ಸಾಧನೆ

ಕ್ಯಾಮೆರಾಕ್ಕೆ ಶರಣಯ್ಯ

Srinivasamurthy VN

ಶರಣಯ್ಯ ಒಮ್ಮೆ ಕ್ಯಾಮೆರಾ ಹಿಡಿದು ಒಂದು ಸುತ್ತು ಹಾಕಿ ಬರುವಷ್ಟರಲ್ಲಿ ಜೋಳಿಗೆಯ ತುಂಬ ನೈಜ ಮತ್ತು ಅಪರೂಪದ ಫೋಟೋಗಳೇ!

ಎನ್.ಎಂ. ಶರಣಯ್ಯ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಬಂಡ್ರಿ ಎಂಬ ಪುಟ್ಟ ಗ್ರಾಮದ ಅಪ್ಪಟ ಹಳ್ಳಿಗಾಡಿನ ಯುವ ಪ್ರತಿಭೆ. ಈತನ ಫೋಟೋಗ್ರಫಿ ಹುಚ್ಚಿನಿಂದಾಗಿಯೇ ಈ ಭಾಗದಲ್ಲಿ ಫೋಟೋ ಶರಣಯ್ಯನೆಂದೇ ಜನಜನಿತ.

ಜೀವನ ಸಾಗಿಸಲು ಕ್ಯಾಮೆರಾ ಆಶ್ರಯಿಸಿದ್ದರೂ ಮನಸ್ಸಿನ ನೆಮ್ಮದಿ, ಖುಷಿಗಾಗಿ ತನ್ನ ಸುತ್ತಲಿನ ಪರಿಸರದ ಅಚ್ಚರಿಗಳನ್ನು ಕ್ಲಿಕ್ಕಿಸುವ ಗೀಳಿದೆ. ಶರಣಯ್ಯನ ಸಮಯ ಪ್ರಜ್ಞೆ, ಸೂಕ್ಷ್ಮ ಗ್ರಹಿಕೆ ಹಾಗೂ ಸಂವೇದನಶೀಲ ವ್ಯಕ್ತಿತ್ವದ ಕ್ರಿಯಾಶೀಲವಾಗಿ ಈತನು ಕ್ಲಿಕ್ಕಿಸಿದ ಫೋಟೋಗಳು ಭಿನ್ನ, ಅದ್ಭುತವಾಗಿರುತ್ತವೆ. ವೃತ್ತಿಯಲ್ಲಿ ಬಿಡುವು ಸಿಕ್ಕಾಗಲೆಲ್ಲಾ ಹವ್ಯಾಸಿ ಛಾಯಾಗ್ರಾಹಕನಾಗುವ ಶರಣಯ್ಯ ನಸುಕಿನಲ್ಲಿ ಮನೆ ಬಿಟ್ಟರೆ ಮತ್ತೆ ಗೂಡು ಸೇರುವುದು ಕತ್ತಲು ಕದ ತಟ್ಟಿದ ಮೇಲೆಯೇ! ನಿದ್ದೆ, ನೀರಡಿಕೆ, ಉರಿ ಬಿಸಿಲು ಎಲ್ಲವನ್ನು ನಿರ್ಲಕ್ಷಿಸುವಂತೆ ಮಾಡುತ್ತದೆ. ಫೋಟೋಗ್ರಫಿ ಸೆಳೆತ.

ಶರಣಯ್ಯ ಒಮ್ಮೆ ಕ್ಯಾಮೆರಾ ಹಿಡಿದು ಒಂದು ಸುತ್ತು ಹಾಕಿ ಬರುವಷ್ಟರಲ್ಲಿ ಜೋಳಿಗೆಯ ತುಂಬ ನೈಜ ಮತ್ತು ಅಪರೂಪದ ಫೋಟೋಗಳೇ! ತನ್ನ ಓಣಿ, ಹೊಲ-ಗದ್ದೆ, ಕೆರೆ-ಗೋಕಟ್ಟೆ, ಹಳ್ಳ-ಕೊಳ್ಳ, ಗುಡ್ಡ-ಬೆಟ್ಟ.. ಹೀಗೆ ಮನಸ್ಸು ತೋಚಿದ ಕಡೆಗೆ ಪಾದ ಬೆಳೆಸುವ ಈತನಿಗೆ ಹಳ್ಳಿ ಗಾಡಿನ ದೈನಂದಿನ ಬದುಕು, ಮಕ್ಕಳ ಆಟ-ಪಾಠ, ಪರಿಸರ, ಜೀವ ವೈವಿಧ್ಯ... ಇತ್ಯಾದಿಗಳನ್ನು ಸಹಜ ರೂಪದಲ್ಲಿಯೇ ಕ್ಯಾಮೆರಾದಲ್ಲಿ ಕಾಪಿಟ್ಟುಕೊಳ್ಳುವ ತವಕ.

ಈತನ ಸಂಗ್ರಹದಲ್ಲಿರುವ ಫೋಟೋಗಳು ಮನಸ್ಸಿಗೆ ಮುದ ನೀಡುವುದಷ್ಟೇ ಅಲ್ಲ, ಫೋಟೋಗಳೇ ಎದ್ದು ಬಂದು ತಮ್ಮ ಕಥೆ-ವ್ಯಥೆ ಹೇಳುವಷ್ಟು ನೈಜವಾಗಿವೆ. ಶರಣಯ್ಯ ಈ ವಿಶಿಷ್ಟ ಹವ್ಯಾಸವನ್ನು ಮೆಚ್ಚಿ ಪ್ರೋತ್ಸಾಹಿಸಲು ಹಲೋ ಹೇಳಬೇಕಾದ ಸಂಖ್ಯೆ 7353395280.

-ಸ್ವರೂಪಾನಂದ ಎಂ. ಕೊಟ್ಟೂರು

SCROLL FOR NEXT