‘ಸೇನೆಯಿಂದ, ಸೇನೆಗಾಗಿ, ಸೇನೆಯದ್ದೇ ಆಡಳಿತ’: ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನ ವಿರುದ್ಧ ಭಾರತ ವಾಗ್ದಾಳಿ; Video

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ‘ರೈಟ್ ಆಫ್ ರಿಪ್ಲೈ’ ಬಳಸಿಕೊಂಡು ಪ್ರತಿಕ್ರಿಯಿಸಿದ ಭಾರತ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಮಾಡಿದ ಹೇಳಿಕೆಗಳಿಗೆ ತಿರುಗೇಟು ನೀಡಿತು.
First Secretary in the Permanent Mission of India to the UN, Petal Gahlot
ವಿಶ್ವಸಂಸ್ಥೆಯಲ್ಲಿನ ಭಾರತದ ಶಾಶ್ವತ ನಿಯೋಗದ ಪ್ರಥಮ ಕಾರ್ಯದರ್ಶಿ ಪೆಟಲ್ ಗೆಹ್ಲೋಟ್
Updated on: 

ವಿಶ್ವಸಂಸ್ಥೆ: ಪಾಕಿಸ್ತಾನವನ್ನು “ಕೈಗೊಂಬೆ ಸರ್ಕಾರ” ಎಂದು ಬಣ್ಣಿಸಿರುವ ಭಾರತ, ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನ ವಿರುದ್ಧ ತೀವ್ರ ವಾಗ್ದಾಳಿ ನಡೆಸಿತು. ಪಾಕಿಸ್ತಾನದ ಸುಳ್ಳು ಮತ್ತು ವಂಚನೆಯನ್ನು ಟೀಕಿಸಿದ ಭಾರತ, ಇಸ್ಲಾಮಾಬಾದ್‌ನಿಂದ ಮುಂದುವರಿಯುವ ಭಯೋತ್ಪಾದನೆಗೆ ಪರಿಣಾಮ ಎದುರಾಗಲಿದೆ ಎಂದು ಎಚ್ಚರಿಸಿತು.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ‘ರೈಟ್ ಆಫ್ ರಿಪ್ಲೈ’ ಬಳಸಿಕೊಂಡು ಪ್ರತಿಕ್ರಿಯಿಸಿದ ಭಾರತ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಮಾಡಿದ ಹೇಳಿಕೆಗಳಿಗೆ ತಿರುಗೇಟು ನೀಡಿತು.

2025ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷದ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ “ಸಕಾಲಿಕ ಮಧ್ಯಸ್ಥಿಕೆ”ಯನ್ನು ಷರೀಫ್ ಶ್ಲಾಘಿಸಿದ್ದರು. ಅಲ್ಲದೆ, ಅವರು ಮತ್ತೆ ಕಾಶ್ಮೀರ ವಿಷಯವನ್ನೂ ಪ್ರಸ್ತಾಪಿಸಿದ್ದರು.

First Secretary in the Permanent Mission of India to the UN, Petal Gahlot
ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಮತ್ತೆ ಬಿರುಗಾಳಿ: ವಿದೇಶಿ-ಸ್ಥಳೀಯ ಕೋಚ್‌ಗಳ ನಡುವೆ ತಾರತಮ್ಯ, ಭಾರತ ಆತುರಪಡಲಿಲ್ಲ: Misbah-ul-Haq ಹೇಳಿದ್ದೇನು?

ವಿಶ್ವಸಂಸ್ಥೆಯಲ್ಲಿನ ಭಾರತದ ಶಾಶ್ವತ ನಿಯೋಗದ ಪ್ರಥಮ ಕಾರ್ಯದರ್ಶಿ ಪೆಟಲ್ ಗೆಹ್ಲೋಟ್, ಪ್ರಜಾಸತ್ತಾತ್ಮಕ ಹಕ್ಕುಗಳು ಮತ್ತು ಮಾನವೀಯ ಮೌಲ್ಯಗಳ ಕುರಿತು ಪಾಕಿಸ್ತಾನ ಮಾಡಿರುವ ಹೇಳಿಕೆಗಳು ಕಪಟ ಉಪದೇಶವಾಗಿದ್ದು, ತನ್ನದೇ ಜನರಿಂದ ರಾಜಧಾನಿಯನ್ನು ಭದ್ರಪಡಿಸಿಕೊಳ್ಳುತ್ತಿರುವ ಸರ್ಕಾರದಿಂದ ಇಂತಹ ಹೇಳಿಕೆಗಳು ಬಂದಿವೆ ಎಂದು ಟೀಕಿಸಿದರು.

