"ಕಾವೇರಿ ವಿವಾದ" ಪರಿಹರಿಸಲು ಇಸ್ರೇಲ್ "ಮಾಸ್ಟರ್ ಪ್ಲಾನ್"!

ಪೆಟ್ರೋಲಿಯಂ ಉತ್ಪನ್ನಗಳಿಂದಾಗಿ ಖ್ಯಾತಿಗಳಿಸಿರುವ ಇಸ್ರೇಲ್ ಕೃಷಿ ಕ್ಷೇತ್ರದಲ್ಲೂ ಸಾಕಷ್ಟು ಸಾಧನೆ ಗೈದಿದ್ದು, ಇದೀಗ ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳ ದಶಕಗಳ ಕಾವೇರಿ ವಿವಾದಕ್ಕೆ ತನ್ನ ಬಳಿ ಪರಿಷ್ಕಾರವಿದೆ ಎಂದು ಹೇಳಿಕೊಂಡಿದೆ.
ಕಾವೇರಿ ಮತ್ತು ಹೋರಾಟ (ಸಂಗ್ರಹ ಚಿತ್ರ)
ಕಾವೇರಿ ಮತ್ತು ಹೋರಾಟ (ಸಂಗ್ರಹ ಚಿತ್ರ)
Updated on

ಬೆಂಗಳೂರು: ಪೆಟ್ರೋಲಿಯಂ ಉತ್ಪನ್ನಗಳಿಂದಾಗಿ ಖ್ಯಾತಿಗಳಿಸಿರುವ ಇಸ್ರೇಲ್ ಕೃಷಿ ಕ್ಷೇತ್ರದಲ್ಲೂ ಸಾಕಷ್ಟು ಸಾಧನೆ ಗೈದಿದ್ದು, ಇದೀಗ ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳ  ದಶಕಗಳ ಕಾವೇರಿ ವಿವಾದಕ್ಕೆ ತನ್ನ ಬಳಿ ಪರಿಷ್ಕಾರವಿದೆ ಎಂದು ಹೇಳಿಕೊಂಡಿದೆ.

ಮಳೆ ಅಭಾವ ಹಾಗೂ ನೀರಿನ ಕೊರತೆಯಿಂದಾಗಿ ದಶಕಗಳಿಂದಲೂ ಕಾವೇರಿ ವಿವಾದ ಉಭಯ ರಾಜ್ಯಗಳಲ್ಲಿ ಸಾಕಷ್ಟು ಹಿಂಸಾಚಾರಕ್ಕೆ ಕಾರಣವಾಗಿದ್ದು, ಕೆಲ ವೈಜ್ಞಾನಿಕ ತಂತ್ರಗಾರಿಕೆ  ಮೂಲಕ ಈ ದಶಕಗಳ ಸಮಸ್ಯೆಯನ್ನು ಪರಿಹರಿಸಬಹುದಾಗಿದೆಯಂತೆ. ಇಸ್ರೇಲ್ ನಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ ಕೆಲ ವೈಜ್ಞಾನಿಕ ನೀರಾವರಿ ಪದ್ಧತಿಗಳನ್ನು ಉಭಯ ರಾಜ್ಯಗಳು  ಅಳವಡಿಸಿಕೊಂಡಿದ್ದೇ ಆದರೆ, ಎರಡೂ ರಾಜ್ಯಗಳ ರೈತರಿಗೆ ನೀರಿನ ಭವಣೆ ಕಾಡುವುದೇ ಇಲ್ಲವಂತೆ.

