ಮಾಲೂರು ತಾಲೂಕಿನ ಪ್ರದೇಶಕ್ಕೆ ಬರದ ಹಣೆಪಟ್ಟಿ ಇದೆ. ಇಲ್ಲಿ ಸಾವಿರದೈನೂರು ಅಡಿಯವರೆಗೆ ಕೊಳವೆ ಬಾವಿ ಕೊರೆಸಿದರೂ ನೀರು ಸಿಗಲ್ಲ. ಅನೇಕರು ತಮ್ಮ ಭೂಮಿಯಲ್ಲಿ ಮಾವು, ನೀಲಗಿರಿ ಇತರೆ ಗಿಡ ಹಾಕಿ ಜೀವನ ಸವೆಸುತ್ತಿದ್ದಾರೆ. ಇದು ಈ ಭಾಗದ ಕೃಷಿ ಚಿತ್ರಣ.
ಇಂಥದ್ದರಲ್ಲಿ ಟೇಕಲ್ ಹೋಬಳಿಯ ನಲ್ಲದಿಮ್ಮನಹಳ್ಳಿ ಗ್ರಾಮದ ರೈತ ರಾಮಪ್ಪನಾಯಕ ಭರ್ಜರಿಯಾಗಿ ಟೊಮೇಟೊ ಬೆಳೆದು ಅಚ್ಚರಿ ಹುಟ್ಟಿಸಿದ್ದಾರೆ.
ವೃತ್ತಿಯಲ್ಲಿ ಅರಣ್ಯ ನೌಕರ
ರಾಮಪ್ಪ ನಾಯಕ ಅರಣ್ಯ ಇಲಾಖೆಯ ನೌಕರ. ಬಿಡುವಿನ ವೇಳೆಯಲ್ಲಿ ಬೇಸಾಯದ ಆಸಕ್ತಿ ಹುಟ್ಟಿತು. ಬೆಟ್ಟದ ತಪ್ಪಲಿನಲ್ಲಿರುವ 5 ಎಕರೆ ಭೂಮಿ ಹಸನುಗೊಳಿಸಿದರು. ಆ ಪೈಕಿ 3 ಎಕರೆ ಭೂಮಿಯಲ್ಲಿ ಉತ್ತಮ ಟೊಮೇಟೊ ಬೆಳೆದು ಸೈ ಎನಿಸಿಕೊಂಡರು.
10 ಮಂದಿಗೆ ಕೂಲಿ ಕೆಲಸ
3 ಎಕರೆ ಜಮೀನಲ್ಲಿ 18 ಸಾವಿರ ಅಯಿಸ್ಮಾನ್ ತಳಿಯ ಟೊಮೇಟೊ ಸಸಿ ಹಾಕಿದರು. ಇರುವ ಏಕೈಕ ಕೊಳವೆ ಬಾವಿಯಲ್ಲಿ ಸಿಗುವ ನೀರನ್ನು ಹನಿ ನೀರಾವರಿ ಪದ್ಧತಿ ಅಳವಡಿಸಿ ಟೊಮೇಟೊ ಬೆಳೆದಿದ್ದಾರೆ. ನಿತ್ಯ 10 ಮಂದಿಗೆ ಕೂಲಿ ನೀಡುತ್ತಾರೆ. ವಾರಕ್ಕೆ 4 ಬಾರಿ ಟೊಮೇಟೊ ಕಟಾವು ಮಾಡುತ್ತಾರೆ. ಒಂದು ಬಾರಿಗೆ 300 ರಿಂದ 400 ಬಾಕ್ಸ್ಗಳನ್ನು ಮಾರುಕಟ್ಟೆಗೆ ಕಳುಹಿಸುತ್ತಾರೆ.
ಟೊಮೇಟೊಗೆ ರಾಜ್ಯದಲ್ಲಿ ಉತ್ತಮ ಬೇಡಿಕೆ ಇದೆ. ಪ್ರತಿ 15 ಕೆಜಿ ಬಾಕ್ಸ್ ರು. 650ರಿಂದ 700 ಬೆಲೆ ಸಿಗುತ್ತೆ. ಈತನಕ 2.5 ಟನ್ ಟೊಮೇಟೊ ಮಾರಾಟ ಮಾಡಿದ್ದಾರೆ. ರು. 10 ಲಕ್ಷಕ್ಕೂ ಹೆಚ್ಚು ಹಣ ಗಳಿಸಿದ್ದಾರೆ. ಇನ್ನು ಗಿಡಗಳಲ್ಲಿರುವ ಫಸಲು 4 ಟನ್ಗೂ ಹೆಚ್ಚು ಇದೆ. ಮಾರುಕಟ್ಟೆಯಲ್ಲಿ ಈಗಿನ ಬೆಲೆ ಮುಂದುವರಿದರೆ, ಸುಮಾರು 20 ಲಕ್ಷ ಹೆಚ್ಚು ಅಧಿಕ ಹಣ ಗಳಿಸುವ ನಿರೀಕ್ಷೆಯಲ್ಲಿದ್ದಾರೆ.
3 ಎಕರೆ
ಟೊಮೇಟೊ ಹಾಕಿರುವ ಜಮೀನು
2.5 ಟನ್
ಮಾರಾಟ ಮಾಡಿದ ಟೊಮೆಟೋ
10 ಲಕ್ಷ
ಟೊಮೇಟೊದಿಂದ ಬಂದ ಆದಾಯ
- ಟೇಕಲ್ ಲಕ್ಷ್ಮೀಶ್