Cockroach Janta Partyಗೆ ಬಿಗ್ ಶಾಕ್: ಜಂತರ್ ಮಂತರ್ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ದೆಹಲಿ ಪೊಲೀಸರು, 57 ಮೆಟ್ರೋ ನಿಲ್ದಾಣಗಳು ಬಂದ್..!

ಕಡಿಮೆ ಅವಧಿಯ ಮುನ್ಸೂಚನೆ, ಹಿಂದಿನ ಪ್ರತಿಭಟನೆ ವೇಳೆ ನಿಯಮಗಳನ್ನು ಉಲ್ಲಂಘಿಸಿದ ಆರೋಪ ಹಾಗೂ ಪ್ರಸ್ತುತ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯನ್ನು ಉಲ್ಲೇಖಿಸಿ ಅನುಮತಿ ನಿರಾಕರಿಸಲಾಗಿದೆ.
Security personnel
ದೆಹಲಿಯಲ್ಲಿ ಬಿಗಿ ಭದ್ರತೆ ನಿಯೋಜನೆಗೊಳಿಸಿರುವುದು.
Updated on: 

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಅಕ್ಟೋಬರ್ 10ರಂದು ನವದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ಕಾಕರೋಚ್ ಜನತಾ ಪಾರ್ಟಿ (CJP) ಸಲ್ಲಿಸಿದ್ದ ಮನವಿಯನ್ನು ದೆಹಲಿ ಪೊಲೀಸರು ನಿರಾಕರಿಸಿದ್ದಾರೆ.

ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಸಿಜೆಪಿ ಸಹ-ಸಂಚಾಲಕ ಸೌರವ್ ದಾಸ್ ನೇತೃತ್ವದಲ್ಲಿ ಈ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.

ಕಡಿಮೆ ಅವಧಿಯ ಮುನ್ಸೂಚನೆ, ಹಿಂದಿನ ಪ್ರತಿಭಟನೆ ವೇಳೆ ನಿಯಮಗಳನ್ನು ಉಲ್ಲಂಘಿಸಿದ ಆರೋಪ ಹಾಗೂ ಪ್ರಸ್ತುತ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯನ್ನು ಉಲ್ಲೇಖಿಸಿ ಅನುಮತಿ ನಿರಾಕರಿಸಲಾಗಿದೆ.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹೊಣೆಗಾರರನ್ನಾಗಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಲು ಅನುಮತಿ ಕೋರಿ ಪಕ್ಷದ ಸಹ ಸಂಚಾಲಕ ಸೌರವ್ ದಾಸ್ ಅರ್ಜಿ ಸಲ್ಲಿಸಿದ್ದರು ಎಂದು ಜಂಟಿ ಪೊಲೀಸ್ ಆಯುಕ್ತೆ ನೂಪುರ್ ಪ್ರಸಾದ್ ತಿಳಿಸಿದ್ದಾರೆ.

ಪ್ರತಿಭಟನೆಗೆ ಸಂಬಂಧಿಸಿದ ಮಾಹಿತಿ ಬಹಳ ಕಡಿಮೆ ಅವಧಿಯಲ್ಲಿ ನೀಡಲಾಗಿದೆ. ನಿಗದಿತ ಮಾರ್ಗಸೂಚಿಗಳ ಪ್ರಕಾರ, ಉದ್ದೇಶಿತ ಪ್ರತಿಭಟನೆಗೆ ಕನಿಷ್ಠ 10 ದಿನಗಳ ಮೊದಲು ಮಾಹಿತಿ ನೀಡಬೇಕು.

ಇದಲ್ಲದೆ, ಈ ಹಿಂದೆ ಇದೇ ಸ್ಥಳದಲ್ಲಿ ಪ್ರತಿಭಟನೆ ನಡೆಸಲು ಅನುಮತಿ ನೀಡಿದ್ದಾಗ, ಪಕ್ಷವು ಕಾನೂನುಬದ್ಧ ನಿರ್ದೇಶನಗಳನ್ನು ಮತ್ತು ತಾನು ನೀಡಿದ್ದ ಭರವಸೆಗಳನ್ನು ಪಾಲಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.

