ಇರಾನ್ ಮೇಲೆ ಮತ್ತೆ ದಾಳಿ ಸುಳಿವು ನೀಡಿದ ಟ್ರಂಪ್: ಸಂಧಾನಕ್ಕೆ ಅಡ್ಡಿಪಡಿಸಿದ್ದೇ ಅಮೆರಿಕ ಎಂದು ತೆಹ್ರಾನ್ ಕಿಡಿ..!

ವಾಷಿಂಗ್ಟನ್‌ನೊಂದಿಗೆ ಒಪ್ಪಂದ ಮಾಡಿಕೊಳ್ಳಲು ಟೆಹ್ರಾನ್ ಬಯಸುತ್ತಿದೆ ಎಂಬ ತಮ್ಮ ಹಿಂದಿನ ಹೇಳಿಕೆಯನ್ನು ಟ್ರಂಪ್ ಪುನರುಚ್ಚರಿಸಿದರು. ಆದರೆ, ಇರಾನ್ ಒಪ್ಪಂದಕ್ಕೆ ಬದ್ಧವಾಗಿರುತ್ತದೆಯೇ ಎಂಬ ಬಗ್ಗೆ ಅನುಮಾನ ವ್ಯಕ್ತಪಡಿಸಿದರು.
Donald Trump
ಡೊನಾಲ್ಡ್ ಟ್ರಂಪ್
Updated on: 

ವಾಷಿಂಗ್ಟನ್/ಫ್ಲೋರಿಡಾ: ಇರಾನ್ ಮೇಲೆ ಮತ್ತೆ ದಾಳಿ ನಡೆಸುವ ಸಾಧ್ಯತೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದು, ಇದೇ ವೇಳೆ, ಯುದ್ಧವನ್ನು ಅಂತ್ಯಗೊಳಿಸಲು ಉಭಯ ದೇಶಗಳ ನಡುವೆ ಉತ್ತಮ ಒಪ್ಪಂದ ಏರ್ಪಡುವ ಸಾಧ್ಯತೆಯೂ ಇದೆ ಎಂದು ತಿಳಿಸಿದ್ದಾರೆ. ಆದರೆ, ಮಾತುಕತೆಗಳನ್ನು ಅಮೆರಿಕವೇ ಹಾಳುಮಾಡಿದೆ ಎಂದು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಆರೋಪಿಸಿದ್ದಾರೆ.

ಇರಾನ್ ಮೇಲೆ ಅಮೆರಿಕ ಮತ್ತೆ ದಾಳಿ ನಡೆಸಲು ಎಷ್ಟು ಹತ್ತಿರದಲ್ಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, “ನಾನು ದಾಳಿ ನಡೆಸುತ್ತೇನೆಯೇ ಅಥವಾ ಇಲ್ಲವೇ ಎಂದು ನಿಮಗೆ ನಿಜವಾಗಿಯೂ ಹೇಳುತ್ತೇನೆ ಎಂದು ಭಾವಿಸಿದ್ದೀರಾ?” ಎಂದು ಪ್ರಶ್ನಿಸಿದರು.

ದಾಳಿ ನಡೆಸುವ ಸಾಧ್ಯತೆಯಿದೆಅದೇ ರೀತಿ, ಉತ್ತಮವಾದ, ದೊಡ್ಡದಾದ ಒಪ್ಪಂದವೊಂದು ಏರ್ಪಡುವ ಸಾಧ್ಯತೆಯೂ ಇದೆ ಎಂದು ಅವರು ಹೇಳಿದರು.

ವಾಷಿಂಗ್ಟನ್‌ನೊಂದಿಗೆ ಒಪ್ಪಂದ ಮಾಡಿಕೊಳ್ಳಲು ಟೆಹ್ರಾನ್ ಬಯಸುತ್ತಿದೆ ಎಂಬ ತಮ್ಮ ಹಿಂದಿನ ಹೇಳಿಕೆಯನ್ನು ಟ್ರಂಪ್ ಪುನರುಚ್ಚರಿಸಿದರು. ಆದರೆ, ಇರಾನ್ ಒಪ್ಪಂದಕ್ಕೆ ಬದ್ಧವಾಗಿರುತ್ತದೆಯೇ ಎಂಬ ಬಗ್ಗೆ ಅನುಮಾನ ವ್ಯಕ್ತಪಡಿಸಿದರು. ಸಮಸ್ಯೆಯೆಂದರೆ, ಅವರು ಒಪ್ಪಂದವನ್ನು ಪಾಲಿಸುತ್ತಾರೆಯೇ ಎಂಬುದು ಎಂದರು.

