ಅಮೆರಿಕ-ಇಸ್ರೇಲ್ ಮುಂದೆ ಎಂದಿಗೂ ತಲೆಬಾಗಲ್ಲ, ದಬ್ಬಾಳಿಕೆಗೆ ಜಗ್ಗಲ್ಲ: ನಾಗರಿಕ ರಕ್ಷಣಾ ನೆಲೆಗಳ ಮೇಲಿನ ದಾಳಿಗೆ ಇರಾನ್ ತೀವ್ರ ಆಕ್ರೋಶ..!

ಅವರು ಮಾನವೀಯತೆಯಿದ್ದಿದ್ದರೆ, ಜನರಿಗೆ ನೀರು, ಆಹಾರ ಮತ್ತು ಔಷಧಿಗಳ ಲಭ್ಯತೆಯನ್ನು ಏಕೆ ನಿರಾಕರಿಸಬೇಕು? ಹೆದರಿಸಿ, ಬೆದರಿಸಿ ನಮ್ಮ ಜನರನ್ನು ಬೆದರಿಸಿ ಶರಣಾಗುವಂತೆ ಮಾಡಲು ಅವರಿಗೆ ಸಾಧ್ಯವಿಲ್ಲ. ಈ ದಬ್ಬಾಳಿಕೆಯ ಮುಂದೆ ಇರಾನ್ ಎಂದಿಗೂ ತಲೆಬಾಗಲ್ಲ.
Benjamin Netanyahu- Donald Trump-Masoud Pezeshkian
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು- ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್- ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್online desk
Updated on

ಇರಾನ್‌ನ ಸೇನಾ ಪಡೆಗಳನ್ನು ಗುರಿಯಾಗಿಸುವ ಬದಲು ನಾಗರಿಕ ಮೂಲಸೌಕರ್ಯ, ಆಹಾರ ಪೂರೈಕೆ ಮತ್ತು ಜನರ ಜೀವನೋಪಾಯಗಳ ಮೇಲೆ ದಾಳಿ ನಡೆಸಲಾಗುತ್ತಿದ್ದು, ಅಮೆರಿಕ ಮತ್ತು ಇಸ್ರೇಲ್‌ನ ಒತ್ತಡಕ್ಕೆ ಇರಾನ್ ಎಂದಿಗೂ ಶರಣಾಗುವುದಿಲ್ಲ ಎಂದು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಶನಿವಾರ ಹೇಳಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, “ಅಮೆರಿಕನ್ನರು ನಿಜವಾಗಿಯೂ ವೀರ ಯೋಧರಾಗಿದ್ದರೆ, ನಮ್ಮ ಶೂರ ಸೇನಾ ಪಡೆಗಳನ್ನು ಎದುರಿಸಲಿ. ನಾಗರಿಕ ಮೂಲಸೌಕರ್ಯ, ಆಹಾರ ಪೂರೈಕೆ ಮತ್ತು ಜನರ ಜೀವನೋಪಾಯಗಳ ಮೇಲೆ ಏಕೆ ಯುದ್ಧ ನಡೆಸಬೇಕು?” ಎಂದು ಹೇಳಿದ್ದಾರೆ.

“ಅವರು ಮಾನವೀಯತೆಯಿದ್ದಿದ್ದರೆ, ಜನರಿಗೆ ನೀರು, ಆಹಾರ ಮತ್ತು ಔಷಧಿಗಳ ಲಭ್ಯತೆಯನ್ನು ಏಕೆ ನಿರಾಕರಿಸಬೇಕು? ಹೆದರಿಸಿ, ಬೆದರಿಸಿ ನಮ್ಮ ಜನರನ್ನು ಬೆದರಿಸಿ ಶರಣಾಗುವಂತೆ ಮಾಡಲು ಅವರಿಗೆ ಸಾಧ್ಯವಿಲ್ಲ. ಈ ದಬ್ಬಾಳಿಕೆಯ ಮುಂದೆ ಇರಾನ್ ಎಂದಿಗೂ ತಲೆಬಾಗಲ್ಲ ಎಂದು ತಿಳಿಸಿದ್ದಾರೆ.

