ಕೃಷಿ-ಪರಿಸರ

ಹಲಸು ಕನಸು

ಕೇರಳ ಪೆರ್ಲದ ಅಕ್ಷಯ ಕೃಷಿಕೂಟದ ಇಪ್ಪತ್ತು ಸದಸ್ಯರು ಕೃಷಿಕ ವರ್ಮುಡಿ ಶಿವಪ್ರಸಾದರ ಸಾರಥ್ಯದಲ್ಲಿ ಮುಳಿಯದ (ದ.ಕ.) ವಿ.ಕೆ. ಶರ್ಮರ ಮನೆಗೆ ಭೇಟಿ ನೀಡಿದ್ದರು. ಇದರಲ್ಲೇನು ವಿಶೇಷ? ಶರ್ಮರ ನಿರ್ವಿಷ ಕೃಷಿಯ ವೀಕ್ಷಣೆ, ದನಗಳ ಮೇವಿಗಾಗುವ ವಿವಿಧ ಸೊಪ್ಪುಗಳ ಮಾಹಿತಿ, ಕೃಷಿ ತಜ್ಞ ಗುರುರಾಜ ಬಾಳ್ತಿಲ್ಲಾಯರಿಂದ ಕಸಿ ತರಬೇತಿ. ಇವಿಷ್ಟು ಕಾರ್ಯಹೂರಣಗಳು.
ಎತ್ತಿ ಹೇಳುವಂಥ ವಿಶೇಷವೆಂದರೆ, ಹಲಸಿನ ರುಚಿ ನೋಡಿ- ತಳಿ ಆಯ್ಕೆ ಎಂಬ ಪ್ರಕ್ರಿಯೆ. ಇಪ್ಪತ್ತೊಂದು ವಿಧದ ಹಲಸಿನ ಹಣ್ಣನ್ನು ತುಂಡರಿಸಿ, ಸೊಳೆ ತೆಗೆದು ಒಂದೆಡೆ ಪೇರಿಸಿಡಲಾಗಿತ್ತು. ಬಣ್ಣ, ಪರಿಮಳ, ರುಚಿ, ಫಿಲ್ಲಿಂಗ್ ಮತ್ತು ಸರ್ವಗುಣ ಈ ಮಾನದಂಡದಂತೆ ಉತ್ತಮ ತಳಿಯನ್ನು ಆಯ್ಕೆಮಾಡಬೇಕಿತ್ತು. ಎಲ್ಲಾ ಸದಸ್ಯರು ಸೊಳೆಯನ್ನು ತಿಂದು, ರುಚಿ ನೋಡಿ ಅಂಕ ನೀಡಿದರು. ನಾಲ್ಕು ತಳಿಗಳ ಆಯ್ಕೆ.
ಕಾರಿಂಜ ಹಳೆಮನೆಯ ವರ್ಮುಡಿ ಮೂಲದ ಹಲಸು, ಬೈಂಕ್ರೋಡು ಗಿರೀಶರ ಹಲಸು, ಮುಳಿಯ ಮನೆಯ ಹಲಸು, ಉಬರು ರಾಜಗೋಪಾಲ ಭಟ್ಟರ ಹಲಸು... ಹೀಗೆ ಆಯ್ಕೆಯಾದ ತಳಿಗಳಿಗೆ ವರ್ಮುಡಿ ಮೋಂಟ, ಬೈಂಕ್ರೋಡು ಜಾಲಬಕ್ಕೆ, ಮುಳಿಯ ಈಶಾನ್ಯ, ಉಬರು ಗೆನಹಣ್ಣು ಎಂಬ ನಾಮಕರಣ.
ವಿ.ಕೆ. ಶರ್ಮರು ಹಲಸುಪ್ರೇಮಿ. ಮೂರು ವರುಷದ ಹಿಂದೆ ಮನೆಯಲ್ಲಿ ರುಚಿ ನೋಡಿ ತಳಿ ಆಯ್ಕೆ ಎಂಬ ನೂತನ ಪ್ರಕ್ರಿಯೆಗೆ ನಾಂದಿ ಹಾಕಿದ್ದರು. ಅಲ್ಲಿಂದೀಚೆಗೆ ತನ್ನ ಸುತ್ತಲಿನ ಸುಮಾರು ಇಪ್ಪತ್ತು ಕಿಲೋಮೀಟರ್ ವ್ಯಾಪ್ತಿಯಲ್ಲಿ ಇಪ್ಪತ್ತಕ್ಕೂ ಮಿಕ್ಕಿದ ಉತ್ತಮ ಉತ್ಕೃಷ್ಟ ಹಲಸಿನ ತಳಿಗಳು