ಮಲೆನಾಡಿನ ಗೃಹಿಣಿಯರು ನೋಡಲಷ್ಟೇ ಅಂದವಾಗಿಲ್ಲ. ಅವರು ಮಾಡುವ ಎಲ್ಲ ಬಗೆಯ ಕೆಲಸ ಕಾರ್ಯಗಳನ್ನು ವ್ಯವಸ್ಥಿತವಾಗಿ ನಿರ್ವಹಿಸಿ, ಮನಸ್ಸಿಗೂ ಮುದ ನೀಡುವಂತೆ ಮಾಡಬಲ್ಲರು. ಅಡುಗೆ, ಕೈತೋಟದೊಂದಿಗೆ ಅವರೀಗ ವೈವಿಧ್ಯಮಯ ಹವ್ಯಾಸಗಳಲ್ಲೂ ಸಕ್ರಿಯರಾಗಿದ್ದಾರೆ.
ಇಂಥವರ ನಡುವೆ ಉದಾಹರಣೆಯಾಗಿ ನಿಲ್ಲುವವರು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಗೋಳಿಕೊಪ್ಪದ ನಿವಾಸಿ ನಿರ್ಮಲಾ ಹೆಗಡೆ. ಗೃಹಿಣಿಯಾದರೂ ಆಕಸ್ಮಿಕವಾಗಿ ಪುರುಷ ಪ್ರಧಾನ ಕಲೆಯಾದ ಯಕ್ಷಗಾನವನ್ನು ರೂಢಿಸಿಕೊಂಡು, ಯಕ್ಷ ಪ್ರೇಮಿಗಳಿಂದ ಪ್ರಶಂಸೆ ಗಿಟ್ಟಿಸಿಕೊಂಡರು.
ಆಕಸ್ಮಿಕ ಆರಂಭ
ಗೋಳಿಕೊಪ್ಪದ ಮಂಜುನಾಥ ಹೆಗಡೆ ಅವರ ಬಾಳ ಸಂಗಾತಿಯಾದ ಹನ್ನೆರಡು ವರುಷಗಳ ನಂತರ ಯಕ್ಷಗಾನ ಕಲಿತದ್ದು ವಿಶೇಷ. ನಿರ್ಮಲಾರ ತವರಲ್ಲಿ ಆಗಾಗ್ಗೆ ತಾಳಮದ್ದಲೆ ನಡೆಯುತ್ತಿತ್ತು. ಆ ಜನಪದ ಕಲೆಗೆ ಪ್ರಭಾವಿತರಾದ ಇವರು, ಊರಿನ ಅಕ್ಕ ಪಕ್ಕದ ಹಳ್ಳಿಗಳಲ್ಲಿ ನಡೆಯುತ್ತಿದ್ದ ಯಕ್ಷಗಾನ, ತಾಳಮದ್ದಲೆಯನ್ನು ಬಹಳ ಉತ್ಸಾಹ, ಆಸಕ್ತಿಯಿಂದ ಆಸ್ವಾದಿಸುತ್ತಿದ್ದರು. ಹಾಗಂತ ಮುಂದೊಂದು ದಿನ ತಾನು ಯಕ್ಷಗಾನದ ಅರ್ಥಧಾರಿಯಾಗಿಯೋ, ವೇಷಧಾರಿಯಾಗಿಯೋ ತೊಡಗಿಕೊಳ್ಳಬಹುದು ಎಂಬ ವಿಚಾರ ಇರಲಿಲ್ಲ. ಆದರೆ 32ರ ವಯಸ್ಸಿನಲ್ಲಿದ್ದಾಗ ಭೈರುಂಬೆಯ ಹೈಸ್ಕೂಲಿನ ಸುವರ್ಣ ಮಹೋತ್ಸವ ಎದುರಾಗಿತ್ತು. ಈ ಉತ್ಸವಕ್ಕೆ ವಿಶೇಷ ಕಾರ್ಯಕ್ರಮ ನೀಡಲು ಗಡಿಗೆಹೊಳೆಯ ಕಾಶ್ಯಪ ಪ್ರತಿಷ್ಠಾನ ಸಿದ್ಧತೆ ನಡೆಸಿ, ಅಕ್ಕಪಕ್ಕದ ಹಳ್ಳಿಗಳ ಆಸಕ್ತ ಹೆಂಗಳೆಯರನ್ನು ಸೇರಿಸಿ ಯಕ್ಷಗಾನವನ್ನು ರೂಢಿಸಲು ಪ್ರಾರಂಭವಾಗಿತ್ತು. ಅಲ್ಲಿಂದ ನಿರ್ಮಲಾರ ಯಕ್ಷಪಯಣ ಶುರು.
