ಒಳ್ಳೆಯ ಅಧಿಕಾರಿಯನ್ನು ಜನ ಹೇಗೆ ಗೌರವಿಸುತ್ತಾರೆ ಎಂಬುದಕ್ಕೆ ನಿದರ್ಶನ ಸರ್ ಥಾಮಸ್ ಮುನ್ರೋ. ಅವನು 1779 ರಿಂದ 1827ರ ವರೆಗೆ ಭಾರತದಲ್ಲಿ ಸೇವೆ ಸಲ್ಲಿಸಿದ ಒಬ್ಬ ದಕ್ಷ ಆಂಗ್ಲ ಅಧಿಕಾರಿ. ಎರಡನೇ ಮೈಸೂರು ಯುದ್ಧ ಮತ್ತು ಮೂರನೇ ಮೈಸೂರು ಯುದ್ಧ ಹಾಗೂ ಮೂರನೇ ಮರಾಠ ಯುದ್ಧದಲ್ಲಿ ಪಾಲ್ಗೊಂಡು ಈಸ್ಟ್ ಇಂಡಿಯಾ ಕಂಪನಿಯಿಂದ ಶ್ಲಾಘನೆಗೆ ಒಳಗಾಗಿದ್ದ.
ಬಳ್ಳಾರಿ, ಮಂಗಳೂರು, ಮದ್ರಾಸು ಮತ್ತಿತರ ಕಡೆ ಅಧಿಕಾರಿಯಾಗಿದ್ದು, ಜನರ ಪ್ರೀತಿ ಗಳಿಸಿದ್ದನು. ಅವನು ಸೇವೆ ಸಲ್ಲಿಸಿದ ಸ್ಥಳಗಳಲ್ಲಿ ಅಲ್ಲಿನ ಪ್ರಾದೇಶಿಕ ಭಾಷೆಯನ್ನೇ ಆಡಳಿತ ಭಾಷೆಯನ್ನಾಗಿ ಬಳಸಿದ ಮೊದಲ ಆಂಗ್ಲ ಅಧಿಕಾರಿ. ಹೀಗಾಗಿ ಅವನು ಸೇವೆ ಸಲ್ಲಿಸಿದ ಸ್ಥಳಗಳಲ್ಲಿ ಜನರೇ ಅವನ ಮೂರ್ತಿಯನ್ನು ನಿಲ್ಲಿಸಿ ತಮ್ಮ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.
ಅವನನ್ನು ಬಳ್ಳಾರಿಯ ಜನರು ಈ ಅಧಿಕಾರಿಯನ್ನು ಮುನ್ರಪ್ಪನೆಂದು ಪ್ರೀತಿಯಿಂದ ಕರೆಯುತ್ತಿದ್ದರು. ಕ್ರಿ.ಶ.1800 ರಲ್ಲಿ ಮುನ್ರೋ ಬಳ್ಳಾರಿಯ ಕಲೆಕ್ಟರ್ ಆಗಿದ್ದಾಗ ಮಂತ್ರಾಲಯ ಮಠದ ಮತ್ತು ಹಳ್ಳಿಯ ಆದಾಯವನ್ನು ಸರ್ಕಾರದ ಖಜಾನೆಗೆ ಸೇರಿಸಿಕೊಳ್ಳಬೇಕೆಂಬ ಮದ್ರಾಸು ಸರ್ಕಾರದ ಆದೇಶವನ್ನು ಹೊತ್ತು ಮಂತ್ರಾಲಯಕ್ಕೆ ಹೋಗಿದ್ದೂ, ಅಲ್ಲಿ ಬೃಂದಾವನದಿಂದ ಹೊರಬಂದ ರಾಯರನ್ನು ಮಾತನಾಡಿಸಿದ್ದು, ಅವರಿಂದ ಮಂತ್ರಾಕ್ಷತೆ ಪಡೆದು ಬಂದಿದ್ದು, ನಂತರ ಮದ್ರಾಸು ಸರ್ಕಾರದ ಆದೇಶವನ್ನು ಹಿಂಪಡೆಯುವಂತೆ ಮಾಡಿದ್ದು ಇವೆಲ್ಲಾ ಮದ್ರಾಸು ಸರ್ಕಾರದ ಆದೇಶವನ್ನು ಹಂಪಡೆಯುವಂತೆ ಮಾಡಿದ್ದು ಇವೆಲ್ಲಾ ಮದ್ರಾಸು ಸರ್ಕಾರದ ಗೆಜೆಟ್ನಲ್ಲಿ ಪ್ರಕಟವಾಗಿದೆ.
