

Pakistan Strikes on Afghanistan: ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಸಂಘರ್ಷ ಮುಗಿಯುವಂತೆ ಕಾಣುತ್ತಿಲ್ಲ! ಅದೆಷ್ಟೋ ಭಾರೀ ಕದನವಿರಾಮ ಘೋಷಿಸಿದರು, ಒಬ್ಬರ ಮೇಲೆ ಮತ್ತೊಬ್ಬರು ನೆಪ ಹೇಳಿ ದಾಳಿಗಳನ್ನು ಮಾಡುತ್ತಿದ್ದಾರೆ. ಅದರಂತೆ, ಪಾಕಿಸ್ತಾನವು ಅಫ್ಘಾನಿಸ್ತಾನದ ಒಟ್ಟು 10 ಸೇನಾ ನೆಲೆಗಳ ಮೇಲೆ ಭೀಕರ ವೈಮಾನಿಕ ಮತ್ತು ಡ್ರೋನ್ ದಾಳಿಗಳನ್ನು ನಡೆಸಿದ್ದು, ತನ್ನ ವಾಯುಗಡಿಯೊಳಗೆ ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತವು ನಡೆಸಿದ್ದ ಡ್ರೋನ್ ದಾಳಿಗಳಿಗೆ ಪ್ರತಿಯಾಗಿ ಈ ತಕ್ಕ ಪ್ರತ್ಯುತ್ತರ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದೆ. ಆ ಕುರಿತ ವರದಿ ಇಲ್ಲಿದೆ:
ಅಫ್ಘಾನಿಸ್ತಾನದ ಮೇಲೆ ವೈಮಾನಿಕ ದಾಳಿ ನಡೆಸಿದ ಬಗ್ಗೆ ಮಾತನಾಡಿದ ಪಾಕ್ ಮಾಹಿತಿ ಸಚಿವ ಅಟಾವುಲ್ಲಾ ತರಾರ್, ಸೆಪ್ಟೆಂಬರ್ 23ರಂದು ಅಫ್ಘಾನಿಸ್ತಾನದ ಕಡೆಯಿಂದ ಒಟ್ಟು 8 ಸಶಸ್ತ್ರ ಡ್ರೋನ್‌ಗಳು ಪಾಕಿಸ್ತಾನದ ವಾಯುಗಡಿಯನ್ನು ಅಕ್ರಮವಾಗಿ ಪ್ರವೇಶಿಸಿದ್ದವು. ಆ ವೇಳೆ, ಪಾಕಿಸ್ತಾನದ ವಾಯು ರಕ್ಷಣಾ ವ್ಯವಸ್ಥೆಯು ಆ ಎಲ್ಲಾ ಎಂಟು ಡ್ರೋನ್‌ಗಳನ್ನು ಗುರುತಿಸಿ, ಅವುಗಳು ಗುರಿ ತಲುಪುವ ಮುನ್ನವೇ ಹೊಡೆದುರುಳಿಸಿತ್ತು. ಈ ನೇರ ಆಕ್ರಮಣಕ್ಕೆ ಪ್ರತಿಯಾಗಿ ಪಾಕಿಸ್ತಾನವು ಸ್ವಯಂ ರಕ್ಷಣೆಗಾಗಿ ಮರುದಾಳಿ ನಡೆಸಿದೆ ಎಂದು ತಿಳಿಸಿದ್ದಾನೆ.
ಮತ್ತೊಂದೆಡೆ, ಪಾಕಿಸ್ತಾನದ ಮೇಲೆ ತಾವು ಯಾವುದೇ ಡ್ರೋನ್ ದಾಳಿ ನಡೆಸಿಲ್ಲ ಎಂದು ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರವು ಸ್ಪಷ್ಟವಾಗಿ ನಿರಾಕರಿಸಿದೆ. ಈ ಬಗ್ಗೆ ಮಾತನಾಡಿದ ತಾಲಿಬಾನ್ ಸರ್ಕಾರದ ವಕ್ತಾರ ಜಬೀವುಲ್ಲಾ ಮುಜಾಹಿದ್ ಅವರು, ಪಾಕಿಸ್ತಾನದ ಈ ವೈಮಾನಿಕ ದಾಳಿಯು ಅಫ್ಘಾನಿಸ್ತಾನದ ಸಾರ್ವಭೌಮತ್ವದ ಮೇಲಿನ ದಾಳಿಯಾಗಿದೆ ಎಂದು ಖಂಡಿಸಿದ್ದು, ಇದಕ್ಕೆ ಸೂಕ್ತ ರೀತಿಯಲ್ಲೇ ಪ್ರತಿ-ಪ್ರತಿಕ್ರಿಯೆ ನೀಡುವುದಾಗಿ ಎಚ್ಚರಿಸಿದ್ದಾರೆ. ಜೊತೆಗೆ, ದಾಳಿಯಲ್ಲಿ 4 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ತಾಲಿಬಾನ್ ಆಡಳಿತ ಹೇಳಿದೆ. ಆದರೆ, ಪಾಕಿಸ್ತಾನವು ಇದು ಸಂಪೂರ್ಣವಾಗಿ ನಿಖರವಾದ ಮಿಲಿಟರಿ ಕಾರ್ಯಾಚರಣೆಯಾಗಿದ್ದು, ಯಾವುದೇ ನಾಗರಿಕರಿಗೆ ಹಾನಿಯಾಗಿಲ್ಲ ಎಂದು ಪ್ರತಿಪಾದಿಸಿದೆ.
ದೀರ್ಘಕಾಲದ ಗಡಿ ಸಂಘರ್ಷ...
2026ರ ಫೆಬ್ರವರಿಯಿಂದಲೇ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವೆ ಬಹಿರಂಗ ಯುದ್ಧ ನಡೆಯುತ್ತಿದ್ದು, ನೂರಾರು ಜನ ಮೃತಪಟ್ಟಿದ್ದಾರೆ. ಪಾಕಿಸ್ತಾನದಲ್ಲಿ ಇತ್ತೀಚೆಗೆ ನಡೆದ 31 ಪೊಲೀಸರ ಸಾವಿಗೆ ಕಾರಣವಾದ ಪೊಲೀಸ್ ಪ್ರಧಾನ ಕಚೇರಿ ಮೇಲಿನ ದಾಳಿ ಸೇರಿದಂತೆ ಹಲವು ಭಯೋತ್ಪಾದಕ ಕೃತ್ಯಗಳಿಗೆ ಅಫ್ಘಾನಿಸ್ತಾನದಲ್ಲಿ ಆಶ್ರಯ ಪಡೆದಿರುವ ಟಿಟಿಪಿ (ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್) ಉಗ್ರ ಸಂಘಟನೆಯೇ ಕಾರಣ ಎಂದು ಪಾಕಿಸ್ತಾನ ಸುದೀರ್ಘವಾಗಿ ಆರೋಪಿಸುತ್ತಾ ಬಂದಿದೆ. ಆದರೆ ತಾಲಿಬಾನ್ ಇದನ್ನು ನಿರಂತರವಾಗಿ ನಿರಾಕರಿಸುತ್ತಿದೆ.