ಪ್ರಸ್ತುತ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿ, ಸಾರ್ವಜನಿಕರ ಸುರಕ್ಷತೆ ಹಾಗೂ ಸಂಚಾರ ನಿಯಂತ್ರಣದ ಅಗತ್ಯವನ್ನು ಪರಿಗಣಿಸಿ ಪ್ರತಿಭಟನೆಗೆ ಅನುಮತಿ ನಿರಾಕರಿಸಲಾಗಿದೆ ಎಂದು ತಿಳಿಸಿದ್ದಾರೆ.

ದೆಹಲಿಯಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (BNSS) ಸೆಕ್ಷನ್ 163 ಜಾರಿಯಲ್ಲಿದ್ದು, ಸಾರ್ವಜನಿಕ ಶಾಂತಿ ಮತ್ತು ಸುರಕ್ಷತೆಯನ್ನು ಕಾಪಾಡುವ ಉದ್ದೇಶದಿಂದ ಈ ಸೆಕ್ಷನ್ ಅಡಿಯಲ್ಲಿ ತಡೆ ನಿರ್ಬಂಧಗಳನ್ನು ವಿಧಿಸಲಾಗಿದೆ ಎಂದು ಹೇಳಿದ್ದಾರೆ.

ಸೆಕ್ಷನ್ 163ರ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದೂ ಎಚ್ಚರಿಕೆ ನೀಡಿದ್ದಾರೆ.

Security personnel
CJP ಪ್ರತಿಭಟನೆಗೆ ದೆಹಲಿಯಲ್ಲಿ ಭಾರೀ ಭದ್ರತೆ: ಇದು ಮೋದಿ ಸರ್ಕಾರದ ‘ಭಯ, ಆತಂಕ’ಕ್ಕೆ ಸಾಕ್ಷಿ; ಕಾಂಗ್ರೆಸ್

ಭದ್ರತೆ ಹೆಚ್ಚಳ

ಪ್ರತಿಭಟನೆ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದ್ದು, 57 ಮೆಟ್ರೋ ನಿಲ್ದಾಣಗಳಲ್ಲಿ ಪ್ರವೇಶ ಮತ್ತು ನಿರ್ಗಮನಕ್ಕೆ ನಿರ್ಬಂಧ ವಿಧಿಸುವಂತೆ ದೆಹಲಿ ಪೊಲೀಸರು ದೆಹಲಿ ಮೆಟ್ರೋ ರೈಲು ನಿಗಮಕ್ಕೆ (DMRC) ಮನವಿ ಮಾಡಿದ್ದಾರೆ.

ಶುಕ್ರವಾರ ರಾತ್ರಿ 9 ಗಂಟೆಯಿಂದ ಶನಿವಾರ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುವವರೆಗೆ ಈ ನಿರ್ಬಂಧಗಳನ್ನು ಜಾರಿಗೊಳಿಸುವಂತೆ ಪ್ರಸ್ತಾವಿಸಲಾಗಿದೆ.

ಇದರ ಜೊತೆಗೆ, ಸಾವಿರಾರು ಹೆಚ್ಚುವರಿ ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಸಿಬ್ಬಂದಿಯನ್ನು ದೆಹಲಿಗೆ ಕರೆಸಿಕೊಳ್ಳಲಾಗುತ್ತಿದೆ ಎಂದು ದಿ ಹಿಂದೂ ವರದಿ ಮಾಡಿದೆ.

ನಿಷೇಧಾಜ್ಞೆ ಉಲ್ಲಂಘಿಸಿ ಸಭೆ ಅಥವಾ ಪ್ರತಿಭಟನೆ ನಡೆಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ದೆಹಲಿ ಪೊಲೀಸರು ಎಚ್ಚರಿಸಿದ್ದಾರೆ.