ಫೆಬ್ರವರಿಯಲ್ಲಿ ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ದಾಳಿ ನಡೆಸಿದ ಬಳಿಕ ಸಂಘರ್ಷ ಆರಂಭವಾಗಿತ್ತು. ಇದಕ್ಕೆ ಪ್ರತಿಯಾಗಿ ಇರಾನ್ ದಾಳಿ ನಡೆಸಿದ್ದು, ಮಧ್ಯಪ್ರಾಚ್ಯದಾದ್ಯಂತ ಉದ್ವಿಗ್ನತೆ ಹೆಚ್ಚಾಗಿದೆ. ಈ ಸಂಘರ್ಷವನ್ನು ಅಂತ್ಯಗೊಳಿಸುವ ಸಾಧ್ಯತೆಗಳ ಬಗ್ಗೆ ಅನಿಶ್ಚಿತತೆ ಹೆಚ್ಚುತ್ತಿರುವ ನಡುವೆಯೇ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ.

ಜಾಗತಿಕ ತೈಲ ಮತ್ತು ಅನಿಲ ಸಾಗಣೆಗೆ ಪ್ರಮುಖ ಮಾರ್ಗವಾಗಿರುವ ಆಯಕಟ್ಟಿನ ಹಾರ್ಮುಜ್ ಜಲಸಂಧಿಯಲ್ಲಿ ಹಡಗು ಸಂಚಾರಕ್ಕೆ ಸಂಘರ್ಷದಿಂದ ಅಡ್ಡಿಯಾಗಿದೆ. ಇರಾನ್ ಬಂದರುಗಳ ಮೇಲೆ ಅಮೆರಿಕ ವಿಧಿಸಿರುವ ದಿಗ್ಬಂಧನ ಹಾಗೂ ಇರಾನ್‌ನ ತೈಲ ರಫ್ತಿನ ಮೇಲಿನ ನಿರ್ಬಂಧಗಳು ತೆಹ್ರಾನ್ ಮೇಲಿನ ಒತ್ತಡವನ್ನು ಮತ್ತಷ್ಟು ಹೆಚ್ಚಿಸಿವೆ. ಉಭಯ ದೇಶಗಳು ಒಪ್ಪಂದದ ಪ್ರಸ್ತಾವನೆಗಳನ್ನು ವಿನಿಮಯ ಮಾಡಿಕೊಂಡಿದ್ದರೂ, ಶಾಶ್ವತ ಪರಿಹಾರ ಕಂಡುಕೊಳ್ಳುವ ಪ್ರಯತ್ನಗಳು ಸ್ಥಗಿತಗೊಂಡಿವೆ.

ಈ ತಿಂಗಳ ಆರಂಭದಲ್ಲಿ ಮಾತನಾಡಿದ್ದ ಟ್ರಂಪ್, ಇರಾನ್‌ನೊಂದಿಗೆ ಫಲಪ್ರದ ಮಾತುಕತೆಗಳು ನಡೆಯುತ್ತಿವೆ ಎಂದು ಹೇಳಿ, ನವೆಂಬರ್ 3ರಂದು ನಡೆಯಲಿರುವ ಅಮೆರಿಕದ ಮಧ್ಯಂತರ ಚುನಾವಣೆಗೂ ಮುನ್ನ ಇರಾನ್ ಮೇಲೆ ಮತ್ತೆ ದಾಳಿ ನಡೆಸುವುದಿಲ್ಲ ಎಂದಿದ್ದರು. ಆದರೆ, ಮಾತುಕತೆಗಳು ಒಪ್ಪಂದಕ್ಕೆ ಬರಲು ವಿಫಲವಾದರೆ ಚುನಾವಣೆಯ ಬಳಿಕ ಸೇನಾ ಕಾರ್ಯಾಚರಣೆ ಪುನರಾರಂಭಿಸುವ ಸಾಧ್ಯತೆಯನ್ನು ಅವರು ಪದೇಪದೇ ಪ್ರಸ್ತಾಪಿಸಿದ್ದಾರೆ.

