ಸಾಧನೆ

ಭಗವದ್ಗೀತೆ ಸ್ಪರ್ಧೆಯಲ್ಲಿ ಮುಸ್ಲಿಂ ವಿದ್ಯಾರ್ಥಿನಿಗೆ ಪ್ರಥಮ ಸ್ಥಾನ

Rashmi Kasaragodu

ಮುಂಬೈ: ಮುಂಬೈಯ ಮೀರಾ ರೋಡ್ ನಲ್ಲಿರುವ ಕಾಸ್ಮೊಪೊಲಿಟನ್ ಹೈಸ್ಕೂಲ್ನಲ್ಲಿ  6ನೇ ತರಗತಿಯಲ್ಲಿ ಕಲಿಯುತ್ತಿರುವ ಮರ್ಯಾಮ್ ಆಸಿಫ್  ಸಿದ್ಧಿಕಿ ಪ್ರತಿಭಾವಂತ ವಿದ್ಯಾರ್ಥಿನಿ. ೧೨ ರ ಹರೆಯದ ಈ  ಮುಸ್ಲಿಂ ವಿದ್ಯಾರ್ಥಿನಿ ಇತ್ತೀಚೆಗೆ ನಡೆದ ಭಗವದ್ಗೀತೆ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಗಳಿಸಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾಳೆ.

ಕಳೆದ ಜನವರಿ ತಿಂಗಳಿನಲ್ಲಿ ಇಸ್ಕಾನ್ ಸಂಸ್ಥೆ ಗೀತಾ ಚಾಂಪಿಯನ್ಸ್ ಲೀಗ್ ಎಂಬ ಸ್ಪರ್ಧೆಯನ್ನು ಏರ್ಪಡಿಸಿತ್ತು. ಇದರಲ್ಲಿ ಸುಮಾರು ೪ ಸಾವಿರ ಮಂದಿ ಭಾಗವಹಿಸಿದ್ದರು. ಈ ಭಗವದ್ಗೀತೆ ಸ್ಪರ್ಧೆಯಲ್ಲಿ ಸಿದ್ಧಿಕಿ ಪ್ರಥಮ ಸ್ಥಾನ ಪಡೆದಿದ್ದಾಳೆ.

 ಇಸ್ಕಾನ್ ನವರು ಸಿದ್ದಿಕಿಗೆ ಭಗವದ್ಗೀತೆಯ ಇಂಗ್ಲೀಷ್ ಪುಸ್ತಕವನ್ನು ನೀಡಿದ್ದರು. ನಾನು ಆ ಪುಸ್ತಕವನ್ನು ಓದಿದೆ. ನನ್ನ ಫ್ರೀ ಟೈಮ್ ನಲ್ಲಿ ಭಗವದ್ಗೀತೆಯನ್ನು ಓದುತ್ತಿದ್ದೆ. ಹಾಗಾಗಿ ನನ್ನ ಟೀಚರ್ ನನಗೆ ನೀನು ಈ ಸ್ಪರ್ಧೆಯಲ್ಲಿ ಭಾಗವಹಿಸು ಎಂದು ಹೇಳಿದ್ದರು. ಭಗವದ್ಗೀತೆ ಬಗ್ಗೆ ತಿಳಿದುಕೊಳ್ಳಲು ಇದೊಂದು ಒಳ್ಳೆ ಅವಕಾಶ ಎಂದುಕೊಂಡೆ. ಆ ನಿಟ್ಟಿನಲ್ಲಿ ಭಗವದ್ಗೀತೆ ಸ್ಪರ್ಧೆಯಲ್ಲಿ ಭಾಗವಹಿಸುವುದಕ್ಕೆ ತಂದೆ, ತಾಯಿಯೂ ಬೆಂಬಲ ನೀಡಿದ್ದರು ಎಂಬುದಾಗಿ ಮಾರ್ಚ್ 15ರಂದು ಪ್ರಶಸ್ತಿ ಸ್ವೀಕರಿಸಿದ ಸಿದ್ದಿಕಿ ತನ್ನ ಖುಷಿಯನ್ನು ಹಂಚಿಕೊಂಡಿದ್ದಾರೆ.

ನಾನು ವಿವಿಧ ಧರ್ಮಗಳ ಬಗ್ಗೆ ಓದಿದ್ದೆ, ಇದರಿಂದ ತಿಳಿದು ಬಂದಿದ್ದೇನೆಂದರೆ ಮಾನವೀಯತೆ ತುಂಬಾ ಮುಖ್ಯವಾದದ್ದು ಎಲ್ಲಾ ಧರ್ಮದ ತಿರುಳಾಗಿದೆ. ನಾವು ಇದನ್ನು ಅನುಸರಿಸಬೇಕು.  ನಾನು ಬೇರೆ ಧರ್ಮದವಳು ಎಂದು ನನ್ನನು ಯಾಕೆ ಬೇರೆಯಾಗಿ ನೋಡಬೇಕು? ನಮ್ಮ ಶಾಲೆಯಲ್ಲಿ  ಇಂಥಾ  ಭೇದಭಾವ ಯಾವುದೂ ಇಲ್ಲ ಎಂದು ಸಿದ್ದಿಕಿ ಹೇಳಿದ್ದಾಳೆ.

ಎಲ್ಲಾ ಧರ್ಮವನ್ನು ಒಪ್ಪಿಕೊಳ್ಳಬೇಕು ಎಂಬುದನ್ನು ನಮ್ಮ ಕುಟುಂಬ ಕಲಿಸಿದೆ.  ಯಾವ ಧರ್ಮವೂ ತಪ್ಪು ಬೋಧನೆ ಮಾಡುವುದಿಲ್ಲ. ಏನೇ ಆಗಲಿ ಕೆಲವು ಜನರು ಧರ್ಮ ಸಂದೇಶವನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಈ ಬೆಳವಣಿಗೆ ಎಳೆ ಮನಸ್ಸುಗಳ ಮೇಲೆ ಪರಿಣಾಮ ಬೀರುತ್ತದೆ. ನಾವು ಧರ್ಮದ ಬಗ್ಗೆ ಮಾತನಾಡಬೇಕು ಮತ್ತು ಯಾವುದು ಸರಿ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಸಿದ್ದಿಕಿ ತಂದೆ ಅಸೀಫ್ ಸಿದ್ದಿಕಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

SCROLL FOR NEXT