಟು ಬಲಪಡಿಸಲಿದೆ" ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ಮಂಗಳವಾರ ಮುಂಬೈನಲ್ಲಿ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ ರುಬಿಯೊ, ಭಾರತ-ಯುಎಸ್ ಆರ್ಥಿಕ ಸಂಬಂಧಗಳು, ವ್ಯಾಪಾರ ಒಪ್ಪಂದಗಳ ಪ್ರಗತಿ, ಹೂಡಿಕೆ, ರಕ್ಷಣೆ ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಕುರಿತು ಮಾತುಕತೆ ನಡೆಸಿದರು. ಈ ಬಳಿಕ ಮುಂಬೈನ ತಾಜ್ ಮಹಲ್ ಪ್ಯಾಲೇಸ್ ಹೋಟೆಲ್‌ನಲ್ಲಿರುವ 26/11 ಸ್ಮಾರಕಕ್ಕೆ ಭೇಟಿ ನೀಡಿದ ರೂಬಿಯೊ, ಭಯೋತ್ಪಾದನಾ ದಾಳಿಗೆ ಬಲಿಯಾದ ಆರು ಅಮೆರಿಕನ್ ನಾಗರಿಕರು ಸೇರಿದಂತೆ ಎಲ್ಲಾ ಸಂತ್ರಸ್ತರಿಗೆ ಪುಷ್ಪ ನಮನ ಸಲ್ಲಿಸಿ, ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತದೊಂದಿಗೆ ಅಮೆರಿಕ ಸದಾ ಇರಲಿದೆ ಎಂದು ಭರವಸೆ ನೀಡಿದರು.
ಭಾರತ ರಿಫೈನಿಂಗ್ ಸೂಪರ್‌ಪವರ್
ಗುಜರಾತ್‌ನ ಜಾಮ್‌ನಗರದಲ್ಲಿರುವ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ಗೆ ಸೇರಿದ ವಿಶ್ವದ ಅತಿ ದೊಡ್ಡ ತೈಲ ಸಂಸ್ಕರಣಾಗಾರಕ್ಕೆ ರೂಬಿಯೊ ಭೇಟಿ ನೀಡಿದ್ದರು. ಭಾರತವನ್ನು ತೈಲ ಸಂಸ್ಕರಣಾ ಸೂಪರ್‌ಪವರ್ ಎಂದು ಬಣ್ಣಿಸಿದ ಅವರು, ವೆನೆಜುವೆಲಾದಿಂದ ಉತ್ಪಾದನೆಯಾಗುವ ಭಾರೀ ಕಚ್ಚಾ ತೈಲವನ್ನು ಸಂಸ್ಕರಿಸಲು ಜಾಮ್‌ನಗರ ಸೂಕ್ತವಾಗಿದ್ದು, ಈ ನಿಟ್ಟಿನಲ್ಲಿ ಅಮೆರಿಕ ಮತ್ತು ರಿಲಯನ್ಸ್ ಸಹಯೋಗದ ಬಗ್ಗೆ ಮುಖೇಶ್ ಅಂಬಾನಿ ಅವರೊಂದಿಗೆ ಚರ್ಚಿಸಿದ್ದಾರೆ. ಜೊತೆಗೆ, ರಷ್ಯಾದಿಂದ ಭಾರತ ತೈಲ ಆಮದು ಮಾಡಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಇಂಧನ ಮಾರುಕಟ್ಟೆಯ ಒತ್ತಡಗಳ ನಡುವೆ ಈ ಭೇಟಿ ನಡೆದಿತ್ತು. ಭಾರತವು ತನ್ನ ಇಂಧನ ಪೋರ್ಟ್‌ಫೋಲಿಯೊವನ್ನು ವೈವಿಧ್ಯಗೊಳಿಸಲು ಗಣನೀಯ ಪ್ರಗತಿ ಸಾಧಿಸಿದೆ ಎಂದು ರೂಬಿಯೊ ಶ್ಲಾಘಿಸಿದ್ದು, ಅಮೆರಿಕ ಕೂಡ ಭಾರತದ ಇಂಧನ ಅಗತ್ಯಗಳನ್ನು ಪೂರೈಸಲು ಸಿದ್ಧವಿದೆ ಎಂದಿದ್ದಾರೆ.
ಮುಂದುವರೆದು, ತಮ್ಮ ಈ ಭೇಟಿಯ ವೇಳೆ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರೊಂದಿಗೆ ಗೇಟ್‌ವೇ ಆಫ್ ಇಂಡಿಯಾಕ್ಕೆ ಭೇಟಿ ನೀಡಿದ ರೂಬಿಯೊ, ಅದರ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ತಿಳಿದುಕೊಂಡರು. ನಂತರ ಅದಾನಿ ಮತ್ತು ಟಾಟಾ ಗ್ರೂಪ್ಸ್‌ನ ಪ್ರಮುಖ ಉದ್ಯಮಿಗಳನ್ನು ಭೇಟಿ ಮಾಡಿ ಹೂಡಿಕೆ ಅವಕಾಶಗಳ ಬಗ್ಗೆ ಚರ್ಚಿಸಿದರು. ಇದಲ್ಲದೆ, ರುಬಿಯೊ ಅವರು ಅಮೆರಿಕದ ಸ್ವಾತಂತ್ರ್ಯದ 250ನೇ ವಾರ್ಷಿಕೋತ್ಸವವನ್ನು ಸ್ಮರಿಸುವ ಮತ್ತು ಅಮೆರಿಕನ್ ಹಾಗೂ ಭಾರತೀಯ ಜನರ ನಡುವಿನ ಶಾಶ್ವತ ಬಾಂಧವ್ಯವನ್ನು ಆಚರಿಸುವ Freedom 250 ಸ್ವಾಗತ ಸಮಾರಂಭದಲ್ಲಿ ಗೌರವ ಅತಿಥಿಯಾಗಿ ಭಾಗವಹಿಸಿದ್ದರು. ಇದೇ ವೇಳೆ, ಮುಂಬೈನಲ್ಲಿರುವ ಅಮೆರಿಕದ ಕಾನ್ಸುಲೇಟ್ ಜನರಲ್‌ನ ಸಿಬ್ಬಂದಿ ಮತ್ತು ಅವರ ಕುಟುಂಬಗಳನ್ನು ಭೇಟಿಯಾಗಿ, ಅಮೆರಿಕದ ಹಿತಾಸಕ್ತಿಗಳನ್ನು ಮುಂದುವರಿಸುವಲ್ಲಿ ಮತ್ತು ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವಲ್ಲಿ ಅವರ ಕೊಡುಗೆಗಳನ್ನು ಶ್ಲಾಘಿಸಿದ್ದಾರೆ.