ಗೊತ್ತುಮಾಡುವ ಕೆಲಸ ಮಾಡಿದ್ದರು. ರುಚಿ ನೋಡಿ ತಳಿ ಆಯ್ಕೆ ಮಾಡಿದವರೆಲ್ಲರೂ ಸ್ವತಃ ಕೃಷಿಕರು. ಆಯ್ಕೆಯಾದುದನ್ನು ಕಸಿಕಟ್ಟಿ ಅಭಿವೃದ್ಧಿ. ಇದುವರೆಗೆ ಏನಿಲ್ಲವೆಂದರೂ ಐದು ಸಾವಿರಕ್ಕೂ ಮಿಕ್ಕಿ ಕಸಿ ಗಿಡಗಳು ಅಭಿವೃದ್ಧಿಯಾಗಿವೆ. ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದಂತೆ ಗಿಡಗಳ ಬುಕ್ಕಿಂಗ್ ಮಾಡುವಷ್ಟು ಹಣ್ಣಿನ ಮೋಹ ಜನರಲ್ಲಿ ಮೂಡುತ್ತಿದೆ ಎನ್ನುತ್ತಾರೆ ಶರ್ಮ.
ಹಲಸನ್ನು ಪ್ರೀತಿಸುವ, ಅದಕ್ಕೆ ಮಾನ ಕೊಡುವ ಮತ್ತು ಮನಸ್ಸನ್ನು ಪರಸ್ಪರ ಅರ್ಥಮಾಡಿಕೊಂಡ ಗೆಳೆಯರ ಬಳಗ ಹಲಸು ಸ್ನೇಹಿಕೂಟ. ಇವರು ಅಡ್ಯನಡ್ಕದ ವಾರಾಣಸಿ ಸಂಶೋಧನಾ ಪ್ರತಿಷ್ಠಾನದ ಸಾರಥ್ಯದಲ್ಲಿ ಕಳೆದ ವರುಷ ಮುಂಬಯಿಯ ಐಸ್ಕ್ರೀಂ ಪಾರ್ಲರ್‌ಗೆ ಇಪ್ಪತ್ತೆಂಟು ಟನ್ ಹಲಸನ್ನು ಕೇಪು, ಅಳಿಕೆ, ಪುಣಚ, ಪೆರುವಾಯಿ, ಕನ್ಯಾನ ಗ್ರಾಮಗಳಿಂದ ಪೂರೈಸಿದ್ದಾರೆ. ಕೃಷಿಕರಿಗೆ ಉತ್ತಮ ಧಾರಣೆ ನೀಡಿದೆ ಹೆಗ್ಗಳಿಕೆ. ಹಲಸನ್ನು ಮಾರಿದ ಮೊದಲ ಹಣ ಸ್ವೀಕರಿಸಿದ ಅನೇಕರು ಸಂತಸವನ್ನು ಈಗಲೂ ಹಂಚಿಕೊಳ್ಳುತ್ತಿದ್ದಾರೆ.
ಹಲಸಿನ ಗುಜ್ಜೆಯನ್ನು ಮಿನಿಮಲ್ ಪ್ರೊಸೆಸ್ಸಿಂಗ್ ಮಾಡಿ, ರೆಡಿ ಟು ಕುಕ್ ರೂಪದಲ್ಲಿ ನೀಡುವ ಈ ವರುಷದ ಪ್ರಾಯೋಗಿಕ ಯತ್ನ ನಿರಾಶೆಯಾಗಿಲ್ಲ. ಮಂಗಳೂರಿನ ಕ್ಯಾಟರರ್ಸ್, ವ್ಯಾಪಾರಿಗಳಿಗೆ ಇಷ್ಟವಾಗಿದೆ. ಸುಮಾರು ಒಂದು ಕ್ವಿಂಟಲ್ ಗುಜ್ಜೆಯನ್ನು ರೆಡಿ ಟು ಕುಕ್ ರೂಪದಲ್ಲಿ ಒದಗಿಸಲಾಗಿದೆ. ಕಿಲೋಗೆ ಐವತ್ತರಿಂದ ಅರವತ್ತು ರುಪಾಯಿ.