ಈ ನೂತನ ನೀರಾವರಿ ಪದ್ಧತಿಯಿಂದ ಉಭಯ ರಾಜ್ಯಗಳ ರೈತರು ಶೇ.50ರಷ್ಟು ನೀರಿನಲ್ಲಿ ಭರ್ಜರಿ ಬೆಳೆ ಬೆಳಯಬಹುದು ಎಂದು ಇಸ್ರೇಲ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇಸ್ರೇಲ್ ನ  ಕೆಲ ನುರಿತ ಕೃಷಿ ತಜ್ಞರು ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಲ್ಲಿ ನಡೆಸಿದ ಕೆಲ ಅಧ್ಯಯನಗಳ ಪ್ರಕಾರ, ಕರ್ನಾಟಕದಲ್ಲಿ ಪ್ರಮುಖವಾಗಿ ಕಾವೇರಿ ಕೊಳ್ಳದಲ್ಲಿ ರೈತರು ಹೆಚ್ಚಾಗಿ  ಕಬ್ಬು ಬೆಳೆಯುತ್ತಿದ್ದು, ಇದೇ ರೀತಿ ತಮಿಳುನಾಡಿನ ಕಾವೇರಿ ಕೊಳ್ಳದಲ್ಲಿ ರೈತರು ಭತ್ತ ಹಾಗೂ ಸಾಂಬಾ ಬೆಳೆಗಳನ್ನು ಬೆಳೆಯುತ್ತಾರೆ. ಈ ಎರಡೂ ಬೆಳೆಗಳಿಗೂ ಯಥೇಚ್ಛ ನೀರಿ ಬೇಕಾಗಿದೆ.

ಆದರೆ ಪ್ರಸ್ತುತ ಕಾವೇರಿ ಕಣಿವೆಯಲ್ಲಿ ಮಳೆಯ ಅಭಾವವಿರುವುದರಿಂದ ನಿರೀಕ್ಷಿತ ಮಟ್ಟದಲ್ಲಿ ನೀರಿನ ಲಭ್ಯತೆ ಇಲ್ಲ. ಹೀಗಾಗಿ ಉಭಯ ರಾಜ್ಯಗಳ ರೈತರು ಲಭ್ಯವಿರುವ ನೀರಿಗಾಗಿ  ಕಾದಾಡುತ್ತಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ಆದರೆ ಉಭಯ ರಾಜ್ಯಗಳ ರೈತರು ತಮ್ಮ ಕೃಷಿ ಸಂಪ್ರದಾಯವನ್ನು ಬದಲಿಸಿಕೊಂಡು ತಂತ್ರಜ್ಞಾನದತ್ತ ಮುಖಮಾಡಿದರೆ ಖಂಡಿತಾ  ಕಡಿಮೆ ನೀರಿನಲ್ಲಿ ಭರ್ಜರಿ ಬೆಳೆ ಬೆಳೆಯಬಹುದು. ಇದೇ ಮಾದರಿಯನ್ನೇ ಪ್ರಯೋಗಿಸಿ ನೀರಿನ ಅಭಾವವಿರುವ ಪ್ರದೇಶದಲ್ಲೂ ಇಸ್ರೇಲ್ ರೈತರು ಭರ್ಜರಿ ಬೆಳೆ ಬೆಳೆದಿದ್ದಾರೆ ಎಂಬುದು  ಇಸ್ರೇಲ್ ತಜ್ಞರ ಅಭಿಮತ.

ಹಾಗಾದರೆ ಏನಿದು ಇಸ್ರೇಲ್ ಮಾದರಿ?
ಕೃಷಿ ವಿಧಾನದಲ್ಲಿ ಕೆಲ ಆಧುನಿಕ ಮಾನದಂಡಗಳನ್ನು ಅಳವಡಿಸಿಕೊಳ್ಳುವ ಮೂಲಕ ನೀರಿನ ಬಳಕೆಯನ್ನು ತಗ್ಗಿಸುವುದೇ ಇಸ್ರೇಲ್ ಮಾದರಿಯಾಗಿದೆ. ಕಾವೇರಿ ಕೊಳ್ಳದ ರೈತರ ಸಮಸ್ಯೆ  ನೀಗಿಸಲು ಇಸ್ರೇಲ್ ತಜ್ಞರು ಮೂರು ಪ್ರಮುಖ ವಿಧಾನಗಳನ್ನು ಸೂಚಿಸಿದ್ದು, ಅವುಗಳೆಂದರೆ ಸೂಕ್ಷ್ಮ ಹನಿ ನೀರಾವರಿ, ತ್ಯಾಜ್ಯನೀರು ಮರುಬಳಕೆ, ಸಮುದ್ರದ ನೀರನ್ನು ಕುಡಿಯಲು ಯೋಗ್ಯ  ಮಾಡುವ ಪ್ರಕ್ರಿಯೆ.

