ಮತ್ತೊಂದು ಮಹಾಯುದ್ಧದ ಭೀತಿ: ಇರಾನ್‌ನ 'Pickaxe Mountain' ಧ್ವಂಸಕ್ಕೆ ಅಮೆರಿಕ ಸ್ಕೆಚ್, "ಶೀಘ್ರದಲ್ಲೇ ದಾಳಿ" ಎಂದ ಡೊನಾಲ್ಡ್ ಟ್ರಂಪ್..!

ಪಿಕ್ಯಾಕ್ಸ್ ಮೌಂಟನ್‌ನಲ್ಲಿ ಯಾವುದೇ ಚಟುವಟಿಕೆ ನಡೆಯುತ್ತಿರುವುದು ಪತ್ತೆಯಾದರೆ ಆ ತಾಣವನ್ನು ಅಮೆರಿಕಾ ಗುರಿಯಾಗಿಸಲಿದೆ. ಅಮೆರಿಕದ ಗುಪ್ತಚರ ಸಂಸ್ಥೆಗಳು ಆ ತಾಣದಲ್ಲಿನ ಚಟುವಟಿಕೆಗಳ ಮೇಲೆ ನಿಗಾ ಇರಿಸಿವೆ.
Donald Trump and Mojtaba Khamenei
ಡೊನಾಲ್ಡ್ ಟ್ರಂಪ್ ಹಾಗೂ ಮೊಜ್ತಾಬಾ ಖಮೇನಿ
Updated on

ವಾಷಿಂಗ್ಟನ್: ಜಾಗತಿಕ ರಾಜಕಾರಣದಲ್ಲಿ ಮತ್ತೊಮ್ಮೆ ಯುದ್ಧದ ಭೀತಿ ಹೆಚ್ಚಾಗಿದೆ. ಇರಾನ್‌ನ ಅತ್ಯಂತ ರಕ್ಷಿತ ಮತ್ತು ರಹಸ್ಯ ಭೂಗತ ಪರಮಾಣು ನೆಲೆ 'ಪಿಕ್ಸ್‌ಆಕ್ಸ್ ಮೌಂಟೇನ್' (Pickaxe Mountain) ಮೇಲೆ ಅಮೆರಿಕ "ಬಹಳ ಶೀಘ್ರದಲ್ಲೇ" ದಾಳಿ ನಡೆಸಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.

ಶ್ವೇತಭವನದ ಓವಲ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಇರಾನ್ ತನ್ನ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸಲು ರಹಸ್ಯವಾಗಿ ಪ್ರಯತ್ನಿಸುತ್ತಿರುವುದು ಅಮೆರಿಕಾ ಗುಪ್ತಚರ ಇಲಾಖೆಗೆ ತಿಳಿದುಬಂದರೆ, ಅಮೆರಿಕ ಸುಮ್ಮನೆ ಕೂರುವುದಿಲ್ಲ. ಆ ನೆಲೆಯನ್ನು ಧ್ವಂಸಗೊಳಿಸುವುದು ಖಚಿತ ಎಂದು ಹೇಳಿದ್ದಾರೆ.

ಇರಾನ್ ಯಾವುದೇ ಕಾರಣಕ್ಕೂ ಪರಮಾಣು ಬಾಂಬ್ ತಯಾರಿಸದಂತೆ ತಡೆಯುವುದೇ ನಮ್ಮ ಮುಖ್ಯ ಉದ್ದೇಶ ಎಂದು ಸ್ಪಷ್ಟಪಡಿಸಿದ್ದಾರೆ.

ಪಿಕ್ಯಾಕ್ಸ್ ಮೌಂಟನ್‌ನಲ್ಲಿ ಯಾವುದೇ ಚಟುವಟಿಕೆ ನಡೆಯುತ್ತಿರುವುದು ಪತ್ತೆಯಾದರೆ ಆ ತಾಣವನ್ನು ಅಮೆರಿಕಾ ಗುರಿಯಾಗಿಸಲಿದೆ. ಅಮೆರಿಕದ ಗುಪ್ತಚರ ಸಂಸ್ಥೆಗಳು ಆ ತಾಣದಲ್ಲಿನ ಚಟುವಟಿಕೆಗಳ ಮೇಲೆ ನಿಗಾ ಇರಿಸಿವೆ ಎಂದು ಹೇಳಿದ್ದಾರೆ.