ಹಲಸಿನ ಬಲಿತ ಸೊಳೆಯನ್ನು ಮಂಗಳೂರಿನ ಏಸ್ ಫುಡ್ಸ್ ಇವರಿಗೆ ಚಿಪ್ಸ್‌ಗಾಗಿ ನೀಡಿರುವುದು ಹೊಸ ಯತ್ನ. ಸುಮಾರು ನಾಲ್ಕರಿಂದ ನಾಲ್ಕೂವರೆ ಕ್ವಿಂಟಲ್ ಸೊಳೆ ನೀಡಲಾಗಿದೆ. ಕಿಲೋಗೆ ಅರವತ್ತು ರುಪಾಯಿ. ಹಲಸಿನ ಹಣ್ಣಿನ ಹಲ್ವ, ಹಲಸಿನ ಹಣ್ಣನ್ನು ಪ್ರಾಯೋಗಿಕವಾಗಿ ಮಾಡಿ ಸ್ಥಳೀಯವಾಗಿ ಮಾರುಕಟ್ಟೆ ಮಾಡುವತ್ತ ಹೊಸ ಹೆಜ್ಜೆಯಿರಿಸಿದೆ.
ಸೀಮಿತ ಪ್ರದೇಶ ವ್ಯಾಪ್ತಿಯಲ್ಲಿ ಸದ್ದಿಲ್ಲದೆ ನಡೆಯುವ ಹಲಸಿನ ಕೆಲಸಗಳು ಹಲಸಿನ ಮೌಲ್ಯವರ್ಧನೆಗೆ ದೊಡ್ಡ ಕೊಡುಗೆ ನೀಡಿದೆ. ಒಂದೆಡೆ ಮೌಲ್ಯವರ್ಧನೆಯ ಕೆಲಸ, ಮತ್ತೊಂದೆಡೆ ಹಲಸಿನ ತೋಟಗಳನ್ನು ಎಬ್ಬಿಸುವ ಕೆಲಸ ಜತೆಜತೆಯಲ್ಲಿ ನಡೆಯುತ್ತಿರುವುದು ಸಂತೋಷಪಡುವ ವಿಚಾರ.
ರುಚಿ ನೋಡಿ ತಳಿ ಆಯ್ಕೆ ಪ್ರಕ್ರಿಯೆಯು ಕೃಷಿಕರೇ ಮಾಡಿಕೊಳ್ಳಬಹುದಾದ ಸರಳ ತಳಿ ಆಯ್ಕೆ. ಇದರಿಂದಾಗಿ ಆಯಾ ಊರಿನ ಉತ್ಕೃಷ್ಟ ಹಲಸನ್ನು ಉಳಿಸಿ, ಬೆಳೆಸಲು ಸಹಾಯಕ. ಹಲಸಿನ ಸೊಳೆ, ಎಳೆಗುಜ್ಜೆ, ಹಣ್ಣು... ಯಾವುದೇ ಇರಲಿ, ಆಯಾ ಊರಿನಲ್ಲಿಯೇ ಮಾರುಕಟ್ಟೆ ಮಾಡಲೆತ್ನಿಸಿದರೆ ಉತ್ತಮ ಧಾರಣೆ ಖಂಡಿತಾ ಸಿಗುತ್ತದೆ ಎನ್ನುವುದು ಶರ್ಮರ ಮಾರುಕಟ್ಟೆ ಅನುಭವ.
ಹಲಸು ಸ್ನೇಹಿ ಕೂಟವು ಮೂರು ವರುಷಗಳಲ್ಲಿ ಹಲಸು ಮೇಳ, ಮಾವು ಮೇಳ, ತರಕಾರಿ ಮೇಳ, ಗಡ್ಡೆ- ಗೆಣಸುಗಳ ಮೇಳ, ಸಾತ್ವಿಕ ಆಹಾರ... ಹೀಗೆ ಮರೆಯಾಗುತ್ತಿರುವ ಆಹಾರಗಳಿಗೆ ಮರುಹುಟ್ಟು ಕೊಡುವ ಕೆಲಸ ಮಾಡುತ್ತಿದೆ.ಟಿ

- ನಾ. ಕಾರಂತ ಪೆರಾಜೆ


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

ಹಾಸನದ ಹೇಮಾವತಿ ನಾಲೆಯಲ್ಲಿ ಪ್ಲಾಸ್ಟಿಕ್‌ ಚೀಲದಲ್ಲಿ ವೃದ್ಧೆಯ ಶವ ಪತ್ತೆ: ಕೊಲೆ ಶಂಕೆ

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video