ಭಾರತದ ರೈತರಿಗೆ ಹನಿ ನೀರಾವರಿ ಪದ್ಧತಿ ಪರಿಚಿತವೇ ಆಗಿದ್ದರೂ ಬಹುತೇಕ ರೈತರು ಇದರ ಪರಿಚಯವಿಲ್ಲದೇ ಸಾಂಪ್ರಾದಾಯಿಕ ಕೃಷಿ ವಿಧಾನದಲ್ಲೇ ಬೆಳೆ ಬೆಳೆಯಲು ಮುಂದಾಗಿದ್ದು,  ಇದರಿಂದಾಗಿ ಮಳೆಯನ್ನೇ ಅವಲಂಭಿಸಿದ್ದಾರೆ. ಆದರೆ ಹನಿ ನೀರಾವರಿ ಪದ್ಧತಿ ಕಡಿಮೆ ನೀರನ್ನು ಪರಿಣಾಮಕಾರಿಯಾಗಿ ಬಳಕೆ ಮಾಡುವ ಕುರಿತಾಗಿದ್ದು, ಇಂತಹ ಮಾದರಿ ಕೃಷಿಯಿಂದಾಗಿ  ಸಾಕಷ್ಟು ಮಂದಿ ರೈತರು ಬೆಳೆ ಬೆಳೆದು ಯಶಸ್ಸು ಸಾಧಿಸಿದ್ದಾರೆ. ಇದೇ ನೀರಾವರಿ ಪದ್ಧತಿಯನ್ನು ಮತ್ತಷ್ಟು ಸರಳೀಕರಿಸಿರುವ ಇಸ್ರೇಲ್ ಕೃಷಿ ತಜ್ಞರು ಸೂಕ್ಷ್ಮ ಹನಿ ನೀರಾವರಿ ಪದ್ಧತಿಯನ್ನು  ಸಂಶೋಧಿಸಿದ್ದಾರೆ. ಇದರನ್ವಯ ಹನಿ ನೀರಾವರಿ ಪದ್ಧತಿಯಲ್ಲಿ ಬಳಕೆ ಮಾಡುವ ನೀರಿಗಿಂತಲೂ ಕಡಿಮೆ ನೀರನ್ನು ಬಳಕೆ ಮಾಡಿ ಬೆಳೆ ಬೆಳೆಯಬಹುದಾಗಿದೆಯಂತೆ.

ಇನ್ನು ತ್ಯಾಜ್ಯ ನೀರು ಮರು ಬಳಕೆಯಿಂದಲೂ ಪರಿಣಾಮಕಾರಿ ಬೆಳೆ ಬೆಳೆಯಲು ಸಾಧ್ಯ ಎಂದು ಇಸ್ರೇಲ್ ತಜ್ಞರು ಹೇಳಿದ್ದಾರೆ. ಅದರಂತೆ ನಾವು ನಿತ್ಯ ಬಳಕೆ ಮಾಡುವ ನೀರು  ಪೋಲಾಗದಂತೆ ನೋಡಿಕೊಂಡು ಆ ನೀರನ್ನೂ ಕೂಡ ಸಂಗ್ರಹಿಸಿ ಕೃಷಿಗೆ ಬಳಕೆ ಮಾಡುವುದಾಗಿದೆ. ಇದರಿಂದ ಬೆಳೆಗಳ ಬೇರಿಗೆ ಸಾಕಷ್ಟು ಪೌಷ್ಟಿಕಾಂಶಗಳು ದೊರೆತು ಬೆಳೆಗಳೂ ಕೂಡ  ಸಮೃದ್ಧವಾಗಿ ಬೆಳೆಯುತ್ತವೆಯಂತೆ.