ಅಕ್ಟೋಬರ್ 2ರಿಂದ ರಾಷ್ಟ್ರ ರಾಜಧಾನಿಯಲ್ಲಿ ನಡೆದ ವಿವಿಧ ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ಸುಮಾರು 25 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಹೆಚ್ಚುವರಿಯಾಗಿ 7,000 CRPF ಸಿಬ್ಬಂದಿ ನಿಯೋಜನೆ

ಪಶ್ಚಿಮ ಬಂಗಾಳ ಮತ್ತು ಛತ್ತೀಸ್‌ಗಢದಲ್ಲಿ ನಿಯೋಜಿಸಲಾಗಿದ್ದ ಸಿಆರ್‌ಪಿಎಫ್‌ನ 70 ಕಂಪನಿಗಳಿಗೆ ಸೇರಿದ ಸುಮಾರು 7,000 ಸಿಬ್ಬಂದಿಯನ್ನು ದೆಹಲಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಕಾರ್ಯಕ್ಕಾಗಿ ಕರೆಸಿಕೊಳ್ಳಲಾಗುತ್ತಿದ್ದು, ಕೇಂದ್ರ ಗೃಹ ಸಚಿವಾಲಯದ ಸೂಚನೆಯ ಮೇರೆಗೆ ಈ ನಿಯೋಜನೆ ನಡೆಯುತ್ತಿದೆ ಎಂದು ವರದಿಗಳು ತಿಳಿಸಿವೆ.

ಈ ಸಿಬ್ಬಂದಿಗೆ ಗಲಭೆ ನಿಯಂತ್ರಣ ಸಾಧನಗಳು, ಶಸ್ತ್ರಾಸ್ತ್ರಗಳು ಮತ್ತು ನಿಗದಿತ ಪ್ರಮಾಣದ ಮದ್ದುಗುಂಡುಗಳನ್ನು ತರಲು ಸೂಚಿಸಲಾಗಿದೆ. ಪಶ್ಚಿಮ ಬಂಗಾಳದಿಂದ 40 ಕಂಪನಿಗಳು ಹಾಗೂ ಛತ್ತೀಸ್‌ಗಢದಿಂದ 30 ಕಂಪನಿಗಳನ್ನು ನಿಯೋಜನೆಗಾಗಿ ಸಜ್ಜುಗೊಳಿಸಲಾಗಿದೆ ಎಂದು ವರದಿಯಾಗಿದೆ.

ಪ್ರತಿಭಟನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವ ಸಾಧ್ಯತೆ ಇರುವುದರಿಂದ ಅಧಿಕಾರಿಗಳು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ. ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮಗಳನ್ನು ರೂಪಿಸಲಾಗುತ್ತಿದೆ.

57 ಮೆಟ್ರೋ ನಿಲ್ದಾಣಗಳು ಬಂದ್

ಈ ನಡುವೆ ರಾಜೀವ್ ಚೌಕ್, ಕೇಂದ್ರ ಸಚಿವಾಲಯ, ಪಟೇಲ್ ಚೌಕ್, ಜನ್‌ಪಥ್, ನವದೆಹಲಿ, ಮಂಡಿ ಹೌಸ್, ಐಟಿಒ, ಸುಪ್ರೀಂ ಕೋರ್ಟ್ ಮತ್ತು ಕಾಶ್ಮೀರಿ ಗೇಟ್ ಸೇರಿದಂತೆ 57 ಮೆಟ್ರೋ ನಿಲ್ದಾಣಗಳಲ್ಲಿ ನಿರ್ಬಂಧಗಳನ್ನು ವಿಧಿಸುವಂತೆ ದೆಹಲಿ ಪೊಲೀಸರು DMRCಗೆ ಮನವಿ ಮಾಡಿದ್ದಾರೆ.

ಸೂಕ್ಷ್ಮ ಪ್ರದೇಶಗಳತ್ತ ಜನಸಮೂಹ ನಿಯಂತ್ರಣ ತಪ್ಪಿ ಸಾಗುವ ಸಾಧ್ಯತೆ ಇದೆ ಎಂದು ಜಂಟಿ ಪೊಲೀಸ್ ಆಯುಕ್ತರ (ಸಾರಿಗೆ ವಿಭಾಗ) ಕಚೇರಿ ಹೊರಡಿಸಿರುವ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಈ ಪ್ರಸ್ತಾವನೆಯಡಿ ಮೆಟ್ರೋ ರೈಲುಗಳ ಸಂಚಾರದ ನಡುವಿನ ಅಂತರವನ್ನು ಹೆಚ್ಚಿಸುವುದು ಹಾಗೂ ಶುಕ್ರವಾರ ರಾತ್ರಿ 9 ಗಂಟೆಯಿಂದ ಶನಿವಾರ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುವವರೆಗೆ ನಿಲ್ದಾಣಗಳ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಮುಚ್ಚುವ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆಯಿದೆ.

