

ಗಿಡ ಬೆಳೆಸುವುದೆಂದರೆ ಮೈಕೈ ಮಣ್ಣು ಮಾಡಿಕೊಂಡು ಬಿಸಿಲಿನಲ್ಲಿ ಬೆವರಿಳಿಸಿಕೊಳ್ಳುವುದು, ಕಳೆನಾಶಕ, ಗೊಬ್ಬರ ಹಾಕುವುದು, ಯೋಗ್ಯ ಭೂಮಿ ಇದ್ದರೆ ಮಾತ್ರ ಕೃಷಿ ಎಂಬ ಕಲ್ಪನೆ ಹೋಗುತ್ತಿದೆ. ನಗರೀಕರಣ, ಕೃಷಿಭೂಮಿ ಕೊರತೆ ಮುಂತಾದವುಗಳಿಂದ ಕೃಷಿಯಲ್ಲೂ ಹೊಸ ಹೊಸ ತಂತ್ರಜ್ಞಾನಗಳು ಹುಟ್ಟಿಕೊಂಡಿವೆ. ಇಲ್ಲಿ ಕೀಟನಾಶಕ ಬೇಡ, ಗೊಬ್ಬರದ ಅವಶ್ಯಕತೆ ಇಲ್ಲ. ಕಳೆ ತೆಗೆಯುವ ಕೆಲಸವೇ ಇಲ್ಲ. ಮಣ್ಣು ಬೇಡವೇ ಬೇಡ. ಅರೇ ಇದ್ಯಾವ ರೀತಿಯ ಕೃಷಿ ಎಂದು ಯೋಚಿಸುತ್ತಿದ್ದೀರಾ? ಹೌದು. ಇದೆಲ್ಲಾ ಸಾಧ್ಯವಾಗುವುದು ಅಕ್ವಾಫೋನಿಕ್ಸ್ ಎಂಬ ವಿಧಾನದಿಂದ.
ಏನಿದು ಅಕ್ವಾಫೋನಿಕ್ಸ್
ಸರಳವಾಗಿ ಮೀನು ಸಾಕಣೆ ಜೊತೆಯಲ್ಲಿ ಗಿಡಗಳನ್ನು ಬೆಳೆಸುವುದಕ್ಕೆ ಅಕ್ವಾಫೋನಿಕ್ಸ್ ಎನ್ನುತ್ತಾರೆ. ಇತ್ತೀಚೆಗೆ ಜನಪ್ರಿಯವಾಗುತ್ತಿರುವ ನವೀನ ವಿಧಾನದ ಕೃಷಿ ಇದು. ಮೂಲತಃ ಮೀನುಸಾಕಾಣಿಕೆಯ ಮುಂದುವರಿದ ಭಾಗವಾಗಿ ಅಭಿವೃದ್ಧಿ ಹೊಂದಿದ ಈ ತಂತ್ರಜ್ಞಾನ ಅಮೆರಿಕಾದ ಮೇರಿಲ್ಯಾಂಡ್ ವಿಶ್ವವಿದ್ಯಾಲಯದ ಡಾ. ಜೇಮ್ಸ್ ರಾಕಿ ಎಂಬುವವರಿಂದ ಬಹಳಷ್ಟು ಸುಧಾರಣೆಗೆ ಒಳಪಟ್ಟಿದೆ.
ಬೆಳೆಸುವ ಪದ್ಧತಿ
ಇಲ್ಲಿ ಒಂದು ಟ್ಯಾಂಕಿನಲ್ಲಿ ಮೀನನ್ನು ಬೆಳೆಸುತ್ತಾರೆ. ಮೀನಿನ ತ್ಯಾಜ್ಯಯುಕ್ತ ಪೋಷಕಾಂಶಗಳಿಂದ ಕೂಡಿದ ನೀರನ್ನು ಇನ್ನೊಂದು ಕಲ್ಲು-ಜಲ್ಲಿ ತುಂಬಿದ ಟ್ರೇಯೊಳಗೆ ಹಾಯಿಸುತ್ತಾರೆ. ಈ ಟ್ರೇಯಲ್ಲಿ ಗಿಡಗಳನ್ನು ಬೆಳೆಸುತ್ತಾರೆ. ಸಾಧಾರಣವಾಗಿ ಈ ವಿಧಾನದಲ್ಲಿ ತರಕಾರಿ ಬೆಳೆಗಳನ್ನು ಬೆಳೆಯುತ್ತಾರೆ. ಟ್ರೇಯೊಳಗೆ ನೀರನ್ನು ಹಾಯಿಸಿದಾಗ ಬ್ಯಾಕ್ಟೀರಿಯಾಗಳಿಂದ ನೀರಿನಲ್ಲಿರುವ ಅಮೋನಿಯ ನೈಟ್ರೇಟ್ ಆಗಿ ಪರಿವರ್ತನೆ ಹೊಂದಿ ಸಸ್ಯಗಳಿಗೆ ಪೋಷಕಾಂಶವಾಗಿ ಒದಗುತ್ತದೆ. ಈ ಪ್ರಕ್ರಿಯೆಯಲ್ಲಿ ನೀರು ಸ್ವಚ್ಛವಾಗುತ್ತದೆ. ಘನತ್ಯಾಜ್ಯಗಳು ಕಲ್ಲುಗಳಲ್ಲಿ ತಡೆಹಿಡಿಯಲ್ಪಡುತ್ತವೆ. ನಿರ್ಮಲವಾದ ನೀರು ಪುನಃ ಮೀನಿನ ಟ್ಯಾಂಕಿಗೆ ಸೇರುತ್ತದೆ. ಈ ಚಕ್ರೀಯ ಪ್ರಕ್ರಿಯೆ ಆಗುತ್ತಲೇ ಇರುತ್ತದೆ.