ಅಮೆರಿಕದ ಚುನಾವಣೆಯ ಬಳಿಕ ಮತ್ತೆ ಸೇನಾ ಕಾರ್ಯಾಚರಣೆ ಆರಂಭಿಸುವ ಸಾಧ್ಯತೆಯ ಹಿನ್ನೆಲೆಯಲ್ಲಿ ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಸಿದ್ಧತೆ ನಡೆಸುತ್ತಿವೆ ಎಂಬ ವರದಿಗಳು ಪ್ರಾದೇಶಿಕ ಉದ್ವಿಗ್ನತೆಯನ್ನು ಹೆಚ್ಚಿಸಿವೆ. ಆದರೆ, ಹೊಸ ದಾಳಿ ಆರಂಭಿಸುವ ಬಗ್ಗೆ ಅಂತಿಮ ನಿರ್ಧಾರ ಕೈಗೊಂಡಿರುವುದಾಗಿ ಅಮೆರಿಕ ಸಾರ್ವಜನಿಕವಾಗಿ ಘೋಷಿಸಿಲ್ಲ.

Donald Trump
'ಮೊದಲು ಬೆದರಿಕೆ, ನಿರ್ಬಂಧ ನಿಲ್ಲಿಸಿ', 'ಒಂಚೂರೂ ಯುರೇನಿಯಂ ಹೊರಗೋಗಲ್ಲ': ಪಾಕ್ ಸೇನಾ ಮುಖ್ಯಸ್ಥನಿಗೆ ಇರಾನ್ ಖಡಕ್ ಉತ್ತರ!

ಮಾತುಕತೆಗೆ ಅಮೆರಿಕವೇ ಅಡ್ಡಿಪಡಿಸಿದೆ: ಇರಾನ್ ಅಧ್ಯಕ್ಷ

ಇನ್ನೊಂದೆಡೆ, ಯುದ್ಧವನ್ನು ಅಂತ್ಯಗೊಳಿಸುವ ಉದ್ದೇಶದ ಮಾತುಕತೆಗಳನ್ನು ಅಮೆರಿಕವೇ ಹಾಳುಮಾಡಿದೆ ಎಂದು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಆರೋಪಿಸಿದ್ದಾರೆ. ಇದೇ ವೇಳೆ, ಒಪ್ಪಂದಕ್ಕಾಗಿ ಪ್ರಯತ್ನ ಮುಂದುವರಿಸಲು ಇರಾನ್ ಬದ್ಧವಾಗಿದೆ ಎಂದೂ ಅವರು ತಿಳಿಸಿದ್ದಾರೆ.

ಇರಾನ್‌ನ ಸರ್ಕಾರಿ ದೂರದರ್ಶನದಲ್ಲಿ ಪ್ರಸಾರವಾದ ಹೇಳಿಕೆಯಲ್ಲಿ, ದೇಶದ ಸರ್ವೋಚ್ಚ ನಾಯಕರು ಒಪ್ಪಂದವನ್ನು ಅಂತಿಮಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಪೆಜೆಶ್ಕಿಯಾನ್ ಹೇಳಿದರು.

ಹೋಗಿ, ಒಪ್ಪಂದವನ್ನು ಪೂರ್ಣಗೊಳಿಸಿ ಎಂದು ಅವರು ಸೂಚಿಸಿದ್ದಾರೆ. ಆದರೆ, ಈ ಕಿಡಿಗೇಡಿಗಳು ಆಟದ ನಿಯಮಗಳನ್ನೇ ಉಲ್ಲಂಘಿಸಿದ್ದಾರೆ. ನಾವು ಮಾತುಕತೆ ನಡೆಸುತ್ತಿದ್ದೆವು, ಅವರು ಅದಕ್ಕೆ ಅಡ್ಡಿಪಡಿಸಿದರು ಎಂದು ಆರೋಪಿಸಿದ್ದಾರೆ.