ಈ ಕುರಿತು ಅಗತ್ಯ ಸೂಚನೆಗಳನ್ನು ಸಿಬ್ಬಂದಿಗೆ ನೀಡುವಂತೆ DMRCಗೆ ಪೊಲೀಸರು ಪತ್ರ ಬರೆದಿದ್ದಾರೆ. ಆದರೆ, ಮೆಟ್ರೋ ನಿಗಮವು ಈ ನಿರ್ಬಂಧಗಳಿಗೆ ಅನುಮೋದನೆ ನೀಡಿದೆಯೇ ಅಥವಾ ಅವುಗಳನ್ನು ಜಾರಿಗೊಳಿಸಿದೆಯೇ ಎಂಬುದು ಇನ್ನೂ ಖಚಿತವಾಗಿಲ್ಲ.

Security personnel
ಬೆಂಗಳೂರಿನಲ್ಲಿ CJP 'ಚಪ್ಪಲ್ ಪ್ರೊಟೆಸ್ಟ್'; 'ಕಾಕ್ರೋಚ್'ಗಳ ಈ ವಿಶಿಷ್ಟ ಪ್ರತಿಭಟನೆಗೆ ಇಲ್ಲಿದೆ ಕಾರಣ...

25 ಎಫ್‌ಐಆರ್‌ ದಾಖಲು

ದೆಹಲಿಯಲ್ಲಿ ಇತ್ತೀಚಿನ ದಿನಗಳಲ್ಲಿ ನಡೆದ ಪ್ರತಿಭಟನೆಗಳು ಮತ್ತು ಪೊಲೀಸ್ ಕ್ರಮಗಳ ಹಿನ್ನೆಲೆಯಲ್ಲಿ ಸುಮಾರು 25 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸಾರ್ವಜನಿಕ ಆಸ್ತಿಗೆ ಹಾನಿ, ಹಲ್ಲೆ, ಪೊಲೀಸರೊಂದಿಗೆ ಘರ್ಷಣೆ ಮತ್ತು ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪಗಳಿಗೆ ಸಂಬಂಧಿಸಿದಂತೆ ಪ್ರಕರಣಗಳು ದಾಖಲಾಗಿವೆ ಎಂದು ಎಎನ್‌ಐ ವರದಿ ಮಾಡಿದೆ.

ನವದೆಹಲಿ ಜಿಲ್ಲೆಯಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (BNSS) ಸೆಕ್ಷನ್ 163ರ ಅಡಿಯಲ್ಲಿ ಜಾರಿಗೊಳಿಸಲಾದ ನಿಷೇಧಾಜ್ಞೆಗಳನ್ನು ಉಲ್ಲಂಘಿಸಿದ ಆರೋಪಗಳೂ ಈ ಪ್ರಕರಣಗಳಲ್ಲಿ ಸೇರಿವೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಹಲವು ರಾಜಕೀಯ ನಾಯಕರ ಹೆಸರುಗಳೂ ಪ್ರಕರಣಗಳಲ್ಲಿ ಉಲ್ಲೇಖವಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಭಾರತೀಯ ಚುನಾವಣಾ ಆಯೋಗದ ವಿರುದ್ಧದ ಪ್ರತಿಭಟನೆ ವೇಳೆ ಕಾಂಗ್ರೆಸ್ ಸಂಸದರು ಮತ್ತು ಇಂಡಿಯಾ ಮೈತ್ರಿಕೂಟದ ಇತರ ನಾಯಕರು ಅನುಮತಿಯಿಲ್ಲದೆ ಆಕಾಶವಾಣಿ ಭವನದ ಆವರಣ ಪ್ರವೇಶಿಸಿದ ಆರೋಪಕ್ಕೆ ಸಂಬಂಧಿಸಿದಂತೆಯೂ ಒಂದು ಎಫ್‌ಐಆರ್ ದಾಖಲಾಗಿದೆ.