ಅಕ್ವಾಫೋನಿಕ್ಸ್ ನಮ್ಮ ದೇಶದಲ್ಲಿ ಹೆಚ್ಚು ಹೆಚ್ಚು ಪ್ರಸಿದ್ಧಿಯಾಗಿತ್ತಿದೆ. ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಸಂಶೋಧನಾ ಕೇಂದ್ರಗಳಲ್ಲಿ ಮೇವಿನ ಬೆಳೆಗಳನ್ನು ಈ ವಿಧಾನದಲ್ಲಿ ಬೆಳೆಯುವ ಪ್ರಯತ್ನಗಳು ನಡೆಯುತ್ತಿವೆ. ಒಟ್ಟಿನಲ್ಲಿ ಕಡಿಮೆ ಪ್ರದೇಶದಲ್ಲಿ ಹೆಚ್ಚು ಉತ್ಪಾದನೆ ಗುರಿ ಹಾಗೂ ಮರುಬಳಕೆ ಸಾಧ್ಯತೆಯುಳ್ಳ ಇಂತಹ ತಂತ್ರಜ್ಞಾನಗಳು ಹಸಿರು ಬೆಳೆಸಲು ಸಹಕಾರಿ.
ಪ್ರಯೋಜನಗಳು
ಮಣ್ಣು ಇಲ್ಲದೆಯೇ ಹಸಿರನ್ನು ಬೆಳೆಸಬಹುದು
ನೀರಿನ ಮರುಬಳಕೆಯಿಂದ ನೀರಿನ ಉಳಿತಾಯ
ಪರಿಸರಕ್ಕೆ ಮಾರಕವಾದ ಕೀಟನಾಶಕ ಹಾಗೂ ಕಳೆನಾಶಕಗಳ ಬಳಕೆ ಇಲ್ಲ.
ಸಾಮಾನ್ಯ ಕೃಷಿಗಿಂತ ಮೂರು-ನಾಲ್ಕು ಪಟ್ಟು ವೇಗವಾಗಿ ಗಿಡಗಳು ಬೆಳೆಯುತ್ತವೆ.
ಮೀನಿನ ತ್ಯಾಜ್ಯದ ಮರುಬಳಕೆ ಸಾಧ್ಯ.
ಒಂದೇ ವ್ಯವಸ್ಥೆ. ಎರಡು ಲಾಭ
ಕಡಿಮೆ ಜಾಗ ಸಾಕು
ನಗರಗಳಲ್ಲಿ ಗಿಡ ಬೆಳೆಸಲು ಪರ್ಯಾಯ ಮಾರ್ಗಗಳಿಲ್ಲದಿರುವಾಗ ಗಿಡಬೆಳೆಸಲು ಅನುಕೂಲ.
ಅನನುಕೂಲತೆಗಳು
ಎಲ್ಲ ಬೆಳೆಗಳಿಗೂ ಹೊಂದುವುದಿಲ್ಲ
ನಿರ್ವಹಣೆ ಕಷ್ಟವಾಗಬಹುದು
ಘಟಕವನ್ನು ಶುರುಮಾಡುವಾಗ ಖರ್ಚು ಜಾಸ್ತಿ
= ಸೌಖ್ಯಮೋಹನ್ ತಲಕಾಲುಕೊಪ್ಪ
sowkhyamohan@gmail.com