ಸಾಧನೆ

ಇಬ್ಬರು ಭಾರತೀಯರಿಗೆ ಒಲಿದ ಪ್ರತಿಷ್ಠಿತ ರಾಮನ್ ಮ್ಯಾಗ್ಸಸೆ ಪ್ರಶಸ್ತಿ

Srinivasamurthy VN

ನವದೆಹಲಿ: 2016ನೇ ಸಾಲಿನ ಪ್ರತಿಷ್ಠಿತ ರಾಮನ್ ಮ್ಯಾಗ್ಸಸೆ ಪ್ರಶಸ್ತಿ ಪ್ರಕಟವಾಗಿದ್ದು, ಭಾರತದ ಇಬ್ಬರು ಹೆಮ್ಮೆಯ ಸಾಧಕರು ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕರ್ನಾಟಕದ ಮಾನವ ಹಕ್ಕು ಹೋರಾಟಗಾರ ಬೆಜ್ವಾಡ ವಿಲ್ಸನ್ ಹಾಗೂ ಶಾಸ್ತ್ರೀಯ ಸಂಗೀತ ವಿದ್ವಾಂಸ ಟಿ.ಎಮ್ ಕೃಷ್ಣ ಅವರಿಗೆ ಪ್ರಶಸ್ತಿ ಸಂದಿದ್ದು, ತಮ್ಮ ತಮ್ಮ ಕ್ಷೇತ್ರದಲ್ಲಿ ಅವರು ಸಲ್ಲಿಸಿದ  ಅಪಾರ ಸೇವೆಯನ್ನು ಗುರುತಿಸಿ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ. ಮೂಲತಃ ಕರ್ನಾಟಕ ಮೂಲದವರಾದ ಬೆಜ್ವಾಡ ವಿಲ್ಸನ್ ಅವರು, ದಲಿತ ಕುಟುಂಬದಲ್ಲಿ ಜನಿಸಿದವರಾಗಿದ್ದಾರೆ. "ಸಫಾಯಿ  ಕರ್ಮಚಾರಿ ಆಂದೋಲನ" ನಡೆಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದರು, ವ್ಯಕ್ತಿಯ ಘನತೆ ಹಾಗೂ ಗೌರವಕ್ಕಾಗಿ ಅವರು ನಡೆಸಿದ ಹೋರಾಟವನ್ನು ಗಮನಿಸಿ  ರಾಮನ್ ಮ್ಯಾಗ್ಸಸೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

50 ವರ್ಷದ ಬೆಜ್ವಾಡ ವಿಲ್ಸನ್ ಅವರು ಸತತ 32 ವರ್ಷಗಳಿಂದಲೂ "ಸಫಾಯಿ ಕರ್ಮಚಾರಿ ಆಂದೋಲನ" ನಡೆಸಿಕೊಂಡು ಬಂದಿದ್ದಾರೆ. ಇನ್ನು ಪ್ರಶಸ್ತಿಗೆ ಆಯ್ಕೆಯಾಗಿರುವ ಮತ್ತೋರ್ವ ಸಾಧಕ  ಟಿಎಂ ಕೃಷ್ಣ ಅವರು ದಕ್ಷಿಣ ಭಾರತದ ಖ್ಯಾತ ಸಂಗೀತ ವಿದ್ವಾಂಸರಾಗಿದ್ದಾರೆ. ಮೂಲತಃ ಚೆನ್ನೈ ಮೂಲದವರಾದ ಟಿಎಂ ಕೃಷ್ಣ ಅವರು ಶಾಸ್ತ್ರೀಯ ಸಂಗೀತ ಕ್ಷೇತ್ರಕ್ಕೆ ಸಲ್ಲಿಸಿದ ಅಪಾರ  ಸೇವೆಯನ್ನು ಗಮನಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಸಾಂಸ್ಕೃತಿಕ ಕ್ಷೇತ್ರದಲ್ಲಿ ಜಾತಿ ಪ್ರಭಾವ ಹಾಗೂ ಜಾತಿಯಾಧಾರಿತ ಮನ್ನಣೆ ವಿರುದ್ ತಮ್ಮದೇ ಆದ ವಿಶಿಷ್ಠ ಶೈಲಿಯ ಸಂಗೀತದ ಮೂಲಕ ಧನಿ ಎತ್ತಿ ಟಿಎಂ ಕೃಷ್ಣ ಅವರು ಖ್ಯಾತಿಗಳಿಸಿದ್ದರು.  ದಲಿತ ಕಲೆ, ಸಾಹಿತ್ಯ ರಚನೆ ಮೂಲಕ ಸ್ವತಂತ್ರ ಕಲಾವಿದರಾಗಿದ್ದ ಟಿಎಂ ಕೃಷ್ಣ ಅವರ ಕಾರ್ಯ ಸ್ಪೂರ್ತಿದಾಯಕವಾಗಿದೆ ಎಂದು ಅಭಿಪ್ರಾಯಪಡಲಾಗಿದೆ.

ರಾಮೋನ್ ಮ್ಯಾಗ್ಸೆಸೆ ಪ್ರಶಸ್ತಿಯನ್ನು ಪ್ರತಿವರ್ಷ ನೀಡಲಾಗುತ್ತಿದ್ದು, ಮಾಜಿ ಫಿಲಿಪ್ಪೈನ್ಸ್ ಅಧ್ಯಕ್ಷ ರಾಮನ್ ಮ್ಯಾಗ್ಸೆಸೆ ಅವರ ನೆನಪಿಗಾಗಿ ಈ ಪ್ರಶಸ್ತಿ ನೀಡಲಾಗುತ್ತಿದೆ.

SCROLL FOR NEXT