ಸಂಸತ್ತಿನಿಂದ ಚುನಾವಣಾ ಆಯೋಗದ ಪ್ರಧಾನ ಕಚೇರಿಯವರೆಗೆ ಪ್ರತಿಪಕ್ಷಗಳು ಹಮ್ಮಿಕೊಂಡಿದ್ದ ಮೆರವಣಿಗೆಗೆ ಅಧಿಕೃತ ಅನುಮತಿ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಜಂತರ್ ಮಂತರ್ ಸೇರಿದಂತೆ ದೆಹಲಿಯ ಯಾವುದೇ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುವಾಗ ಪ್ರತಿಭಟನೆ ನಡೆಸಲು ಅವಕಾಶವಿಲ್ಲ ಎಂದು ಉಪ ಪೊಲೀಸ್ ಆಯುಕ್ತೆ ಸೃಷ್ಟಿ ಪಾಂಡೆ ಎಚ್ಚರಿಸಿದ್ದಾರೆ. ಅನುಮತಿಯಿಲ್ಲದೆ ಸಭೆ ಸೇರಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

ಪ್ರತಿಭಟನೆಗೂ ಮುನ್ನವೇ ಕಾರ್ಯಕರ್ತರ ವಶಕ್ಕೆ

ಶನಿವಾರದ ಪ್ರತಿಭಟನೆಗೆ ಮುನ್ನ ತಮ್ಮ ಪಕ್ಷದ ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗುತ್ತಿದೆ ಎಂದು CJP ಕಾರ್ಯಕರ್ತ ಅಭಿಜೀತ್ ದೀಪ್ಕೆ ಆರೋಪಿಸಿದ್ದಾರೆ. ಆದರೆ, ಯಾವುದೇ ಕಾರಣಕ್ಕೂ ಪ್ರತಿಭಟನೆಯನ್ನು ಕೈಬಿಡುವುದಿಲ್ಲ ಎಂದು ಹೇಳಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, “ಅಕ್ಟೋಬರ್ 10ರ ನಮ್ಮ ಪ್ರತಿಭಟನೆಗೆ ಮುನ್ನ ಬಿಜೆಪಿ ಸರ್ಕಾರ ದೇಶಾದ್ಯಂತ ಸಾವಿರಾರು ಯುವಕರನ್ನು ವಶಕ್ಕೆ ಪಡೆದಿದೆ. ಇಂತಹ ಬೆದರಿಕೆಗಳಿಂದ ಏನೂ ಸಾಧಿಸಲು ಸಾಧ್ಯವಿಲ್ಲ, ಮೋದಿ. ಈ ದೇಶದ ಯುವಕರು ಇನ್ನು ನಿಮ್ಮನ್ನು ಕಂಡು ಹೆದರುವುದಿಲ್ಲ. ನಾಳೆ ನಾನು ದೆಹಲಿಗೆ ಆಗಮಿಸಿ, ಏನೇ ಆದರೂ ಜಂತರ್ ಮಂತರ್‌ಗೆ ಮೆರವಣಿಗೆಯಲ್ಲಿ ತೆರಳುತ್ತೇನೆ” ಎಂದು ಬರೆದಿದ್ದಾರೆ.

ಪ್ರತಿಭಟನೆಗೂ ಮುನ್ನ ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿದೆ ಎಂಬ ದೀಪ್ಕೆ ಅವರ ಆರೋಪದ ನಡುವೆ, ದೆಹಲಿ ಪೊಲೀಸರು ಭದ್ರತಾ ಸಿದ್ಧತೆಗಳನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.

ಹೆಚ್ಚುವರಿ ಭದ್ರತಾ ಪಡೆಗಳ ನಿಯೋಜನೆ, ಮೆಟ್ರೋ ನಿಲ್ದಾಣಗಳಲ್ಲಿ ನಿರ್ಬಂಧ ವಿಧಿಸುವ ಪ್ರಸ್ತಾವನೆ ಹಾಗೂ ಕಾನೂನು ಕ್ರಮದ ಎಚ್ಚರಿಕೆಗಳೊಂದಿಗೆ ಶನಿವಾರದ ಪ್ರತಿಭಟನೆಗೆ ಮುನ್ನೆಚ್ಚರಿಕೆ ವಹಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com