ಇದು ಸೇನೆಯ ಸರ್ಕಾರ, ಸೇನೆಯಿಂದ ಮತ್ತು ಸೇನೆಗಾಗಿ ಇರುವ ಸರ್ಕಾರ. ಅವರ ಗೊಂಬೆಗಳು ಬರಬಹುದು, ಹೋಗಬಹುದು. ಆದರೆ ನಿಜವಾಗಿ ಅಧಿಕಾರ ಯಾರ ಕೈಯಲ್ಲಿದೆ ಎಂಬ ಬಗ್ಗೆ ಯಾವುದೇ ಭ್ರಮೆ ಬೇಡ. ಪಾಕಿಸ್ತಾನದ ವಾಸ್ತವವನ್ನು ಅದರ 27ನೇ ಸಂವಿಧಾನ ತಿದ್ದುಪಡಿ ಹಾಗೂ ಅದರ ನೈಜ ಆಡಳಿತಗಾರನಿಗೆ ನೀಡಿರುವ ಜೀವಾವಧಿ ಕಾನೂನು ರಕ್ಷಣೆಯಿಂದ ಅರ್ಥಮಾಡಿಕೊಳ್ಳಬಹುದು ಎಂದು ಗೆಹ್ಲೋಟ್ ಹೇಳಿದರು.

First Secretary in the Permanent Mission of India to the UN, Petal Gahlot
ಆಪರೇಷನ್ ಸಿಂಧೂರ್ ಎಫೆಕ್ಟ್: ಬ್ರಹ್ಮೋಸ್ ಕ್ಷಿಪಣಿ ಅಂದಾಕ್ಷಣ ಪಾಕಿಸ್ತಾನ ನಡುಗುತ್ತದೆ; ಗೃಹ ಸಚಿವ ಅಮಿತ್ ಶಾ

ಶೆಹಬಾಜ್ ಷರೀಫ್ ಸರ್ಕಾರ ಕಳೆದ ವರ್ಷ ನವೆಂಬರ್‌ನಲ್ಲಿ ಅಂಗೀಕರಿಸಿದ 27ನೇ ಸಂವಿಧಾನ ತಿದ್ದುಪಡಿಯನ್ನು ಅವರು ಉಲ್ಲೇಖಿಸಿದರು. ಈ ತಿದ್ದುಪಡಿ ಪಾಕಿಸ್ತಾನದ ರಕ್ಷಣಾ ಪಡೆಗಳ ಮುಖ್ಯಸ್ಥ ಹಾಗೂ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರಿಗೆ ಕಾನೂನು ಕ್ರಮದಿಂದ ಜೀವಾವಧಿ ರಕ್ಷಣೆ ನೀಡುತ್ತದೆ.

ಈ ಸಭೆಯು ಪಾಕಿಸ್ತಾನ ಮತ್ತು ಅದರ ನೀತಿಗಳನ್ನು ಅವು ನಿಜವಾಗಿರುವ ರೀತಿಯಲ್ಲೇ ಗುರುತಿಸುತ್ತದೆ ಎಂಬ ವಿಶ್ವಾಸ ನಮಗಿದೆ; ಅದರ ಪ್ರತಿನಿಧಿ ಸುಳ್ಳುಗಳನ್ನು ಹೇಳಿ ಬಿಂಬಿಸುವ ರೀತಿಯಲ್ಲಿ ಅಲ್ಲ. ವರ್ಷದಿಂದ ವರ್ಷಕ್ಕೆ ಸುಳ್ಳುಗಳನ್ನು ಪುನರಾವರ್ತಿಸುವುದರಿಂದ ಅವು ಸತ್ಯವಾಗುವುದಿಲ್ಲ. ಪಾಕಿಸ್ತಾನದ ಭಯೋತ್ಪಾದನೆ, ವಂಚನೆ ಮತ್ತು ದ್ವಂದ್ವ ನೀತಿ ಅದಕ್ಕಾಗಲಿ ಅಥವಾ ಜಗತ್ತಿಗಾಗಲಿ ಯಾವುದೇ ಪ್ರಯೋಜನ ತರುವುದಿಲ್ಲ ಎಂದು ಹೇಳಿದರು.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಷರೀಫ್ ತಮ್ಮ ಭಾಷಣದಲ್ಲಿ ಟ್ರಂಪ್ ಅವರ ದೃಢನಿಶ್ಚಯದ ಮತ್ತು ದೂರದೃಷ್ಟಿಯ ನಾಯಕತ್ವವನ್ನು ಶ್ಲಾಘಿಸಿದ್ದರು. ದಕ್ಷಿಣ ಏಷ್ಯಾದಲ್ಲಿ ಕೋಟ್ಯಂತರ ಜೀವಗಳನ್ನು ಉಳಿಸಲು ಅಮೆರಿಕ ಅಧ್ಯಕ್ಷರ ಸಕಾಲಿಕ ಮಧ್ಯಸ್ಥಿಕೆ ನೆರವಾಯಿತು ಎಂದು ಹೇಳಿದ್ದರು.