ಪೆಜೆಶ್ಕಿಯಾನ್ ಅವರ ಹೇಳಿಕೆಗಳು ಉಭಯ ದೇಶಗಳ ನಡುವಿನ ಆಳವಾದ ಅಪನಂಬಿಕೆಯನ್ನು ಪ್ರತಿಬಿಂಬಿಸಿವೆ. ರಾಜತಾಂತ್ರಿಕ ಮಾತುಕತೆ ಮುಂದುವರಿಸುವ ಸಾಧ್ಯತೆಯನ್ನು ಇರಾನ್ ಮುಕ್ತವಾಗಿಟ್ಟಿದ್ದರೂ, ಅಮೆರಿಕ ನಿಜವಾಗಿಯೂ ರಾಜತಾಂತ್ರಿಕ ಪರಿಹಾರಕ್ಕೆ ಬದ್ಧವಾಗಿದೆಯೇ ಎಂಬ ಪ್ರಶ್ನೆಯನ್ನು ಟೆಹ್ರಾನ್ ಎತ್ತಿದೆ.

ಒಪ್ಪಂದದ ಷರತ್ತುಗಳ ಕುರಿತು ಉಭಯ ದೇಶಗಳ ನಡುವೆ ಇನ್ನೂ ಭಿನ್ನಾಭಿಪ್ರಾಯಗಳಿವೆ. ಹಾರ್ಮುಜ್ ಜಲಸಂಧಿಯ ಭವಿಷ್ಯ, ಇರಾನ್‌ನ ತೈಲ ರಫ್ತಿನ ಮೇಲಿನ ನಿರ್ಬಂಧಗಳು ಹಾಗೂ ಇರಾನ್‌ನ ಪರಮಾಣು ಕಾರ್ಯಕ್ರಮಕ್ಕೆ ಸಂಬಂಧಿಸಿದ ವಿಚಾರಗಳು ಪ್ರಮುಖ ವಿವಾದಗಳಾಗಿವೆ. ಯುರೇನಿಯಂ ಪುಷ್ಟೀಕರಣದ ಹಕ್ಕುಗಳನ್ನು ಗೌರವಿಸಬೇಕು ಎಂದು ಇರಾನ್ ಒತ್ತಾಯಿಸುತ್ತಿದ್ದರೆ, ತನ್ನ ಪರಮಾಣು ಚಟುವಟಿಕೆಗಳ ಕುರಿತು ಇರಾನ್ ರಿಯಾಯಿತಿ ನೀಡಬೇಕೆಂದು ಅಮೆರಿಕ ಆಗ್ರಹಿಸುತ್ತಿದೆ.

ಜೂನ್‌ನಲ್ಲಿ ಮಧ್ಯಸ್ಥಿಕೆ ಪ್ರಯತ್ನಗಳ ಬಳಿಕ ರೂಪುಗೊಂಡಿದ್ದ ಹಿಂದಿನ ತಿಳಿವಳಿಕೆಯು ಮುಂದಿನ ಮಾತುಕತೆಗಳಿಗೆ ದಾರಿ ಮಾಡಿಕೊಡುವ ಉದ್ದೇಶ ಹೊಂದಿತ್ತು. ಆದರೆ, ಮತ್ತೆ ಸಂಘರ್ಷ ಆರಂಭವಾದದ್ದು ಮತ್ತು ಒಪ್ಪಂದದ ಷರತ್ತುಗಳ ಕುರಿತ ಭಿನ್ನಾಭಿಪ್ರಾಯಗಳಿಂದಾಗಿ ಆ ಪ್ರಯತ್ನ ವಿಫಲವಾಗಿತ್ತು. ನಂತರ ನಡೆದ ರಾಜತಾಂತ್ರಿಕ ಪ್ರಯತ್ನಗಳೂ ಉಭಯ ದೇಶಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ಸಾಧ್ಯವಾಗಿಲ್ಲ.

ಅಮೆರಿಕ ಅಥವಾ ಇಸ್ರೇಲ್ ಮತ್ತೆ ದಾಳಿ ನಡೆಸಬಹುದೆಂಬ ಆತಂಕ ಇರಾನ್ ಸೇರಿದಂತೆ ಇಡೀ ಪ್ರದೇಶದಲ್ಲಿ ಹೆಚ್ಚಾಗಿದೆ. ಇಸ್ರೇಲ್‌ನಲ್ಲಿ ಮಂಗಳವಾರ ಚುನಾವಣೆ ನಡೆಯಲಿದ್ದರೆ, ಅಮೆರಿಕದ ಮಧ್ಯಂತರ ಚುನಾವಣೆ ನವೆಂಬರ್ 3ರಂದು ನಿಗದಿಯಾಗಿದೆ.