ಪಿಕ್ಯಾಕ್ಸ್‌ನಲ್ಲಿ ಯಾರು ಚಲಿಸುತ್ತಿದ್ದಾರೆ ಎಂಬುದು ನಮಗೆ ಗೊತ್ತಿದೆ. ಇರಾನ್‌ನಾದ್ಯಂತ ಎಲ್ಲೆಲ್ಲಿ ಯಾರು ಚಲಿಸುತ್ತಿದ್ದಾರೆ ಎಂಬುದೂ ನಮಗೆ ತಿಳಿದಿದೆ. ಏನಾದರೂ ತಪ್ಪಾದರೆ ನಾವು ದಾಳಿ ಮಾಡುತ್ತೇವೆ, ಕಠಿಣವಾಗಿ ಹೊಡೆಯುತ್ತೇವೆ” ಎಂದು ಎಚ್ಚರಿಕೆ ನೀಡಿದ್ದಾರೆ.

ಇದೇ ವೇಳೆ ಇರಾನ್ ವಿರುದ್ಧ ಅಮೆರಿಕ ನಡೆಸುತ್ತಿರುವ ಸೇನಾ ಕಾರ್ಯಾಚರಣೆಯನ್ನು ಸಮರ್ಥಿಸಿಕೊಂಡ ಟ್ರಂಪ್, ಟೆಹ್ರಾನ್ ಪರಮಾಣು ಅಸ್ತ್ರ ಹೊಂದುವುದನ್ನು ತಡೆಯುವುದೇ ಕಾರ್ಯಾಚರಣೆಯ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.

Donald Trump and Mojtaba Khamenei
China ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅಮೆರಿಕಕ್ಕೆ; ಸೆ.24ರಂದು ಶ್ವೇತಭವನದಲ್ಲಿ ಔತಣಕೂಟ, Iran ಸಂಘರ್ಷವನ್ನು ‘ಸಣ್ಣ ವಿಚಾರ’ ಎಂದ Trump

ಐದು ತಿಂಗಳು ಕಳೆದಿವೆ. ಈ ಐದು ತಿಂಗಳಲ್ಲಿ ನಾವು ಏನು ಮಾಡಿದ್ದೇವೆ ಗೊತ್ತೇ? ಅವರು ಪರಮಾಣು ಅಸ್ತ್ರ ಹೊಂದುವುದಿಲ್ಲ. ಅದನ್ನೇ ನಾವು ಮಾಡಿದ್ದೇವೆ. ಇರಾನ್ ಪರಮಾಣು ಅಸ್ತ್ರ ಹೊಂದುವುದಿಲ್ಲ. ಒಂದು ವೇಳೆ ಅವರು ಪರಮಾಣು ಅಸ್ತ್ರ ಹೊಂದಿದ್ದರೆ, ಬಹುಶಃ ನೀವು ಇಲ್ಲಿ ಹೆಚ್ಚು ಕಾಲ ನಿಂತಿರಲು ಸಾಧ್ಯವಾಗುತ್ತಿರಲಿಲ್ಲ ಎಂದು ತಿಳಿಸಿದರು.

ಪಿಕ್ಯಾಕ್ಸ್ ಮೌಂಟನ್ ಇರಾನ್‌ನ ಭಾರೀ ಹಾನಿಗೊಳಗಾದ ನತಾಂಜ್ ಯುರೇನಿಯಂ ಸಂವರ್ಧನಾ ಘಟಕದ ಸಮೀಪದಲ್ಲಿದೆ. ಅತ್ಯಂತ ಬಲಿಷ್ಠ ಭದ್ರತೆಯ ಈ ಭೂಗತ ಸಂಕೀರ್ಣದಲ್ಲಿ ಆಳವಾಗಿ ನಿರ್ಮಿಸಲಾದ ಎರಡು ಸುರಂಗ ವ್ಯವಸ್ಥೆಗಳಿವೆ ಎಂದು ವರದಿಯಾಗಿದೆ.

ಇಸ್ರೇಲಿ ಗುಪ್ತಚರ ಮಾಹಿತಿಯ ಪ್ರಕಾರ ಇರಾನ್ ಸಾವಿರಾರು ಸೆಂಟ್ರಿಫ್ಯೂಜ್‌ಗಳನ್ನು ಈ ಆಳವಾದ ಭೂಗತ ತಾಣಕ್ಕೆ ಸ್ಥಳಾಂತರಿಸಿದೆ ಎಂದು ‘ದಿ ವಾಲ್ ಸ್ಟ್ರೀಟ್ ಜರ್ನಲ್’ ಈ ಹಿಂದೆ ವರದಿ ಮಾಡಿತ್ತು.