ಸುಮಾರು 23 ನಿಮಿಷಗಳ ಭಾಷಣದಲ್ಲಿ ಷರೀಫ್ ಕಾಶ್ಮೀರ ವಿಷಯವನ್ನೂ ಪ್ರಸ್ತಾಪಿಸಿದ್ದರು. 2025ರಲ್ಲಿ ಉಂಟಾದಂತಹ ಮತ್ತೊಂದು ಸಂಘರ್ಷದ ಅಂಚಿಗೆ ದಕ್ಷಿಣ ಏಷ್ಯಾ ಮತ್ತೆ ತಲುಪದಂತೆ ನ್ಯಾಯಯುತ ಮತ್ತು ಸಮಾನ ಪರಿಹಾರ ಅಗತ್ಯವಿದೆ ಎಂದು ಅವರು ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಗೆಹ್ಲೋಟ್, ಷರೀಫ್ ಅವರ ವಿಚಿತ್ರ ಹೇಳಿಕೆಗಳು ನ್ಯೂಯಾರ್ಕ್ ನಗರ ಹಾಗೂ ಜಗತ್ತು ಸೆಪ್ಟೆಂಬರ್ 11, 2001ರ ಭಯೋತ್ಪಾದಕ ದಾಳಿಯ 25ನೇ ವಾರ್ಷಿಕೋತ್ಸವವನ್ನು ಆಚರಿಸಿದ ಕೇವಲ ಎರಡು ವಾರಗಳ ಬಳಿಕ ಬಂದಿವೆ.

ಈ ಸಂದರ್ಭವನ್ನು ನೆನಪಿನಲ್ಲಿಟ್ಟುಕೊಳ್ಳುವುದು ಮುಖ್ಯ. ಏಕೆಂದರೆ ಈ ದಾಳಿಯ ರೂವಾರಿ ಒಸಾಮಾ ಬಿನ್ ಲಾಡೆನ್ ಪಾಕಿಸ್ತಾನದ ಸೇನೆಯ ಪ್ರಮುಖ ತರಬೇತಿ ಅಕಾಡೆಮಿಯ ಪಕ್ಕದಲ್ಲೇ ವಾಸಿಸುತ್ತಿದ್ದ ಎಂದು ಗೆಹ್ಲೋಟ್ ಹೇಳಿದರು.

ಕಾಶ್ಮೀರ ಕುರಿತ ಷರೀಫ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಗೆಹ್ಲೋಟ್, ಜಮ್ಮು ಮತ್ತು ಕಾಶ್ಮೀರವು ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಭಾಗವಾಗಿದೆ ಎಂಬ ಭಾರತದ ನಿಲುವನ್ನು ಪುನರುಚ್ಚರಿಸಿದರು.

ನಾವು ಕಾಶ್ಮೀರದ ಬಗ್ಗೆ ಮಾತನಾಡಬೇಕಾದರೆ, ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದತ್ತ ಗಮನ ಹರಿಸೋಣ. ರಾವಲಾಕೋಟ್‌ನ ಜನರನ್ನು ಕೇಳಿ. ಅವರು ದೀರ್ಘಕಾಲದಿಂದ ಅನುಭವಿಸುತ್ತಿರುವ ಅನಗತ್ಯ ಹತ್ಯೆಗಳು, ಕ್ರೂರ ಹಿಂಸಾಚಾರ ಮತ್ತು ಮೂಲಭೂತ ಹಕ್ಕುಗಳ ನಿರಾಕರಣೆಯ ಬಗ್ಗೆ ಅವರಿಂದ ತಿಳಿದುಕೊಳ್ಳಿ ಎಂದು ಹೇಳಿದರು.