ಪೆಜೆಶ್ಕಿಯನ್ ಸದ್ಯ ಭಾರತದಲ್ಲಿದ್ದು, ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇಂಡಿಯಾ ಟುಡೇ ಸಮೂಹದ ವಿದೇಶಾಂಗ ವ್ಯವಹಾರಗಳ ಸಂಪಾದಕಿ ಗೀತಾ ಮೋಹನ್ ಅವರಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುತ್ತಿದೆ ಎಂಬ ಆರೋಪವನ್ನು ತಳ್ಳಿಹಾಕಿದ್ದಾರೆ.

ಇರಾನ್‌ನ ಪರಮಾಣು ಕಾರ್ಯಕ್ರಮದ ಕುರಿತ ಆರೋಪಗಳನ್ನು ಅಮೆರಿಕ ಮತ್ತು ಇಸ್ರೇಲ್ ಮಿಲಿಟರಿ ದಾಳಿಗೆ ನೆಪವಾಗಿ ಬಳಸಿಕೊಳ್ಳುತ್ತಿವೆ ಎಂದು ಅವರು ಆರೋಪಿಸಿದ್ದಾರೆ.

ಅಂತರರಾಷ್ಟ್ರೀಯ ನಿಯಮಗಳ ವ್ಯಾಪ್ತಿಯಲ್ಲಿ ‘ಇರಾನ್‌ನ ಪರಮಾಣು ಕಾರ್ಯಕ್ರಮ’

ಇದೇ ವೇಳೆ ಇರಾನ್‌ನ ಪರಮಾಣು ಚಟುವಟಿಕೆಗಳು ಅಂತರರಾಷ್ಟ್ರೀಯವಾಗಿ ಮಾನ್ಯತೆ ಪಡೆದ ನಿಯಮಗಳ ವ್ಯಾಪ್ತಿಯಲ್ಲಿಯೇ ನಡೆದಿವೆ ಎಂದು ಪೆಜೆಶ್ಕಿಯನ್ ಹೇಳಿದ್ದಾರೆ. ಇದಕ್ಕೆ ಪೂರಕವಾಗಿ ಇರಾನ್ ಪರಮಾಣು ಶಸ್ತ್ರಾಸ್ತ್ರ ಪ್ರಸರಣ ತಡೆ ಒಪ್ಪಂದದ ಸದಸ್ಯ ರಾಷ್ಟ್ರವಾಗಿದೆ ಎಂದು ಅವರು ಹೇಳಿದ್ದಾರೆ.

ನಾವು ಪರಮಾಣು ಶಸ್ತ್ರಾಸ್ತ್ರಗಳನ್ನು ಪಡೆಯಲು ಬಯಸಿದ್ದರೆ, ಪರಮಾಣು ಶಸ್ತ್ರಾಸ್ತ್ರ ಪ್ರಸರಣ ತಡೆ ಒಪ್ಪಂದದ ಸದಸ್ಯರಾಗುತ್ತಿರಲಿಲ್ಲ. ಈಗ ಅವರು ನಮ್ಮ ನೆಲದ ಮೇಲೆ ದಾಳಿ ನಡೆಸಲು ನೆಪಗಳು ಮತ್ತು ಕಾರಣಗಳನ್ನು ಸೃಷ್ಟಿಸುತ್ತಿದ್ದಾರೆ.

ಇರಾನ್‌ನ ಪರಮಾಣು ಕಾರ್ಯಕ್ರಮದ ಮೇಲೆ ವ್ಯಾಪಕ ಅಂತರರಾಷ್ಟ್ರೀಯ ನಿಗಾ ಇರಿಸಲಾಗಿತ್ತು ಮತ್ತು ಪರಮಾಣು ಶಸ್ತ್ರಾಸ್ತ್ರ ಪ್ರಸರಣ ತಡೆ ಒಪ್ಪಂದದ ಚೌಕಟ್ಟಿನೊಳಗೆ ಪರಮಾಣು ವಿಚಾರಗಳ ಕುರಿತು ಮಾತುಕತೆ ನಡೆಸಲು ಟೆಹ್ರಾನ್ ಸಿದ್ಧವಾಗಿದೆ ಎಂದು ಹೇಳಿದ್ದಾರೆ.

