ಉಪ್ಪಿನಕಾಯಿ ಜಯಶ್ರೀ

ಅಲ್ಲಿದ್ದವರೆಲ್ಲ ಜೀವನದಲ್ಲಿ ನೊಂದ ಮಹಿಳೆಯರೇ. ಒಬ್ಬರಿಗೆ ಬಡತನ ಹಾಸು ಹೊದ್ದು ಮಲಗಿದ್ದರೆ,..
ಉಪ್ಪಿನಕಾಯಿ ಜಯಶ್ರೀ
Updated on: 

ಅಲ್ಲಿದ್ದವರೆಲ್ಲ ಜೀವನದಲ್ಲಿ ನೊಂದ ಮಹಿಳೆಯರೇ. ಒಬ್ಬರಿಗೆ ಬಡತನ ಹಾಸು ಹೊದ್ದು ಮಲಗಿದ್ದರೆ, ಮತ್ತೊಬ್ಬರಿಗೆ ಅಕಾಲಿಕವಾಗಿ ಪತಿ ಕಳೆದುಕೊಂಡ ನೋವು. ಮತ್ತೊಂದಿಬ್ಬರಿಗೆ ಸಂಸಾರದ ನೊಗ ಭಾರ. ಹೀಗೆ ಅಲ್ಲಿ ಒಬ್ಬೊಬ್ಬರದು ಒಂದೊಂದು ಕಥೆ. ಆದರೆ, ಇದೇ ಹೆಣ್ಣುಮಕ್ಕಳು ಮತ್ತೊಬ್ಬ ಹೆಣ್ಣಿನ ಆಸರೆಯಿಂದಾಗಿ ಇಂದು ಮೂರ್ಹೊತ್ತಿನ ತುತ್ತಿನ ಚೀಲ ತುಂಬಿಸಿಕೊಳ್ಳುವ ಜೊತೆಗೆ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ.
ಹೌದು! ಈ ನೊಂದ ಮಹಿಳೆಯರ ಕತ್ತಲ ದಾರಿಗೆ ಬೆಳಕಾಗಿದ್ದು 70ರ ವಯಸ್ಸಿನ ಧಾರವಾಡದ ಜಯಶ್ರೀ ಬೆಳಲದವರ. ದಶಕದ ಹಿಂದೆ ಯಾರೋ ಅಸಹಾಯಕ ಮಹಿಳೆ ಏನನ್ನಾದರೂಕೆಲಸ ನೀಡುವಂತೆ ಜಯಶ್ರೀ ಅವರಲ್ಲಿ ದುಂಬಾಲು ಬಿದ್ದ ಪರಿಣಾಮ, ದುಡಿಯುವ ಅನಿವಾರ್ಯತೆ ಇಲ್ಲದಿದ್ದರೂ ಹೆಣ್ಣಿನ ಬಗೆಗಿನ ಕಾಳಜಿ, ಮಮಕಾರ ಮತ್ತು ಆಕೆಗೆ ಕೆಲಸ ನೀಡುವ ಸಲುವಾಗಿ ಜಯಶ್ರೀ ಹುಟ್ಟು ಹಾಕಿದ್ದೇ ಸ್ವಾತಿ ಉಪ್ಪಿನಕಾಯಿ ಪ್ರಾಡಕ್ಟ್.
ಇದು 1995ರಲ್ಲಿ ನಡೆದ ಘಟನೆ. ಕೆಲಸ ಕೇಳಿದ ಮಹಿಳೆಗಾಗಿ ಕೇವಲ ರು. 100 ಬಂಡವಾಳ ಹೂಡಿ ಮಾವಿನಕಾಯಿ ಉಪ್ಪಿನಕಾಯಿ ತಯಾರಿಸಿ ಮಾರಲು ಶುರುಮಾಡಿದ್ದ ಜಯಶ್ರೀ, ಇಂದು ತಿಂಗಳಿಗೆ 50 ಟನ್ ಉಪ್ಪಿನಕಾಯಿ ಸಂಗ್ರಹಿಸುವ ಸಾಮರ್ಥ್ಯ ಮತ್ತು ಲಕ್ಷಾಂತರ ವ್ಯಾಪಾರ ವಹಿವಾಟು ನಡೆಸುವ ಹಂತ ತಲುಪಿದ್ದು, 15- 20 ಬಡ ಮಹಿಳೆಯರಿಗೆ ಕೆಲಸ ನೀಡಿದ್ದಾರೆ.
ಇಲ್ಲಿ ಉಪ್ಪಿನಕಾಯಿ ತಯಾರಿಕೆಯಿಂದ ಹಿಡಿದು ಅದರ ಮಾರಾಟ, ವ್ಯವಹಾರ, ಅಷ್ಟೇ ಏಕೆ, ಮಾರಲು ಬಳಸುತ್ತಿರುವ ವ್ಯಾನ್‌ಗಳಿಗೆ ಡ್ರೈವರ್‌ಗಳೂ ಮಹಿಳೆಯರೇ. ವಿವಿಧ ಬಗೆಯ ಉಪ್ಪಿನಕಾಯಿ ತಯಾರಿಕೆಯೊಂದಿಗೆ ಉದ್ಯಮ ಕ್ಷೇತ್ರಕ್ಕೆ ಧುಮುಕಿದ ಜಯಶ್ರೀ, ಮೆಣಸಿನಕಾಯಿ, ಕವಳೆ, ನೆಲ್ಲಿಕಾಯಿ, ಅಲಸಂದಿ, ಬಾಳಕಿ, ಅಮಟೆ ಉಪ್ಪಿನಕಾಯಿ, ಸಂಡಿಗೆ, ಹಪ್ಪಳ ತಯಾರಿಸುತ್ತಿದ್ದು, ಧಾರವಾಡ ಜಿಲ್ಲೆ ಸೇರಿದಂತೆ ಗದಗ, ಗುಲ್ಬರ್ಗ, ರಾಯಚೂರು, ಹಾವೇರಿ ಮತ್ತಿತರ ಕಡೆಗೂ ತಮ್ಮ ಉತ್ಪನ್ನಗಳ ಮಾರಾಟ ವಿಸ್ತರಿಸಿದ್ದಾರೆ.
ಜಯಶ್ರೀ ಮೂಲತಃ ಶಿರಸಿ ಹತ್ತಿರದ ಇಸಳೂರಿನವರು. ಮದುವೆಯಾಗಿ ಧಾರವಾಡಕ್ಕೆ ಬಂದ ಇವರ ಈ ಉದ್ಯಮಕ್ಕೆ ಪತಿ ಭರಮಪ್ಪ ಅವರ ಸಾಥ್ ಸದಾ ಇದ್ದು, ತಮ್ಮ ನಾಲ್ವರು ಮಕ್ಕಳು ಬೇರೆ ಬೇರೆ ಉನ್ನತ ಹುದ್ದೆಯಲ್ಲಿದ್ದುಕೊಂಡೇ ತಾಯಿಯ ಸತ್ಕಾರ್ಯಕ್ಕೆ ಬೆಂಬಲವಾಗಿದ್ದಾರೆ.
70 ವರ್ಷದ ಅಂಚಿನಲ್ಲಿರುವ ಜಯಶ್ರೀಯವರದ್ದು ಸದಾ ಕ್ರಿಯಾಶೀಲ ಮನಸ್ಸು. ಇವರು ಕೇವಲ ಉದ್ಯಮಿ, ನೊಂದ ಮಹಿಳೆಯರ ಆಪದ್ಭಾಂದವರಷ್ಟೆ ಅಲ್ಲದೆ ಸಾಹಿತ್ಯ ಕೃಷಿಯನ್ನೂ ಮಾಡಿದ್ದಾರೆ. ಓದಿದ್ದು 7ನೇ ತರಗತಿಯಾದರೂ ಸಾಹಿತ್ಯ ಕ್ಷೇತ್ರಕ್ಕೆ ಅನೇಕ ಕಾದಂಬರಿ, ಮಕ್ಕಳ ಲೇಖನ, ಮಕ್ಕಳ ಕತೆಗಳು, ಕಥಾ ಸಂಕಲನಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಪರಿಸರ ಪ್ರೇಮಿಯಾಗಿ, ಮನೆ ಅಂಗಳದಲ್ಲಿ 600ಕ್ಕೂ ಅಧಿಕ ಬಗೆಯ ಕ್ಯಾಕ್ಟಸ್ ಗಿಡಗಳು ಸೇರಿದಂತೆ ಅನೇಕ ಸಸ್ಯ ಪ್ರಬೇಧಗಳನ್ನು ಬೆಳೆಸಿದ್ದಾರೆ. ಅವರಿಗೆ ನೀವೂ ಹಲೋ ಹೇಳಿ, ಮೊ. 99026 69439.

