ನೋಡಲು ಸುಂದರಿಯ ಬೆರಳಿನಂತೆ ಕಾಣುವ ಬೆಂಡೆಯನ್ನು ಇಂಗ್ಲಿಷಿನಲ್ಲಿ 'ಲೇಡಿಸ್ ಫಿಂಗರ್' ಅಂತಲೇ ಕರೆಯುತ್ತಾರೆ. ಇದನ್ನು ಅಂತರ್ ಬೆಳೆ ಹಾಗೂ ಪೂರ್ಣ ಪ್ರಮಾಣದ ಬೆಳೆಯಾಗಿ ರಾಜ್ಯದ ಹಲವೆಡೆ ಬೆಳೆಯುತ್ತಾರೆ. ಹಲವು ಔಷಧೀಯ ಗುಣ ಹೊಂದಿರುವ ಇದು, ವಿಟಮಿನ್ಗಳ ಗಣಿಯೂ ಹೌದು.
ಬೆಳೆಯುವ ವಿಧಾನ
ಜಮೀನನ್ನು ಮೊದಲು ಚೆನ್ನಾಗಿ ಹಸನುಗೊಳಿಸಬೇಕು. ಬಳಿಕ ಎಕರೆಗೆ 10 ಟನ್ನಂತೆ ಕೊಟ್ಟಿಗೆ ಗೊಬ್ಬರ ಹಾಕಬೇಕು. ನೀರಾವರಿಯಾದರೆ ನೀರು ಹಾಯಿಸಬೇಕು. ಬಳಿಕ 2 ಅಡಿ ಅಂತರದಲ್ಲಿ ಸಾಲು ಮಾಡಬೇಕು. 1 ಅಡಿ ಅಂತರದಲ್ಲಿ ಬೀಜ ನಾಟಿ ಮಾಡಬೇಕು. ಬಿತ್ತಿದ ನಂತರ ಐದಾರು ದಿನಕ್ಕೊಮ್ಮೆ ನೀರು ಹಾಯಿಸಬೇಕು. ಕಳೆ, ಕೀಟ ಬರದಂತೆ ನಿಗಾ ವಹಿಸಬೇಕು. ಬಿತ್ತನೆ ಮಾಡಿದ 45ರಿಂದ 50 ದಿನಗಳೊಳಗೆ ಫಸಲು ಕೈಗೆ ಬರುತ್ತದೆ. ಚೆನ್ನಾಗಿ ನಿರ್ವಹಣೆ ಮಾಡಿದರೆ ಎಕರೆಗೆ 3- 4 ಟನ್ ಇಳುವರಿ ಪಡೆಯಬಹುದು. ಜೂನ್- ಜುಲೈ ಮತ್ತು ಜನವರಿ- ಫೆಬ್ರವರಿ ತಿಂಗಳು ಬಿತ್ತನೆಗೆ ಸಕಾಲ. ಮಳೆಯಾಶ್ರಿತವಾಗಿಯೂ ಬೆಳೆಯಬಹುದು.
ತಳಿಗಳು
ರಾಜ್ಯದಲ್ಲಿ ಸೆಲೆಕ್ಷನ್- 4,7,9 ಮತ್ತು ಪೂಸಾಸವಾನಿ, ವೈಟ್ವೆಲ್ವೆಟ್ ಸೇರಿದಂತೆ ಮೊದಲಾದ ತಳಿಗಳು ಚಾಲ್ತಿಯಲ್ಲಿವೆ.
ಮಣ್ಣು
ನೀರು ಚೆನ್ನಾಗಿ ಬಸಿದುಹೋಗುವಂಥ ಮಣ್ಣು ಇರಬೇಕು. ಕೆಂಪು, ಕಪ್ಪು, ಮರಳು ಮಿಶ್ರಿತ ಗೋಡು ಮಣ್ಣಲ್ಲಿ ಬೆಳೆಯಬಹುದು. 17ರಿಂದ 33 ಸೆ. ಉಷ್ಣಾಂಶ ಬೆಂಡೆಗೆ ಪೂರಕ.
ರೋಗಗಳು
ಬೂದಿ ರೋಗ, ಎಲೆಚುಕ್ಕೆ ರೋಗ, ಹಳದಿ ಮಚ್ಚೆ ರೋಗ ಬರಬಹುದು. ಕಾಯಿ ಚುಕ್ಕೆ ಹುಳು, ಜಿಗಿ, ಕೆಂಪು ಹತ್ತಿ ತಿಗಣೆ ಮತ್ತು ಜೇಡರ ನುಸಿ ಬಾಧಿಸಬಹುದು.
ಹೆಚ್ಚಿನ ಮಾಹಿತಿಗೆ ಸಮೀಪದ ಕೃಷಿ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಬಹುದು.
- ಮಹೇಶ್ ಅರಳಿ