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ 12 ವಿವಾದಾತ್ಮಕ ನಿರಾಶ್ರಿತರ ಸ್ಥಾನಗಳ ವಿಚಾರವಾಗಿ ಹಲವು ತಿಂಗಳುಗಳಿಂದ ಪ್ರತಿಭಟನೆಗಳು ನಡೆಯುತ್ತಿವೆ. ಇದಕ್ಕೆ ಸಂಬಂಧಿಸಿದಂತೆ ಭದ್ರತಾ ಪಡೆಗಳು ಕ್ರಮ ಕೈಗೊಂಡಿದ್ದು, ಇತ್ತೀಚೆಗೆ ನಡೆದ ಅಲ್ಲಿನ ವಿಧಾನಸಭೆ ಚುನಾವಣೆಗಳಲ್ಲಿ ಅಕ್ರಮಗಳ ಆರೋಪಗಳೂ ಕೇಳಿಬಂದಿವೆ.

ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ನಾಗರಿಕರು ಮೃತಪಟ್ಟ ಹಿನ್ನೆಲೆಯಲ್ಲಿ ಭಾರತವು ಕಳೆದ ವರ್ಷ ಮೇ 7ರಂದು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ‘ಆಪರೇಷನ್ ಸಿಂಧೂರ್’ ನಡೆಸಿತ್ತು.

ಭಯೋತ್ಪಾದನೆಯ ವಿರುದ್ಧ ನಮ್ಮನ್ನು ನಾವು ರಕ್ಷಿಸಿಕೊಳ್ಳುವ ಹಕ್ಕನ್ನು ನಾವು ಬಳಸಿಕೊಳ್ಳುತ್ತೇವೆ. ಪಾಕಿಸ್ತಾನದಿಂದ ಮುಂದುವರಿಯುವ ಭಯೋತ್ಪಾದನೆಗೆ ಪರಿಣಾಮ ಎದುರಾಗಲಿದೆ. ಇದರಿಂದ ಸ್ನೇಹ ಮತ್ತು ಸೌಹಾರ್ದದ ಆಧಾರದ ಮೇಲೆ ಮಾಡಲಾಗಿದ್ದ ನಿಲುವುಗಳೇ ಪ್ರಶ್ನೆಗೆ ಒಳಗಾಗುವುದು ಸಹಜ ಎಂದು ಗೆಹ್ಲೋಟ್ ಹೇಳಿದರು.

ಧಾರ್ಮಿಕ ಅಸಹಿಷ್ಣುತೆ ಕುರಿತ ಷರೀಫ್ ಅವರ ಹೇಳಿಕೆಗಳನ್ನೂ ಅವರು ಟೀಕಿಸಿದರು. ದೀರ್ಘಕಾಲದ ಮತಾಂಧತೆ ಮತ್ತು ದ್ವೇಷದ ದಾಖಲೆಯನ್ನು ಹೊಂದಿರುವ ಸರ್ಕಾರದಿಂದ ಇಂತಹ ಹೇಳಿಕೆಗಳು ಬಂದಿವೆ ಎಂದು ಅವರು ಹೇಳಿದರು.

ಧಾರ್ಮಿಕ ಅಸಹಿಷ್ಣುತೆ ಕುರಿತು ಈ ಸಭೆಗೆ ಹೇಳಿಕೆ ನೀಡಿದ ಸರ್ಕಾರವೇ ಧರ್ಮನಿಂದನೆ ಕಾನೂನುಗಳನ್ನು ತನ್ನ ಪ್ರಮುಖ ಅಸ್ತ್ರವನ್ನಾಗಿ ಮಾಡಿಕೊಂಡಿದೆ. ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರನ್ನು ಹೇಗೆ ನಡೆಸಿಕೊಳ್ಳಲಾಗುತ್ತದೆ ಎಂಬುದು ಜಗತ್ತಿಗೆ ತಿಳಿದಿದೆ. ಯಾವುದೇ ಮೇಲ್ನೋಟದ ಮಾತುಗಳಿಂದ ಅದನ್ನು ಮರೆಮಾಚಲು ಸಾಧ್ಯವಿಲ್ಲ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com