ಇರಾನ್‌ನ ಪರಮಾಣು ಚಟುವಟಿಕೆಗಳ ಮೇಲೆ ಪ್ರತಿದಿನ ಅತ್ಯಂತ ಹೆಚ್ಚಿನ ಮಟ್ಟದ ನಿಗಾ ವಹಿಸಲಾಗುತ್ತದೆ. ಅವರು ಬಂದು ಪರಿಶೀಲನೆ ನಡೆಸಿದ್ದಾರೆ. ನಾವು ಎಲ್ಲವನ್ನೂ ಮಾಡಿದ್ದೇವೆ ಮತ್ತು ಅಂತರರಾಷ್ಟ್ರೀಯ ತತ್ವಗಳ ಚೌಕಟ್ಟಿನಲ್ಲಿಯೇ ಕಾರ್ಯನಿರ್ವಹಿಸಿದ್ದೇವೆ ಎಂದಿದ್ದಾರೆ.

Benjamin Netanyahu- Donald Trump-Masoud Pezeshkian
BRICS Summit: ಪಶ್ಚಿಮ ಏಷ್ಯಾ ಸಂಘರ್ಷ ಕುರಿತ ಜಂಟಿ ಹೇಳಿಕೆಗೆ ಬ್ರಿಕ್ಸ್ ರಾಷ್ಟ್ರಗಳ ಒಮ್ಮತ; ಇರಾನ್ ಸಂಘರ್ಷದಲ್ಲಿ ಪಾತ್ರ ನಿರಾಕರಿಸಿದ UAE

ಇದೇ ವೇಳೆ ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುತ್ತಿದೆ ಎಂಬ ಆರೋಪಗಳಿಗೆ ಅಮೆರಿಕ ಮತ್ತು ಇಸ್ರೇಲ್ ಬಳಿ ಇರುವ ನಿಖರ ಸಾಕ್ಷ್ಯವೇನು ಎಂದು ಪ್ರಶ್ನಿಸಿದ ಪೆಜೆಶ್ಕಿಯನ್, ಈ ಆರೋಪಗಳು ಉದ್ದೇಶಪೂರ್ವಕ ಪ್ರಚಾರದ ಭಾಗವಾಗಿವೆ ಎಂದು ಹೇಳಿದ್ದಾರೆ.

‘ಖಮೇನಿ ಹತ್ಯೆಯ ಬಳಿಕ ಟ್ರಂಪ್ ಜೊತೆ ಮಾತುಕತೆ ಕಷ್ಟ’

ಬಳಿಕ ಪರಮಾಣು ವಿಚಾರದಲ್ಲಿ ಮಾತುಕತೆ ಪುನರಾರಂಭಿಸಲು ಟೆಹ್ರಾನ್ ಸಿದ್ಧವಿದೆ ಎಂದಿರುವ ಅವರು, ಉಭಯ ದೇಶಗಳ ನಡುವಿನ ನಂಬಿಕೆ ಸಂಪೂರ್ಣವಾಗಿ ಕುಸಿದಿರುವುದರಿಂದ ಅಮೆರಿಕದೊಂದಿಗೆ ತಕ್ಷಣವೇ ನೇರ ಮಾತುಕತೆ ಪುನರಾರಂಭಿಸುವ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ.

ಫೆಬ್ರವರಿ 28ರಂದು ಆರಂಭವಾದ ಯುದ್ಧದ ಮೊದಲ ದಿನವೇ ಇರಾನ್‌ನ ಮಾಜಿ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಹತ್ಯೆಯಾದ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ನೇರ ಮಾತುಕತೆ ನಡೆಸುವುದು ವಿಶೇಷವಾಗಿ ಕಷ್ಟಕರವಾಗಿದೆ.