ಇನ್ನು ಮೂರನೇ ವಿಧಾನವೆಂದರೆ ಸಮುದ್ರದ ನೀರನ್ನು ಕುಡಿಯಲು ಅಥವಾ ಬಳಕೆಗೆ ಯೋಗ್ಯವಾಗಿಸಿಕೊಳ್ಳುವ ವಿಧಾನ. ಈ ವಿಧಾನದಲ್ಲಿ ಅಪಾರ ಪ್ರಮಾಣದಲ್ಲಿರುವ ಸಮುದ್ರದ  ನೀರನ್ನು ವೈಜ್ಞಾನಿಕ ತಂತ್ರಗಾರಿಕೆ ಮೂಲಕ ನೀರಿನಲ್ಲಿರುವ ಉಪ್ಪಿನಾಂಶವನ್ನು ತೆಗೆದು ಮತ್ತೆ ಆ ನೀರನ್ನು ಶುದ್ಧೀಕರಿಸಿ ಬಳಕೆ ಮಾಡುವ ಪ್ರಕ್ರಿಯೆಯಾಗಿದೆ. ಜಪಾನ್, ಚೀನಾ ಸೇರಿದಂತೆ  ವಿಶ್ವದ ಪ್ರಮುಖ ದೇಶಗಳು ಇಂತಹ ಕೃಷಿ ಮಾದರಿಯನ್ನು ಅಳವಡಿಸಿಕೊಂಡು ಯಶಸ್ಸುಕಂಡಿದ್ದಾರೆ.

ಭಾರತದ ವಿಜ್ಞಾನಿಗಳು ಕೂಡ ಬೃಹತ್ ಪ್ರಮಾಣದಲ್ಲಿ ಸಮುದ್ರದ ನೀರನ್ನು ಶುದ್ದೀಕರಿಸುವ ಯಂತ್ರಗಳನ್ನು ಶೋಧಿಸಿದ್ದು, ಅವುಗಳ ಪರಿಣಾಮಕಾರಿಯಾಗಿ ಬಳಕೆ ಮಾಡಿದರೆ ಖಂಡಿತಾ  ಉಭಯ ರಾಜ್ಯಗಳ ರೈತರ ನೀರಿನ ಭವಣೆ ನೀಗುತ್ತದೆ ಎಂದು ಇಸ್ರೇಲ್ ಕೃಷಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸಾಂಪ್ರದಾಯಿಕ ಕೃಷಿ ವಿಧಾನವನ್ನು ತೊರೆದು ಆಧುನಿಕ ಮತ್ತು ಸಾವಯವ  ಕೃಷಿಗೆ ರೈತರು ತಮ್ಮನ್ನು ತಾವು ತೊಡಗಿಸಿಕೊಂಡಾಗ ಮಾತ್ರ ತಮಿಳುನಾಡು ಮತ್ತು ಕರ್ನಾಟಕ ರಾಜ್ಯದ ರೈತರ ದಶಕಗಳ ಸಮಸ್ಯೆ ಕೊನೆಗಾಣಲಿದೆ ಎಂದು ತಜ್ಞರು  ಅಭಿಪ್ರಾಯಪಟ್ಟಿದ್ದಾರೆ.

ಈ ತ್ರಿವಳಿ ವಿಧಾನದ ಕುರಿತು ಇಸ್ರೇಲ್ ಸಂಸ್ಥೆ ಈಗಾಗಲೇ ಕರ್ನಾಟಕದಲ್ಲಿ ಪ್ರಾತ್ಯಕ್ಷಿಕೆ ನೀಡಿದ್ದು, ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಓಪನ್ ಎ ಡೋರ್ ಟು ಇಸ್ರೇಲ್ ಎಂಬ  ಕಾರ್ಯಕ್ರಮದಲ್ಲಿ ಇದರ ಪ್ರಾತ್ಯಕ್ಷಿಕೆ ನೀಡಲಾಗಿತ್ತು ಎಂದು ಇಸ್ರೇಲ್ ದೂತವಾಸ ಮುಖ್ಯಸ್ಥ ಜಿವ್ ಶಾಲ್ವಿ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com