ಈ ತಾಣದ ಭೂಗತ ನಿರ್ಮಾಣದಿಂದಾಗಿ ಸಾಮಾನ್ಯ ವಾಯುದಾಳಿಗಳನ್ನು ತಡೆದುಕೊಳ್ಳುವ ಸಾಮರ್ಥ್ಯ ಇದಕ್ಕಿದೆ ಎಂದು ಹೇಳಲಾಗಿದೆ. ಹೀಗಾಗಿ ಅಮೆರಿಕ ಈ ತಾಣವನ್ನು ಗುರಿಯಾಗಿಸಿಕೊಂಡರೆ, ಇರಾನ್‌ನ ಪರಮಾಣು ಮೂಲಸೌಕರ್ಯದ ವಿರುದ್ಧದ ಕಾರ್ಯಾಚರಣೆಯಲ್ಲಿ ಅದು ಮತ್ತಷ್ಟು ದೊಡ್ಡ ಮಟ್ಟದ ಸಂಘರ್ಷಕ್ಕೆ ಕಾರಣವಾಗುವ ಸಾಧ್ಯತೆಯಿದೆ.

ಇದೇ ವೇಳೆ ಮಧ್ಯಪ್ರಾಚ್ಯದಲ್ಲಿ ಹಲವು ತಿಂಗಳುಗಳಿಂದ ನಡೆಯುತ್ತಿರುವ ದಾಳಿಗಳನ್ನು ಯುದ್ಧ ಎಂದು ಕರೆಯಲಾಗುವುದಿಲ್ಲ ಎಂದು ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ನೀಡಿದ್ದ ಹೇಳಿಕೆಯ ಕುರಿತು ಕೇಳಿದಾಗಲೂ ಟ್ರಂಪ್ ಪ್ರತಿಕ್ರಿಯಿಸಿದರು.

“ಅವರು ಹೇಳುತ್ತಿರುವುದನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ನಾನು ಇದನ್ನು ಸೇನಾ ಸಂಘರ್ಷ ಎಂದು ಕರೆಯುತ್ತೇನೆ. ಏಕೆಂದರೆ ಇದು ನಮಗೆ ಸಣ್ಣ ವಿಚಾರ. ಇದು ದೊಡ್ಡ ವಿಷಯವಲ್ಲ” ಎಂದು ಟ್ರಂಪ್ ಹೇಳಿದರು.

ಇರಾನ್ ವಿರುದ್ಧ ಅಮೆರಿಕ ಹೊಸ ಹಂತದ ದಾಳಿಗಳನ್ನು ನಡೆಸಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ತಿಳಿಸಿದ ಕೆಲವೇ ದಿನಗಳ ಬಳಿಕ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ.

ಸೆಂಟ್ರಲ್ ಕಮಾಂಡ್ ಪ್ರಕಾರ, ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ಗೆ (ಐಆರ್‌ಜಿಸಿ) ಸಂಬಂಧಿಸಿದ ವಾಯು ರಕ್ಷಣಾ ವ್ಯವಸ್ಥೆಗಳು, ರೇಡಾರ್‌ಗಳು, ಸಮುದ್ರ ಆಧಾರಿತ ಸೌಲಭ್ಯಗಳು, ಸಮುದ್ರದಲ್ಲಿ ಗಣಿಗಳನ್ನು ಅಳವಡಿಸುವ ಸಾಮರ್ಥ್ಯ ಮತ್ತು ಸಂಪರ್ಕ ವ್ಯವಸ್ಥೆಗಳನ್ನು ದಾಳಿಯಲ್ಲಿ ಗುರಿಯಾಗಿಸಲಾಗಿದೆ.

ಹಾರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳು ಹಾಗೂ ಅಮೆರಿಕದ ಸೇನಾ ಸಿಬ್ಬಂದಿಯ ಮೇಲೆ ಐಆರ್‌ಜಿಸಿ ನಡೆಸಲು ಯತ್ನಿಸಿದ ದಾಳಿಗಳಿಗೆ ಪ್ರತಿಯಾಗಿ ಈ ಕಾರ್ಯಾಚರಣೆ ನಡೆದಿದೆ ಎಂದು ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com