ಅವರು ನಮ್ಮ ನಾಯಕನನ್ನು ಯಾವ ಆಧಾರದ ಮೇಲೆ ಹತ್ಯೆ ಮಾಡಿದ್ದಾರೆ? ಇದು ನಮ್ಮ ಸಮಾಜಕ್ಕೆ ಅತ್ಯಂತ ಕಷ್ಟಕರವಾದ ವಿಚಾರ. ನಾಯಕನ ಹತ್ಯೆಯ ಬಳಿಕ ಇರಾನ್ ಸಮಾಜ ತಕ್ಷಣವೇ ಅಮೆರಿಕದೊಂದಿಗೆ ನೇರ ಮಾತುಕತೆಗೆ ಮರಳುತ್ತದೆ ಎಂದು ನಿರೀಕ್ಷಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಯಾವುದೇ ಪೂರ್ವಶರತ್ತುಗಳಿಲ್ಲದೆ ಟ್ರಂಪ್ ಅವರೊಂದಿಗೆ ನೇರ ಮಾತುಕತೆಗೆ ಟೆಹ್ರಾನ್ ಸಿದ್ಧವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಇರಾನ್ ತಕ್ಷಣ ಅಂತಹ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ನಂತರ ಟೆಹ್ರಾನ್ ಅಮೆರಿಕದೊಂದಿಗೆ ಒಪ್ಪಂದಕ್ಕೆ ಬಂದು ತಿಳಿವಳಿಕೆ ಪತ್ರವೊಂದಕ್ಕೆ ಸಹಿ ಹಾಕಿತ್ತು. ಆದರೆ, ಬಳಿಕ ವಾಷಿಂಗ್ಟನ್ ಆ ಒಪ್ಪಂದದಿಂದ ಹಿಂದೆ ಸರಿಯಿತು ಎಂದು ಆರೋಪಿಸಿದ್ದಾರೆ. ನಿರ್ಬಂಧಗಳನ್ನು ತೆರವುಗೊಳಿಸಬೇಕು ಮತ್ತು ಅಮೆರಿಕ ಇರಾನ್ ಮೇಲೆ ದಾಳಿ ನಡೆಸುವುದನ್ನು ನಿಲ್ಲಿಸಬೇಕು ಎಂಬುದು ಇರಾನ್‌ನ ನಿಲುವು ಎಂದೂ ಸ್ಪಷ್ಟಪಡಿಸಿದ್ದಾರೆ.

‘ಇಸ್ರೇಲ್‌ನ ಪರಮಾಣು ಕಾರ್ಯಕ್ರಮದ ಮೇಲೆ ಏಕೆ ಪರಿಶೀಲನೆ ಇಲ್ಲ?’

ಇದೇ ವೇಳೆ ಇಸ್ರೇಲ್‌ನ ಪರಮಾಣು ಸಾಮರ್ಥ್ಯದ ಮೇಲೆ ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಪರಿಶೀಲನೆಯ ಪ್ರಮಾಣವನ್ನೂ ಪೆಜೆಶ್ಕಿಯನ್ ಪ್ರಶ್ನಿಸಿದ್ದಾರೆ. ಇಸ್ರೇಲ್ ಪರಮಾಣು ಶಸ್ತ್ರಾಸ್ತ್ರ ಪ್ರಸರಣ ತಡೆ ಒಪ್ಪಂದದ ಸದಸ್ಯ ರಾಷ್ಟ್ರವಲ್ಲ ಎಂಬುದನ್ನು ಅವರು ಉಲ್ಲೇಖಿಸಿದ್ದಾರೆ.

ಇಸ್ರೇಲ್‌ನ ನೀತಿಗಳಿಗೆ ಇರಾನ್ ವಿರೋಧ ವ್ಯಕ್ತಪಡಿಸುತ್ತಿರುವುದು ಹಾಗೂ ಪ್ಯಾಲೆಸ್ಟೀನಿಯರಿಗೆ ಬೆಂಬಲ ನೀಡುತ್ತಿರುವುದನ್ನೇ ಇರಾನ್ ವಿರುದ್ಧ ಮಿಲಿಟರಿ ಕ್ರಮ ಕೈಗೊಳ್ಳಲು ಅಮೆರಿಕ ಮತ್ತು ಇಸ್ರೇಲ್ ನೆಪವಾಗಿ ಬಳಸಿಕೊಳ್ಳುತ್ತಿವೆ ಎಂದು ಆರೋಪಿಸಿದ್ದಾರೆ.

ಗಾಜಾ ಮತ್ತು ಲೆಬನಾನ್‌ನಲ್ಲಿ ಇಸ್ರೇಲ್ ಹಾಗೂ ಅಮೆರಿಕ ನಡೆಸುತ್ತಿರುವ ಕ್ರಮಗಳನ್ನೂ ಇರಾನ್ ಅಧ್ಯಕ್ಷ ಖಂಡಿಸಿದ್ದಾರೆ.

