

ಲಂಡನ್: ಭಾರತೀಯ ಬ್ಯಾಟಿಂಗ್ ದಿಗ್ಗಜ ವಿರಾಟ್ ಕೊಹ್ಲಿ ಶುಕ್ರವಾರ ಲಂಡನ್‌ನಲ್ಲಿ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಭೇಟಿಯಾಗಿದ್ದಾರೆ. ಈ ಭೇಟಿ ವೇಳೆ ಕ್ರೀಡೆ, ಮೂಲಸೌಕರ್ಯ ಮತ್ತು ರಾಜ್ಯ ಸರ್ಕಾರ ಜಾರಿಗೆ ತಂದಿರುವ ವಿವಿಧ ಯೋಜನೆಗಳ ಕುರಿತು ಕೊಹ್ಲಿ ಚರ್ಚಿಸಿದ್ದಾರೆ.
ಬಳಿಕ ಸುದ್ದಿಸಂಸ್ಥೆ ಎಎನ್ ಐ ಜೊತೆಗೆ ಮಾತನಾಡಿದ ಉಪ ಮುಖ್ಯಮಂತ್ರಿ ಶಿಂಧೆ, ವಿರಾಟ್ ಅವರನ್ನು ಅತ್ಯಂತ ಸರಳ ವ್ಯಕ್ತಿತ್ವದವರು ಎಂದು ಬಣ್ಣಿಸಿದರು.
"ವಿರಾಟ್ ಕೊಹ್ಲಿ ಲಂಡನ್‌ನಲ್ಲಿ ವಾಸಿಸುತ್ತಿದ್ದಾರೆ. ನಾನು ಇಲ್ಲಿಗೆ ಬಂದಿರುವುದು ತಿಳಿದು, ಅವರೇ ನನ್ನನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಅತಿ ಹೆಚ್ಚು ಶತಕ ಬಾರಿಸಿದ ಇಂತಹ ದೊಡ್ಡ ಭಾರತೀಯ ಕ್ರಿಕೆಟಿಗ ಇಷ್ಟೊಂದು ಸರಳ ವ್ಯಕ್ತಿತ್ವ ಹೊಂದಿರುವುದು ನನಗೆ ತುಂಬಾ ಸಂತೋಷ ತಂದಿತು. ಈ ಹಿಂದೆಯೂ ಭೇಟಿಯಾಗಿದ್ದೆವು, ಆದರೆ ಇಂದು ನಡೆದ ನೇರ ಮಾತುಕತೆಯಿಂದ ನನಗೆ ವಿಶೇಷ ಸಂತೋಷವಾಯಿತು. ಮಹಾರಾಷ್ಟ್ರದ ವಿವಿಧ ಕಲ್ಯಾಣ ಯೋಜನೆಗಳ ಬಗ್ಗೆ ಅವರಿಗೆ ವಿವರಿಸಿದೆ ಎಂದು ಹೇಳಿದರು.
ಇತ್ತೀಚಿನ ವರ್ಷಗಳಲ್ಲಿ ಮಹಾರಾಷ್ಟ್ರ ಅಭೂತ ಪೂರ್ವ ರೀತಿಯಲ್ಲಿ ಅಭಿವೃದ್ಧಿ ಕಂಡಿದೆ ಎಂದು ಸ್ವತಃ ಅವರೇ ಅಭಿಪ್ರಾಯಪಟ್ಟರು.
ವಿಮಾನ ನಿಲ್ದಾಣದ ಸಮೀಪದ 'ಥರ್ಡ್ ಮುಂಬೈ' (Third Mumbai) ಅಭಿವೃದ್ಧಿ, ಅಟಲ್ ಸೇತು, ಬಾಳಾಸಾಹೇಬ್ ಠಾಕ್ರೆ ಸಮೃದ್ಧಿ ಮಹಾಮಾರ್ಗ, ಕರಾವಳಿ ರಸ್ತೆ (coastal road), ಮೆಟ್ರೋ ಹಾಗೂ ಶಾಲೆ ಮತ್ತು ಆರೋಗ್ಯ ಸೇವೆಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳು ಹಾಗೂ ಸದ್ಯ ನಡೆಯುತ್ತಿರುವ ಮೂಲಸೌಕರ್ಯ ಯೋಜನೆಗಳು ಮತ್ತು ನಮ್ಮ ಭವಿಷ್ಯದ ಯೋಜನೆಗಳ ಬಗ್ಗೆಯೂ ಅವರೊಂದಿಗೆ ಮಾಹಿತಿ ಹಂಚಿಕೊಂಡಿರುವುದಾಗಿ ಏಕನಾಥ್ ಶಿಂಧೆ ತಿಳಿಸಿದರು.