ಸಾಧನೆ

ಶಿರಸಿಯ ವಿಶ್ವಜಿತ್ ಹೆಗಡೆ ರಾಜ್ಯಕ್ಕೆ ನಂಬರ್ 1

Lingaraj Badiger

ಶಿರಸಿಯ ಲಾಯನ್ ಇಂಗ್ಲಿಷ್ ಮಾಧ್ಯಮ ಶಾಲೆಯ ವಿದ್ಯಾರ್ಥಿ ವಿಶ್ವಜಿತ್ ಹೆಗಡೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 623 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೇ ಮೊದಲ ಸ್ಥಾನ ಪಡೆದುಕೊಂಡಿದ್ದಾನೆ.

ವಿಶ್ವಜಿತ್‌ನ ಈ ಸಾಧನೆ ಹಿಂದೆ ಆತನ ನಿರಂತರ ಶ್ರಮ ಇದೆ. ಶೈಕ್ಷಿಣಕ ವರ್ಷದ ಆರಂಭದಲ್ಲಿ 3ರಿಂದ ನಾಲ್ಕು ಗಂಟೆಗಳ ಕಾಲ ಹಾಗೂ ಪರೀಕ್ಷೆ ಮೂರು ತಿಂಗಳು ಇರುವಾಗ ನಿತ್ಯ 8ರಿಂದ 10ಗಂಟೆಗಳ ಕಾಲ ಓದುತ್ತಿದ್ದ. ಅಲ್ಲದೆ ವಿಜ್ಞಾನ ಮತ್ತು ಗಣಿತ ವಿಷಯಗಳ ಹಳೆ ಪ್ರಶ್ನಿ ಪತ್ರಿಕೆಗಳನ್ನು ಬಿಡಿಸುತ್ತಿದ್ದೆ. ಇದು ನನಗೆ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆಯಲು ಸಹಕಾರಿಯಾಯಿತು  ಎಂದು ವಿಶ್ವಜಿತ್ ಹೇಳಿಕೊಂಡಿದ್ದಾರೆ.

ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಹಾಗೂ ಸಂಸ್ಕೃತದಲ್ಲಿ 100ಕ್ಕೇ 100 ಅಂಕ ಪಡೆದಿರುವ ವಿಶ್ವಜಿತ್, ನಾನು ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿರುವುದು ಅಚ್ಚರಿ ತಂದಿದೆ. ನಾನು ಐದನೇ ಸ್ಥಾನದಲ್ಲಿ ಬರಬಹುದು ಎಂದುಕೊಂಡಿದ್ದೆ ಎಂದಿದ್ದಾರೆ.

ಶಿಕ್ಷಕರು, -ಪಾಲಕರ ಸಹಾಯದಿಂದ ರಾಜ್ಯಕ್ಕೆ ಮೊದಲಿಗನಾಗಿದ್ದೇನೆ ಎಂದು ಹೇಳಿಕೊಳ್ಳಲು ಖುಷಿಯಾಗುತ್ತದೆ. ಸದ್ಯಕ್ಕೆ ಪಿಯುಸಿಯಲ್ಲಿ ವಿಜ್ಞಾನ ವಿಭಾಗಕ್ಕೆ ಪ್ರವೇಶ ಪಡೆದು ಐಐಟಿಯಲ್ಲಿ ತಾಂತ್ರಿಕ ಶಿಕ್ಷಣ ಪಡೆಯುವ ಕನಸು ಹೊಂದಿದ್ದೇನೆ. ಹೆಚ್ಚು ಅಂಕ ಪಡೆಯಲು ಪುಸ್ತಕದ ಹುಳು ಆಗಬೇಕಿಲ್ಲ, ನಾನು ಡಿಸೆಂಬರ್‍ನಿಂದ ಮರು ಪಠಣ ಆರಂಭಿಸಿದ್ದೆ, ಇದರಿಂದ ಹೆಚ್ಚು ಅಂಕ ಪಡೆಯಲು ನೆರವಾಯಿತು.

ಉದ್ಯಮಿ ಪ್ರಕಾಶ ಹೆಗಡೆ ಹಾಗೂ ಜಯಶ್ರೀ ದಂಪತಿಯ ಪುತ್ರನಾಗಿರುವ ವಿಶ್ವಜಿತ್, ಐಐಟಿಯಲ್ಲಿ ಎಂಜಿನಿಯರಿಂಗ್ ಕಲಿಯುವ ಆಸೆ ವ್ಯಕ್ತಪಡಿಸಿದ್ದಾರೆ. ಇನ್ನು ಮಗನ ಸಾಧನೆ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಪೋಷಕರು, ಐದನೇ ತರಗತಿಯಿಂದಲೇ ಆತ ಮೊದಲೇ ರ್ಯಾಂಕ್ ಪಡೆಯುತ್ತಿದ್ದ. ಮೊದಲ ಸ್ಥಾನ ಪಡೆಯುವುದು ವಿಶ್ವಜಿತ್‌ನ ಅಭ್ಯಾಸವಾಗಿಬಿಟ್ಟಿದೆ ಎಂದಿದ್ದಾರೆ. ಅಲ್ಲದೆ ಆತ ಒಬ್ಬ ಉತ್ತಮ ಚೆಸ್ ಆಟಗಾರ ಎಂದು ಹೇಳಿದ್ದಾರೆ.

SCROLL FOR NEXT