ಇಂತಹ ಮಹಾನುಬಾವನನ್ನು ಜನ ಪ್ರೀತಿಯಿಂದ ಆದರಿಸಿದ್ದು ಸರಿಯಾಗಿಯೇ ಇದೆ. ಸರ್ ಥಾಮಸ್ ಮುನ್ರೋ ತಾನು ಎಲ್ಲಿಯೇ ಸೇವೆ ಸಲ್ಲಿಸಲಿ ಅಲ್ಲಿ ಸಾಮಾನ್ಯ ಜನರೊಡನೆ ಬೆರೆತು, ಅವರ ಕುಂದು ಕೊರತೆಗಳನ್ನು ಆಲಿಸಿ ಅವರಿಗೆ ತಕ್ಷಣ ಪರಿಹಾರ ಸೂಚಿಸುತ್ತಿದ್ದರು. ಇದರಿಂದಾಗಿ ಜನ ಅವರೊಡನೆ ಯಾವುದೇ ಭಯವಿಲ್ಲದೆ ವ್ಯವಹರಿಸುತ್ತಿದ್ದರು.
ಮುನ್ರೋ ಮದ್ರಾಸ್ ಗವರ್ನರ್ ಆಗಿದ್ದಾಗ ಆತ ಎಷ್ಟು ಜನಪ್ರಿಯತೆ ಗಳಿಸಿದ್ದನೆಂದರೆ ಅಲ್ಲಿಯ ಜನ ಅವನನ್ನು ಮಾಂಡವ್ಯ ಋಷಿಯೆಂದು ಕರೆಯುತ್ತಿದ್ದರು. ಅವನ ಗೌರವಾರ್ಥ ಅಲ್ಲಿಯ ಶಿಲ್ಪಿಯೊಬ್ಬ ಕುದುರೆಯ ಮೇಲೆ ಮುನ್ರೋ ಕುಳಿತಿರುವಂತೆ ಪ್ರತಿಮೆಯನ್ನು ನಿರ್ಮಿಸಿ, ಇನ್ನೇನು ಅದನ್ನು ವಾತಾವರಣ ಮಾಡಬೇಕೆನ್ನುವಷ್ಟರಲ್ಲಿ, ಆ ಶಿಲ್ಪ ತುಂಬಾ ಚೆನ್ನಾಗಿ ಮೂಡಿ ಬಂದಿದೆಯಾದರೂ ಅದರಲ್ಲಿ ಕುದುರೆಯ ಕಡಿವಾಣ ಮಾತ್ರ ಸರಿಬರಲಿಲ್ಲವೆಂದು ಕೆಲವರು ಅಪಸ್ವರ ಎತ್ತಿದಾಗ ಆ ಶಿಲ್ಪಿಯು 'ನನ್ನಿಂದ ಮಹಾತ್ಮನಿಗೆ ಅಪಚಾರವಾಯಿತು' ಎಂದು ಭಾವಿಸಿ ಆತ್ಮಹತ್ಯೆ ಮಾಡಿಕೊಂಡನೆಂದು ಹೇಳುತ್ತಾರೆ. ಹೀಗೆ ಸರ್ ಥಾಮಸ್ ಮುನ್ರೋ ತನ್ನ ಶ್ರೇಷ್ಠ ಕಾರ್ಯಗಳಿಂದ ಮತ್ತು ಉತ್ತಮ ಭಾವನೆಗಳಿಂದ ಜನರ ಮನಸ್ಸನ್ನು ಸೂರೆಗೊಂಡ ಒಬ್ಬ ಯಶಸ್ವಿ ಅಧಿಕಾರಿಯಾಗಿದ್ದ.