ಮೆಲುಕುಗಳ ದಿಬ್ಬಣ

ಮೆಲುಕುಗಳ ದಿಬ್ಬಣ
Updated on: 

A PRETTY FACE GETS OLDA NICE BODY WILL CHANGEBUT A GOOD HEART WILL ALWAYS REMAIN...
ಫೇಸ್‌ಬುಕ್ ಗೆಳೆಯರೊಬ್ಬರು ಹಂಚಿಕೊಂಡ ಈ ಒಕ್ಕಣೆ ಬೆಳ್ಳಂಬೆಳಗ್ಗೆಯೇ ಕಾಣಿಸಿ ದಿನವಿಡೀ ಖುಷಿ ನೀಡಿತ್ತು. ಹೇಗೂ ಒಂದೊಂದು ಸೂರ್ಯೋದಯವೂ ಹಬ್ಬ ತಾನೇ?!
ವೃದ್ಧಾಪ್ಯ ಅನನ್ಯ ವರ. ಏಕೆಂದರೆ ಇಷ್ಟು ದಿನ ಬಾಳಿಸಿ ಈತನಕ ತಂದಿತಲ್ಲ ಬದುಕು ಎಂಬುದೇ ವಿಸ್ಮಯ. ಬೆಳಗಿನ ನಡಿಗೆ ಉದ್ಯಾನವನದಲ್ಲಿ ಎಂದರೆ ಹೇಳಬೇಕೇ? ಅದು ಸಹನಡಿಗೆಗಾರರೊಂದಿಗೆ ಮೆಲುಕುಗಳ ದಿಬ್ಬಣ. ಕತೆಗಳು, ವೃತ್ತಾಂತಗಳು, ಪ್ರಹಸನಗಳ ಅನಾವರಣ.
ಕನಕಲಕ್ಷ್ಮಜ್ಜಿ ಹಾಲಿನವನಿಗೆ ತರಾಟೆಗೈದಿದ್ದು ಉದ್ಯಾನವನದ ಗಿಡಮರಗಳನ್ನೂ ಕಚಗುಳಿಗೊಳಿಸುವಂಥದ್ದು. ವಿಷಯವಿಷ್ಟೆ, ಅಜ್ಜಿ ಪ್ರತಿದಿನ ಹಾಲು ತರುವ ನಿಂಗಣ್ಣನಿಗೆ ಹಾಲು ನೀರು. ನಾಳೆಯಿಂದಲಾದ್ರೂ ಸ್ವಲ್ಪ ಚೆನ್ನಾಗಿರ್ಲಿ ಅಂತ ಹೇಳಿದ್ದೇ ಹೇಳಿದ್ದು. ನಿಂಗಣ್ಣ ಮಾತ್ರ ತನ್ನ ಹಳೆ ಚಾಳಿ ಬಿಡಲೊಲ್ಲ. ಒಂದು ದಿನ ಅಜ್ಜಿ ಬೇಸತ್ತು, 'ನಿಂಗಪ್ಪಣ್ಣ...ಸುಮ್ನೆ ಯಾಕೆ ಕ್ಯಾನ್ ಭಾರವಾಗಿ ಹೊತ್ತುಕೊಂಡು ಬರ್ತಿ? ನಾಳೆಯಿಂದ ಹಾಲು ಮಾತ್ರ ತಾ. ನಮ್ಮನೆಲೇ ನಿಂಗೆ ಎಷ್ಟು ಬೇಕೋ ಅಷ್ಟು ನೀರು ಕೊಡ್ತೀನಿ...ಆಯ್ತಲ್ಲ' ಎನ್ನುವುದೇ?!
-
ನಾನು ಮೈಸೂರಿನ ದಳವಾಯಿ ಮಾಧ್ಯಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಸುಬ್ಬರಾಯರು ಇಂಗ್ಲಿಷ್ ಹೇಳಿಕೊಡುತ್ತಿದ್ದರು. ವಿಪರೀತ ನಶ್ಯದ ಅಭಿಮಾನಿ. ನಮ್ಮ ಕೈನಲ್ಲಿ ಅಗ್ರಹಾರದ ಐತಪ್ಪನ ಅಂಗಡಿಯಿಂದ ಉಂಡೆ ನಶ್ಯ ತರಿಸಿಕೊಳ್ಳುತ್ತಿದ್ದರು. ತರಗತಿಯಲ್ಲಿ ಒಂದು ದಿನ ವ್ಯಾಕರಣ ತಪ್ಪು ಮಾಡಿದ್ದಕ್ಕೆ ನಮಗೆ ಒಂದು ವರಸೆ ಹೆಚ್ಚಾಗಿಯೇ ದೊಣ್ಣೆ ಪ್ರಯೋಗಿಸಿದ್ದರು. ಯಾವತ್ತೂ ಹೀಗೆ ಮಾಡೋರಲ್ಲ ಅವರು ಎಂದು ಹೆಡ್‌ಮಾಸ್ಟರ್ ಕೂಡಾ ಚಕಿತಗೊಂಡರು. ಕಡೆಗೆ ರಹಸ್ಯ ಹೊರಬಿತ್ತು. ರಾಯರಿಗೆ ಸಂಪಂಗಿ ಎಂಬ ಹುಡುಗ ಬೇರೆ ಬ್ಯ್ರಾಂಡಿನ ನಶ್ಯ ತಂದುಕೊಟ್ಟಿದ್ದ! ಅವರು ಒಪ್ಪಿಕೊಂಡರೂ ಅವರ ನಾಸಿಕ ಆ ನಶ್ಯವನ್ನು ಸ್ವಾಗತಿಸಬೇಕಲ್ಲ? ಹೆಡ್‌ಮಾಸ್ಟರ್ ಅಂದಿನಿಂದ ನಮಗೆ ನಿರ್ದಾಕ್ಷಿಣ್ಯವಾಗಿ ಆದೇಶ ಹೊರಡಿಸಿದ್ದರು. ಮಾಸ್ತರರಿಗೆ ನೀವು ನಶ್ಯ ತಂದುಕೊಡದಿದ್ದರೂ ಪರವಾಗಿಲ್ಲ, ಅನ್ಯ ಬ್ಯ್ರಾಂಡ್ ನಶ್ಯ ಮಾತ್ರ ಬೇಡ. ವೃಥಾ ಅವರ ತಾಳ್ಮೆ ಪರೀಕ್ಷಿಸಿ ನೀವು ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆಯಬೇಡಿ!
-
ನಲವತ್ತು ವರ್ಷಗಳ ಹಿಂದಿನ ಮಾತು. ಗೋಪಣ್ಣಮಾಮ ನೌಕರಿ ಹುಡುಕಿಕೊಂಡು ಪಾಂಡವಪುರದಿಂದ ಬೆಂಗಳೂರಿಗೆ ಬಂದಿದ್ದರು. ಗಾಂಧಿಬಜಾರ್‌ನಿಂದ ಮಹಡಿ ಬಸ್ಸು ಮೆಜೆಸ್ಟಿಕ್ಕಿಗೆ ಹೋಗಿಬರುತ್ತಿತ್ತು. ಅದು ರೂಟ್ ನಂ. 39. ಬಂದ ದಿನವೇ ಖುಷಿಯಿಂದ ಮಹಡಿಯೇರಿ ಮುಂದುಗಡೆ ಕೂರಲು ಹವಣಿಸಿದರಂತೆ. ಎಲ್ಲರನ್ನೂ ತಳ್ಳಿ ಹೋಗಿ ಕುಳಿತ ತಕ್ಷಣ ಅಲ್ಲಿಂದ ಎದ್ದು, 'ಅಯ್ಯೋ ಡ್ರೈವರ್ ಸೀಟ್ ಇದು. ಇಲ್ ಕೂತ್‌ಬಿಟ್ಟೆ' ಎಂದು ಜೋರಾಗಿ ಹೇಳುತ್ತಾ ಸೀಟಿನಿಂದ ಎದ್ದರಂತೆ. ಇದನ್ನು ಕೇಳಿ ಇಡಿ ಬಸ್ಸೇ ನಗೆಬಾಂಬ್ ಆಗಿತ್ತೆಂದು ಬೇರೆ ಹೇಳಬೇಕೆ?
-
ಮಲ್ಲೇಶ್ವರದ ಶೇಷು ಅಂಕಲ್ ಕ್ರಿಕೆಟ್ ಆಸಕ್ತರೇನು ಅಲ್ಲ. ಆದರೂ ಅವರು ಘನತೆಗೆಂದು ಏನಾದರೊಂದು ಷರಾ ಹರಿದು ಬಿಡುತ್ತಿರುತ್ತಾರೆ. ಒಮ್ಮೆ ಭಾರತೀಯರ ಕ್ರಿಕೆಟ್ ಆಟ ಕುರಿತು ಅವರು ಹೇಳಿದ್ದೇನು ಗೊತ್ತೇ? ನಾವು ಮೊದಲ ಇನ್ನಿಂಗ್ಸ್‌ಗಿಂತ ಎರಡನೇ ಇನ್ನಿಂಗ್ಸ್ ಚೆನ್ನಾಗಿ ಆಡ್ತೀವಿ. ಹಾಗಾಗಿ ಇನ್ನು ಮುಂದೆ ಎರಡನೇ ಇನ್ನಿಂಗ್ಸ್ ಅನ್ನೇ ಮೊದಲು ಆಡುವುದು ವಾಸಿ!
-
ಖ್ಯಾತ ಸಾಹಿತಿ ನಾಡಿಗೇರ ಕೃಷ್ಣರಾಯರನ್ನು ಸನ್ಮಾನಿಸಿ ಕಾರಿನಲ್ಲಿ ಅವರ ಮನೆಗೆ ಬಿಟ್ಟರಂತೆ ಒಂದು ಸಂಘದ ಪದಾಧಿಕಾರಿಗಳು. ಹೇಳಿಕೇಳಿ ನಾಡಿಗೇರರದು ಸಣಕಲು ದೇಹ. ಮನೆಯವರಿಗೆ ಅವರು ಬಂದಿದ್ದೇ ತಿಳಿಯಲಿಲ್ಲ. ಇದೇನು, ಯಾವಾಗ ಬಂದ್ರಿ ಸಮಾರಂಭ ಮುಗಿಸಿಕೊಂಡು ಎಂದು ಬಹಳ ಹೊತ್ತಿನ ನಂತರ ಕೇಳಿದರಂತೆ. ಅದಕ್ಕೆ ನಾಡಿಗೇರರು, ಅಯ್ಯೋ ಕಾರಿನವರು ಶಾಲು ಬಿಸಾಡಿದ್ದು ಕಾಣಲಿಲ್ಲವೇ ನಿಮಗೆ? ಅಂದರು. ಕಾಣಿಸ್ತು ಎಂಬ ಉತ್ತರ ಬಂತು. ಸರಿ ಮತ್ತೆ, ಆ ಶಾಲಿನೊಳಗೆ ನಾನಿದ್ದೆ ಎಂದರು ಹಾಸ್ಯಪಟು!ಟಿ

- ಬಿಂಡಿಗನವಿಲೆ ಭಗವಾನ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com