ಒಮ್ಮೊಮ್ಮೆ ಜಾನುವಾರುಗಳ ಅನಾರೋಗ್ಯಕ್ಕೆ ತಕ್ಷಣ ಚಿಕಿತ್ಸೆ ಸಿಗದಿದ್ದರೆ ಅವುಗಳ ಪ್ರಾಣಕ್ಕೆ ಸಂಚಕಾರ ಬರಬಹುದು. ಗದಗ ಜಿಲ್ಲೆ ರೋಣ ತಾಲ್ಲೂಕಿನ ಜನ ತಮ್ಮ ಜಾನುವಾರುಗಳ ಆರೋಗ್ಯ ಏರುಪೇರಾದರೆ ಪಶು ಆಸ್ಪತ್ರೆಗೆ ಹೋಗುವುದಿಲ್ಲ, ಬಸಪ್ಪ ಬ್ಯಾಹಟ್ಟಿ ಅವರ ಬಳಿ ಧಾವಿಸುತ್ತಾರೆ. ನಡುರಾತ್ರಿಯೇ ಆಗಿದ್ದರೂ ಅವರಲ್ಲಿ ಮದ್ದು ಸಿಗುವುದು ಗ್ಯಾರಂಟಿ.
ಆಕಳು, ಎತ್ತು, ಎಮ್ಮೆ, ಕೋಣ, ಕುರಿ, ಆಡು, ಕೋಳಿ ಯಾವುದೇ ಜಾನುವಾರು ಇರಲಿ. ಕ್ಯಾನ್ಸರ್, ಕುಂದ, ಹಂಪೇರಿ (ಗಣಮಲಿಗಂಟು) ಕುಂಟು ಬೀಳುವದು, ಕೋಡು ಮುರಿದರೆ, ಹೊಟ್ಟೆ ಉಬ್ಬುವುದು (ಗ್ಯಾಸ್), ಕರು ಗರ್ಭದಲ್ಲೇ ಸಾವನ್ನಪ್ಪುವುದು, ಜ್ವರ, ಹಾಲು ಹಿಂಡದೇ ಇರುವುದು, ಕರು ಇಲ್ಲದೇ ಹಾಲು ಹಿಂಡದೇ ಇರುವ ದನಗಳಿಗೆ, ಬಾಯಲ್ಲಿ ಹುಣ್ಣು, ಹಾಲು ಹೆಚ್ಚಿಸುವುದು... ತೊಂದರೆ ಏನೇ ಇರಲಿ. ಇವರಲ್ಲಿ ಮದ್ದುಂಟು. ಚಿಕಿತ್ಸೆ ನೀಡಿದ್ದಕ್ಕೆ ಪ್ರತಿಯಾಗಿ ಏನಾದರೂ ನೀಡಲು ಹೋದರೆ ನಯವಾಗಿ ತಿರಸ್ಕರಿಸುತ್ತಾರೆ.
'ಮೂಕ ಪ್ರಾಣಿಗಳ ಸೇವೆಯಲ್ಲಿ ಸಂತೃಪ್ತಿ ಕಾಣುತ್ತಿದ್ದೇನೆ' ಎನ್ನುತ್ತ ಮೂರು ದಶಕಗಳಿಂದ ಜಾನುವಾರುಗಳಿಗೆ ನಾಟಿ ವೈದ್ಯ ನೀಡುತ್ತಿರುವ ಬಸಪ್ಪ ಬ್ಯಾಹಟ್ಟಿ ವಿಕಲಚೇತನ. ಅದು ಅವರ ಸೇವೆಗೆ ಅಡ್ಡಿಯಾಗಿಲ್ಲ. ಜಾನುವಾರಗಳಿಗೆ ಔಷಧ ಕೊಡುವುದು ಅವರ ಹವ್ಯಾಸ. ಜೀವನ ನಿರ್ವಹಣೆಗೆ ಇದ್ದೇ ಇದೆ ಕೃಷಿ- ಕೂಲಿ. ತಮ್ಮ ಪಾಲಿಗೆ ಬಂದಿರುವ 1ಎಕರೆ 20 ಗುಂಟೆ ಹೊಲದಲ್ಲಿ ಕೃಷಿ ಮಾಡುತ್ತಾ, ಬಿಡುವಿದ್ದಾಗ ಇತರರ ಹೊಲಗಳಲ್ಲೂ ದುಡಿಯುತ್ತ ಮನೆ ನಿಭಾಯಿಸುತ್ತಾರೆ.