ವೇದಮೂರ್ತಿ ಸುಬ್ರಾಯ ಭಟ್ಟರ ನಿರ್ದೇಶನದಲ್ಲಿ, ಕವಾಳೆಯ ಗಣಪತಿ ಭಾಗ್ವತರ ಸಹಕಾರಿ, ಮಾರ್ಗದರ್ಶನದಲ್ಲಿ ಸುಮಾರು ಏಳು ತಿಂಗಳು ಯಕ್ಷಕಲೆಯ ನೃತ್ಯ, ಅಭಿನಯ, ಮಾತುಗಾರಿಕೆ... ಇತ್ಯಾದಿಗಳ ಬಗ್ಗೆ ಅಭ್ಯಸಿಸಿದರು. ಯಕ್ಷಕಲೆಯನ್ನು ಶ್ರದ್ಧೆ, ನಿಷ್ಠೆ, ಛಲದಿಂದ ಅಭ್ಯಸಿಸಿದ ಹೆಂಗಳೆಯರು ವೇದಿಕೆಯಲ್ಲಿ ಅಭಿನಯಿಸಲು ಸಜ್ಜಾಗಿ ನಿಂತರು.
ಬಹಳ ಕಷ್ಟಪಟ್ಟು ಯಕ್ಷಕಲೆಯನ್ನು ಕರಗತ ಮಾಡಿಕೊಂಡ ನಿರ್ಮಲಾ ಹೆಗಡೆ ಈಗ ಪುರುಷ ವೇಷವೊಂದೇ ಅಲ್ಲದೇ, ಸ್ತ್ರೀ ವೇಷದಲ್ಲೂ ಅಭಿನಯಿಸುತ್ತಿದ್ದಾರೆ. ಯಕ್ಷಗಾನದಲ್ಲಿ ಹುಬ್ಬೇರಿಸುವಂತೆ ನರ್ತಿಸುತ್ತಿರುವ ಅವರು, ಕಳೆದ ಆರೇಳು ವರ್ಷಗಳಿಂದ ಕಾಶ್ಯಪ ಪ್ರತಿಷ್ಠಾನದಲ್ಲಿ ಮುಖ್ಯ ಯಕ್ಷಪಟುವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದುವರೆಗೆ 80ಕ್ಕೂ ಹೆಚ್ಚು ಕಡೆಗಳಲ್ಲಿ ವಿವಿಧ ಪ್ರಸಂಗಗಳಲ್ಲಿ ಅಭಿನಯಿಸಿದ ಹೆಗ್ಗಳಿಕೆ ಇವರದ್ದು.
ಆರಂಭದ ದಿನಗಳಲ್ಲಿ ಸಣ್ಣ ಪಾತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡ ನಿರ್ಮಲಾ ಹೆಗಡೆ ಈಗ ಪ್ರಸಂಗದ ಮುಖ್ಯ ವೇಷಧಾರಿಯಾಗಿ ಬಡ್ತಿ ಪಡೆದಿದ್ದಾರೆ. ಅವರು ಗದಾಯುದ್ಧದ ಕೌರವ, ಭೀಷ್ಮ ವಿಜಯದ ಅಂಬೆ, ಕಂಸ ದಿಗ್ವಿಜಯದ ಕಂಸ, ಭಸ್ಮಾಸುರ ಮೋಹಿನಿಯಲ್ಲಿ ಪಾರ್ವತಿ-ವಿಷ್ಣು-ಮೋಹಿನಿ-ಭಸ್ಮಾಸುರನ ಪಾತ್ರ, ದಕ್ಷಯಜ್ಞದ ದಕ್ಷ, ಮೀನಾಕ್ಷ ಕಲ್ಯಾಣದ ಮೀನಾಕ್ಷಿ, ಸುಧನ್ವಾರ್ಜುನದ ಪ್ರಭಾವತಿ, ಶಿಶುಪಾಲ ವಧೆಯ ಶಿಶುಪಾಲ... ಹೀಗೆ ವಿವಿಧ ಪ್ರಸಂಗದ ಬೇರೆ ಬೇರೆ ಪಾತ್ರಗಳಲ್ಲಿ ವೃತ್ತಿನಿರತ ಕಲಾವಿದರಂತೆ ಅಭಿನಯಿಸಿ ಯಕ್ಷ ಪ್ರೇಮಿಗಳನ್ನು ರಂಜಿಸಿದ್ದಾರೆ. ಅಲ್ಲದೆ, ತಾಳಮದ್ದಲೆಯಲ್ಲೂ ನಿರ್ಮಲಾ ಹೆಗಡೆ ಅರ್ಥ ಹೇಳಿದ್ದಾರೆ. ಭೀಷ್ಮಾರ್ಜುನದ ಕೃಷ್ಣ, ಸೀತಾವಿಯೋಗದ ಲಕ್ಷ್ಮಣ, ಕರ್ಣಪರ್ವದ ಕೃಷ್ಣ ಮುಂತಾದ ಪಾತ್ರವನ್ನು ನಿರ್ವಹಿಸಿದ್ದಾರೆ.
ಪತಿ ಮಂಜುನಾಥ ಹೆಗಡೆ ಸಹಕಾರ, ಪ್ರೋತ್ಸಾಹದಿಂದಲೇ ತಾನು ಯಕ್ಷಗಾನವನ್ನು ಅಭ್ಯಸಿಸಿ, ಪ್ರದರ್ಶನ ನೀಡಲು ಸಾಧ್ಯವಾಗುತ್ತಿದೆ ಎನ್ನುತ್ತಾರೆ ನಿರ್ಮಲಾ ಹೆಗಡೆ.
= ಚಿತ್ರ, ಬರಹ: ಗಣಪತಿ ಹಾಸ್ಪುರ