10-12 ವರ್ಷದಿಂದ ಜಯಶ್ರೀ ಬಳಿ ಕೆಲಸ ಮಾಡುತ್ತಿದ್ದೇವೆ. ಆರ್ಥಿಕ ಸಮಸ್ಯೆಯಿಂದ ಕೆಲಸಕ್ಕೆ ಬಂದ ನಮಗೆ ಇಲ್ಲಿ ಆರ್ಥಿಕ ಸುಧಾರಣೆ ಜೊತೆಗೆ ಸ್ವಾವಲಂಬಿಯಾಗಿ ದುಡಿದು ತಿನ್ನುವ ಆತ್ಮತೃಪ್ತಿಯೂ ದಕ್ಕಿದೆ. ದಿನಕ್ಕೆ 80-120 ರು. ಕೂಲಿ ಸಿಗುತ್ತಿದ್ದು, ಮನೆ ಆರ್ಥಿಕ ಸ್ಥಿತಿ ಸಾಕಷ್ಟು ಸುಧಾರಿಸಿದೆ.
- ಅನ್ನಪೂರ್ಣ, ಲಲಿತಾ, ಮಾಲಕ್ಕ, ರತ್ನಾ, ಮಂಜುಳಾ. ಕೆಲಸಗಾರ್ತಿಯರು

- ಗಣೇಶ್ ಕಮ್ಲಾಪುರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com