ಕಪ್ಪತ್ತುಗುಡ್ಡದ ಸಂಜೀವಿನಿ
ಸ್ಥಳೀಯವಾಗಿ ಸಿಗುವ ಸಂಪನ್ಮೂಲಗಳನ್ನೇ ಬಳಸಿಕೊಂಡು ಔಷಧ ತಯಾರಿಸುವುದು ಇವರ ವಿಶೇಷ. ಔಷಧಕ್ಕೆ ಊರಿನಲ್ಲಿ ಗಿಡಮೂಲಿಕೆಗಳು ಸಿಗದೇ ಇದ್ದಲ್ಲಿ 40 ಕಿ.ಮೀ. ದೂರದಲ್ಲಿರುವ ಕಪ್ಪತ್ತುಗುಡ್ಡಕ್ಕೆ ಹೋಗಿ ಅಲ್ಲಿಂದ ಗಿಡ-ಮೂಲಿಕೆಗಳನ್ನು ಹುಡುಕಿ ತಂದು ಔಷಧ ತಯಾರಿಸಿ ಕೊಡುತ್ತಾರೆ. ಇದರ ಖರ್ಚು ಕೊಡಲು ಹೋದರೆ ನಯವಾಗಿ ತಿರಸ್ಕರಿಸಿ, 'ದೇವರು ಮೂಕ ಪ್ರಾಣಿಗಳ ಸೇವೆ ಮಾಡುವ ಅವಕಾಶ ಕೊಟ್ಟಿದ್ದಾನೆ. ದಯವಿಟ್ಟು ಹಣದಿಂದ ಅಳೆಯಬೇಡಿ' ಎನ್ನುತ್ತಾರೆ.
ಇವರ ಸೇವೆ ಗುರುತಿಸಿ ಕೃಷಿ ಇಲಾಖೆಯವರು, ಗದುಗಿನ ತೋಂಟದಾರ್ಯ ಸ್ವಾಮಿಗಳ ಜಾತ್ರೆಯಲ್ಲಿ ಕೊಡುವ 'ನಾಟಿ ವೈದ್ಯ ಪ್ರಶಸ್ತಿ'ಗೆ ಆಯ್ಕೆ ಮಾಡಿದ್ದರು. ಆದರೆ, 'ನನಗೆ ಅದೆಲ್ಲಾ ಬೇಡ, ಬೇರೊಬ್ಬರಿಗೆ ಕೊಡಿ. ಹಣ, ಪ್ರಶಸ್ತಿಗಾಗಿ ಸೇವೆ ಮಾಡುತ್ತಿಲ್ಲ' ಎಂದು ನಯವಾಗಿಯೇ ತಿರಸ್ಕರಿಸಿದ ಅಪರೂಪದ ವ್ಯಕ್ತಿ ಬಸಪ್ಪ ಬ್ಯಾಹಟ್ಟಿ.
ದೇವರ ಸೇವೆ
ಹಣ, ಪ್ರಶಸ್ತಿಗಳಿಗಾಗಿ ನಾನು ಈ ಕೆಲಸ ಮಾಡುತ್ತಿಲ್ಲ. ಸಾಯುವವರೆಗೂ ಇದೇ ತರಹ ಮೂಕ ಪ್ರಾಣಿಗಳ ಸೇವೆ ಮಾಡುತ್ತೇನೆ. ವಿಕಲಚೇತನರಿಗೆ ನೀಡುವ ಮಾಸಾಶನ ಸಿಗುತ್ತಿದೆ. ಅದೇ ನನಗೆ ಸಾಕು. ಮೂಕ ಪ್ರಾಣಿಗಳ ಸೇವೆಯಲ್ಲಿಯೇ ದೇವರನ್ನು ಕಾಣುತ್ತಿದ್ದೇನೆ.
- ಬಸಪ್ಪ ಬ್ಯಾಹಟ್ಟಿ
- ಶಿವಕುಮಾರ ಕುಷ್ಟಗಿ