ಈ ಚುನಾವಣೆಗಳ ಬಳಿಕ ಅಮೆರಿಕ ಮತ್ತು ಇಸ್ರೇಲ್ ಹೊಸ ಸೇನಾ ಕಾರ್ಯಾಚರಣೆ ಆರಂಭಿಸಬಹುದು ಎಂಬ ಊಹಾಪೋಹಗಳಿಗೆ ಚುನಾವಣೆಯ ಸಮಯ ಮತ್ತಷ್ಟು ಪುಷ್ಟಿ ನೀಡಿದೆ. ಆದರೆ, ರಾಜತಾಂತ್ರಿಕ ಮಾತುಕತೆಗಳಿಂದ ಮಹತ್ವದ ಪ್ರಗತಿ ಸಾಧ್ಯವಾಗದಿದ್ದರೆ ಸೇನಾ ಕ್ರಮ ಕೈಗೊಳ್ಳುವ ಸಾಧ್ಯತೆಯನ್ನು ಟ್ರಂಪ್ ತಳ್ಳಿಹಾಕಿಲ್ಲ.

ಈ ಸಂಘರ್ಷವು ಟ್ರಂಪ್ ಆಡಳಿತಕ್ಕೆ ರಾಜಕೀಯ ಮತ್ತು ಆರ್ಥಿಕ ಸವಾಲಾಗಿಯೂ ಪರಿಣಮಿಸಿದೆ. ಯುದ್ಧದಿಂದ ಇಂಧನ ಬೆಲೆಗಳು ಹೆಚ್ಚಾಗಿದ್ದು, ಅಮೆರಿಕದ ಆರ್ಥಿಕತೆಯ ಮೇಲಿನ ಒತ್ತಡವೂ ಏರಿಕೆಯಾಗಿದೆ. ಹಾರ್ಮುಜ್ ಜಲಸಂಧಿಯಲ್ಲಿ ಹಡಗು ಸಂಚಾರಕ್ಕೆ ಅಡ್ಡಿಯಾಗಿರುವುದರಿಂದ ಜಾಗತಿಕ ಇಂಧನ ಪೂರೈಕೆಯ ಬಗ್ಗೆಯೂ ಆತಂಕ ಹೆಚ್ಚಿದೆ. ಹೀಗಾಗಿ, ದೀರ್ಘಕಾಲದ ಸಂಘರ್ಷದ ಪರಿಣಾಮಗಳು ಪಶ್ಚಿಮ ಏಷ್ಯಾದ ಗಡಿಗಳನ್ನು ಮೀರಿ ಜಗತ್ತಿನಾದ್ಯಂತ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

ಇರಾನ್ ಒಪ್ಪಂದಕ್ಕೆ ಬಯಸುತ್ತಿದೆ ಎಂದು ಟ್ರಂಪ್ ಪದೇಪದೇ ಹೇಳುತ್ತಿದ್ದರೂ, ಇತ್ತೀಚಿನ ಬೆಳವಣಿಗೆಗಳು ಶಾಂತಿ ಒಪ್ಪಂದದ ಹಾದಿ ಇನ್ನೂ ಅನಿಶ್ಚಿತವಾಗಿದೆ ಎಂಬುದನ್ನು ತೋರಿಸಿವೆ. ರಾಜತಾಂತ್ರಿಕ ಪ್ರಯತ್ನಗಳಿಗೆ ಅಡ್ಡಿಪಡಿಸುತ್ತಿರುವ ಆರೋಪವನ್ನು ಉಭಯ ದೇಶಗಳು ಪರಸ್ಪರ ಮಾಡಿಕೊಳ್ಳುತ್ತಿದ್ದು, ಮತ್ತೆ ಸೇನಾ ದಾಳಿ ನಡೆಯುವ ಭೀತಿ ಈ ಪ್ರದೇಶದ ಮೇಲೆ ಮುಂದುವರಿದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com