ಅಪರೂಪವಾಗಿ ಕಂಡುಬರುವ ಈ ಬಳ್ಳಿ ನೋಡಲು ಕಣ್ಣಿಗೆ ಬಲು ಸೊಗಸು. ಬೇಸಿಗೆಯಲ್ಲಿ ಕಣ್ಮರೆಯಾಗುತ್ತದೆ. ಮತ್ತೆ ಮುಂಗಾರು ಮಳೆಗೆ ಹೊಲಗಳ ಬದು, ತಕ್ಕಲು, ಕಲ್ಲು ಗುಡ್ಡೆಗಳ ಭೂಮಿಯಿಂದ ಮೈಕೊಡವಿ ನಿಲ್ಲುತ್ತದೆ. ಇದ್ಯಾವ ಬಳ್ಳಿ ಅಂತ ಗೊಂದಲ ಆಯ್ತಾ?
ತಲೆಕೆಡಿಸಿಕೊಳ್ಳಬೇಡಿ. ಹತ್ತಾರು ಸೊಪ್ಪು ಬಳ್ಳಿಗಳಲ್ಲಿ ಕುಕ್ಕೆಬಳ್ಳಿಯೂ ಒಂದು. ಕನ್ನಡದಲ್ಲಿ ಕಾಡುಕುಕ್ಕೆ, ಗಡಿಯಾರದ ಬಳ್ಳಿ, ಕುಕ್ಕೆ ಬಳ್ಳಿ ಅಂತಲೂ ಕರೆಯುತ್ತಾರೆ. ಇದರ ವೈಜ್ಞಾನಿಕ ಹೆಸರು ಪ್ಯಾಸಿಪ್ಲೋರ್ ಫಿವಿಡ್. ಬಳ್ಳಿಯ ಎಲೆಗಳು, ರೋಮಗಳಿಂದ ಕೂಡಿದ್ದರೆ ಹೂಗಳ ಬುಡದಲ್ಲಿರುವ ರೋಮಗಳ ಹೆಣಿಗೆಯ ರೆಕ್ಕೆಗಳು ಕುಕ್ಕೆಯಂತೆ ಕಾಣುತ್ತವೆ. ಅವು ಹೂ, ಕಾಯಿ, ಹಣ್ಣುಗಳಿಗೆ ಸೈನಿಕನಂತೆ ರಕ್ಷಣೆ ಕೂಡುತ್ತವೆ. ಸ್ಟ್ರಿಂಗಿನಂತಿರುವ ಕೊಕ್ಕೆ ಬಳ್ಳಿಗಳು, ಮುಖ್ಯ ಬಳ್ಳಿ, ಗಿಡ ಮರಗಳ ಮೇಲೆ ಹಬ್ಬಲು ಆಧಾರ ಒದಗಿಸುತ್ತವೆ. ಎಲೆಗಳ ಕಂಕುಳಲ್ಲಿ ಗಡಿಯಾರದಂತೆ ಬಿಳಿ ಹೂಗಳು ಮೂಡುತ್ತವೆ. ಹೂವಿನ ಐದು ಕೇಸರಗಳು ಶಲಾಕಾಗ್ರಕ್ಕೆ ಜೋಡಣೆಯಾಗಿರುತ್ತವೆ. ಪುಟಾಣಿ ಹೂಗಳು ಆಕಾರದಲ್ಲಿ ಫ್ಯಾಷನ್ ಫ್ರ್ಯೂಟ್ ಹೂವುಗಳನ್ನು ಹೋಲುತ್ತವೆ. ಬಳ್ಳಿಯ ಕಷಾಯವನ್ನು ಉಬ್ಬಸರೋಗ ಚಿಕಿತ್ಸೆಗೆ ಬಳಸುತ್ತಾರೆ. ಇದರ ಎಲೆಯನ್ನು ಅರೆದು ತಲೆಗೆ ಲೇಪಿಸಿದರೆ ತಲೆ ಸುತ್ತುವಿಕೆ, ತಲೆನೋವು ವಾಸಿಯಾಗುತ್ತದೆ.
- ಚನ್ನರಾಜು ಎಲ್.ಸಿ.