

ಬೆಂಗಳೂರು: ದೆಹಲಿಯಲ್ಲಿ ಎಸ್ ಐಆರ್ ವಿಷಯದಲ್ಲಿ ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹಿಸಿ ನಡೆಯುತ್ತಿದ್ದ ಪ್ರತಿಭಟನಾ ರ್ಯಾಲಿಯಲ್ಲಿ ರಾಹುಲ್ ಗಾಂಧಿ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರನ್ನು ಪಕ್ಕಕ್ಕೆ ತಳ್ಳಿರುವ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡಿತ್ತು. ಈ ಬಗ್ಗೆ ಬಿಜೆಪಿ ವ್ಯಂಗ್ಯವಾಗಿ ಟೀಕೆ ಮಾಡಿತ್ತು.
ಇದಕ್ಕೆ ಸ್ವತಃ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರೇ ಸ್ಪಷ್ಟನೆ ನೀಡಿದ್ದಾರೆ. ರಾಹುಲ್ ಗಾಂಧಿಯವರು ತಮ್ಮನ್ನು ಪಕ್ಕಕ್ಕೆ ತಳ್ಳಿಲ್ಲ, ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರಿಂದ, ತಮ್ಮ ಸುರಕ್ಷತೆಯ ಬಗ್ಗೆ ಕಾಳಜಿ ವ್ಯಕ್ತಪಡಿಸಿದ ರಾಹುಲ್ ಗಾಂಧಿ, ತಮ್ಮ ಹಿಂದೆ ಬರುತ್ತಿದ್ದ ವಾಹನವನ್ನು ಹತ್ತುವಂತೆ ಸೂಚಿಸಿದ್ದರು ಎಂದು ಹೇಳಿದರು.
ಪ್ರತಿಭಟನೆಯ ವೇಳೆ ಯಾರೂ ನನ್ನನ್ನು ತಳ್ಳಿಲ್ಲ. ಅಲ್ಲಿ ಭಾರೀ ಜನಸಂದಣಿ ಇತ್ತು. ಬಿಜೆಪಿಯವರಿಗೆ ನನ್ನ ಮೇಲೆ ತುಂಬಾ ಪ್ರೀತಿ ಇದೆ. ಅದಕ್ಕಾಗಿಯೇ ಇಂತಹ ಸುಳ್ಳು ಮಾಹಿತಿಯನ್ನು ಹಬ್ಬಿಸುತ್ತಿದ್ದಾರೆ ಎಂದು ನಿನ್ನೆ ದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ಇದಕ್ಕೂ ಮುನ್ನ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಈ ಬಗ್ಗೆ ಬೆಂಗಳೂರಿನಲ್ಲಿ ನಿನ್ನೆ ಹೇಳಿಕೆ ನೀಡಿ, ಪ್ರತಿಭಟನೆಗಳು ಮತ್ತು ಬೃಹತ್ ಸಾರ್ವಜನಿಕ ಸಭೆಗಳ ಸಂದರ್ಭದಲ್ಲಿ ಭದ್ರತೆ ನಿರ್ವಹಿಸುವುದು ಸವಾಲಿನ ಕೆಲಸ. ಈ ಹಿಂದೆ ತಾವು ಹಲವು ಪ್ರತಿಭಟನೆಗಳಲ್ಲಿ ಪಾಲ್ಗೊಂಡಿದ್ದಾಗಲೂ ಇಂತಹ ಪರಿಸ್ಥಿತಿಗಳನ್ನು ಎದುರಿಸಿದ್ದಾಗಿ ಹೇಳಿದರು.
ಅಲ್ಲಿ ಭದ್ರತಾ ಸಿಬ್ಬಂದಿಯ ಮುಖ್ಯ ಜವಾಬ್ದಾರಿ ರಾಹುಲ್ ಗಾಂಧಿ ಅವರಿಗೆ ರಕ್ಷಣೆ ಒದಗಿಸುವುದು ಮತ್ತು ಜನರು ಸುಲಭವಾಗಿ ಅವರ ಸಮೀಪಕ್ಕೆ ಬರದಂತೆ ನೋಡಿಕೊಳ್ಳುವುದಾಗಿತ್ತು. ದುರದೃಷ್ಟವಶಾತ್, ಮುಖ್ಯಮಂತ್ರಿಯವರೂ ಆ ಪ್ರದೇಶದತ್ತ ಸಾಗಿದ್ದರಿಂದ ಜನಸಂದಣಿಯ ನಡುವೆ ಅವರನ್ನು ಸ್ವಲ್ಪಮಟ್ಟಿಗೆ ತಳ್ಳಲಾಯಿತು ಎಂದು ಹೇಳಿದರು.
ಮುಖ್ಯಮಂತ್ರಿಯವರಿಗೆ ಶಿಷ್ಟಾಚಾರದ ಪ್ರಕಾರ ಅಗತ್ಯ ಗೌರವ ಮತ್ತು ಭದ್ರತೆ ದೊರೆಯಬೇಕಿದ್ದರೂ, ಇಂತಹ ಸಂದರ್ಭಗಳಲ್ಲಿ ಭದ್ರತಾ ಸಿಬ್ಬಂದಿ ತಮಗೆ ವಹಿಸಲಾದ ವ್ಯಕ್ತಿಯ ರಕ್ಷಣೆಗೆ ಆದ್ಯತೆ ನೀಡುತ್ತಾರೆ. ಸಮೀಪಕ್ಕೆ ಬರುತ್ತಿರುವ ಮತ್ತೊಬ್ಬ ವ್ಯಕ್ತಿ ಮುಖ್ಯಮಂತ್ರಿ ಆಗಿರಲಿ ಅಥವಾ ಬೇರೆ ಗಣ್ಯ ವ್ಯಕ್ತಿಯಾಗಿರಲಿ, ಭದ್ರತಾ ಸಿಬ್ಬಂದಿಯ ಆದ್ಯತೆಯಲ್ಲಿ ಬದಲಾವಣೆಯಾಗುವುದಿಲ್ಲ ಎಂದು ಹೇಳಿದರು.
ದೆಹಲಿಯಲ್ಲಿ ನಡೆದ ಪ್ರತಿಭಟನಾ ರ್ಯಾಲಿಯ ವೇಳೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಪಕ್ಕಕ್ಕೆ ತಳ್ಳುವ ಮೂಲಕ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು 7.4 ಕೋಟಿ ಕನ್ನಡಿಗರಿಗೆ “ಅವಮಾನ ಮಾಡಿದ್ದಾರೆ” ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಹಾಗೂ ಬಿಜೆಪಿ ನಾಯಕ ಎನ್. ರವಿಕುಮಾರ್ ಆರೋಪಿಸಿದ್ದಾರೆ.
ತಮ್ಮದೇ ಪಕ್ಷದ ಮುಖ್ಯಮಂತ್ರಿಗೆ ರಾಹುಲ್ ಗಾಂಧಿ ತೋರಿರುವ ಅಗೌರವಕ್ಕೆ ಈ ಘಟನೆ ಸಾಕ್ಷಿಯಾಗಿದೆ ಎಂದು ಟೀಕಿಸಿದರು.