ನಾಗರಿಕರನ್ನು ಹತ್ಯೆ ಮಾಡಲಾಗುತ್ತಿದೆ ಮತ್ತು ಅಗತ್ಯ ವಸ್ತುಗಳ ಪೂರೈಕೆಗೆ ನಿರ್ಬಂಧ ವಿಧಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಈ ಪರಿಸ್ಥಿತಿ ಕುರಿತು ಅಂತರರಾಷ್ಟ್ರೀಯ ಸಮುದಾಯ ಮೌನವಾಗಿರುವುದನ್ನೂ ಅವರು ಟೀಕಿಸಿದ್ದಾರೆ.

ಪ್ರಾದೇಶಿಕ ಶಾಂತಿ ಮತ್ತು ಭದ್ರತಾ ವ್ಯವಸ್ಥೆಗೆ ಪೆಜೆಶ್ಕಿಯನ್ ಕರೆ

ಇರಾನ್, ಸೌದಿ ಅರೇಬಿಯಾ, ಟರ್ಕಿ, ಪಾಕಿಸ್ತಾನ ಸೇರಿದಂತೆ ಮಧ್ಯಪ್ರಾಚ್ಯದ ಇತರ ದೇಶಗಳು ಒಗ್ಗೂಡಿ ಶಾಂತಿ ಮತ್ತು ಭದ್ರತೆಗಾಗಿ ಪ್ರಾದೇಶಿಕ ವ್ಯವಸ್ಥೆಯೊಂದನ್ನು ರೂಪಿಸಬೇಕು ಎಂದು ಪೆಜೆಶ್ಕಿಯನ್ ಕರೆ ನೀಡಿದ್ದಾರೆ.

ಈ ಪ್ರದೇಶದಲ್ಲಿ ಸಂಘರ್ಷ ನಡೆಯಲು ಯಾವುದೇ ಕಾರಣವಿಲ್ಲ. ಹಲವು ಶತಮಾನಗಳ ಸಂಘರ್ಷದ ಬಳಿಕ ಯುರೋಪಿನ ರಾಷ್ಟ್ರಗಳು ಸಹಕಾರದ ವ್ಯವಸ್ಥೆಗಳನ್ನು ರೂಪಿಸಿಕೊಂಡಿರುವಂತೆ ಮಧ್ಯಪ್ರಾಚ್ಯದ ದೇಶಗಳೂ ಸಹಕಾರದ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ದೇಶಗಳು ತಮ್ಮದೇ ಆದ ಗುರುತು ಮತ್ತು ರಾಷ್ಟ್ರೀಯ ಹಿತಾಸಕ್ತಿಗಳನ್ನು ಉಳಿಸಿಕೊಂಡು ಸಾಮಾನ್ಯ ಪ್ರಾದೇಶಿಕ ಭದ್ರತಾ ವ್ಯವಸ್ಥೆಯಡಿ ಸಹಕರಿಸಬಹುದು. ಇದರ ಜೊತೆಗೆ ವ್ಯಾಪಾರ ಮತ್ತು ಆರ್ಥಿಕ ಸಂಬಂಧಗಳನ್ನು ವಿಸ್ತರಿಸಬಹುದು ಎಂದು ಹೇಳಿದ್ದಾರೆ.

ಯುನೈಟೆಡ್ ಅರಬ್ ಎಮಿರೇಟ್ಸ್‌ ಜತೆ ಇರಾನ್‌ಗೆ ಯಾವುದೇ ಸಮಸ್ಯೆಯಿಲ್ಲ. ಯುಎಇ ಸೇರಿದಂತೆ ಈ ಪ್ರದೇಶದ ಇತರ ದೇಶಗಳನ್ನು ‘ಸಹೋದರರು’, ಇರಾನ್ ಮತ್ತು ನೆರೆಯ ರಾಷ್ಟ್ರಗಳ ನಡುವೆ ದೀರ್ಘಕಾಲದ ವ್ಯಾಪಾರ ಹಾಗೂ ಸಾಮಾಜಿಕ ಸಂಬಂಧಗಳಿವೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com